ಡಾ.ರಾಜ್ ಕುಮಾರ್ ಕುಟುಂಬದಲ್ಲಿ ಗೀತಾ ಶಿವರಾಜ್‌ಕುಮಾರ್‌ಗೆ ಕತ್ತಿನ ಭಾಗದಲ್ಲಿ ನರ ಸಮಸ್ಯೆ ಕಾಣಿಸಿಕೊಂಡಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶಿವಣ್ಣನ ಅನಾರೋಗ್ಯದ ಕಾರಣ ಈ ಹಿಂದೆ ಮುಂದೂಡಲ್ಪಟ್ಟಿದ್ದ ಚಿಕಿತ್ಸೆಯನ್ನು ಇದೀಗ ಮಾಡಲಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಬೆಂಗಳೂರು (ಮಾ.25): ಕನ್ನಡ ಚಿತ್ರರಂಗದ ದೊಡ್ಡಮನೆ ಎಂದು ಖ್ಯಾತಿಯಾಗಿರುವ ಡಾ.ರಾಜ್ ಕುಮಾರ್ ಕುಟುಂಬದಲ್ಲಿ ಇದೀಗ ಮತ್ತೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಇತ್ತೀಚೆಗೆ ತಾನೇ ಶಿವ ರಾಜ್‌ಕುಮಾರ್ ಅವರು ಅಮೇರಿಕಾಗೆ ಹೋಗಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಬಂದಿದ್ದಾರೆ. ಇದೀಗ ಅವರ ಹೆಂಡತಿ ಗೀತಾ ಶಿವ ರಾಜ್‌ಕುಮಾರ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ಹಾಗೂ ದೊಡ್ಡಮನೆಯ ಸೊಸೆಯಾಗಿರುವ ಗೀತಾ ಶಿವ ರಾಜ್‌ಕುಮಾರ್ ಅವರು ಇತ್ತೀಚೆಗೆ ತಮ್ಮ ಗಂಡ ಶಿವ ರಾಜ್‌ಕುಮಾರ್ ಅವರು ಕ್ಯಾನ್ಸರ್‌ನಿಂದ ಬಳುತ್ತಿರುವಾ ಅವರಿಗೆ ಚಿಕಿತ್ಸೆ ಕೊಡಿಸಲು ಅಮೇರಿಕಾಗೆ ಕರೆದುಕೊಂಡು ಹೋಗಿ ಬಂದದ್ದರು. ಶಿವಣ್ಣ ಇದೀಗ ಚೇತರಿಕೆ ಕಾಣುತ್ತಿದ್ದು, ಸಿನಿಮಾ ಶೂಟಿಂಗ್‌ನಲ್ಲಿ ನಿಧಾನವಾಗಿ ಭಾಗಿಯಾಗುತ್ತಿದ್ದಾರೆ. ಹೀಗಿರುವಾಗ ಗಂಡನನ್ನು ಕಣ್ಣಿನ ರೆಪ್ಪೆಯಲ್ಲಿಟ್ಟು ಕಾಪಾಡಿಕೊಂಡಂತೆ ಎಲ್ಲೆಡೆ ಜೊತೆಗೆ ಹೋಗಿ ಅವರನ್ನು ಕಾಳಜಿ ಮಾಡುವ ಗೀತಾ ಶಿವ ರಾಜ್‌ಕುಮಾರ್ ಅವರು ಇದೀಗ ಕತ್ತಿನ ಭಾಗದಲ್ಲಿ ನರ ಸಮಸ್ಯೆ ಕಾಣಿಸಿಕೊಂಡಿದ್ದು, ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದ ವೈದ್ಯರು ಇದಕ್ಕೆ ಶಸ್ತ್ರ ಚಿಕಿತ್ಸೆ ಮೂಲಕವೇ ಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದಕ್ಕ ಮನೆಯವರು ಕೂಡ ಒಪ್ಪಿಗೆ ಕೊಟ್ಟಿದ್ದು ಗೀತಾ ಅವರಿಗೆ ಕತ್ತಿನ ಭಾಗದಲ್ಲಿ ಶಸ್ತ್ರ ಚಿಕಿತ್ಸೆಯನ್ನೂ ಮಾಡಲಾಗಿದೆ. ಇದೀಗ ಆಸ್ಪತ್ರೆಯಲ್ಲಿ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ದೊಡ್ಡಮನೆ ಮೂಲಗಳಿಂದ ತಿಳಿದುಬಂದಿದೆ. ಈ ಹಿಂದೆಯೇ ಇವರು ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬೇಕಿತ್ತು. ಶಿವಣ್ಣನ ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆ ಮುಂದೂಡಲಾಗಿತ್ತು. ಈಗ ಸರ್ಜರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕನ್ನಡ ಚಿತ್ರರಂಗದ ದೊಡ್ಡಮನೆ ಅಭಿಮಾನಿಗಳಲ್ಲಿ ಸ್ವಲ್ಪ ಆತಂಕ ಉಂಟಾಗಿದ್ದು, ಅವರು ಶೀಘ್ರದಲ್ಲಿಯೇ ಗುಣಮುಖರಾಗಿ ಚಿತ್ರರಂಗಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ನೀಡಿದ ಮಧು ಬಂಗಾರಪ್ಪ: ದೊಡ್ಡಮನೆಯ ಯಾರೊಬ್ಬರಿಂದಲೂ ಈ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಗೀತಾ ಶಿವ ರಾಜ್ ಕುಮಾರ್ ಅವರ ಸಹೋದರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗದಲ್ಲಿ ಆಯೋಜನೆ ಮಾಡಿದ್ದ ರಾಜಕೀಯ ಕಾರ್ಯಕ್ರಮವಾದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡುತ್ತಾ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಗೀತಾ ಶಿವ ರಾಜ್ ಕುಮಾರ್ ಅವರೂ ಬರಬೇಕಿತ್ತು. ಆದರೆ, ಅವರಿಗೆ ಸಣ್ಣ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಇದೀಗ ಅವರು ಆಸ್ಪತ್ರೆಯಲ್ಲಿ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲಿಯೇ ದೊಡ್ಡಮನೆಯ ಸದಸ್ಯರನ್ನು ವಿಚಾರಿಸಿದಾಗ ಅವರ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದೆ ಎಂದು ತಿಳಿಸಿದ್ದಾರೆ.