ಮಾಸ್ಟರ್ ಲೋಹಿತ್ ಚಟಪಟನೆ ಮಾತಾನಾಡುತ್ತಾನೆ. ಕೇಳಿದ ಪ್ರಶ್ನೆಗಳಿಗೆಲ್ಲ ಹಿಂದು ಮುಂದು ನೋಡದೆ ಉತ್ತರ ಕೊಡುತ್ತಾನೆ. ಅವನ ಕೆಲವು ಅಭಿಪ್ರಾಯಗಳು ತಮಾಷೆಯಾಗಿ ಕಂಡರೂ ಆಸಕ್ತಿ ಉಂಟು ಮಾಡುತ್ತದೆ.
ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಕಾಲಿಕ ನಿಧನ ಎಲ್ಲರನ್ನೂ ಆಘಾತಕ್ಕೆ ದೂಡಿದೆ. ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್ ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಹಾಗೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸುಮಾರು 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅಪ್ಪು ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ (Social Media) ಪುನೀತ್ ಬಗೆಗಿನ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಪುನೀತ್ 8 ವರ್ಷ ವಯಸ್ಸಾಗಿದ್ದಾಗ ಕೊಟ್ಟಂತಹ ಸಂದರ್ಶನದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಾ ವೈರಲ್ (Viral) ಆಗುತ್ತಿದೆ.
ಕನ್ನಡದ ರಾಯಭಾರಿಯಾಗಿ ನಮ್ಮನ್ನ ಹರಸುತ್ತೀರಿ: 'ಜೇಮ್ಸ್' ನಿರ್ದೇಶಕ ಚೇತನ್
undefined
ಹೌದು! ಪುನೀತ್ ತಮ್ಮ ಚಿಕ್ಕ ವಯಸ್ಸಿನಲ್ಲಿ ಸಂದರ್ಶನ ಕೊಟ್ಟಿದ್ದು, ಅದರಲ್ಲಿ ತಮ್ಮ ಚಿತ್ರದ ಬಗೆಗಿನ ಮಾಹಿತಿಗಳು, ಅಪ್ಪ ಅಮ್ಮನ ಜೊತೆ ಒಡನಾಟ ಸೇರಿದಂತೆ 'ನಾನು ಕೂಡಾ ಅಪ್ಪನಂತೆ ಆಗ್ತೀನಿ' ಎಂದು ಮುಗ್ಧವಾಗಿ ಉತ್ತರ ಕೊಟ್ಟಿದ್ದಾರೆ. 'ಮಾಸ್ಟರ್ ಲೋಹಿತ್ (Master Lohith), ರಾಜಕುಮಾರ್ (Rajkumar) ಮತ್ತು ಪಾರ್ವತಮ್ಮ (Parvatamma) ಅವರ ಕಿರಿಯ ಮಗ. ಇಡೀ ಸಂಸಾರದ ಕಣ್ಮಣಿ. ಎರಡನೇಯ ವಯಸ್ಸಿನಲ್ಲೇ 'ಸನಾದಿ ಅಪ್ಪಣ್ಣ' ಚಿತ್ರದಲ್ಲಿ ಕಾಣಿಸಿಕೊಂಡ. 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ರಾಜಕುಮಾರ್ ಬಾಕ್ಸಿಂಗ್ ಮಾಡುವುದನ್ನು ನೋಡಿ ನಾನೂ ಒಂದು ಪಾತ್ರವನ್ನು ಮಾಡುತ್ತೇನೆಂದು ಹಠ ಹಿಡಿದು, 'ವಸಂತಗೀತ' ಚಿತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಪಡೆದ. 'ಭೂಮಿಗೆ ಬಂದ ಭಗವಂತ' ಚಿತ್ರೀಕರಣಕ್ಕಾಗಿ ಮಂಜಿನಿಂದ ತುಂಬಿದ ಹಿಮಾಲಯ ಪರ್ವತ ಶ್ರೇಣಿಯನ್ನುಹತ್ತಿಬಂದ, ಆ ಚಿತ್ರದಲ್ಲಿ ಅವನಿಗೆ ಒಂದು ಹಾಡೂ ಇತ್ತು. ಅದನ್ನು ಎಸ್.ಜಾನಕಿ ಹಿನ್ನಲೆಯಲ್ಲಿ ಹಾಡಿದ್ದು ಅವನಿಗೆ ಹಿಡಿಸಲಿಲ್ಲ. 'ಭಾಗ್ಯವಂತ' ಮತ್ತು 'ಚಲಿಸುವ ಮೋಡಗಳು' ಚಿತ್ರಗಳಲ್ಲಿ ಅವನೇ ಹಾಡಿದ. ಇದೀಗ ಎಂಟು ವರ್ಷ ತುಂಬಿರುವ ಲೋಹಿತ್ ಚಟಪಟನೆ ಮಾತಾನಾಡುತ್ತಾನೆ. ಕೇಳಿದ ಪ್ರಶ್ನೆಗಳಿಗೆಲ್ಲ ಹಿಂದು ಮುಂದು ನೋಡದೆ ಉತ್ತರ ಕೊಡುತ್ತಾನೆ. ಅವನ ಕೆಲವು ಅಭಿಪ್ರಾಯಗಳು ತಮಾಷೆಯಾಗಿ ಕಂಡರೂ ಆಸಕ್ತಿ ಉಂಟು ಮಾಡುತ್ತದೆ.
ಕ್ರೂರ ವಿಧಿಯೆ ನಿನಗೆ ಧಿಕ್ಕಾರ: ಗಾಯಕ ನವೀನ್ ಸಜ್ಜು
* ನಿನಗೆ ಯಾರಲ್ಲಿ ಪ್ರೀತಿ ಜಾಸ್ತಿ ? ಅಮ್ಮನೋ, ಅಪ್ಪಾಜೀನೋ ?
ಇಬ್ಬರೂ ಮೇಲೂ.
* ಅಪ್ಪಾಜಿ ಮಾಡಿದ ಚಿತ್ರಗಳಲ್ಲಿ ನಿನಗೆ ಯಾವುದು ಇಷ್ಟ ?
'ಬೆಟ್ಟದ ಹುಲಿ', 'ವೀರಕೇಸರಿ', 'ಪ್ರತಿಧ್ವನಿ'
* ಯಾಕೆ?
ಅವುಗಳಲ್ಲಿ ಫೈಟಿಂಗ್ ಇದೆ. ಅದಕ್ಕೆ.
* ನೀನು ಎಂಥಾ ಚಿತ್ರಗಳನ್ನು ನೋಡ್ತಿಯಾ?
'ಎಂಟರ್ ದಿ ಡ್ರೇಗನ್', 'ಎಂಟರ್ ದಿ ನಿಂಜಾ', 'ಕುಂಗ್ ಫು ಆಫ್ ಸೆವೆನ್ ಸ್ಟೆಪ್ಸ್'.
* ನಿನಗೆ ಯಾರ ಅಭಿನಯ ಇಷ್ಟ?
ಹಿಂದಿಯಲ್ಲಿ ಅಮಿತಾಬ್ ಬಚ್ಚನ್. ಅವರು ನನ್ನನ್ನು 'ಹಲೋ ಅಪ್ಪು' ಎಂದು ಕರೀತಾರೆ. ಅವರು ಅಭಿನಯಿಸಿದ ಚಿತ್ರಗಳನ್ನು ನೋಡ್ತೀನಿ. ಅನಂತ್‌ನಾಗ್ ಅಭಿನಯಾನೈ ಚೆನ್ನಾಗಿರುತ್ತೆ.
* ಅವರು ಅಪ್ಪಾಜಿಗಿಂತ ಚೆನ್ನಾಗಿ ಅಭಿನಯಿಸುತ್ತಾರೇನು?
ಹಾಗೆಲ್ಲ ಕೇಳಬೇಡಿ
* ಚಿತ್ರದಲ್ಲಿ ಅಭಿನಯಿಸುವಾಗ ಕ್ಯಾಮರಾ ಮುಂದೆ ನಿಂತರೆ ಹೆದರಿಕೆಯಾಗುವುದಿಲ್ಲವೇ?
ಯಾಕೆ ಹೆದರಬೇಕು? 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಮೈ ಮೇಲೆ ಹಾವುಗಳನ್ನು ಹಾಕ್ಕೊಂದು ಅಭಿನಯಿಸಿದೀನಿ
* ಅಪ್ಪಾಜಿ ಹಿರಣ್ಯ ಕಶಿಪು ಪಾತ್ರದಲ್ಲಿ ಕೋಪದಿಂದ ಮಾತನಾಡುವಾಗ ಭಯವಾಗಲಿಲ್ಲವೇ?
ಇಲ್ಲವೇ ಇಲ್ಲ.
13 ವರ್ಷಗಳ ನಂತರ ಡಿಪಿಗೆ ಪವರ್ ಫೋಟೋ ಹಾಕಿದ ಸುದೀಪ್
* 'ಭೂಮಿಗೆ ಬಂದ ಭಗವಂತ' ಚಿತ್ರದ ಶೂಟಿಂಗ್‌ಗೆ ಹಿಮಾಲಯದ ಬೆಟ್ಟದ ಮೇಲಕ್ಕೆ ಹೋಗಿದ್ದೆಯಲ್ಲ, ಅಲ್ಲಿ ಚಳಿಯಾಗಲಿಲ್ಲವೇ?
ಇಲ್ಲ. ರಾತ್ರಿ ಹೊತ್ತು ಬೆಂಕಿ ಕಾಯಿಸಿಕೊಳ್ಳದೆ ಇದ್ದರೆ ಚಳಿಯಾಗೋಲ್ಲ. ಅಲ್ಲಿ ಒಬ್ಬ ಮಿಲಿಟರಿಯವರು ನನ್ನ ವೇಷ ನೋಡಿ 'ಹಿ ಇಸ್ ಎ ರಿಯಲ್ ಭಗವಾನ್' ಅನ್ನುತ್ತಿದ್ದ.
* ಪಾತ್ರ ಮಾಡುವಾಗ ನಿನಗೆ ಯಾರು ಹೇಳಿಕೊಡ್ತಾರೆ ?
ಡೈರೆಕ್ಟರು, ನಾಗೇಂದ್ರಪ್ಪ, ಕೃಷ್ಣ. ಅಪ್ಪಾಜೀನೂ ಏನು ಮಾಡಬೇಕು, ಹೇಗೆ ಮಾಡಬೇಕು ಅಂತಾ ಹೇಳ್ತಾರೆ.
* ನಿನಗೆ ಯಾವ ಡೈರೆಕ್ಟರ್ ಇಷ್ಟ?
ಸಿಂಗೀತಂ ಶ್ರೀನಿವಾಸರಾವ್, ರೇಣುಕಾಶರ್ಮ, ಬಿ.ಎಸ್.ರಂಜಾ, ದತ್ತುರಾಜ್
* ಅಪ್ಪಾಜಿ ಜೊತೆಯಲ್ಲಿ ಬೇರೆ ನಾಯಕಿಯರು ಪಾತ್ರ ಮಾಡೋದು ಇಷ್ಟವೇ ?
ಸರಿತಾ ನನಗೆ ಒಪ್ಪಿಗೆಯಾಗೊಲ್ಲ, ಆಕೆ ಕಪ್ಪು. ಕನ್ನಡ ಸರಿಯಾಗಿ ಬರೋಲ್ಲ. ಅಂಬಿಕಾ, ಮಾದವಿ ಆದರೆ ಚೆನ್ನಾಗಿರುತ್ತೆ.
* ನಿಮ್ಮ ತಾಯಿ ಕಪ್ಪಗಿಲ್ಲವೇ ?
ಅವರು ನಮ್ಮ ಅಮ್ಮ. ಹೇಗಿದ್ದರೂ ಸರಿ.
* ಈಗ ಯಾವ ಪಿಕ್ಚರ್ನಲ್ಲಿ ಮಾಡ್ತಿದ್ದೀಯಾ ?
'ಭಕ್ತ ಪ್ರಹ್ಲಾದ'. ಇದಾದ ಮೇಲೆ ನಮ್ಮ ಚಿಕ್ಕಪ್ಪ ಮಾಡ್ತಾರಲ್ಲ 'ಎರಡು ನಕ್ಷತ್ರಗಳು', ಅದರಲ್ಲಿ ಫೈಟಿಂಗ್ ಇದೆ. ಅದಕ್ಕೆ ನಾನು ಈಗ ಕತ್ತಿ ವರಸೆ ಕಲೀತಿದೀನಿ. ಅದರಲ್ಲಿ ಹತ್ತಿಪ್ಪತ್ತು ಜನರನ್ನು ಒಟ್ಟಿಗೆ ಓಡಿಸೋ ಹೊಡೆದಾಟ ಇದೆ. 'ಕಾಳಿದಾಸ' ಚಿತ್ರದಲ್ಲಿ ಪಾರ್ಟು ಮಾಡಬೇಕಂತಿದ್ದೆ. ಅಪ್ಪಾಜಿ ಕುರುಬನ ವೇಷದಲ್ಲಿ ಬರ್ತಾರಲ್ಲ ಅಲ್ಲಿ ನಾನು ಕುಣಿಬೇಕು ಅಂತ ಇದ್ದೆ. ಆದರೆ ಆಗಲಿಲ್ಲ.
* ಅಪ್ಪಾಜಿ ಎಂಥಾ ಚಿತ್ರಗಳಲ್ಲಿ ಅಭಿನಯಿಸಬೇಕು ?
ಚಿತ್ರದಲ್ಲಿ ಸಾಯೋ ಕಥೆ ನಂಗೆ ಸರಿಹೋಗೋಲ್ಲ.
* 'ಭಕ್ತಪ್ರಹ್ಲಾದ'ದಲ್ಲಿ ನರಸಿಂಹ ನಿಮ್ಮ ತಂದೆ ಹೊಟ್ಟೆ ಬಗೀತಾನಲ್ಲ?
ಅದು ದೇವರ ಕಥೆ, ಆದ್ದರಿಂದ ಪರವಾಗಿಲ್ಲ.
* ನಿನ್ನ ಚಿತ್ರಗಳನ್ನು ನೋಡಿದಾಗ ನಿನ್ನ ಸ್ನೇಹಿತರು ಏನಂತಾರೆ?
ಇಲ್ಲಿ ಸ್ಟುಡಿಯೋದಲ್ಲಿ ತೋರಿಸಿದಾಗ ಅಕ್ಕಪಕ್ಕದ ಮನೆ ಹುಡುಗರು ಬರ್ತಾರೆ. ಚಿತ್ರ ಚೆನ್ನಾಗಿದೆ, ನೀನು ಬಹಳ ಚೆನ್ನಾಗಿ ನಟಿಸಿದ್ದಿ ಕಣೋ ಅಂತಾರೆ.
* ನಿನಗೇನಾದರೂ ಬೇಕಾದರೆ ಅಪ್ಪಾಜೀನ ಕೇಳ್ತಿಯೋ ಅಮ್ಮನ್ನೋ ?
ನಾನು ಅಪ್ಪಾಜಿನೇ ಕೇಳ್ತಿನಿ, ಅಮ್ಮನ್ನ ಕೇಳಿದರೆ ನಾಳೆ ನೋಡೋಣ ಅಂತಾರೆ, ಅಪ್ಪಾಜಿ ಕೂಡಲೇ ಕೊಡಿಸಿಬಿಡ್ತಾರೆ.
I Love You ಚಿನ್ನ: ಜಗ್ಗೇಶ್ ಬಿಚ್ಚಿಟ್ಟ ಪುನೀತ್ ನೆನಪು
* ಅಪ್ಪಾಜಿ ನಿಮ್ಮ ಮೇಲೆಲ್ಲಾ ರೇಗ್ತಾರೇನು ?
ಎಲ್ಲಿಗಾದರೂ ಹೊರಡುವಾಗ ತಡವಾದರೆ ರೇಗ್ತಾರೆ, ಯಾರನ್ನಾದರೂ ನಾವು ಬೈದರೆ ಹಾಗೇ ಮಾಡಬಾರದು ಅಂತಾರೆ. ಒಂದೊಂದು ಸಲ ತಮಾಷೆಗೆ ಅಯ್ಯೋ ಬಡ್ಡಿ ಮಗನೇ ಅಂತಾ ಬೈತಾರೆ.
* ಅಪ್ಪಾಜಿ ಯಾವಾಗಲಾದರೂ ನಿನಗೆ ಹೊಡೆದಿದ್ದಾರೆಯೇ ?
ಶಂಕರ್ ಗುರು ಶೂಟಿಂಗ್‌ಗೆ ಕಾಶ್ಮೀರಕ್ಕೆ ಹೋಗಿದ್ದಾಗ ನನ್ನ ಸ್ನೇಹಿತ ಸತೀಶನ್ನ ನಾನು ಹೊಡೆದಿದ್ದೆ, ಆಗ ಅಪ್ಪಾಜಿ ನನಗೆ ಹೊಡೆದು ಹಾಗೆಲ್ಲಾ ಮಾಡಬಾರದು ಅಂತ ಬುದ್ದಿ ಹೇಳಿದರು.
* ನಿನಗೆ ಮುಂದೆ ಏನಾಗಬೇಕಂತ ಆಸೆ ?
ಎರಡು ಮೂರು ಪಿಕ್ಚರ್ನಲ್ಲಿ ಮಾಡಿ ಆಮೇಲೆ ಓದೋಕೆ ಹೋಗ್ತಿನಿ. ಆಗ ಚಿತ್ರಗಳಲ್ಲಿ ಅಭಿನಯಿಸೋಲ್ಲ, ಕಾಲೇಜಿಗೆ ಹೋಗ್ತೀನಿ ಡಾಕ್ಟರ್ ಆಗ್ತೀನಿ, ಫಾರಿನ್ಗ್ಹೋಗಿ ಅಲ್ಲೇ ಇದ್ದುಬಿಡ್ತೀನಿ, ಅಲ್ಲೆ ಕನ್ನಡ ಪಿಕ್ಚರ್ ಮಾಡ್ತೀನಿ, ನಾನು ಮದುವೆನೇ ಆಗೋಲ್ಲ, ಬ್ರಹ್ಮಚಾರಿಯಾಗೇ ಇರ್ತೀನಿ. ಅಪ್ಪಾಜಿಯ ಹಾಗೇ ಫೇಮಸ್ ಆಗ್ತೀನಿ. ಎಂದು ಸಂದರ್ಶನವನ್ನು ಕೊಟ್ಟಿದ್ದಾರೆ.
ಇನ್ನು, ಪುನೀತ್ ಅವರು 29 ಚಲನಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದು, ಬಾಲ್ಯದಲ್ಲಿ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬೆಟ್ಟದ ಹೂವು' ಚಿತ್ರದಲ್ಲಿನ ರಾಮು ಪಾತ್ರಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. 'ಚಲಿಸುವ ಮೋಡಗಳು' ಮತ್ತು 'ಎರಡು ನಕ್ಷತ್ರಗಳು' ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.