ಜನುಮಕ್ಕಾಗುವಷ್ಟು ನೆನಪುಗಳನ್ನು ಕೊಟ್ಟಿದ್ದೀರಿ. ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದೀರಿ. ನೀವಿಲ್ಲ ಎಂದು ಊಹಿಸಿಕೊಳ್ಳುವುದು ಅಸಾಧ್ಯ. ಕನ್ನಡದ ರಾಯಭಾರಿಯಾಗಿ, ಅಗೋಚರ ಶಕ್ತಿಯಾಗಿ ನೀವು ನಮ್ಮನ್ನ ಹರಸುತ್ತೀರಿ, ಮುನ್ನಡೆಸುತ್ತಿರಿ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನರಾಗಿದ್ದು, ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಎಲ್ಲ ವರ್ಗದ ಜನರು ಸರಳ ಜೀವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸುಮಾರು 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅಪ್ಪು ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಅಪ್ಪು ಕೊನೆಯದಾಗಿ ಅಭಿನಯಿಸಿದ ಚಿತ್ರ 'ಜೇಮ್ಸ್' (James).
ಕ್ರೂರ ವಿಧಿಯೆ ನಿನಗೆ ಧಿಕ್ಕಾರ: ಗಾಯಕ ನವೀನ್ ಸಜ್ಜು
ಈ ಚಿತ್ರದ ನಿರ್ದೇಶಕ ಚೇತನ್ ಕುಮಾರ್ (Chetan Kumar), ಪುನೀತ್ ಜೊತೆಗಿನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗಿದೆ. 'ಪುನೀತ್ ಬಾಸ್ ಅವರ ಮನೆಯಲ್ಲಿ 'ಜೇಮ್ಸ್' ಚಿತ್ರದ ಕೊನೆಯ ಶಾಟ್, 3ಡಿ ಲಿರಿಕಲ್ ವಿಡಿಯೋ ಇಂಟ್ರೋ ಟ್ರ್ಯಾಕ್ ಅನ್ನು ಚಿತ್ರೀಕರಿಸಿದ್ದೇವೆ. ಹಾಗೂ ಈ ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ 'ಜನುಮಕ್ಕಾಗುವಷ್ಟು ನೆನಪುಗಳನ್ನು ಕೊಟ್ಟಿದ್ದೀರಿ. ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದೀರಿ. ನೀವಿಲ್ಲ ಎಂದು ಊಹಿಸಿಕೊಳ್ಳುವುದು ಅಸಾಧ್ಯ. ಕನ್ನಡದ ರಾಯಭಾರಿಯಾಗಿ, ಅಗೋಚರ ಶಕ್ತಿಯಾಗಿ ನೀವು ನಮ್ಮನ್ನ ಹರಸುತ್ತೀರಿ, ಮುನ್ನಡೆಸುತ್ತಿರಿ. ನಿಮ್ಮ ನೆನಪುಗಳು ನನ್ನೊಳಗೆ ಸದಾ ಜೀವಂತ. ಜನುಮ ಜನುಮಕ್ಕೂ ಸದಾ ಚಿರ ಋಣಿ'ಎಂದು ಚೇತನ್ ಕುಮಾರ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ.
ನಿರ್ದೇಶಕ ಚೇತನ್ ಕುಮಾರ್ ಅವರು 'ಜೇಮ್ಸ್' ಸಿನಿಮಾದ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಆದರೆ ಡಬ್ಬಿಂಗ್ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ವಿಶೇಷ ಸ್ಟಂಟ್ಸ್, ಹೈವೋಲ್ಟೇಜ್ ಆ್ಯಕ್ಷನ್ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಜೇಮ್ಸ್'ನಲ್ಲಿ ನಾಯಕಿಯಾಗಿ ಕಾಲಿವುಡ್ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ರಾಜಕುಮಾರ' ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ, ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಈ ಚಿತ್ರದಲ್ಲಿ ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಕ್ರಮಣಕಾರ ಸ್ವಭಾವದ ಪಾತ್ರ ಎನ್ನಲಾಗಿದೆ.
ಚಿತ್ರಕ್ಕೆ ಎ. ಹರ್ಷ ನೃತ್ಯ ನಿರ್ದೇಶಿಸಿದ್ದು, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿಗಳನ್ನು ನಿರ್ದೇಶಿಸಲಿದ್ದಾರೆ ಹಾಗೂ ನಿರ್ಮಾಪಕ ಕಿಶೋರ್ ಪತಿಕೊಂಡ (Kishor Patikonda) ಬಂಡವಾಳ ಹೂಡಿದ್ದಾರೆ. 'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಷ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ ಸೇರಿದಂತೆ ದೀಪು ಎಸ್.ಕುಮಾರ್ ಸಂಕಲನ ಇರುವ ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣವಿದೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‌ಕುಮಾರ್
ಇನ್ನು ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಎರಡು ದಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಅನೇಕ ಅಭಿಮಾನಿಗಳು ಪಾರ್ಥಿವ ಶರೀರದ ದರ್ಶನ ಪಡೆದರು. ಭಾನುವಾರ ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.