
ಧ್ರುವ ಸರ್ಜಾ ಎಂದಾಕ್ಷಣ ಅಭಿಮಾನಿಗಳ ಕಣ್ಣ ಮುಂದೆ ಬರುವುದು ಹೈವೋಲ್ಟೇಜ್ ಮಾಸ್ ಹೀರೋಯಿಸಂ, ಜೋರು ಡೈಲಾಗ್‌ಗಳು ಹಾಗೂ ಭರ್ಜರಿ ಆ್ಯಕ್ಷನ್ ದೃಶ್ಯಗಳು. ಆದರೆ, ಈ ಬಾರಿ ಧ್ರುವ ಸರ್ಜಾ ತಮ್ಮ ಎಂದಿನ ಇಮೇಜ್‌ನಿಂದ ಸಂಪೂರ್ಣ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ‘ಕೆಮಿಸ್ಟ್ರಿ’ ಎಂಬ ರೊಮ್ಯಾಂಟಿಕ್ ಡ್ರಾಮಾದ ಮೂಲಕ ಧ್ರುವ ಸರ್ಜಾ ಅವರ ಮತ್ತೊಂದು ಮುಖವನ್ನು ಪ್ರೇಕ್ಷಕರಿಗೆ ಪರಿಚಯಿಸಲು ನಿರ್ದೇಶಕ ವಿಶಾಲ್ ಅತ್ರೇಯ ಸಿದ್ಧರಾಗಿದ್ದಾರೆ.
‘ತತ್ಸಮ ತದ್ಭವ’ ಚಿತ್ರದ ಮೂಲಕ ನಿರ್ದೇಶಕರಾಗಿ ಗಮನ ಸೆಳೆದಿರುವ ವಿಶಾಲ್ ಅತ್ರೇಯ ಅವರು ‘ಕೆಮಿಸ್ಟ್ರಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಧ್ರುವ ಸರ್ಜಾ ಹಾಗೂ ನಭಾ ನಟೇಶ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದು ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಅಲ್ಲಿನ ವಿಭಿನ್ನ ವಾಯ್ಸ್‌ಓವರ್ ಚಿತ್ರದ ಕಥೆಯ ಮೂಲ ಅಂಶದ ಬಗ್ಗೆ ಕುತೂಹಲ ಮೂಡಿಸಿತ್ತು. ಪ್ರತಿಯೊಂದು ರಿಲೇಷನ್‌ಶಿಪ್‌ನಲ್ಲೂ ಪ್ರೀತಿ ಮಾಡೋಕೆ, ದ್ವೇಷಿಸೋಕೆ, ಜಗಳ ಮಾಡೋಕೆ, ಕಾಳಜಿ ತೋರಿಸೋಕೆ, ಬ್ರೇಕಪ್ ಆಗೋಕೆ ಹಾಗೂ ಮತ್ತೆ ಪ್ಯಾಚ್‌ಅಪ್ ಆಗೋಕೆ ಬೇಕಾಗಿರೋದೇ... ಕೆಮಿಸ್ಟ್ರಿ ಎಂಬ ಅರ್ಥದ ಮಾತುಗಳ ಮೂಲಕ ಚಿತ್ರದ ಶೀರ್ಷಿಕೆಯ ಹಿಂದಿನ ಆಲೋಚನೆಯನ್ನು ಪರಿಚಯಿಸಲಾಗಿತ್ತು.
‘ಕೆಮಿಸ್ಟ್ರಿ’ ಅಂದ್ರೆ ಬರೀ ಆಕರ್ಷಣೆಯಲ್ಲ
ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡಿರುವ ನಿರ್ದೇಶಕ ವಿಶಾಲ್ ಅತ್ರೇಯ, ‘ಕೆಮಿಸ್ಟ್ರಿ’ ಎನ್ನುವುದು ನಾವು ದಿನನಿತ್ಯದ ಜೀವನದಲ್ಲೇ ಸಾಕಷ್ಟು ಬಾರಿ ಬಳಸುವ ಪದ. ಆದರೆ, ಅದರ ಅರ್ಥ ಕೇವಲ ಇಬ್ಬರ ನಡುವಿನ ಆಕರ್ಷಣೆಗೆ ಸೀಮಿತವಾಗಿಲ್ಲ ಎನ್ನುತ್ತಾರೆ. ಇಬ್ಬರು ವ್ಯಕ್ತಿಗಳ ನಡುವಿನ ಕೆಲವು ಭಾವನೆಗಳನ್ನು ಅಥವಾ ಸಂಬಂಧವನ್ನು ನಿಖರವಾಗಿ ವಿವರಿಸಲು ಸಾಧ್ಯವಾಗುವುದಿಲ್ಲ. ಅದೇ ಕೆಮಿಸ್ಟ್ರಿ. ಇಬ್ಬರ ನಡುವೆ ಹೇಳಲಾಗದ, ವಿವರಿಸಲಾಗದ ಆ ಭಾವನೆಯೇ ಈ ಕಥೆಯ ಮೂಲ ಅಂಶ ಎಂದು ನಿರ್ದೇಶಕರು ಹೇಳಿದ್ದಾರೆ.
ಚಿತ್ರದಲ್ಲಿ ಜೋರಾದ ಹೀರೋಯಿಸಂ ಇರಲ್ಲ!
ಧ್ರುವ ಸರ್ಜಾ ಅವರ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಮಾಸ್ ಎಲಿವೇಷನ್‌ಗಳು, ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯಗಳು ಹಾಗೂ ಜೋರಾದ ಹೀರೋಯಿಸಂ ‘ಕೆಮಿಸ್ಟ್ರಿ’ಯಲ್ಲಿ ಇರುವುದಿಲ್ಲ ಎಂದು ನಿರ್ದೇಶಕ ವಿಶಾಲ್ ಅತ್ರೇಯ ಸ್ಪಷ್ಟಪಡಿಸಿದ್ದಾರೆ.
ಈ ಚಿತ್ರದಲ್ಲಿ ಯಾವುದೇ ಎಲಿವೇಷನ್ ದೃಶ್ಯಗಳು ಅಥವಾ ಜೋರಾದ ಹೀರೋಯಿಸಂ ಇರುವುದಿಲ್ಲ. ಇದು ಸಂಪೂರ್ಣವಾಗಿ ಸಾಫ್ಟ್ ನ್ಯಾರೇಟಿವ್ ಹೊಂದಿರುವ ಸಿನಿಮಾ. ಧ್ರುವ ಅವರಲ್ಲಿರುವ ಬೆಚ್ಚಗಿನ, ಸರಳ ಹಾಗೂ ಸಹಜವಾದ ಮುಖವನ್ನು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅವರು ಕಥೆಗಿಂತ ದೊಡ್ಡವರಾಗಿ ಕಾಣಿಸಿಕೊಳ್ಳುವುದಿಲ್ಲ; ಬದಲಿಗೆ ಕಥೆಯೊಳಗೆ ಸಂಪೂರ್ಣವಾಗಿ ಬೆರೆತು ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.
ಧ್ರುವ ಸರ್ಜಾ ಲುಕ್‌ನಲ್ಲೂ ಬದಲಾವಣೆ
ರೊಮ್ಯಾಂಟಿಕ್ ಡ್ರಾಮಾಗೆ ಹೊಂದುವಂತೆ ಧ್ರುವ ಸರ್ಜಾ ಅವರ ಲುಕ್‌ನಲ್ಲೂ ಗಮನಾರ್ಹ ಬದಲಾವಣೆ ಮಾಡಲಾಗುತ್ತಿದೆ. ಪಾತ್ರಕ್ಕೆ ಇನ್ನಷ್ಟು ಯುವ ಹಾಗೂ ಲೀನ್ ಲುಕ್ ನೀಡಲು ನಟ ತೂಕ ಇಳಿಸಿಕೊಳ್ಳಲಿದ್ದಾರೆ. ಹೀಗಾಗಿ, ಧ್ರುವ ಅವರನ್ನು ಇದುವರೆಗಿನ ಸಿನಿಮಾಗಳಿಗಿಂತ ವಿಭಿನ್ನವಾದ ಗೆಟಪ್‌ನಲ್ಲಿ ನೋಡಬಹುದಾಗಿದೆ.
ನಭಾ ನಟೇಶ್ ಮತ್ತೆ ಕನ್ನಡಕ್ಕೆ
‘ಕೆಮಿಸ್ಟ್ರಿ’ ಚಿತ್ರದ ಮೂಲಕ ನಟಿ ನಭಾ ನಟೇಶ್ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸಾಗುತ್ತಿದ್ದಾರೆ. ಧ್ರುವ ಸರ್ಜಾ ಹಾಗೂ ನಭಾ ನಟೇಶ್ ಮೊದಲ ಬಾರಿಗೆ ಈ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಉಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ಸದ್ಯ ನಡೆಯುತ್ತಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು, ವೈದ್ಯ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿರುವ ‘ಕೆಮಿಸ್ಟ್ರಿ’ಯ ಭಾವನಾತ್ಮಕ ಅಂಶ ಸಾರ್ವತ್ರಿಕವಾಗಿದ್ದರೂ, ಚಿತ್ರವನ್ನು ಸಂಪೂರ್ಣವಾಗಿ ಕನ್ನಡದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗುತ್ತಿದೆ ಎಂದು ವಿಶಾಲ್ ಅತ್ರೇಯ ಹೇಳಿದ್ದಾರೆ. ಚಿತ್ರದ ಭಾವನಾತ್ಮಕ ಅಂಶ ಎಲ್ಲರಿಗೂ ಕನೆಕ್ಟ್ ಆಗುವಂತಿರುತ್ತದೆ. ಆದರೆ ಇದು ಶೇ.100ರಷ್ಟು ಕನ್ನಡ ಸಿನಿಮಾ. ನಮ್ಮ ಪ್ರೇಕ್ಷಕರು ಹಾಗೂ ನಮ್ಮ ನೆಲದ ಸಂವೇದನೆಗಳನ್ನು ಗಮನದಲ್ಲಿಟ್ಟುಕೊಂಡೇ ಚಿತ್ರವನ್ನು ಮಾಡುತ್ತಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇನ್ನು ಚಿತ್ರದ ಸ್ಕ್ರಿಪ್ಟ್ ಈಗಾಗಲೇ ಅಂತಿಮಗೊಂಡಿದ್ದು, ಈ ವರ್ಷವೇ ‘ಕೆಮಿಸ್ಟ್ರಿ’ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಧ್ರುವ ಸರ್ಜಾ ಅವರ ಮಾಸ್ ಇಮೇಜ್‌ನಿಂದ ಸಂಪೂರ್ಣ ವಿಭಿನ್ನವಾಗಿ ಮೂಡಿಬರಲಿರುವ ಈ ರೊಮ್ಯಾಂಟಿಕ್ ಡ್ರಾಮಾ ಇದೀಗ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.