ಇಂದು ಬೈರಾಗಿ ಬಿಡುಗಡೆ. ಸಿನಿಮಾ ಮತ್ತು ತಂಡದ ಬಗ್ಗೆ ಶಿವಣ್ಣ ಹೇಳಿರುವ ಮಾತು ಕೇಳಿ..
‘ಹುಟ್ತಾನೇ ಯಾರೂ ಹೀರೋ ಅಥವಾ ಜೋಕರ್ ಆಗಿ ಹುಟ್ಟಲ್ಲ ಕಣೋ. ಒಂದು ತಪ್ಪು ನಡೀಬೇಕಾದ್ರೆ ಆ ತಪ್ಪನ್ನ ತಟ್ಟಿಕೇಳ್ತಾನಾ, ಇಲ್ಲಾಂದ್ರೆ ಓಡೋಗ್ತಾನಾ, ಅದ್ರ ಮೇಲೆ ಜೋಕರಾ, ಏನಂತ ಡಿಸೈಡ್ ಆಗುತ್ತೆ!’
ನಿರ್ದೇಶಕ ವಿಜಯ ಮಿಲ್ಟನ್ ಪರ್ಮಿಶನ್ ತಗೊಂಡು ಡಾ ಶಿವರಾಜ್ ಕುಮಾರ್ ಹೇಳಿದ ‘ಬೈರಾಗಿ’ ಚಿತ್ರದ ಡೈಲಾಗ್ ಇದು. ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಎಂದಿನ ಜೋಶ್‌ನಲ್ಲಿ ಮಾತನಾಡಿದರು.
‘ಇದು ಸ್ಟೈಲಿಶ್ ಸಿನಿಮಾ. ಇಲ್ಲಿ ಬರುವ ಫೈಟು, ಬಟ್ಟೆ, ಬಣ್ಣಗಳು, ಹೇರ್ ಸ್ಟೈಲ್ ಪ್ರತಿಯೊಂದಕ್ಕೂ ಒಂದು ಕಾರಣ ಇರುತ್ತೆ. ಸಮಾಜದ ಬಗೆಗಿನ ಕಾಳಜಿ ಸಿನಿಮಾದಲ್ಲಿ ಎದ್ದು ಕಾಣುತ್ತೆ. ಸಿನಿಮಾದ ವೀಡಿಯೋ ತುಣುಕನ್ನು ಫ್ಯಾನ್ಸ್ ಅಲ್ಲದೇ ಸಾಮಾನ್ಯ ಜನರೂ ಮೆಚ್ಚಿಕೊಂಡಿದ್ದಾರೆ. ನಮ್ಮ ನಿರ್ದೇಶಕರು ಸ್ವಲ್ಪ ಜೋರು. ಡೈಲಾಗ್ ಚೆನ್ನಾಗಿ ಬರದಿದ್ರೆ ಎಲ್ರಿಗೂ ಕ್ಲಾಸ್ ತಗೊಳ್ತಿದ್ರು. ನನಗೆ ನೇರ ಬೈಯಲಿಕ್ಕಾಗಲ್ವಲ್ಲಾ, ನಾನು ಡೈಲಾಗ್ ಹೇಳುವಾಗ ಕೊಂಚ ಆಚೀಚೆ ಆದರೆ ನಿಮ್ಗೆ ಬೈಯಕ್ಕಾಗಲ್ಲ, ಆದ್ರೆ ಈ ಥರಾನೇ ನನಗೆ ಡೈಲಾಗ್ ಬೇಕು ಅಂತ ನೇರವಾಗಿ ಹೇಳ್ತಿದ್ರು. ಪರಿಣಾಮ ಸಿನಿಮಾ ಬಹಳ ಸೊಗಸಾಗಿ ಬಂದಿದೆ. ಬೇರೆ ವಿಚಾರ ಮಾತಾಡಿದ್ರೆ ಟ್ರೋಲ್ ಮಾಡ್ತಾರೆ. ನಮಗೆ ಗೊತ್ತಿಲ್ಲದ ಹಾಗೆ ಎಲ್ಲೆಲ್ಲೋ ಕ್ಯಾಮರ ಇಟ್ಟಿರ್ತಾರೆ. ಅದಕ್ಕೇ ನಾನೂ ಎಷ್ಟುಬೇಕೋ ಅಷ್ಟೆಮಾತಾಡ್ತೀನಿ’ ಎಂದರು ಶಿವಣ್ಣ.
ನಿರ್ದೇಶಕ ವಿಜಯ್ ಮಿಲ್ಟನ್, ‘ಈ ಪಾತ್ರಕ್ಕೆ ಎರಡು ಆವರಣವಿದೆ. ಹೊರ ಆವರಣ ಸರಳ, ನೇರ. ಒಳ ಆವರಣ ಭಾರ, ಸಂಕೀರ್ಣ. ಈ ಪಾತ್ರಕ್ಕೂ ಶಿವಣ್ಣ ಅವರಿಗೂ ಬಹಳ ಸಾಮ್ಯವಿದೆ. ಸಿನಿಮಾದಲ್ಲಿ ಧನಂಜಯ್, ಪೃಥ್ವಿ ಅಂಬರ್ ಪಾತ್ರಗಳಲ್ಲದೇ ನಾಲ್ಕು ಪ್ರಬಲ ಮಹಿಳಾ ಪಾತ್ರಗಳಿವೆ. ವಸಿಷ್ಠ ಸಿಂಹ ಅವರ ಹಾಡು ವಿಶೇಷ ಸನ್ನಿವೇಶದಲ್ಲಿ ಬರುತ್ತೆ. ಪವರ್‌ಫುಲ್ ಸಂಭಾಷಣೆ ಇದೆ. ಈ ಸಂಭಾಷಣೆ ಬರೆದ ಗುರು ಕಶ್ಯಪ್ ನಮ್ಮನ್ನಗಲಿರೋದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಚಿತ್ರ ಮಾಡಿದ ಮೇಲೆ ಸಿನಿಮಾಕ್ಕೆ ಒಳ್ಳೆಯ ಕಥೆ ಬೇಕೇ ಹೊರತು ಭಾಷೆಯಲ್ಲ ಅನ್ನೋದರ ಅರಿವಾಯ್ತು’ ಎಂದರು.
ಧೂಳು ಹೆಚ್ಚಾಗಿ ಆರೋಗ್ಯ ಸಮಸ್ಯೆ ಆಗಿದೆ ಹೀಗಾಗಿ ಧ್ವನಿ ಹಾಳಾಗಿದೆ: ಶಿವರಾಜ್‌ಕುಮಾರ್
‘ಶಿವಣ್ಣನ ಜೊತೆ ಈ ಸಿನಿಮಾದಲ್ಲಿ ಅವಕಾಶ ಸಿಕ್ಕಿದ ಮೇಲೆ ಕುಟುಂಬದವರು ನನ್ನ ನಟನೆಯನ್ನು ಗಂಭೀರವಾಗಿ ತೆಗೆದುಕೊಂಡರು’ ಎಂದು ನಾಯಕಿ ಯಶಾ ಶಿವಕುಮಾರ್ ಹೇಳಿದರು.
ನಟ ಪೃಥ್ವಿ ಅಂಬರ್, ಶಿವಣ್ಣ ಬಗೆಗೆ ಆರಂಭದಲ್ಲಿ ತನಗಿದ್ದ ಭಯ ಆಮೇಲೆ ಹೇಗೆ ಕರಗಿತು ಅನ್ನೋದನ್ನು ವಿವರಿಸಿದರು. ನಿರ್ಮಾಪಕ ಕೃಷ್ಣ ಸಾರ್ಥಕ್, ‘350ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಮೈಸೂರಿನ ಸಂಗಮ ಟಾಕೀಸಿನಲ್ಲಿ ಶಿವಣ್ಣ ಅವರ 60 ಅಡಿ ಕಟೌಟ್ ನಿಲ್ಲಿಸುತ್ತಿದ್ದೇವೆ’ ಎಂದರು.
ಶಿವಣ್ಣ ಜೊತೆ ತುಂಬಾ ಚೇಷ್ಟೆ ಮಾಡಿದ್ದೀನಿ ಭಯ ದೂರು ಆಗಿದೆ: ಪೃಥ್ವಿ ಅಂಬರ್
ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗೀತ ರಚನಕಾರ ಪ್ರಮೋದ್ ಮರವಂತೆ ಇದ್ದರು.