
ಕೂಡ್ಲಿಗಿ(ಡಿ.09): ಶುಕ್ರವಾರ ನಿಧನರಾದ ಹಿರಿಯ ನಟಿ ಲೀಲಾವತಿ ಅವರು ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮಕ್ಕೆ ಮೂರು ಬಾರಿ ಭೇಟಿ ನೀಡಿದ್ದರು. ಸೇಂದಿ ವ್ಯಾಪಾರಿ ಹಾಗೂ ರಾಜ್ಯದ ಮೊದಲ ಮಾದರಿ ಗ್ರಾಮದ ನಿರ್ಮಾಣದ ರೂವಾರಿ ಚಿಕ್ಕಜೋಗಿಹಳ್ಳಿಯ ಕೆ. ವೆಂಟಕಸ್ವಾಮಿಯವರ ಒಡನಾಟ ಇದ್ದಿದ್ದರಿಂದ ಗ್ರಾಮಕ್ಕೆ ಭೇಟಿ ನೀಡಿದ್ದರು.
ಬೆಂಗಳೂರಿನಿಂದ ಮೊದಲ ಬಾರಿಗೆ ಚಿಕ್ಕಜೋಗಿಹಳ್ಳಿಗೆ 1960ರಲ್ಲಿ ಡಾ. ರಾಜಕುಮಾರ್, ಬಾಲಕೃಷ್ಣ ಹಾಗೂ ಇತರ ನಟರೊಂದಿಗೆ ಅಗಮಿಸಿದ್ದರು. ನಂತರ 1964ರಲ್ಲಿ ತೆರೆಕಂಡ ತುಂಬಿದಕೊಡ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಚಿಕ್ಕಜೋಗಿಹಳ್ಳಿಗೆ ಭೇಟಿ ನೀಡಿದ್ದರು. ಲೀಲಾವತಿ ಅವರ ಮಗ ನಟ ವಿನೋದರಾಜ್ ಅವರು ನಟಿಸಿದ ಕಾಲೇಜು ಹೀರೊ ಬಿಡುಗಡೆ ವೇಳೆ 1990ರಲ್ಲಿ ಚಿಕ್ಕಜೋಗಿಹಳ್ಳಿಗೆ ಆಗಮಿಸಿದ್ದರು.
ಲೀಲಾವತಿ ಅವರ ಕಲಾಸೇವೆ, ಸಾಮಾಜಿಕ ಕಳಕಳಿಯ ಬದುಕೇ ನಮಗೆ ಮಾದರಿ : ಡಿಕೆ ಶಿವಕುಮಾರ
ಆಗ ತಾಯಿ ಮತ್ತು ಮಗ ಸೇರಿ ಇಡೀ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಸಂಚರಿಸಿದ್ದರು. ಕಾಲ್ನಡಿಗೆ ಮೂಲಕ ತೆರಳಿ ಜನರ ಜೀವನಶೈಲಿಯನ್ನು ವೀಕ್ಷಿಸಿದ್ದರು. ಅಲ್ಲದೇ ಮಗನ ಚಿತ್ರವನ್ನು ವೀಕ್ಷಿಸುವ ಮೂಲಕ ಹಾರೈಸುವಂತೆ ಲೀಲಾವತಿ ಇಲ್ಲಿನ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರು. ಚಿಕ್ಕಜೋಗಿಹಳ್ಳಿಯಲ್ಲಿ 2 ದಿನಗಳ ಕಾಲ ತಂಗಿದ್ದರು. ಬಳಿಕ ಕೊಟ್ಟೂರಿನ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದು ನಂತರ ಬೆಂಗಳೂರಿಗೆ ತೆರಳಿದ್ದನ್ನು ಸ್ಥಳೀಯರು ಸ್ಮರಿಸುತ್ತಾರೆ.
ಅಗಲಿಕೆಯಿಂದ ನೋವು:
ರಾಜ್ಯದ ಬಹುತೇಕ ಚಲಚಿತ್ರ ನಟ, ನಟಿಯರು ಚಿಕ್ಕಜೋಗಿಹಳ್ಳಿ ಗ್ರಾಮಕ್ಕೆ ಅಗಮಿಸಿದ್ದಾರೆ. ಈ ಪೈಕಿ ಲೀಲಾವತಿ ಅಮ್ಮನವರು ನಮ್ಮ ಮನೆಗೆ ತಾತಾ ವೆಂಕಟಸ್ವಾಮಿ ಇರುವಾಗ ಎರಡು ಬಾರಿ ನಂತರ ಮಗ ವಿನೋದರಾಜ್ ಜತೆ ಮೂರನೇ ಬಾರಿಗೆ ಭೇಟಿ ನೀಡಿದ್ದರು. ಲೀಲಾವತಿ ಅವರ ಅಗಲಿಕೆಯಿಂದ ನೋವಾಗಿದೆ ಎಂದರು ಮಾಜಿ ಶಾಸಕ ಕೆ.ವಿ. ರವೀಂದ್ರನಾಥ ಬಾಬು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.