ಕನ್ನಡ ಸಿನಿಮಾಗಳನ್ನು ಪ್ರೇಕ್ಷಕರು ಯಾಕೆ ನೋಡುತ್ತಿಲ್ಲ ಎನ್ನುವ ಬಗ್ಗೆ ನಟ ಯಶ್ ಕಾರಣ ಕೊಟ್ಟಿದ್ದಾರೆ. ಜೊತೆಗೆ ಹೊಸ ನಟರು ಮತ್ತು ನಿರ್ದೇಶಕರಿಗೆ ಟಿಪ್ಸ್ ಕೊಟ್ಟಿದ್ದಾರೆ.
ಇಂದು ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ, ಅದರಲ್ಲಿಯೂ ಕನ್ನಡ ಸಿನಿಮಾಗಳು ಓಡುತ್ತಿಲ್ಲ, ಜನರು ಸಿನಿಮಾಗಳನ್ನೇ ನೋಡುತ್ತಿಲ್ಲ ಎಂದು ಇತ್ತೀಚಿನ ದಿನಗಳಲ್ಲಿ ಬಹುತೇಕ ನಟ-ನಟಿಯರು ಸೇರಿದಂತೆ ಚಿತ್ರರಂಗದಿಂದ ಕೇಳಿಬರುತ್ತಿರುವ ಮಾತೇ ಆಗಿದೆ. ಈಗೀಗ ಮನೆಯಲ್ಲಿ ಕುಳಿತೇ ಎಲ್ಲಾ ನೋಡುವ ಸೌಲಭ್ಯಗಳಿವೆ. ಟೆಕ್ನಾಲಜಿ ಹೆಚ್ಚಿದಂತೆ ಸಿನಿಮಾಗಳಿಗೆ ಹೋಗುವ ಪ್ರಮೇಯವೇ ಇಲ್ಲವಾಗಿದೆ. ಮನೆಯ ಬಾಗಿಲಿಗೇ ಸಿನಿಮಾ ಬರುತ್ತಿದೆ. ಇದು ಒಂದೆಡೆಯಾದರ ಹೊಸ ಹೊಸ ಸಿನಿಮಾಗಳು ಲೀಕ್ ಆಗುವುದು, ಥಿಯೇಟರ್ ಪ್ರಿಂಟ್ನಲ್ಲಿಯೇ ವಿಡಿಯೋ ಮಾಡಿ ವೈರಲ್ ಮಾಡುವುದು... ಹೀಗೆ ಏನೇನೋ ಸಮಸ್ಯೆಗಳನ್ನು ಇಡೀ ಚಿತ್ರರಂಗ ಎದುರಿಸುತ್ತಿರುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಸಿನಿಮಾಗಳಿಗೆ ದುಡ್ಡು ಕೊಟ್ಟು ಹೋಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವಷ್ಟು ಪೇಷೆನ್ಸ್ ಜನರಿಗೆ ಇಲ್ಲ, ಆದ್ದರಿಂದ ಚಿತ್ರಗಳು ಓಡುತ್ತಿಲ್ಲ ಎಂದು ಚಿತ್ರರಂಗದವರು ನೋವು ತೋಡಿಕೊಳ್ಳುತ್ತಲೇ ಇದ್ದಾರೆ.
ಆದರೆ, ಇದೀಗ ನಟ ಯಶ್ ಅವರು, ಕನ್ನಡ ಸಿನಿಮಾಗಳ ಬಗ್ಗೆ ಬೇಸರ ಹೊರಹಾಕಿದ್ದಾರೆ. ಮನದ ಕಡಲು ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಅವರು, ಅಲ್ಲಿ ಕನ್ನಡದ ತಂತ್ರಜ್ಞರನ್ನು ಮತ್ತು ಕಲಾವಿದರನ್ನು ಭೇಟಿಯಾಗಿ ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡಿದರು. 'ಕನ್ನಡ ಸಿನಿಮಾ ನೋಡಲ್ಲ, ಬೇರೆ ಭಾಷೆಯದ್ದಾದರೆ ನೋಡ್ತಾರೆ ಅಂತ ಗೋಳಾಡ್ತಿವಿ. ನಾನೂ ಈ ಹಿಂದೆ ಭಾಷಣದಲ್ಲಿ ಇದನ್ನೇ ಹೇಳಿದ್ದೆ, ಪ್ರೇಕ್ಷಕರು ಥಿಯೇಟರ್ಗಳಿಗೆ ಬರ್ತಿಲ್ಲ, ಕನ್ನಡ ಬದ್ಲು ಬೇರೆ ಸಿನಿಮಾ ನೋಡ್ತಾರೆ ಎಂದೆಲ್ಲಾ ಪ್ರೇಕ್ಷಕರನ್ನೇ ಬೈದುಕೊಳ್ತಿದ್ದೆ. ಆಮೇಲೆ ಯೋಚನೆ ಮಾಡಿದಾಗ ಗೊತ್ತಾಗಿದ್ದು ಇಷ್ಟೆ. ನಮ್ಮ ಕೆಲಸ ನಾವು ಸರಿಯಾಗಿ ಮಾಡಿದ್ರೆ ಅಭಿಮಾನಿಗಳ ನಮ್ಮ ಕೈ ಬಿಡಲ್ಲ, ಅವರು ನಮ್ಮನ್ನು ಕಾಪಾಡುತ್ತಾರೆ. ನಾವು ಚೆನ್ನಾಗಿರುವ ಸಿನಿಮಾ ಕೊಡಬೇಕು ಅಷ್ಟೇ. ನಮಗೆ ನಿಜವಾದ ಗೆಲುವು ಸಿಗುವುದು ನಾವು ಮಾಡುವ ಕೆಲಸದಿಂದ. ಕಷ್ಟಪಟ್ಟು ಕೆಲಸ ಮಾಡಬೇಕು, ಅಪ್ಗ್ರೇಡ್ ಆಗಬೇಕು. ಅದನ್ನು ಬಿಟ್ಟು ಸಿನಿಮಾ ನೋಡಲು ಜನ ಬರುವುದಿಲ್ಲ ಎನ್ನುವುದು ಸುಳ್ಳು, ಚೆನ್ನಾಗಿರುವ ಸಿನಿಮಾ ಕೊಟ್ಟು ನೋಡಿ' ಎಂದಿದ್ದಾರೆ.
ಇದೇ ವೇಳೆ, ಹೊಸದಾಗಿ ಸಿನಿಮಾಕ್ಕೆ ಬರುವವರಿಗೂ ಟಿಪ್ಸ್ ಕೊಟ್ಟಿರುವ ನಟ, ಕಷ್ಟಪಟ್ಟು ಕ ಎಲಸ ಮಾಡಿ, ಸ್ವಾಭಿಮಾನವನ್ನು ಬೆಳೆಸಿಕೊಳ್ಳಿ, ಬರೀ ಆ್ಯಕ್ಟಿಂಗ್ ಬಂದ್ರೆ ಅದು ಸಿನಿಮಾ ಆಗಲ್ಲ. ಕರಿಯರ್, ಟ್ರೆಂಡ್, ನಿಮ್ಮ ಮೇಲಿರುವ ಜವಾಬ್ದಾರಿ ಎಲ್ಲವನ್ನೂ ತಿಳಿದುಕೊಂಡು ಬರಬೇಕು, ಅಂದಾಗ ಮಾತ್ರ ಸಿನಿಮಾ ಸಕ್ಸಸ್ ಆಗುತ್ತದೆ ಎಂದಿದ್ದಾರೆ. ಹಾಗೆಯೇ ಯಂಗ್ ನಿರ್ದೇಶಕರಿಗೂ ಹೇಗೆ ಪ್ರಿಪೇರ್ ಆಗಿ ಬರಬೇಕು ಎನ್ನುವ ಬುದ್ಧಿಮಾತು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ರವಿಚಂದ್ರನ್ ಕೂಡ ಇದೇಮಾತನ್ನು ಹೇಳಿದ್ದರು. ಜೊತೆಗೆ ಅವರು, ವಾರಕ್ಕೆ ಏನಿಲ್ಲ ಎಂದರೂ 40 ಸಿನಿಮಾ ರಿಲೀಸ್ ಆಗುತ್ತದೆ. ಟ್ರಾಫಿಕ್ ಜ್ಯಾಂ ಸಿನಿಮಾದವರೇ ಮಾಡುತ್ತಿದ್ದೇವೆ. ವಾರದಲ್ಲಿ 40 ಸಿನಿಮಾ ಮಾಡಿ ಜನರಿಗೆ ಆರಿಸಿಕೋ ಎಂದ್ರೆ ಏನು ಆರಿಸಿಕೊಳ್ತಾರೆ ಎಂದು ನಟ ಪ್ರಶ್ನಿಸಿದ್ದಾರೆ. ಬೇರೆ ಭಾಷೆ ಓಡುತ್ತೆ ಅಂತೀರಾ, ಆ ಭಾಷೆಗಳ ಎಲ್ಲಾ ಸಿನಿಮಾಗಳು ಇಲ್ಲಿ ಬರಲ್ಲ, ಸೆಲೆಕ್ಟೆಡ್ ಮಾತ್ರ ಆಗತ್ತೆ. ಎಲ್ಲಾ ಸಿನಿಮಾ ಇಲ್ಲಿ ರಿಲೀಸ್ ಆದ್ರೆ ಜನ ಅದಕ್ಕೂ ಹೋಗಲ್ಲ ಎಂದಿದ್ದಾರೆ. ಅಂದಿನ ಚಿತ್ರಗಳನ್ನು, ಹಾಡುಗಳನ್ನು ಜನರು ಇಂದಿಗೂ ನೆನಪಿಸಿಕೊಳ್ತಾರೆ ಎಂದರೆ ಚಿತ್ರಗಳು ಹಾಗೆ ಇರುತ್ತಿದ್ದವು, ಇಂದೂ ಅಂಥದ್ದೇ ಚಿತ್ರ ರಿಲೀಸ್ ಮಾಡಿ, ಜನ ನೋಡಿಯೇ ನೋಡುತ್ತಾರೆ ಎಂದಿದ್ದರು.
ಸನ್ನಿ ಲಿಯೋನ್ ಹೆಸ್ರು ಹೇಳ್ತಿದ್ದಂತೆಯೇ ಯಶ್ ಸೈಲೆಂಟ್ ಆಗಿದ್ಯಾಕೆ? ವೈರಲ್ ವಿಡಿಯೋದಲ್ಲಿನ ಗಮ್ಮತ್ತು ನೋಡಿ!