
ವಸಿಷ್ಠ ಸಿಂಹ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಚಿತ್ರದ ಟೈಟಲ್ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಆಗಿದೆ. ‘ಭೀಮ್ ಆಂಡ್ ರಾವ್’ ಎಂಬುದು ಚಿತ್ರದ ಹೆಸರು. ಈ ಚಿತ್ರವು ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರುತ್ತಿದ್ದು, ಇದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ ಆಶಯಗಳ ನ್ಯಾಷನಲ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.
‘ಪರಿಹಾರಕ್ಕಾಗಿ ಕ್ರಾಂತಿ’ ಎನ್ನುವ ಸಬ್ ಟೈಟಲ್ ಒಳಗೊಂಡಿರುವ ಈ ಚಿತ್ರವನ್ನು ಎಂ.ಪಿ. ಗಿರೀಶ್ ಸಾಮ್ರಾಟ್ ನಿರ್ಮಿಸಿ, ಇಸ್ಲಾವುದ್ದೀನ್ ಎನ್.ಎಸ್. ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಹಾಗೂ ದೇಶಭಕ್ತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಜೊತೆಗೆ ಪಕ್ಕಾ ಮಾಸ್ ಮತ್ತು ಕಮರ್ಷಿಯಲ್ ಮನರಂಜನೆಯುಳ್ಳ ಚಿತ್ರಕಥೆಯನ್ನು ಹೆಣೆಯಲಾಗಿದೆ.
ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಸಿಷ್ಠ ಸಿಂಹ ಅವರು ಹಿಂದೆಂದೂ ಕಾಣಿಸಿಕೊಂಡಿರದ ಖಡಕ್ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಕರ್ನಾಟಕದ ಶಕ್ತಿ ಸೌಧವಾದ ವಿಧಾನಸೌಧ, ಮುಗಿಲೆತ್ತರಕ್ಕೆ ಹಾರಾಡುತ್ತಿರುವ ಭಾರತದ ತ್ರಿವರ್ಣ ಧ್ವಜ ಹಾಗೂ ಜಾಗೃತರಾದ ಬೃಹತ್ ಜನಸ್ತೋಮವನ್ನು ಕಾಣಬಹುದಾಗಿದೆ. ಅಧಿಕಾರ, ನ್ಯಾಯ ಹಾಗೂ ಜನಸಾಮಾನ್ಯರ ಹಕ್ಕಿನ ಧ್ವನಿಯ ನಡುವಿನ ಸಂಘರ್ಷವನ್ನು ಬಿಂಬಿಸುವ ತೀವ್ರ ಸಾಮಾಜಿಕ, ರಾಜಕೀಯ ಡ್ರಾಮಾವಿದು ಎಂಬುದಕ್ಕೆ ಈ ಪೋಸ್ಟರ್ ಸಾಕ್ಷಿಯಾಗಿದೆ.
‘ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ರಾಷ್ಟ್ರೀಯ ಏಕತೆಯ ಮೌಲ್ಯಗಳೇ ಈ ಚಿತ್ರದ ಕತೆಯ ಕೇಂದ್ರ ಬಿಂದುಗಳು. ಸಂವಿಧಾನದ ಮೌಲ್ಯಗಳು ಕೇವಲ ಪುಸ್ತಕಕ್ಕಷ್ಟೇ ಸೀಮಿತವಾಗಿರದೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಬದುಕಿಗೂ ಎಷ್ಟು ಮುಖ್ಯ ಎಂಬುದನ್ನು ದೇಶಭಕ್ತಿಯೊಂದಿಗೆ ತೆರೆಮೇಲೆ ಕಟ್ಟಿಕೊಡಲಾಗುವುದು. ಭಾಷೆ, ಗಡಿ, ಜಾತಿ, ಸಮುದಾಯಗಳ ಹಂಗಿಲ್ಲದೆ ಇಡೀ ದೇಶದ ಜನರಿಗೆ ಕನೆಕ್ಟ್ ಆಗುವ ಸಾರ್ವತ್ರಿಕ ಸಂದೇಶ ಇಲ್ಲಿದೆ. ಅಧಿಕಾರ, ನ್ಯಾಯ ಹಾಗೂ ಜನ ಸಾಮಾನ್ಯರ ಹಕ್ಕಿನ ಧ್ವನಿಯ ನಡುವಿನ ಸಂಘರ್ಷವನ್ನು ಈ ಚಿತ್ರ ಒಳಗೊಂಡಿದೆ’ ಎಂಬುದು ಚಿತ್ರದ ನಿರ್ದೇಶಕ ಇಸ್ಲಾವುದ್ದೀನ್ ಎನ್.ಎಸ್. ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.