
‘ಪ್ರೇಮದ ಊರಲಿ’ ಸೂಪರ್ ಹಿಟ್ ಆದ ಬಳಿಕ ಚಿತ್ರರಂಗದ ಮಾತುಕತೆಗಳೇ ಸಂಪೂರ್ಣ ಬದಲಾಗಿವೆ. ಬಂಡವಾಳದ ಕೊರತೆ ಮತ್ತು ಅಧೈರ್ಯದಿಂದ ಅರ್ಧಕ್ಕೇ ಚಿತ್ರೀಕರಣ ನಿಲ್ಲಿಸಿದ್ದ ಬರೋಬ್ಬರಿ 20ಕ್ಕೂ ಹೆಚ್ಚು ಸಿನಿಮಾಗಳ ಸೆಟ್‌ಗಳಲ್ಲಿ ಇದೀಗ ದಿಢೀರನೆ ‘ಕ್ಯಾಮೆರಾ, ರೋಲಿಂಗ್, ಆ್ಯಕ್ಷನ್’ ಸದ್ದು ಮೊಳಗುತ್ತಿದೆ. ಸಿದ್ಧವಾಗಿದ್ದರೂ ಭಯದಿಂದ ಬಿಡುಗಡೆ ಬಾಗಿಲಿಗೆ ಬಾರದೆ ಉಳಿದಿದ್ದ ಹತ್ತಾರು ಸಣ್ಣ ಸಿನಿಮಾಗಳು ಧೈರ್ಯವಾಗಿ ಬಿಡುಗಡೆಯ ಸರತಿಯಲ್ಲಿ ನಿಲ್ಲುತ್ತಿವೆ.
ಮತ್ತೊಂದೆಡೆ, ಸ್ಟಾರ್ ನಟರ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದ ನಿರ್ಮಾಪಕರು ಕಣ್ಣುಮುಚ್ಚಿ ₹2 ರಿಂದ ₹10 ಕೋಟಿ ವೆಚ್ಚದ ‘ಮಿಡ್-ಬಜೆಟ್’ ಚಿತ್ರಗಳನ್ನು ಕೈಗೆತ್ತಿಕೊಳ್ಳಲು ಮುಗಿಬೀಳುತ್ತಿದ್ದಾರೆ. ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಂತೂ ಬಹುತೇಕ ನಿರ್ದೇಶಕರು ಸಂಗೀತ ನಿರ್ದೇಶಕರ ಎದುರು ಕುಳಿತು, ‘ನಮಗೂ ಪ್ರೇಮದ ಊರಲಿ ತರಹದ್ದೇ ಹಾಡು ಕೊಡಿ’ ಎನ್ನುತ್ತಿದ್ದಾರೆ. ‘ಪ್ರೇಮದ ಊರಲಿ’ ಎಂಬ ಸಿನಿಮಾ ಗಳಿಸಿದ ಆ ₹100 ಕೋಟಿ ಬಾಕ್ಸ್ ಆಫೀಸ್ ಗಳಿಕೆ, ಕೇವಲ ಒಂದು ಪ್ರಾಜೆಕ್ಟ್‌ನ ಯಶಸ್ಸಾ ಉಳಿದಿಲ್ಲ. ಬದಲಿಗೆ ನಿಂತ ನೀರಾಗಿದ್ದ ಇಡೀ ಸ್ಯಾಂಡಲ್‌ವುಡ್‌ಗೆ ಹೊಸ ಜೀವ ತುಂಬಿದೆ.
ಭ್ರಮಾಲೋಕದ ಪತನ
ಕಳೆದ ನಾಲ್ಕೈದು ವರ್ಷಗಳಿಂದ ನಮ್ಮ ಚಿತ್ರರಂಗದಲ್ಲಿ ಒಂದು ಅತ್ಯಂತ ಅಪಾಯಕಾರಿ ಟ್ರೆಂಡ್ ಬೇರೂರಿತ್ತು. ಶುಕ್ರವಾರ ಬೆಳಗ್ಗೆ ಮೊದಲ ಪ್ರದರ್ಶನ ಮುಗಿಯುವ ಹೊತ್ತಿಗೇ ಸೋಷಿಯಲ್ ಮೀಡಿಯಾಗಳಲ್ಲಿ ಸಿನಿಮಾಗಳನ್ನು ಬಲವಂತವಾಗಿ ‘ಮಾಸ್ಟರ್‌ಪೀಸ್’ ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಈ ಗಿಮಿಕ್ ಸಂಜೆ ಹೊತ್ತಿಗೆ ಕರಗಿಹೋಗಿ ಚಿತ್ರಮಂದಿರಗಳ ಕುರ್ಚಿಗಳು ಖಾಲಿಯಾಗುತ್ತಿದ್ದವು. ಇಡೀ ವ್ಯವಸ್ಥೆ ಕಂಟೆಂಟ್ ಬರೆಯುವುದನ್ನು ಬಿಟ್ಟು, ಮೊದಲ ಮೂರು ದಿನಗಳ ಕಲೆಕ್ಷನ್ ಲೂಟಿ ಮಾಡುವ ಮಾಯಾಜಾಲಕ್ಕೆ ಬಲಿಯಾಗಿತ್ತು.
ಈ ಭ್ರಮಾಲೋಕದ ಮುಖಕ್ಕೆ ಹೊಡೆದಂತೆ ಬಂದಿದ್ದು ‘ಪ್ರೇಮದ ಊರಲಿ’. ಯಾವುದೇ ಸ್ಟಾರ್‌ಡಮ್ ಇಲ್ಲದೆ, ಮೊದಲ ದಿನ ಭಯಂಕರ ಶೋಗಳಿಲ್ಲದೆ, ಸಿನಿಮಾ ಕುರಿತಾಗಿ ಸರಿಯಾಗಿ ಕಮ್ಯುನಿಕೇಟ್ ಮಾಡುವ ಒಂದು ತಂಡವೂ ಇಲ್ಲದೆ ಈ ಚಿತ್ರವನ್ನು ಎತ್ತಿ ಮೆರೆಸಿದ್ದು ಸಾಮಾನ್ಯ ಪ್ರೇಕ್ಷಕನ ವರ್ಡ್ ಆಫ್ ಮೌತ್. ಥಿಯೇಟರ್‌ನಿಂದ ಹೊರಬಂದ ಪ್ರೇಕ್ಷಕ ತನ್ನ ಗೆಳೆಯನಿಗೆ ಕೊಟ್ಟ ಪ್ರಾಮಾಣಿಕ ಕರೆಯ ಎದುರು ಕೃತಕ ಮಾರ್ಕೆಟಿಂಗ್ ಮಂಡಿಯೂರಿತು.
ಕಳೆದುಹೋಗಿದ್ದ ಮಿಡ್-ರೇಂಜ್: ಕೆಜಿಎಫ್ ಮತ್ತು ಕಾಂತಾರದ ಜಾಗತಿಕ ಯಶಸ್ಸಿನ ನಂತರ ಪ್ರತಿಯೊಬ್ಬರೂ ಪ್ಯಾನ್-ಇಂಡಿಯಾ ಭ್ರಮೆಗೆ ಬಿದ್ದಾಗ ಚಿತ್ರರಂಗದಲ್ಲಿ ಇದ್ದಿದ್ದೇ ಎರಡು ದಾರಿಗಳು.
1. ₹100 ಕೋಟಿಗೂ ಮೀರಿದ, ಮೂರ್ನಾಲ್ಕು ವರ್ಷಗಳ ಕಾಲ ಹೀರೋ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಕಟ್ಟಿಹಾಕುವ ಬೃಹತ್ ಪ್ರಾಜೆಕ್ಟ್‌ಗಳು.
2. ಕನಿಷ್ಠ ಮಾರುಕಟ್ಟೆ ತಿಳಿವಳಿಕೆಯೂ ಇಲ್ಲದೆ, ಕಳಪೆಯಾಗಿ ತಯಾರಾಗಿ ಮೂರೇ ದಿನಕ್ಕೆ ಎತ್ತಂಗಡಿಯಾಗುವ ಅತಿ ಸಣ್ಣ ಬಜೆಟ್‌ನ ಅಪ್ರಸ್ತುತ ಚಿತ್ರಗಳು.
ಈ ಎರಡೂ ಅತಿರೇಕಗಳ ನಡುವೆ ಇಡೀ ಚಿತ್ರರಂಗದ ಬೆನ್ನೆಲುಬಾಗಿ ವಾರವಾರವೂ ಚಿತ್ರಮಂದಿರಗಳನ್ನು ಜೀವಂತವಾಗಿಡಬೇಕಿದ್ದ ₹2 ರಿಂದ ₹10 ಕೋಟಿ ವ್ಯಾಪ್ತಿಯ ಮಿಡ್-ಬಜೆಟ್ ಸಿನಿಮಾಗಳು ಇಲ್ಲವೇ ಇಲ್ಲ ಅಂತಿದ್ದವು. ನೆರೆಯ ಮಲಯಾಳಂ ಚಿತ್ರರಂಗದಲ್ಲಿ ಇಂತಹ ಕಂಟೆಂಟ್ ಆಧಾರಿತ ಮಿಡ್-ಬಜೆಟ್ ಚಿತ್ರಗಳೇ ನೂರು ಕೋಟಿ ಲೂಟಿ ಮಾಡುವುದನ್ನು ಕಂಡು ನಿಟ್ಟುಸಿರು ಬಿಡುತ್ತಿದ್ದ ಗಾಂಧಿನಗರಕ್ಕೆ, ಆ ಮ್ಯಾಜಿಕ್ ಸೂತ್ರವನ್ನು ತನ್ನದೇ ನೆಲದಲ್ಲಿ ಸಾಬೀತುಪಡಿಸಿದ್ದು ಕಳೆದ ವರ್ಷದ ‘ಸು ಫ್ರಂ ಸೋ’ ಮತ್ತು ಈ ವರ್ಷದ ‘ಪ್ರೇಮದ ಊರಲಿ’. ಸ್ಟಾರ್‌ಗಳ ಕಾಲ್‌ಶೀಟ್‌ಗಾಗಿ ವರ್ಷಗಟ್ಟಲೆ ಕಾಯುವ ಬದಲು, ಗಟ್ಟಿ ಕಥೆ ಮತ್ತು ಹೊಸ ಪ್ರತಿಭೆಗಳನ್ನಿಟ್ಟುಕೊಂಡು ಅಚ್ಚುಕಟ್ಟಾದ ಬಜೆಟ್‌ನಲ್ಲಿ ಸಿನಿಮಾ ಮಾಡಿದರೆ ಹೂಡಿದ ಬಂಡವಾಳಕ್ಕೆ ಮೋಸವಿಲ್ಲ ಎಂಬ ಉದ್ಯಮ ಸತ್ಯವೀಗ ಹೂಡಿಕೆದಾರರಿಗೆ ದಕ್ಕಿದೆ.
ತಂತ್ರಜ್ಞಾನದ ಅಬ್ಬರಕ್ಕೆ ಮಣ್ಣಿನ ಸೊಗಡಿನ ಮದ್ದು
‘ಪ್ರೇಮದ ಊರಲಿ’ ಕಲಿಸಿರುವ ಅತ್ಯಂತ ದೊಡ್ಡ ಪಾಠವೆಂದರೆ ಪ್ರೇಕ್ಷಕನಿಗೆ ಕೇವಲ ಸಿಜಿಐ, ಆಡಂಬರದ ಸೆಟ್ ಮತ್ತು ಕಿವಿಗಡಚಿಕ್ಕುವ ಶಬ್ದಗಳು ಮಾತ್ರವೇ ಸಿನಿಮಾವಲ್ಲ. ಆತನಿಗೆ ಬೇಕಾಗಿರುವುದು ತನ್ನದೇ ಬದುಕಿನ ಸುಖ-ದುಃಖಗಳಿಗೆ ಕನ್ನಡಿ ಹಿಡಿಯುವಂತಹ ಸರಳ ಕಥೆಗಳು ಮತ್ತು ಮನಸ್ಸಿನೊಳಗೆ ಇಳಿಯುವ ಮಧುರ ಸಂಗೀತ. ಚಿತ್ರರಂಗದ ಮತ್ತೆ ಗರಿಗೆದರಿದೆ. ಈ ಯಶಸ್ಸು ಕನಿಷ್ಠ ತಿಂಗಳಿಗೊಂದಾದರೂ ದೊರೆಯಬೇಕಿದೆ. ಹಾಗಾಗಿ ಈ ‘ಮಿಡ್ ಬಜೆಟ್ ಕ್ರಾಂತಿ’ ತಾತ್ಕಾಲಿಕ ಅಲೆಯಾಗದೆ, ನಿರಂತರ ಸರಣಿಯಾಗಿ ಮುಂದುವರಿಯಲಿ. ಆಗ ಕನ್ನಡ ಚಿತ್ರರಂಗಕ್ಕೆ ಸ್ಟಾರ್‌ಗಳ ಕೊರತೆಯೇ ಕಾಡುವುದಿಲ್ಲ, ಗಲ್ಲಾಪೆಟ್ಟಿಗೆಯಲ್ಲಿ ನಂಬಿಕೆಯೂ ಕುಸಿಯುವುದಿಲ್ಲ.
ಪ್ರೇಮದ ಊರಲಿ 100 ಕೋಟಿ ಕ್ಲಬ್: ದೇವೇಂದ್ರ ಅವರಿಗೆ ಮೆಚ್ಚುಗೆ
‘ಪ್ರೇಮದ ಊರಲಿ’ ಸಿನಿಮಾ ತೆರೆಗೆ ಬಂದು 22 ದಿನಗಳಾಗಿವೆ ಮತ್ತು ಗಳಿಕೆಯಲ್ಲಿ 100 ಕೋಟಿ ಕ್ಲಬ್ ಸೇರಿದೆ. ಈ ಅದ್ಭುತ ಸಾಧನೆಯ ಹಿಂದೆ ಇರುವ ಒಬ್ಬ ವ್ಯಕ್ತಿ ನಿರ್ಮಾಪಕ ದೇವೇಂದ್ರ ಬಡಿಗೇರ್. ಪತ್ರಿಕಾ ವಿತರಕರಾಗಿದ್ದ ದೇವೇಂದ್ರ ಅವರು ನಿರ್ದೇಶಕ ಮನೋಜ್ ಕುಮಾರ್ ಅವರನ್ನು ಮತ್ತು ಕತೆಯನ್ನು ನಂಬಿ ದುಡ್ಡು ಹಾಕಿ ಸಿನಿಮಾವನ್ನು ಜನರಿಗೆ ತಲುಪಿಸಲು ಖುದ್ದಾಗಿ ತಾವೇ ಹೋರಾಟ ಮಾಡಿದರು. ಕೃತಕ ಪ್ರಚಾರ ಬೇಡ ಎಂದುಕೊಂಡು ತಾವೇ ಎಷ್ಟು ಸಾಧ್ಯವೋ ಅಷ್ಟು ಶ್ರಮಿಸಿದರು. ಈ ಗೆಲುವು ಅವರ ಹೋರಾಟದ ಫಲ. ಒಳ್ಳೆಯ ಕಂಟೆಂಟ್ ಮೇಲಿನ ಅವರ ನಂಬಿಕೆಯ ಫಲ. ಒಂದು ಸರಳ ಸಿನಿಮಾ ಈ ಮಟ್ಟಿಗಿನ ಗೆಲುವು ಕಾಣಲು ಮೂಲ ಕಾರಣಕರ್ತರಾದ ದೇವೇಂದ್ರ ಅವರಿಗೆ ಮೆಚ್ಚುಗೆ ಮತ್ತು ಅಭಿನಂದನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.