ಕೃಷ್ಣಪ್ಪ ಎಣ್ಣೆ ಹಚ್ಚಿಕೊಂಡು ಬಿಸಿಲಲ್ಲಿ ಕೂತಿದ್ದಾಗ ಶುರುವಾಗಿದ್ದು 'ಮುಂಗಾರು ಮಳೆ...'! ಆ ದಿನ ನೆನೆದ ಯೋಗರಾಜ್ ಭಟ್ರು

Published : Oct 23, 2026, 01:40 PM IST
Golden Star Ganesh

ಸಾರಾಂಶ

Golden Star Ganesh: ಕನ್ನಡ ಚಿತ್ರರಂಗದ ಇತಿಹಾಸವನ್ನೇ ಬದಲಿಸಿದ ಆಲ್‌ಟೈಮ್ ಇಂಡಸ್ಟ್ರಿ ಹಿಟ್ ಸಿನಿಮಾ 'ಮುಂಗಾರು ಮಳೆ' ಹುಟ್ಟಿಕೊಂಡ ಕಥೆ ಎಂಥವರಿಗೂ ಅಚ್ಚರಿ ಮೂಡಿಸುತ್ತದೆ. ನಿರ್ಮಾಪಕ ಈ. ಕೃಷ್ಣಪ್ಪನವರು ಮಹಡಿಯ ಮೇಲೆ ಬಿಸಿಲಿನಲ್ಲಿ ಎಣ್ಣೆ ಹಚ್ಚಿಕೊಂಡು ಕುಳಿತಿದ್ದ ಕೆಲವೇ ನಿಮಿಷಗಳಲ್ಲಿ ಈ ಬ್ಲಾಕ್‌ಬಸ್ಟರ್ ಚಿತ್ರಕ್ಕೆ ಮುನ್ನುಡಿ ಬರೆದಿದ್ದು ಹೇಗೆ? ಯೋಗರಾಜ್ ಭಟ್ ಬಿಚ್ಚಿಟ್ಟ ಆ ಅಪರೂಪದ ಘಟನೆ ಇಲ್ಲಿದೆ...

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ 20 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರೂಪಕಿ ಅನುಶ್ರೀ ಅವರ ಯೂಟ್ಯೂಬ್ ಶೋನಲ್ಲಿ ಗಣೇಶ್ ಹಾಗೂ ಅವರ ಆತ್ಮೀಯ ನಿರ್ದೇಶಕ ಯೋಗರಾಜ್ ಭಟ್ ಭಾಗವಹಿಸಿ, ತಮ್ಮ ಆರಂಭಿಕ ದಿನಗಳ ಬಡತನ, ತಮಾಷೆ ಹಾಗೂ ಮುಂಗಾರು ಮಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಡಿವಿಜಿ ರೋಡ್‌ನಲ್ಲಿ ತರಕಾರಿ ಕದ್ದು ತಿನ್ನುತ್ತಿದ್ದ ದಿನಗಳು!

ತಮ್ಮ ಆರಂಭಿಕ ದಿನಗಳ ಬಡತನವನ್ನು ನೆನೆದ ಯೋಗರಾಜ್ ಭಟ್, "ನಾವಿಬ್ಬರೂ ಎನ್.ಆರ್. ಕಾಲೋನಿಯಲ್ಲಿದ್ದಾಗ ತಿನ್ನಲು ದುಡ್ಡಿರುತ್ತಿರಲಿಲ್ಲ. ಸಂಜೆ ಡಿವಿಜಿ ರೋಡ್‌ನ ತರಕಾರಿ ಅಂಗಡಿಗಳ ಮುಂದೆ ನಡೆದುಕೊಂಡು ಹೋಗುವಾಗ, ಅಂಗಡಿಯವರ ಕಣ್ಣು ತಪ್ಪಿಸಿ ಒಂದು ಮೂಲಂಗಿ, ಇನ್ನೊಂದು ಅಂಗಡಿಯಲ್ಲಿ ಬೀಟ್‌ರೂಟ್, ಕ್ಯಾರೆಟ್ ಎತ್ತಿಕೊಂಡು ರೂಮ್‌ಗೆ ಬರುತ್ತಿದ್ದೆವು. ಅದನ್ನು ಕತ್ತರಿಸಿ ಬೌಲ್‌ಗೆ ಹಾಕಿ ತಿನ್ನುತ್ತಿದ್ದೆವು. ಗಣೇಶ್ ಅದಕ್ಕೆ 'ಇದು ನಟರಿಗೆ ಬೇಕಾದ ಫೈಬರ್' ಎಂದು ಡೈಲಾಗ್ ಹೊಡೆಯುತ್ತಿದ್ದ," ಎಂದು ನಗೆ ಚಟಾಕಿ ಹಾರಿಸಿದರು.

ದುನಿಯಾ ವಿಜಯ್, ಸೂರಿ ಜೊತೆ 'ಗೂಡು' ಕಟ್ಟಿದ್ದು

"ನಾನು ಮತ್ತು ನಿರ್ದೇಶಕ ದುನಿಯಾ ಸೂರಿ ಬಾಡಿಗೆ ಮನೆ ಹಿಂದೆ ಬಿದಿರಿನ ಕುಟೀರ ಕಟ್ಟಿ ಅದಕ್ಕೆ 'ಗೂಡು' ಎಂದು ಹೆಸರಿಟ್ಟಿದ್ದೆವು. ಅಲ್ಲಿ ಕೂರಲು ಕಲ್ಲು ಬೇಕೆಂದು, ಕನ್ಸರ್ವೆನ್ಸಿ ರಸ್ತೆಗಳಲ್ಲಿದ್ದ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ದುನಿಯಾ ವಿಜಯ್ ಬೈಕ್‌ನಲ್ಲಿ ಹೊತ್ತು ತಂದು ಹಾಕಿದ್ದರು," ಎಂದು ಭಟ್ಟರು ಆ ದಿನಗಳ ಗೆಳೆತನವನ್ನು ಸ್ಮರಿಸಿದರು.

ಗಣೇಶ್‌ಗೆ ಶಾರ್ಟ್ಸ್ ಸೀನ್ ಇಡುತ್ತಿದ್ದ ರಹಸ್ಯ ಬಯಲು

ಮುಂಗಾರು ಮಳೆ, ಗಾಳಿಪಟ, ಮುಗುಳುನಗೆ ಸಿನಿಮಾಗಳಲ್ಲಿ ಗಣೇಶ್‌ಗೆ ಪ್ಯಾಂಟ್ ಇಲ್ಲದೆ ಕೇವಲ ಶಾರ್ಟ್ಸ್/ಚಡ್ಡಿಯಲ್ಲೇ ಸೀನ್‌ಗಳನ್ನು ಇಟ್ಟಿದ್ದರ ಬಗ್ಗೆ ಗಣೇಶ್ ತಮಾಷೆಯಾಗಿ ದೂರಿದರು. "ನಾನು ಹಿಂದಿನ ದಿನ ಚೆನ್ನಾಗಿ ಆಕ್ಟ್ ಮಾಡಿಬಿಟ್ಟರೆ, ಬಟ್ರು 'ನಾನಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮಾಡ್ತಾನಲ್ಲ' ಅನ್ನೋ ಸಿಟ್ಟಿಗೆ ಮಾರನೇ ದಿನ ನನಗೆ ಪ್ಯಾಂಟ್ ಇಲ್ಲದ ಸೀನ್ ಇಟ್ಟುಬಿಡುತ್ತಿದ್ದರು!" ಎಂದು ಗಣೇಶ್ ಹೇಳಿದರು. ಇದಕ್ಕೆ ಉತ್ತರಿಸಿದ ಭಟ್ಟರು, "ಇವನ ಟ್ಯಾಲೆಂಟ್‌ನ ತುಳೀಬೇಕು ಅಂದ್ರೆ ಚಡ್ಡಿಯಲ್ಲೇ ತೋರಿಸಬೇಕು ಅನ್ನಿಸ್ತು, ಜೊತೆಗೆ ಕಾಸ್ಟ್ಯೂಮ್ ಟ್ರಯಲ್ ವೇಳೆ ಗಣೇಶ್ ಬರೀ ಚಡ್ಡಿಯಲ್ಲೇ ಓಡಾಡುತ್ತಿದ್ದನ್ನು ನೋಡಿ ಅದೇ ಕಾಸ್ಟ್ಯೂಮ್ ಫಿಕ್ಸ್ ಮಾಡಿದೆ," ಎಂದು ಕಾಲೆಳೆದರು.

ಕೃಷ್ಣಪ್ಪ ಎಣ್ಣೆ ಹಚ್ಚಿಕೊಂಡು ಕೂತಿದ್ದಾಗ 'ಮುಂಗಾರು ಮಳೆ' ಶುರುವಾಯ್ತು

ಆ ಸಮಯದಲ್ಲಿ ಯೋಗರಾಜ್ ಭಟ್ ಅವರು ‘ಮಣಿ’ ಮತ್ತು ‘ರಂಗ ಎಸ್‌ಎಸ್‌ಎಲ್‌ಸಿ’ ಎಂಬ ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಆದರೆ, ಆ ಸಿನಿಮಾಗಳಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಇತ್ತ ಗಣೇಶ್ ‘ಚೆಲ್ಲಾಟ’ ಸಿನಿಮಾ ಮುಗಿಸಿ ಮುಂದಿನ ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು. ಇಬ್ಬರ ಕೆರಿಯರ್ ಕೂಡ ಅತಂತ್ರವಾಗಿದ್ದ (ಡೋಲಾಯಮಾನ) ಸಂದರ್ಭ ಅದು.

ಹೊಸ ಸಿನಿಮಾ ಮಾಡಲು ನಿರ್ಮಾಪಕರ ಹುಡುಕಾಟದಲ್ಲಿದ್ದಾಗ, ಗಣೇಶ್ ಅವರಿಗೆ ತಮ್ಮ ತಂದೆ ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಾದ ಈ. ಕೃಷ್ಣಪ್ಪ ಅವರ ನೆನಪಾಗುತ್ತದೆ. ಗಣೇಶ್, ಯೋಗರಾಜ್ ಭಟ್ ಮತ್ತು ಅವರ ಸ್ನೇಹಿತ ‘ಗುಬ್ಬಿ’ ಮೂವರೂ ಸೇರಿ ಕೃಷ್ಣಪ್ಪನವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗುತ್ತಾರೆ.

ಆಗ ಅಲ್ಲಿ ನಡೆದ ದೃಶ್ಯ ಹೀಗಿತ್ತು..

ಕೃಷ್ಣಪ್ಪನವರು ಮನೆಯ ಮಹಡಿಯ (ಟೆರೇಸ್) ಮೇಲೆ ಬಿಸಿಲಿನಲ್ಲಿ ಕುಳಿತು ಸ್ನಾನಕ್ಕೆ ಸಿದ್ಧವಾಗುತ್ತಿದ್ದರು.
ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡಿದ್ದರು, ಅವರ ಕಣ್ಣುಗಳಿಂದಲೂ ಎಣ್ಣೆ ಇಳಿಯುತ್ತಿತ್ತು. ಅಕ್ಕಪಕ್ಕದವರು ಅವರಿಗೆ ಎಣ್ಣೆ ಹಚ್ಚುತ್ತಾ ನಿಂತಿದ್ದರು.
ಇಂತಹ ವಿಚಿತ್ರ ಮತ್ತು ತಮಾಷೆಯ ಸನ್ನಿವೇಶದಲ್ಲೇ ಗಣೇಶ್, ಭಟ್ಟರನ್ನು ಕರೆದುಕೊಂಡು ಹೋಗಿ, "ಅಣ್ಣ ನಮಸ್ಕಾರ..." ಎಂದು ಎದುರು ನಿಲ್ಲಿಸುತ್ತಾರೆ.

ಕೃಷ್ಣಪ್ಪನವರು ಗಣೇಶ್ ಮುಖ ನೋಡಿ, "ಏನಪ್ಪಾ?" ಎಂದಾಗ, ಗಣೇಶ್ ಸಂಕೋಚದಿಂದಲೇ "ಅದೇ ಅಣ್ಣ... ಒಂದು ಪಿಕ್ಚರ್ ಮಾಡಬೇಕಿತ್ತು" ಎನ್ನುತ್ತಾರೆ.

ಆಗ ಕೃಷ್ಣಪ್ಪನವರು ಯೋಚನೆಯೇ ಮಾಡದೆ, ಅತ್ಯಂತ ಕ್ಯಾಶುವಲ್ ಆಗಿ

"ಸರಿ, ಹೋಗಿ ಒಂದು ಆಟ ಆಡೋಣ ಬಿಡಪ್ಪ!" ಎಂದುಬಿಡುತ್ತಾರೆ. ತಕ್ಷಣ ಯೋಗರಾಜ್ ಭಟ್ ಅವರು ತಮ್ಮ ಹಿಂದಿನ ಕಷ್ಟಗಳನ್ನು ಹೇಳಿಕೊಳ್ಳುತ್ತಾ, "ಅಣ್ಣ, ನಾನು ಈಗಾಗಲೇ ಎರಡು ಸಿನಿಮಾ ಮಾಡಿದ್ದೀನಿ. ತುಂಬಾ ಕಷ್ಟದಲ್ಲಿದ್ದೀನಿ, ಏನೇನೋ ಆಗ್ಬಿಟ್ಟಿದೆ..." ಎಂದು ಹೇಳಲು ಹೋಗುತ್ತಾರೆ. ಆಗ ಕೃಷ್ಣಪ್ಪನವರು, "ಪರವಾಗಿಲ್ಲ, ಅದೇನೋ ಒಂದು ಆಟ ಅಂದ್ನಲ್ಲ... ಸಿನಿಮಾ ಮಾಡೋಣಪ್ಪ, ಗಣೇಶ ನಮ್ಮ ಹುಡುಗ, ಮಾಡ್ರಿ ನೀವು!" ಎಂದು ಒಂದೇ ಮಾತಿನಲ್ಲಿ ಬರೋಬ್ಬರಿ ಬಜೆಟ್ ಹಾಕಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟುಬಿಡುತ್ತಾರೆ.

ಕೃಷ್ಣಪ್ಪನವರು ಎಣ್ಣೆ ಹಚ್ಚಿಕೊಂಡು ಬಿಸಿಲಿನಲ್ಲಿ ಕುಳಿತಿದ್ದ ಆ ಕೆಲವೇ ನಿಮಿಷಗಳಲ್ಲಿ ತೆಗೆದುಕೊಂಡ ಒಂದು ಸಣ್ಣ ನಿರ್ಧಾರ, ಮುಂದೆ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ವರ್ಷಗಟ್ಟಲೆ ಥಿಯೇಟರ್‌ನಲ್ಲಿ ಓಡಿದ 'ಮುಂಗಾರು ಮಳೆ' ಎಂಬ ಆಲ್‌ಟೈಮ್ ಇಂಡಸ್ಟ್ರಿ ಹಿಟ್ ಇತಿಹಾಸ ಸೃಷ್ಟಿಸಿತು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

PREMADA OORALI: 'ಪ್ರೇಮದ ಊರಲಿ' ಸಿನಿಮಾ ಸೂಪರ್ ಹಿಟ್ ಆಗುತ್ತೆ ಆ ಒಬ್ಬರಿಗೆ ಗ್ಯಾರಂಟಿ ಗೊತ್ತಿತ್ತಂತೆ! ಅದೇನು ಸಿಕ್ತ್‌ ಸೆನ್ಸ್‌ or ಇನ್ನೇನು? ಶಾಕಿಂಗ್ ಸುದ್ದಿ!
ಪ್ರೇಮದ ಊರಲಿ ರಿಲೀಸ್‌ಗೆ ಕೆಲ ಗಂಟೆಗಳಿರುವಾಗ ತಂಡಕ್ಕೆ ಶಾಕ್, ನಿರ್ದೇಶಕನ ಒಂದು ಮಾತಿನಿಂದ ಇತಿಹಾಸ