‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ಕಾಟೇರ’ ಚಿತ್ರವೂ ಸೇರಿದಂತೆ ಸುಮಾರು 132 ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಹಠಾತ್ ಸ್ಥಗಿತಗೊಂಡಿದೆ.
ಬೆಂಗಳೂರು (ಡಿ.08): ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ಕಾಟೇರ’ ಚಿತ್ರವೂ ಸೇರಿದಂತೆ ಸುಮಾರು 132 ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಹಠಾತ್ ಸ್ಥಗಿತಗೊಂಡಿದೆ. ಕನ್ನಡ ಸಿನಿಮಾವೊಂದಕ್ಕೆ ಸೆನ್ಸಾರ್ ಸರ್ಟಿಫಿಕೆಟ್ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಅವರನ್ನು ಸಿಬಿಐ ನ.30ರಂದು ಬಂಧಿಸಿತ್ತು. ಆ ಬಳಿಕ ಸೆನ್ಸಾರ್ ಪ್ರಕ್ರಿಯೆ ಸ್ಥಗಿತಗೊಂಡಿದೆ. ಸಿಬಿಎಫ್ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಶನ್) ಪರ್ಯಾಯ ವ್ಯವಸ್ಥೆ ಮಾಡಿಲ್ಲದ ಪರಿಣಾಮ 132 ಚಿತ್ರಗಳ ನಿರ್ಮಾಪಕರಿಗೆ ಸಿನಿಮಾ ಬಿಡುಗಡೆಯ ಸಂಕಷ್ಟ ಎದುರಾಗಿದೆ.
‘ಕಾಟೇರ’ ಸೇರಿದಂತೆ ಕೆಲವು ಚಿಕ್ಕ, ದೊಡ್ಡ ಚಿತ್ರತಂಡಗಳು ಈಗಾಗಲೇ ಬಿಡುಗಡೆ ದಿನಾಂಕವನ್ನೂ ಘೋಷಿಸಿವೆ. ಆ ಸಂಬಂಧ ಪ್ರಚಾರವೂ ಭರದಿಂದ ನಡೆಸಿದ್ದವು. ಪ್ರಚಾರಕ್ಕಾಗಿ ನಿರ್ಮಾಪಕರು ಸಾಕಷ್ಟು ಹಣ ವ್ಯಯಿಸಿದ್ದರು. ಇದೀಗ ದಿಢೀರ್ ಆಗಿ ಎದುರಾದ ಈ ಸಂಕಷ್ಟ ನಿರ್ಮಾಪಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅನೇಕ ನಿರ್ಮಾಪಕರು, ಕಲಾವಿದರು ಸಮಸ್ಯೆ ಪರಿಹಾರಕ್ಕೆ ವಾಣಿಜ್ಯ ಮಂಡಳಿ ಮೊರೆ ಹೋಗಿದ್ದಾರೆ. ಈ ಸಂಬಂಧ ತುರ್ತು ಪತ್ರಿಕಾಗೋಷ್ಠಿ ಕರೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ‘ಇದೀಗ ಸ್ಥಗಿತಗೊಂಡಿರುವ ಕನ್ನಡ ಚಿತ್ರಗಳ ಸೆನ್ಸಾರ್ ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಬೇಕು.
ಸಿನಿಮಾ ಸೆನ್ಸಾರ್ ಸರ್ಟಿಫಿಕೆಟ್‌ಗೆ ಲಂಚಕ್ಕೆ ಬೇಡಿಕೆ: ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಬಲೆಗೆ
ಸಿಬಿಎಫ್ಸಿ ಕನ್ನಡ ಸಿನಿಮಾಗಳ ಸೆನ್ಸಾರ್ ಅನ್ನು ಬಾಕಿ ಉಳಿಸಿ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿಸುತ್ತಿದೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಸಿಬಿಎಫ್ಸಿಯ ಪ್ರಮುಖ ಅಧಿಕಾರಿಗಳಿಗೆ ಪತ್ರ ಮುಖೇನ ಮೂರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೆ ಅವರಿಂದ ಪ್ರತಿಕ್ರಿಯೆ ಅವರಿಂದ ಬಂದಿಲ್ಲ. ಕೆಲವು ದಿನಗಳ ಹಿಂದಷ್ಟೆ ಸೆನ್ಸಾರ್ ಮಂಡಳಿಯ ಅಧಿಕಾರಿಯೊಬ್ಬರು ವಜಾ ಆಗಿದ್ದಾರೆ. ಆದರೆ ಈ ಹಿಂದೆ ಅಧಿಕಾರಿಗಳ ಸಂಖ್ಯೆ ಕಡಿಮೆಯಿದ್ದಾಗ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಸಿನಿಮಾಗಳಿಗೆ ಸೆನ್ಸಾರ್ ನೀಡಲಾಗುತ್ತಿತ್ತು, ಆದರೆ ಈ ಬಾರಿ ಉದ್ದೇಶಪೂರ್ವಕವಾಗಿ ತಡ ಮಾಡಲಾಗುತ್ತಿದೆ’ ಎಂದಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ: ಸಚಿವ ಎಂ.ಬಿ.ಪಾಟೀಲ್
‘ಇದನ್ನು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೆ. ಅವರು ಅಧಿವೇಶನದ ಗಡಿಬಿಡಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ. ಇದೀಗ ಮತ್ತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮೊದಲಾದೆಡೆ ಈ ಸಂಬಂಧ ವಾಣಿಜ್ಯ ಮಂಡಳಿ ಪರವಾಗಿ ದೂರು ಸಲ್ಲಿಸಿದ್ದೇವೆ. ಒಂದೆರಡು ದಿನದಲ್ಲಿ ಸಮಸ್ಯೆಗೆ ಸ್ಪಂದನೆ ದೊರಕದೇ ಹೋದರೆ ನೇರ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡುತ್ತೇವೆ’ ಎಂದವರು ಹೇಳಿದ್ದಾರೆ. ‘ಚಿತ್ರಗಳ ಬಿಡುಗಡೆ ವಿಳಂಬವಾದರೆ ನಿರ್ಮಾಪಕರಿಗೆ ನಷ್ಟ ಹೆಚ್ಚಾಗುತ್ತದೆ. ಪ್ರಶಸ್ತಿಗಳಿಗೆ, ಸಬ್ಸಿಡಿಗೆ ಸಹ ತಡವಾಗುತ್ತದೆ. ನಿರ್ಮಾಪಕರ ಹಿತ ಕಾಪಾಡುವ ದೃಷ್ಟಿಯಿಂದ ವಾಣಿಜ್ಯ ಮಂಡಳಿಯು ಈ ಸಮಸ್ಯೆಯ ವಿರುದ್ಧ ಕಾನೂನು ರೀತ್ಯಾ ಹೋರಾಟ ಮಾಡಲಿದೆ’ ಎಂದೂ ಅವರು ಈ ವೇಳೆ ಹೇಳಿದ್ದಾರೆ.