ಈ ಯೂಟ್ಯೂಬರ್ ಫೇಮಸ್ ಆಗಿದ್ದೇ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಸಲಹೆಗಳನ್ನು ನೀಡುತ್ತಾ. ಆದರೆ, ವಿಪರ್ಯಾಸವೆಂದರೆ ಸ್ವಂತ ಮಕ್ಕಳ ಮೇಲಿನ ದೌರ್ಜನ್ಯದ ಕಾರಣಕ್ಕಾಗಿ ಆಕೆಗೆ ಬರೋಬ್ಬರಿ 60 ವರ್ಷ ಜೈಲು ಶಿಕ್ಷೆಯಾಗಿದೆ.
ಅಮೆರಿಕದ ಪ್ರಸಿದ್ಧ ಯೂಟ್ಯೂಬರ್ ರೂಬಿ ಫ್ರಾಂಕ್. ಮಕ್ಕಳನ್ನು ಬೆಳೆಸುವುದು ಹೇಗೆಂದು ಪೋಷಕರಿಗೆ ಸಲಹೆ ನೀಡುತ್ತಲೇ ಖ್ಯಾತಿ ಪಡೆದಿದ್ದ ರೂಬಿ, ಈಗ ಸ್ವಂತ ಮಕ್ಕಳ ಮೇಲಿನ ದೌರ್ಜನ್ಯಕ್ಕಾಗಿ 60 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ.
ಮಕ್ಕಳ ಮೇಲಿನ ದೌರ್ಜನ್ಯ ಆರೋಪದಲ್ಲಿ ಮಂಗಳವಾರ ತಪ್ಪೊಪ್ಪಿಕೊಂಡ ವ್ಲಾಗರ್ ರೂಬಿ ಫ್ರಾಂಕ್ ಗೆ ನ್ಯಾಯಾಧೀಶ ರಿಚರ್ಡ್ ಕ್ರಿಸ್ಟೋಫರ್ಸನ್ 60 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಫ್ರಾಂಕ್ ಮೇಲೆ 4 ಕೇಸ್‌ಗಳಿದ್ದು, ಪ್ರತಿಯೊಂದೂ ಪ್ರಕರಣಕ್ಕೆ 15 ವರ್ಷಗಳಂತೆ ಒಟ್ಟು 60 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.
ಆರು ಮಕ್ಕಳ ತಾಯಿ
ಆರು ಮಕ್ಕಳ ತಾಯಿಯಾದ ಫ್ರಾಂಕ್, ಒಂಬತ್ತು ಮತ್ತು 11 ವರ್ಷ ವಯಸ್ಸಿನ ಆಕೆಯ ಇಬ್ಬರು ಮಕ್ಕಳನ್ನು ದುರುಪಯೋಗಪಡಿಸಿರುವ ಆರೋಪ ಎದುರಿಸುತ್ತಿದ್ದರು. ಮಕ್ಕಳಿಗೆ ಆಹಾರ ಕೊಡದೆ ಸತಾಯಿಸಿದ್ದು, ಮಾನಸಿಕ ಹಿಂದೆ ನೀಡಿದ್ದು ಮತ್ತು ಪ್ರತ್ಯೇಕತೆಯ ಆರೋಪಗಳು ರೂಬಿ ಮೇಲಿತ್ತು. ಎದುರಾಳಿ ವಕೀಲರು ಮಕ್ಕಳು ಅನುಭವಿಸಿದ ದೌರ್ಜನ್ಯವನ್ನು 'ಕಾನ್ಸೆಂಟ್ರೇಶನ್ ಕ್ಯಾಂಪ್'ಗೆ ಹೋಲಿಸಿದರು. ಮತ್ತು ಮಕ್ಕಳು ಮೂಲಭೂತ ಅವಶ್ಯಕತೆಗಳಾದ ಆಹಾರ, ನೀರು ಮತ್ತು ಸರಿಯಾದ ಮಲಗುವ ವ್ಯವಸ್ಥೆಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು. ನಿಂದನೆಯಲ್ಲಿ ಭಾಗಿಯಾಗಿರುವ ಫ್ರಾಂಕ್‌ನ ಮಾಜಿ ವ್ಯಾಪಾರ ಪಾಲುದಾರ ಜೋಡಿ ಹಿಲ್ಡೆಬ್ರಾಂಡ್‌ಗೆ ಕೂಡಾ 60 ವರ್ಷ ಶಿಕ್ಷೆಯನ್ನು ನೀಡಲಾಯಿತು.
ನ್ಯಾಯಾಲಯದಲ್ಲಿ, ಫ್ರಾಂಕ್ ತನ್ನ ಮಕ್ಕಳ ಬಳಿ ಕ್ಷಮೆ ಯಾಚಿಸಿದಳು ಮತ್ತು ಆಳವಾದ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದಳು. 'ನಾನು ತುಂಬಾ ದಿಗ್ಭ್ರಮೆಗೊಂಡಿದ್ದೆ. ಈ ಪ್ರಪಂಚವು ದುಷ್ಟ ಸ್ಥಳವಾಗಿದೆ, ನಿಯಂತ್ರಿಸುವ ಪೊಲೀಸರು, ಗಾಯಗೊಳಿಸುವ ಆಸ್ಪತ್ರೆಗಳು, ಬ್ರೈನ್‌ವಾಶ್ ಮಾಡುವ ಸರ್ಕಾರಿ ಏಜೆನ್ಸಿಗಳು, ಸುಳ್ಳು ಮತ್ತು ಕಾಮಿಸುವ ಚರ್ಚ್ ನಾಯಕರು, ರಕ್ಷಿಸಲು ನಿರಾಕರಿಸುವ ಗಂಡಂದಿರು ಮತ್ತು ನಿಂದನೆಯ ಅಗತ್ಯವಿರುವ ಮಕ್ಕಳಿಂದ ತುಂಬಿದೆ ಎಂದು ನಾನು ನಂಬಿದ್ದೆ' ಎಂದಿದ್ದಾಳೆ.