“The older I get, the smarter my father seems to get.” - Tim Russert
- ಈಶಾನ್ಯೆ ಕೆ ಪಿ
ಅಪ್ಪನಲ್ಲೂ ನನ್ನಲ್ಲೂ ಒಂದೇ ಅನಿಸುವ ಕೆಲವು ಸ್ವಭಾವಗಳಿವೆ. ಅವುಗಳಲ್ಲೊಂದು ಹ್ಯೂಮರ್. ಎಲ್ಲರನ್ನೂ ತಮಾಷೆ ಮಾಡುವ ಜೊತೆಗೇ ನಮ್ಮನ್ನು ನಾವೇ ತಮಾಷೆ ಮಾಡಿ ನಗುವಂಥಾ ಸ್ವಭಾವ. ನನ್ನ ಆತ್ಮೀಯರೂ ಇದನ್ನು ಗುರುತಿಸಿದ್ದಾರೆ. ಒಬ್ಬ ಸೈಕಾಲಜಿಸ್ಟ್ ಆಗಿದ್ದು ಈ ಗುಣ ನನಗೆ ಸಾಕಷ್ಟು ಬಾರಿ ಸಹಕಾರಿ ಆಗಿದೆ. ಹಾಸ್ಯವಾಗಿ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಜನ ಸಮಸ್ಯೆ ಮರೆತು ನಗುತ್ತಾರೆ. ನಾವು ಯಾವಾಗ ಎಲ್ಲವನ್ನೂ ಹಾಸ್ಯಮಯವಾಗಿ ನೋಡುತ್ತೇವೋ, ಬದುಕು ಸರಳವಾಗಿ ಕಾಣೋದಕ್ಕೆ ಶುರುವಾಗುತ್ತೆ. ಅಪ್ಪನ ಪುಸ್ತಕಗಳನ್ನು ಓದಿದ್ರೆ ಅವರು ಎಂಥಾ ಗಹನ ವಿಚಾರವನ್ನೂ ಎಷ್ಟು ತಮಾಷೆಯಾಗಿ, ಸ್ವಾರಸ್ಯಕರವಾಗಿ ಹೇಳುತ್ತಾರೆ ಅನಿಸುತ್ತೆ. ಅಪ್ಪ ಆಗಾಗ ಹೇಳ್ತಿದ್ದ ಒಂದು ವಿಚಾರ- ಯಾವುದಾದರೂ ಒಂದು ವಿಷಯವನ್ನು ಜನರಿಗೆ ತಲುಪಿಸಬೇಕು ಅಂತಾದ್ರೆ ಒಂದೋ ನೀವು ದೊಡ್ಡ ವ್ಯಕ್ತಿತ್ವ ಹೊಂದಿರಬೇಕು, ಆಗ ಜನ ನಿಮ್ಮ ಮಾತು ಕೇಳುತ್ತಾರೆ. ಇನ್ನೊಂದು ಮಾರ್ಗ ಹ್ಯೂಮರ್. ಅಪ್ಪ ಚಾರ್ಲಿ ಚಾಪ್ಲಿನ್ ಹಾಸ್ಯವನ್ನು ಬಹಳ ಗಮನಿಸುತ್ತಿದ್ದರು. ಚಾಪ್ಲಿನ್ ಬಹಳ ಸೀರಿಯಸ್ ವಿಚಾರವನ್ನು ತಮಾಷೆಯಾಗಿ ಜನರಿಗೆ ತಲುಪಿಸುತ್ತಾರೆ. ಸೂಕ್ಷ್ಮಮತಿಗಳಾಗಿ ನೋಡಿದರೆ ಅದರ ಹಿಂದಿನ ವಿಚಾರ, ವಿಷಾದಗಳು ನಿಮ್ಮನ್ನು ತಾಕುತ್ತವೆ. ಇಲ್ಲವಾದರೆ ನಗುವಾದ್ರೂ ಬರುತ್ತೆ.
undefined
ಅಪ್ಪನಿಗೆ ಬಲು ನಾಚಿಕೆ ಸ್ವಭಾವ ಇತ್ತು. ಅದು ನನ್ನಲ್ಲೂ ಇದೆ. ಆದರೆ ಇದು ಹೆಚ್ಚಿನವರ ಗಮನಕ್ಕೆ ಬಂದಿರಲಿಕ್ಕಿಲ್ಲ. ಯಾರಾದ್ರು ಅಪರಿಚಿತರು ಮಾತಿಗೆ ಕರೆದರೆ, ಅಯ್ಯೋ ಬೇಡಪ್ಪ, ಮಾತಾಡೋದು ಕಷ್ಟ ಅನ್ನುವ ಯೋಚನೆಯೇ ಮೊದಲು ಬರೋದು. ಆಮೇಲೆ ನಮ್ಮನ್ನು ನಾವು ಕನ್ವಿನ್ಸ್ ಮಾಡಿ ಮಾತನಾಡಲು ಮುಂದಾಗುತ್ತೇವೆ. ಅಪ್ಪನೂ ಮೊದಲು ಯಾರಾದ್ರೂ ಏನಾದ್ರೂ ಕೇಳಿದರೆ ಇಲ್ಲ ಅಂತಲೇ ಹೇಳುತ್ತಿದ್ದದ್ದು. ಏನೆಲ್ಲ ವಿಚಾರಗಳು ತಲೆಯಲ್ಲಿದ್ದರೂ ಅದು ಅದಾಗಿಯೇ ಹೊರಬರಲು ಕಾಯುತ್ತಿದ್ದರು. ಜೊತೆಗೆ ಭಾವನೆಗಳನ್ನು ಹೊರಗೆ ತೋರ್ಪಡಿಸಿದವರಲ್ಲ. ಯಾವತ್ತೂ ನಮ್ಮನ್ನೆಲ್ಲ ಹೊಗಳುತ್ತಿರಲಿಲ್ಲ. ಹೊಗಳಬಾರದು ಅಂತಲ್ಲ, ಅದೊಂಥರ ಸಂಕೋಚ.
ನಮ್ಮಿಬ್ಬರಲ್ಲೂ ಇರುವ ಇನ್ನೊಂದು ಸ್ವಭಾವ ಯಾವುದೇ ವಿಚಾರ ತಗೆದುಕೊಂಡರೂ ಅದನ್ನು ಎಲ್ಲಾ ಆ್ಯಂಗಲ್‌ಗಳಿಂದ ನೋಡುವುದು. ತನ್ನ ಯೋಚನೆಗಳಲ್ಲಿ ತಪ್ಪಿರಬಹುದು ಅಂತಲೂ ಗ್ರಹಿಸುತ್ತಿದ್ದರು. ಆಮೇಲೆ ಸರಿ ಪಡಿಸಿಕೊಳ್ಳುತ್ತಿದ್ದರು.
ನನಗೆ ಮನೆಯಲ್ಲೇ ರಮೇಶ್ ಓಟಿಟ:ನಿಹಾರಿಕಾ
ಅಣ್ಣ, ನಾನು ಮನೆ ಹಿಂದಿನ ಗುಡ್ಡಕ್ಕೆ ವಾಕಿಂಗ್ ಹೋಗುತ್ತಿದ್ದೆವು. ಆ ಗುಡ್ಡದ ಮೇಲೆ ನಿಂತಾಗ ಸ್ಟೀಫನ್ ಹಾಕಿಂಗ್ ಥಿಯರಿ ಆಫ್ ಎವರಿಥಿಂಗ್ ಬಗ್ಗೆ ಮಾತಾಡುತ್ತಿದ್ದೆವು. ಅದನ್ನು ಹಾಗೇ ಓದಿದ್ರೆ ಅರ್ಥ ಆಗೋದು ಕಷ್ಟ. ಆದರೆ ಅಣ್ಣ ಹೇಳಿದ್ದು ನಮಗೆ ಅರ್ಥ ಆಗುತ್ತಿತ್ತು. ‘ಭೂಮಿ ಮೇಲಿನ ಎಲ್ಲ ಮೂವ್‌ಮೆಂಟ್‌ಗಳೂ ನಿಂತು ಹೋದರೆ ಏನಾಗಬಹುದು..’ ಅವರು ನಮ್ಮನ್ನು ಕೇಳುತ್ತಿದ್ದರು. ‘ಹೀಗೆ ಕಾಲವೇ ನಿಂತು ಹೋದರೆ ಏನಾಗಬಹುದು, ನಮಗೆಲ್ಲ ವಯಸ್ಸೇ ಆಗಲಿಕ್ಕಿಲ್ವಾ.. ಒಂದು ವೇಳೆ ವಿರುದ್ಧ ದಿಕ್ಕಿನಲ್ಲಿ ಭೂಮಿ ತಿರುಗಿದ್ರೆ ಏನಾಗುತ್ತೆ..’ ಹೀಗೆಲ್ಲ ಗಂಟೆಗಟ್ಟಲೆ ಮಾತಾಡುತ್ತಿದ್ದೆವು. ಒಂದು ವಿಚಾರವನ್ನು ಬೇರೆ ಬೇರೆ ಮಗ್ಗುಲುಗಳಿಂದ ನೋಡೋದು ಸಾಧ್ಯವಾಗುತ್ತಿತ್ತು. ಗೂಗಲ್ ಇಲ್ಲದ ಕಾಲದಲ್ಲಿ ಅಣ್ಣನ ಅಗಾಧ ತಿಳುವಳಿಕೆ ನೆನೆಸಿಕೊಂಡರೆ ಆಶ್ಚರ್ಯ ಆಗುತ್ತೆ. ಯಾವತ್ತೂ ನಮಗಿಂತ ಒಂದು ಸ್ಟೆಪ್ ಮುಂದೆ ಇರುತ್ತಿದ್ದರು. ಅದೊಂದು ಬೆರಗು. ಅಂಥಾ ಬೆರಗಲ್ಲೇ ಜಗತ್ತನ್ನು ಕಾಣುತ್ತಾ ಬೆಳೆದೆವು ನಾವು.
ನಾನು ನನ್ನ ತಂದೆಯನ್ನು ತಂದೆ ಥರ ನೋಡದೇ ಒಬ್ಬ ಫ್ಯಾನ್ ಥರ ನೋಡ್ತಿದ್ದೆ ಅಂತ ಈಗ ಅನಿಸುತ್ತಿದೆ. ಅದರಿಂದಾಗಿ ಅಪ್ಪನಿಗೆ ಕೇಳಬೇಕಾದ ಎಷ್ಟೋ ಪ್ರಶ್ನೆಗಳನ್ನು ಕೇಳಲೇ ಇಲ್ವಲ್ಲಾ ಅಂದುಕೊಳ್ತೀನಿ. ನೀವು ಹೇಗೆ ಈ ಥರ ಯೋಚನೆ ಮಾಡಿ ಬರೀತೀರ ಅಂತ ನಾನು ಒಂದು ದಿನವೂ ಅವರನ್ನ ಕೇಳಲಿಲ್ಲ. ಅವರು ಬರೆಯುವಾಗ ಯಾವತ್ತೂ ತೊಂದರೆ ಮಾಡುತ್ತಿರಲಿಲ್ಲ. ಅದು ಪ್ರಿಂಟ್ ಆದಮೇಲೇ ನಾವು ಓದುತ್ತಿದ್ದದ್ದು. ಈಗ ಅಂದುಕೊಳ್ತೀನಿ, ಈ ವಿಚಾರಗಳನ್ನು ಬರೀಬೇಕು ಅಂತ ನಿಮಗೆ ಹೇಗೆ ಅನಿಸಿತು, ಯಾವ ಸನ್ನಿವೇಶ ನಿಮ್ಮನ್ನು ಈ ಥರ ಬರೆಯುವಂತೆ ಪ್ರೇರೇಪಿಸಿತು, ನಿಮ್ಮ ಬರಹದ ಬಗ್ಗೆಯೇ ನಿಮಗೆ ಏನನಿಸುತ್ತೆ, ದೇವರ ಬಗ್ಗೆ ನಿಮ್ಮ ನಂಬಿಕೆ ಏನು, ಪ್ರಕೃತಿಯಲ್ಲೇ ನೀವು ಬೇರೇನೋ ಶಕ್ತಿಯನ್ನು ಕಾಣ್ತೀರಾ, ಅವುಗಳ ಬಗ್ಗೆ ನಿಮ್ಮ ಇನ್‌ಟ್ಯೂಶನ್‌ಗಳೇನು.. ಒಂದು ಗಿಡದ ಜೊತೆಗೆ, ಮರದ ಜೊತೆಗೆ ಮಾತಾಡೋದನ್ನೂ ನಂಬುವವಳು ನಾನು. ಅದನ್ನೆಲ್ಲ ಅವರೂ ಮಾಡುತ್ತಿದ್ದರಾ.. ಗಿಡ, ಮರ, ಕಾಡುಗಳ ಜೊತೆಗಿದ್ದವರು ಅವುಗಳ ಜೊತೆಗೆ ಹೇಗೆ ಸ್ಪಂದಿಸುತ್ತಿದ್ದರು... ಇದನ್ನೆಲ್ಲ ನಾನು ಕೇಳಲೇ ಇಲ್ವಲ್ಲಾ ಅಂತ ಅನಿಸುತ್ತೆ, ಆದರೆ ಕಾಲ ಮುಂದೆ ಬಂದಿದೆಯಲ್ಲಾ..