
ಕೆಲವೊಂದು ಸಂಬಂಧಗಳು ಹೇಗೆ ರೂಪುಗೊಳ್ಳುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕೆಟ್ಟದಾಗಿ ಆರಂಭವಾದ ಸ್ನೇಹಗಳು ಬರುಬರುತ್ತಾ ಬಹಳ ಗಾಢವಾಗಿ ಎಂದಿಗೂ ಬಿಟ್ಟಿರಲಾರದ ಬಂಧವಾಗಿ ರೂಪುಗೊಳ್ಳುತ್ತವೆ. ಹಾಗೆಯೇ ಪ್ರಾರಂಭದಲ್ಲಿ ಬಹಳ ಚೆನ್ನಾಗಿದ್ದ ಸಂಬಂಧವೊಂದು ಬರುಬರುತ್ತಾ ಹಳಸಲು ಆರಂಭಿಸಿ ಪರಿಚಯವೇ ಇಲ್ಲವೇನೋ ಎನ್ನುವಷ್ಟು ಅಪರಿಚಿತರಾಗಿ ಬಿಡುತ್ತಾರೆ. ಹಾಗೆಯೇ ಕೆಲವು ಸ್ನೇಹಗಳು ಬದುಕಿನಲ್ಲಿ ಪಾಠ ಕಲಿಸುವುದಕ್ಕಾಗಿಯೇ ಬಂದರೆ ಇನ್ನು ಕೆಲವು ಸ್ನೇಹಗಳು ಸ್ನೇಹಿತರು ಬದುಕಿನಲ್ಲಿ ಸದಾ ಕಾಲ ಜೊತೆಗಿದ್ದು, ಬದುಕಿಗೆ ಮಾರ್ಗದರ್ಶಕರಾಗಿ ಬಿಡುತ್ತಾರೆ. ಕೆಲವೊಂದು ಸ್ನೇಹಗಳು ನಮಗೆ ಗೊತ್ತಿಲ್ಲದೆಯೇ ಬಹಳ ಗಾಢವಾಗಿ ಚಿರಕಾಲ ಉಳಿದು ಬಿಡುತ್ತದೆ. ಹೀಗೆ ವಿಭಿನ್ನ ವಿಶೇಷವೆನಿಸಿದ ಸ್ನೇಹದ ಬಗ್ಗೆ ನಿನ್ನೆಯಷ್ಟೇ ಕಳೆದು ಹೋದ ಸ್ನೇಹಿತರ ದಿನದಂದು ಅನೇಕರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ತಮ್ಮ ಅಪರೂಪದ ಸ್ನೇಹಿತರಿಗೆ ಶುಭ ಹಾರೈಸಿದ್ದಾರೆ. ಅದೇ ರೀತಿ ಮಹಿಳೆಯೊಬ್ಬರು ತಮ್ಮ ಬದುಕಿನಲ್ಲಿ ಸಂಭವಿಸಿದ ಅದ್ಭುತ ಸ್ನೇಹವೊಂದರ ಬಗ್ಗೆ ಬರೆದುಕೊಂಡಿದ್ದು, ಅದೀಗ ವೈರಲ್ ಆಗಿದೆ.
ತರಗತಿಯಲ್ಲಿ ದ್ವೇಷ ಮಾಡ್ತಿದ್ದವನೇ ಗಂಡನಾಗಿ ಬಂದಾಗ
ಮದ್ವೆ ಎಂಬುದು ಸ್ವರ್ಗದಲ್ಲೇ ನಿರ್ಧಾರವಾಗಿರುತ್ತೆ ಅನ್ನೋದು ಅನೇಕರ ಮಾತು. ಅದಕ್ಕೆ ಪುಷ್ಠಿ ನೀಡುವಂತೆ ಕೆಲವು ಘಟನೆಗಳು ನಡೆಯುತ್ತವೆ. ಕೆಲವರನ್ನು ಇಷ್ಟವಿಲ್ಲದೇ ಮದುವೆಯಾಗಿ ಆಮೇಲೆ ಅವರ ಗುಣ ವ್ಯಕ್ತಿತ್ವ ನೋಡಿ ಇಷ್ಟವಾಗಲು ಆರಂಭವಾಗುತ್ತದೆ. ಇನ್ನು ಕೆಲವರು ಇಷ್ಟಪಟ್ಟು ಮದುವೆಯಾಗಿ ಕೆಲ ಕಾಲದ ನಂತರ ದೂರಾಗುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯೊಬ್ಬರು ತಮ್ಮನ್ನು ಶಾಲೆಯಲ್ಲಿ ಬಹಳ ದ್ವೇಷ ಮಾಡುತ್ತಿದ್ದ ಹುಡುಗನನ್ನೇ ಮದುವೆಯಾಗಿದ್ದು, ಅವರು ಶಾಲಾ ದಿನಗಳಿಂದ ಮದುವೆಯವರೆಗಿನ ತಮ್ಮ ಪಯಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ಅಂಚಲ್ ರಾವತ್ ಎಂಬುವರು ತಮ್ಮ ಶಾಲಾ ದಿನಗಳ ಶತ್ರುವೇ ತಮ್ಮ ಜೀವನ ಸಂಗಾತಿಯಾಗಿ ಬಂದ ಬಗ್ಗೆ ಸ್ನೇಹಿತರ ದಿನದಂದು ಬರೆದುಕೊಂಡಿದ್ದಾರೆ. ನಾನು ಹುಡುಗರೊಂದಿಗೆ ಸ್ನೇಹ ಬೆಳೆಸಲು ಇಷ್ಟಪಡದ ಹುಡುಗಿ. ಹೀಗಿರುವಾಗ ಶಾಲಾ ದಿನಗಳಲ್ಲಿ ಒಬ್ಬ ದಡ್ಡನಂತಿದ್ದ, ನಾಚಿಕೆ ಸ್ವಭಾವದ ವ್ಯಕ್ತಿ ನನ್ನೊಂದಿಗೆ ಊಟವನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದ, ಆದರೆ ನಾನು ಆಕಸ್ಮಿಕವಾಗಿ ಅವನ ಪೋಕ್ಮನ್ ಟಿಫಿನ್ ಬಾಕ್ಸ್ (Pokémon tiffin box)ಅನ್ನು ಮುರಿದು ಬಿಟ್ಟೆ . ಆ ದಿನ ನಾನು ಅವನನ್ನು ಬಹುತೇಕ ಅಳುವಂತೆ ಮಾಡಿದೆ ಎಂದೇ ನಾನು ಭಾವಿಸುತ್ತೇನೆ, ಮತ್ತು ಅವನು ಮತ್ತೆಂದಿಗೂ ನನ್ನೊಂದಿಗೆ ಮಾತನಾಡಲಿಲ್ಲ.
ಆದರೆ 15 ವರ್ಷಗಳ ನಂತರ, ಜೀವನ್ ಸಾಥಿಯಲ್ಲಿ ನಾನು ಅದೇ ದಡ್ಡ ವ್ಯಕ್ತಿಯನ್ನು ಕಂಡೆ. ಆತ ನನಗೆ ಮೊದಲ ಬಾರಿಗೆ, 'ನೀವು ಯಾವಾಗ ನನಗೆ ಹೊಸ ಟಿಫಿನ್ ಬಾಕ್ಸ್ ಖರೀದಿಸಿ ಕೊಡ್ತೀರಾ' ಎಂದು ಮೆಸೇಜ್ ಮಾಡಿದ್ದ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಅವರು ಹಮಾರಿ ಶಾಲಾ ಸಮಯ ಮೇ ದೋಸ್ತಿ ತೋ ನಹಿ ಹುಯಿ ಪರ್ ಹನ್ ಹಮಾರಿ ಶಾದಿ ಜರುರ್ ಹೋಗಿ . ಸ್ನೇಹ ದಿನದ ಶುಭಾಶಯಗಳು, ಪತಿ ದೇವ್ಎಂದು ಅವರು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಅಂದರೆ ಶಾಲಾ ದಿನಗಳಲ್ಲಿ ನಾವು ಸ್ನೇಹಿತರಾಗಿರಲಿಲ್ಲ, ಆದರೆ ನಮ್ಮ ವಿವಾಹವೂ ಖಂಡಿತವಾಗಿ ಆಗಿಯೇ ಹೋಯ್ತು ಸ್ನೇಹಿತರ ದಿನದ ಶುಭಾಶಯಗಳು ಪತಿದೇವ ಎಂದು ಅವರು ಬರೆದಿದ್ದು, ಜೊತೆಗ ತಮ್ಮ ಶಾಲಾದಿನಗಳ ಫೋಟೋದ ಜೊತೆ ತಮ್ಮ ಮದುವೆಯ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ಅವರ ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದ್ದು, ಅನೇಕರು ಇವರ ಈ ಪೋಸ್ಟ್‌ಗೆ ಮೆಚ್ಚಿಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಇದು ನಾನು ಕಲ್ಪಿಸಿದಂತಹ ಲವ್ ಸ್ಟೋರಿ ಇದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆತನಿಗಿನ್ನೂ ಮರೆತಿಲ್ಲ, ನೀವು ಮತ್ತೊಂದು ಟಿಫಿನ್ ಬಾಕ್ಸ್ ಮುರಿಯುವುದಿಲ್ಲ ಎಂಬ ಭರವಸೆ ಇದೆ, ನಿಮ್ಮಿಬ್ಬರಿಗೂ ಮುಂದಿನ ಎಲ್ಲಾ ಊಟಗಳು ಮತ್ತು ನೆನಪುಗಳು ಸದಾಕಾಲ ಇರಲಿ ಎಂದು ಹಾರೈಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತ ಟಿಪಿನ್ ಬಾಕ್ಸನ್ನು ಮಾತ್ರ ನೆನಪಿಟ್ಟುಕೊಂಡಿದ್ದಾನೆ ದ್ವೇಷವನ್ನಲ್ಲ ಇದು ಪ್ರೀತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.