
ಕಲ್ಲಕುರಿಚಿ: ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿದ್ದ ತನ್ನ ಗಂಡನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ಅದನ್ನು ಕೊಲೆ ಎಂದು ಬಿಂಬಿಸಿದಂತಹ ಘಟನೆಯೊಂದು ತಮಿಳುನಾಡಿನ ಸೇಲಂ ಸಮೀಪದ ಕಲ್ಲಕುರಿಚಿ ಎಂಬಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದರಿಂದಾಗಿ ಇದೊಂದು ಕೊಲೆ ಪ್ರಕರಣ ಎಂಬುದು ನಂತರ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹೀಗೆ ಹೆಂಡ್ತಿಯಿಂದಲೇ ಕೊಲೆಯಾದ ವ್ಯಕ್ತಿಯನ್ನು ಮಾಮಂಡಲ್ ರಸ್ತೆಯ ನಿವಾಸಿ ಆಂಟನಿ ರಾಬಿನ್ ಎಂದು ಗುರುತಿಸಲಾಗಿದೆ. ಈತ ಸೇಲಂನ ಚಿನ್ನತಿರುಪತಿ ಪ್ರದೇಶದ ಗ್ಯಾಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೊಲೆ ಮಾಡಿದವಳನ್ನು ಅಮ್ಮು ಎಂದು ಗುರುತಿಸಲಾಗಿದೆ.
ಆರಂಭದಲ್ಲಿ ಇದೊಂದು ಆತ್ಮ*ಹತ್ಯೆ ಎಂದು ಪತ್ನಿ ಹೇಳಿದ್ದಳು, ತನ್ನ ಪತಿ ಆಂಟನಿ ರಾಬಿನ್ ಕುಡಿದ ಮತ್ತಿನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಆಕೆ ಹೇಳಿದ್ದಳು. ಆದರೆ ಮನೆ ಮುಂದಿನ ಬೀದಿಯಲ್ಲಿ ಇದ್ದ ಸಿಸಿಟಿವಿಯಲ್ಲಿ ಆಕೆಯೇ ಗಂಡನಿಗೆ ಲೈಟರ್ ಆನ್ ಮಾಡಿ ಬೆಂಕಿ ಹಚ್ಚುತ್ತಿರುವ ದೃಶ್ಯ ಸೆರೆ ಆಗಿದೆ. ಕೂಡಲೇ ರಾಬಿನ್‌ನನ್ನು ನೆರೆಹೊರೆಯ ಮನೆಯವರು ಸೇಲಂನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಘಟನೆಯಲ್ಲಿ ಶೇ.90ರಷ್ಟು ಸುಟ್ಟಗಾಯಗಳಿಗೆ ತುತ್ತಾಗಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಭಾನುವಾರ ಮುಂಜಾನೆ ಮೈಗೆ ಬೆಂಕಿ ಹತ್ತಿಕೊಂಡ ನಂತರ ಉರಿ ತಡೆದುಕೊಳ್ಳಲಾಗದೇ ಆಂಟನಿ ಕಿರುಚುತ್ತಾ ಓಡುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರಂಭದಲ್ಲಿ, ಆತನ ಪತ್ನಿ ಅಮ್ಮು, ಆಂಟನಿ ಕುಡಿದ ಮತ್ತಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದರು. ನಂತರ ನೆರೆಹೊರೆಯವರು ಅವರನ್ನು ಕಲ್ಲಕುರಿಚಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದದ್ದು,ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೇಲಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಇದನ್ನೂ ಓದಿ: ಬೆಕ್ಕು ಸಾಕೋದು ಬೇಡ ಎಂದಿದ್ದಕ್ಕೆ ಕೆಲ ದಿನಗಳಲ್ಲಿ ಡಾಕ್ಟರ್ ಆಗೋಳಿದ್ದ MBBS ವಿದ್ಯಾರ್ಥಿನಿ ಸಾವಿಗೆ ಶರಣು
ನಂತರ ಪ್ರಕರಣದ ತನಿಖೆಗಿಳಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಾಗ ತನಿಖೆಗೆ ರೋಚಕ ತಿರುವು ಸಿಕ್ಕಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಕ್ಕೂ ಆಂಟನಿ ಪತ್ನಿ ಅಮ್ಮುವಿನ ಹೇಳಿಕೆಗೂ ಅಜಗಜಾಂತರ ವ್ಯತ್ಯಾಸವಿತ್ತು. ವೀಡಿಯೊದಲ್ಲಿ ಆಂಟನಿ ಮನೆಯಿಂದ ಹೊರಬಂದು, ತನ್ನ ದೇಹದ ಮೇಲೆ ಪೆಟ್ರೋಲ್ ಇರುವುದನ್ನು ಅರಿತು ಅದನ್ನು ಒರೆಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಪತ್ನಿ ಅಮ್ಮು ಅವನನ್ನು ಹಿಂಬಾಲಿಸಿ ಬಂದು ಉದ್ದೇಶಪೂರ್ವಕವಾಗಿ ಲೈಟರ್ ಹೊತ್ತಿಸಿ ಆತನಿಗೆ ಬೆಂಕಿ ಹಚ್ಚಿದ್ದಳು.
ಮೂರು ಮಕ್ಕಳಿರುವ ಮಹಿಳೆಗೆ ಸೋದರಿ ಗಂಡನ ಜತೆ ಸರಸ
ಆಂಟನಿ ಮತ್ತು ಅಮ್ಮು ಮದುವೆಯಾಗಿ ಹಲವು ವರ್ಷಗಳೇ ಕಳೆದಿವೆ ಈ ದಂಪತಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಒಟ್ಟು ಮೂವರು ಮಕ್ಕಳಿದ್ದರು. ಪೊಲೀಸರ ಪ್ರಾಥಮಿಕ ವಿಚಾರಣೆಯ ಪ್ರಕಾರ, ವಿವಾಹೇತರ ಸಂಬಂಧಕ್ಕೆ ಸಂಬಂಧಿಸಿದಂತೆ ನಡೆದ ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ತನ್ನ ಪತ್ನಿ ಅಮ್ಮು ಆಕೆಯ ಸಹೋದರಿಯ ಪತಿಯೊಂದಿಗೆ ಸಂಬಂಧ ಹೊಂದಿದ್ದಾಳೆಂಬ ವಿಚಾರ ಪತಿ ಆಂಟನಿಗೆ ಗೊತ್ತಾಗಿದ್ದು, ಆ ಸಂಬಂಧವನ್ನು ಕೊನೆಗೊಳಿಸುವಂತೆ ಅವನು ಆಕೆಗೆ ಪದೇ ಪದೇ ಎಚ್ಚರಿಕೆ ನೀಡಿದ್ದನು. ಇದು ದಂಪತಿಗಳ ನಡುವೆ ಆಗಾಗ್ಗೆ ಜಗಳಗಳಿಗೆ ಕಾರಣವಾಗಿತ್ತು.
ಇದನ್ನೂ ಓದಿ: ಅಧಿಕಾರದಲ್ಲಿ 8931 ದಿನಗಳು: ಮತ್ತೊಂದು ದಾಖಲೆ ಬರೆದು ಹಲವು ದಾಖಲೆಗಳ ಸರದಾರನೆನಿಸಿದ ನಮೋ
ಶನಿವಾರ ರಾತ್ರಿ, ಆಂಟನಿ ಕುಡಿದ ಮತ್ತಿನ ಲಾಭ ಪಡೆದು, ಅವನು ಮನೆಯೊಳಗೆ ಇದ್ದಾಗ ಅಮ್ಮು ಅವನ ಮೇಲೆ ಪೆಟ್ರೋಲ್ ಸುರಿದಿದ್ದಾಳೆ.ಅವನು ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳಲು ಹೊರಗೆ ಓಡಿ ಹೋದಾಗ, ಈಕೆಯೂ ಆತನ ಹಿಂದಿನಿಂದಲೇ ಓಡಿ ಹೋಗಿ ಆತನಿಗೆ ಬೆಂಕಿ ಹಚ್ಚಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕಲ್ಲಕುರಿಚಿ ಪೊಲೀಸರು ಪ್ರಕರಣ ದಾಖಲಿಸಿ ಮಹಿಳೆ ಅಮ್ಮುವನ್ನು ಬಂಧಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.