ವಯಸ್ಸಾದ ಪುರುಷರು ಎಳೆಯ ಹುಡುಗಿಯರ ಬೆನ್ನು ಬೀಳೋದ್ಯಾಕೆ?

Published : Mar 28, 2026, 09:06 PM IST
propose

ಸಾರಾಂಶ

ಬಾಲಿವುಡ್‌ನಿಂದ ಹಿಡಿದು ಹಾಲಿವುಡ್‌ವರೆಗೆ, ವಯಸ್ಸಾದ ಪುರುಷರು ಯುವತಿಯರತ್ತ ಆಕರ್ಷಿತರಾಗಲು ಮನೋವೈಜ್ಞಾನಿಕ ಮತ್ತು ಜೈವಿಕ ಕಾರಣಗಳಿವೆ. ಮಿಡ್‌ಲೈಫ್‌ ಕ್ರೈಸಿಸ್, ಸ್ಟೇಟಸ್ ಸಿಂಬಲ್‌ನಂತಹ ಅಂಶಗಳು ಈ ವರ್ತನೆಗೆ ಪೂರಕ. ನೆಲಮಂಗಲ ಕಾಲೇಜಿನ ಘಟನೆ ಇದರ ಒಂದು ಮಜಲು. 

ಬೆಂಗಳೂರಿನ ಬಳಿ ನೆಲಮಂಗಲದ ವೈದ್ಯಕೀಯ ಕಾಲೇಜಿನ ತರಗತಿಯಲ್ಲಿ ನಡೆದ, ಮೆಡಿಕಲ್‌ ವಿದ್ಯಾರ್ಥಿನಿಗೆ ಪ್ರೊಫೆಸರ್‌ ಪ್ರಪೋಸ್‌ ಮಾಡಿದ ಘಟನೆ ಒಳ್ಳೇ ವೈರಲ್‌ ಆಗಿದೆ. ಇದು ಸ್ವಲ್ಪ ವಿಚಿತ್ರ, ಅಸಹಜ, ಮತ್ತು ಹಾಸ್ಯಾಸ್ಪದ ವಿಷಯವೂ ಹೌದು. ಸ್ವಲ್ಪ ವಯಸ್ಸಾದ ಪ್ರೊಫೆಸರ್ ಕ್ಲಾಸ್‌ಗೆ ಬಂದು, ಮೈಕ್ ಸರಿಪಡಿಸಿ, ಪಾಠ ಆರಂಭಿಸುವ ಬದಲು ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದ. ಅದೂ ಎಲ್ಲರ ಮುಂದೆ. ಸ್ಟೂಡೆಂಟ್‌ ಸ್ಪಷ್ಟವಾಗಿ ʼನೋʼ ಎಂದು ಹೇಳಿದ್ದಾಳೆ. ಕ್ಲಾಸ್‌ನ ಉಳಿದ ಹುಡುಗರು ಪ್ರೊಫೆಸರ್‌ ವರ್ತನೆಯಿಂದ ರೊಚ್ಚಿಗೆದ್ದು ಚಪ್ಪಲಿಯಿಂದ ಆತನಿಗೆ ಥಳಿಸಿದ್ದಾರೆ.

ಈತನೇನು ಮೂರ್ಖನೇ? ಐವತ್ತಕ್ಕೂ ಮೀರಿದ ವಯಸ್ಸಾದ ತನಗೆ ಇಪ್ಪತ್ತರ ಹರೆಯದ ಹುಡುಗಿಗೆ ಪ್ರಪೋಸ್‌ ಮಾಡಲು ಏನು ಹಕ್ಕಿದೆ, ಅದರಲ್ಲೂ ನಾಚಿಕೆ ಮಾನ ಮರ್ಯಾದೆ ಏನೂ ಇಲ್ಲದೆ ಕ್ಲಾಸಿನ ಮುಂದೆ- ಈ ಪ್ರಶ್ನೆಗಳನ್ನು ಆತ ಕೇಳಿಕೊಂಡಿಲ್ಲ. ಈ ಘಟನೆಯ ಹಿಂದಿನ ಸೈಕಾಲಜಿ ಅರ್ಥಮಾಡಿಕೊಳ್ಳಲು, ನಾವು ಕೆಲವು ಸೆಲೆಬ್ರಿಟಿಗಳ ಉದಾಹರಣೆಗಳನ್ನು ನೋಡಬಹುದು.

ಹಾಲಿವುಡ್‌ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ 50ರಲ್ಲಿದ್ದರೂ, 25ರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ. ಟೋಬಿ ಮಗೈರ್‌ ತಮ್ಮ ವಯಸ್ಸಿಗಿಂತ ತುಂಬಾ ಕಿರಿಯಳನ್ನು ಡೇಟ್ ಮಾಡುತ್ತಿದ್ದಾರೆ. ಕೇನ್ಯೆ ವೆಸ್ಟ್‌ ಮತ್ತು ಬಿಯಾಂಕಾ ಸೆನ್ಸೋರಿ ಸಂಬಂಧವೇ ಒಂದು ‘ಪಬ್ಲಿಕ್ ಇಮೇಜ್’ ಆಗಿ ಕಾಣುತ್ತದೆ. ರಾಬರ್ಟೊ ಕ್ಯಾವಲ್ಲಿ 83ರ ವಯಸ್ಸಿನಲ್ಲಿ ತನಗಿಂತ 50 ವರ್ಷ ಕಿರಿಯ ಸಂಗಾತಿಯೊಂದಿಗೆ ಇದ್ದಾನೆ. ಮಿಲಿಂದ್‌ ಸೋಮನ್‌ ಮತ್ತು ಅಂಕಿತಾ ಕೋನ್ವರ್‌ ಇಬ್ಬರ ಪ್ರಾಯದಲ್ಲಿ 26 ವರ್ಷ ವ್ಯತ್ಯಾಸವಿದೆ. ನಮ್ಮಲ್ಲೂ ಹಲವು ನಟ ನಟಿಯರ ಉದಾಹರಣೆ ಕೊಡಬಹುದು, ಜನಪ್ರಿಯ ಹೀರೋಗಳಲ್ಲಿ ಹಲವರು ತಮ್ಮ ವಯಸ್ಸಿಗಿಂತ ಅತೀ ಕಿರಿಯರನ್ನು ಡೇಟಿಂಗ್‌ ಮಾಡಿದ್ದಾರೆ, ಮದುವೆಯಾಗಿದ್ದಾರೆ. ಕಮಲ ಹಾಸನ್‌, ಪ್ರಕಾಶ್‌ ರೈ, ಮತ್ತಿತರರು.

ಅಧ್ಯಯನ ಏನು ಹೇಳುತ್ತೆ?

ಹಾಗಾದರೆ ಯಾಕೆ ಈ ವಯಸ್ಸಾದ ಪುರುಷರು ಎಳೆಯ ಯುವತಿಯರ ಬೆನ್ನು ಬೀಳುತ್ತಾರೆ? ಮನೋವಿಜ್ಞಾನ ಮತ್ತು ಜೀವಶಾಸ್ತ್ರ ಈ ವಿಷಯವನ್ನು ಬಹಳ ಅಧ್ಯಯನ ಮಾಡಿವೆ. ಸೈಕಾಲಜಿಸ್ಟ್‌ ಡೇವಿಡ್‌ ಬಸ್‌ ಎಂಬಾತ 37 ದೇಶಗಳಲ್ಲಿ ಮಾಡಿದ ಅಧ್ಯಯನದ ಪ್ರಕಾರ, ಪುರುಷರು ಯುವ ಮಹಿಳೆಯರತ್ತ ಆಕರ್ಷಣೆ ಹೊಂದಿದ್ದರೆ, ಮಹಿಳೆಯರು ಸ್ಥಿರತೆ ಮತ್ತು ಸಂಪನ್ಮೂಲಗಳನ್ನು ಇಷ್ಟಪಡುತ್ತಾರೆ. ಬಯಾಲಜಿಸ್ಟ್‌ ರಾಬರ್ಟ್‌ ಟ್ರಿವರ್ಸ್‌ ಪ್ರಕಾರ ಯಾರು ಮಕ್ಕಳ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಾರೋ ಅಂಥ ಪುರುಷರನ್ನು ಮಹಿಳೆಯರು ಹೆಚ್ಚು ಆಯ್ಕೆ ಮಾಡುತ್ತಾರೆ. ಕ್ರೀಸ್ತೀನಾ ರಡ್ಡರ್‌ ಪ್ರಕಾರ ಎಲ್ಲ ವಯಸ್ಸಿನ ಪುರುಷರು 20–23 ವರ್ಷದ ಮಹಿಳೆಯರನ್ನೇ ಹೆಚ್ಚು ಆಕರ್ಷಕ ಎಂದು ನೋಡುತ್ತಾರೆ.

ಇದು ಮನಸ್ಸಿನ ಆಟ. ಮನಶ್ಶಾಸ್ತ್ರಜ್ಞ ಕಾರ್ಲ್‌ ಯೂಂಗ್‌ ಅನಿಮಾʼ ಎಂಬ ಪರಿಕಲ್ಪನೆಯನ್ನು ನೀಡುತ್ತಾನೆ. ಪ್ರತಿಯೊಬ್ಬ ಪುರುಷನ ಮನಸ್ಸಿನಲ್ಲಿಯೂ ಒಂದು ಆದರ್ಶ ಮಹಿಳೆಯ ಚಿತ್ರ ಇರುತ್ತೆ. ವಯಸ್ಸಾದಂತೆ, ಕೆಲವರು ಆ ಚಿತ್ರವನ್ನು ನವೀಕರಿಸೋದಿಲ್ಲ. ಆದ್ದರಿಂದ 50 ವರ್ಷದ ವ್ಯಕ್ತಿಯೂ 25 ವರ್ಷದ ಮಹಿಳೆಯಲ್ಲಿ ತನ್ನ ʼಯೌವನʼವನ್ನು ನೋಡುತ್ತಾನೆ.

ಅಮೆರಿಕದ ಸೈಕಾಲಜಿಸ್ಟ್‌ ಡೇನಿಯಲ್‌ ಲೆವಿನ್‌ಸನ್‌ ಪ್ರಕಾರ 40–45ರ ನಡುವೆ ಪುರುಷರಿಗೆ ಮಿಡ್‌ಲೈಫ್‌ ಕ್ರೈಸಿಸ್‌ ಶುರುವಾಗುತ್ತೆ. ಕೆಲವರು ಜಿಮ್‌ಗೆ ಹೋಗುತ್ತಾರೆ, ಕೆಲವರು ಸ್ಪೋರ್ಟ್ಸ್‌ ಕಾರು ತಗೋಬಹುದು. ಇನ್ನು ಕೆಲವರು 28 ವರ್ಷದ ಹುಡುಗಿಯನ್ನು. ಜೆಫ್ರಿ ಮಿಲ್ಲರ್‌ ಹೇಳೋ ಪ್ರಕಾರ ಹಲವು ಮಧ್ಯವಯಸ್ಸಿನ ಪುರುಷರಿಗೆ ಎಳೆಯ ಹೆಣ್ಣು ಸಂಗಾತಿ ಸ್ಟೇಟಸ್‌ ಸಿಂಬಲ್‌ ಅಥವಾ ತನ್ನ ಸ್ಥಾನಮಾನದ ಶೋಆಫ್.‌

ಈ ಸಂಬಂಧಗಳು ಯಶಸ್ವಿಯಾಗುತ್ತವೆಯಾ? ಇಲ್ಲಿ ಸತ್ಯ ಸ್ವಲ್ಪ ಕಠಿಣ. ವಯಸ್ಸಿನ ವ್ಯತ್ಯಾಸ ದೊಡ್ಡದಾಗಿದ್ದರೆ ಹೆಚ್ಚು ವಿಚ್ಛೇದನದ ಸಾಧ್ಯತೆ ಇದೆ. ಪುರುಷರಿಗೆ ಸಂತೋಷ ಹೆಚ್ಚಾಗಬಹುದು. ಮಹಿಳೆಯರಿಗೆ ಸಮಯದೊಂದಿಗೆ ಕಡಿಮೆಯಾಗಬಹುದು. ಅಂದರೆ, ಕಥೆ ಸಿನಿಮಾದಷ್ಟು ಸುಲಭವಲ್ಲ.

ಆದರೆ ಹೊಸ ಟ್ರೆಂಡ್ ಅಂದರೆ “ಟ್ರೋಫಿ ವೈಫ್” ಮಾದರಿ ಕುಸಿತವಾಗುತ್ತಿದೆ. 1980ರಲ್ಲಿ ಶ್ರೀಮಂತರಲ್ಲಿ ಜೋಡಿಯಲ್ಲಿ 10ಕ್ಕಿಂತ ಅಧಿಕ ವರ್ಷ ವ್ಯತ್ಯಾಸ ಸಾಮಾನ್ಯವಾಗಿತ್ತು. 2024ರಲ್ಲಿ ಬಹುತೇಕ ಇದು ಕಡಿಮೆಯಾಗಿದೆ. ಕಾರಣ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಹಾಗೂ ಸ್ವಾತಂತ್ರ್ಯದ ಅರಿವು ಹೆಚ್ಚಾಗಿದೆ. ಇಂದಿನ ಮಹಿಳೆಯರು ತಮ್ಮ ವಯಸ್ಸಿನವರನ್ನೇ ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ. ಅವರ ಆಯ್ಕೆಗಳು ಹೆಚ್ಚಾಗಿವೆ.

ಆದರೆ ಮಹಿಳೆಯರ ನಿಜವಾದ ಆಯ್ಕೆ, ಅವರ ಮನಸ್ಸು ಏನು? ಕೆಲವರು ವಯಸ್ಸಾದ ಪುರುಷರನ್ನು ಆಯ್ಕೆ ಮಾಡುತ್ತಾರೆ. ಅದಕ್ಕೆ ಕಾರಣ ಬದುಕಿನಲ್ಲಿ ಸ್ಥಿರತೆ, ಅನುಭವ, ಆತ್ಮವಿಶ್ವಾಸ. ಆದರೆ ಒಟ್ಟಾರೆ ಟ್ರೆಂಡ್ ಸ್ಪಷ್ಟ- ಆಯ್ಕೆಗಳು ಹೆಚ್ಚಾದಂತೆ, ವಯಸ್ಸಿನ ವ್ಯತ್ಯಾಸ ಕಡಿಮೆಯಾಗುತ್ತಿದೆ.

ಮತ್ತೆ ಬೆಂಗಳೂರಿನ ಘಟನೆಗೆ ಬರುವುದಾದರೆ, ಆ ಪ್ರೊಫೆಸರ್‌ಗೆ ಖಾಸಗಿ ಜೆಟ್ ಇಲ್ಲ. ಹಾಲಿವುಡ್ ಖ್ಯಾತಿಯೂ ಇಲ್ಲ. ಆದರೂ ಅವನ ಯೋಚನೆ ಇದೇ. ನಾನು ಹೇಳಿದರೆ ಹುಡುಗಿ ಓಡೋಡಿ ಬರುತ್ತಾಳೆ ಎಂಬ ಹುಂಬತನ. ಆದರೆ ವಿದ್ಯಾರ್ಥಿನಿ ಮತ್ತು ಅವಳ ತರಗತಿ ನಮ್ಮ ಆಯ್ಕೆ ನಮ್ಮದು ಎಂಬ ಸ್ಪಷ್ಟ ಅರಿವಿತ್ತು. ಹೀಗಾಗಿ ಅವರು ತಕ್ಷಣ ಪ್ರತಿಕ್ರಿಯಿಸಿದರು. ಮಹಿಳೆ ತನ್ನ ಶಕ್ತಿ, ಆಯ್ಕೆ ಮತ್ತು ಗೌರವದ ಬಗ್ಗೆ ಇಂದು ಖಚಿತವಾಗಿದ್ದಾಳೆ ಎಂಬುದನ್ನು ಇದು ತೋರಿಸಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

18ನೇ ವರ್ಷಕ್ಕೆ ಕಾಲಿಟ್ಟ ಗೋಲ್ಡನ್​ ಸ್ಟಾರ್​ ಪುತ್ರಿ ಚಾರಿತ್ರ್ಯ: ಬರ್ತ್​ಡೇ ಕ್ಯೂಟ್​ ಫೋಟೋಸ್​ ಇಲ್ಲಿವೆ
ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗುಡುಗಿದ ಸನೋಜ್ ಮಿಶ್ರಾ; ರುದ್ರಾಕ್ಷಿ ಹುಡುಗಿ ಕಥೆ ಏನಾಗ್ತಿದೆ?