
ಮಕ್ಕಳು ದೊಡ್ಡವರಾಗ್ತಿದ್ದಂತೆ ಪಾಲಕರ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಮಕ್ಕಳು ಸಮಯಕ್ಕೆ ಮೊದಲೇ ದೊಡ್ಡವರಾದ್ರೆ ಎಂಬ ಭಯ ಪಾಲಕರನ್ನು ಕಾಡ್ತಿರುತ್ತದೆ. ಇದಕ್ಕೆ ಆರಂಭಿಕ ಪ್ರೌಢಾವಸ್ಥೆ ಎಂದು ಕರೆಯಲಾಗುತ್ತದೆ. ಹುಡುಗ ಇರಲಿ ಇಲ್ಲ ಹುಡುಗಿ ಇರಲಿ ಪ್ರೌಢಾವಸ್ಥೆ ಸಮಯದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಸಾಮಾನ್ಯವಾಗಿ ಹುಡುಗಿಯರಿಗೆ 8ರಿಂದ 13 ವರ್ಷ ವಯಸ್ಸಿನಲ್ಲಿ ಹಾಗೂ ಹುಡುಗರಿಗೆ 9ರಿಂದ 14 ವರ್ಷ ವಯಸ್ಸಿನಲ್ಲಿ ಪ್ರೌಢಾವಸ್ಥೆ ಶುರುವಾಗುತ್ತದೆ. ಕೆಲ ಮಕ್ಕಳಿಗೆ ಈ ಸಮಯಕ್ಕಿಂತ ಮೊದಲೇ ಪ್ರೌಢಾವಸ್ಥೆ ಶುರುವಾಗುತ್ತದೆ. ಇದನ್ನು ಅಕಾಲಿಕ ಪ್ರೌಢಾವಸ್ಥೆ ಅಥವಾ ಆರಂಭಿಕ ಪ್ರೌಢಾವಸ್ಥೆ ಎಂದು ಕರೆಯಲಾಗುತ್ತದೆ. ಆರಂಭಿಕ ಪ್ರೌಢಾವಸ್ಥೆ ಲಕ್ಷಣ ಕಂಡು ಹಿಡಿಯುವುದು ಸುಲಭವಲ್ಲ. ಇಂದು ನಾವು ಆರಂಭಿಕ ಪ್ರೌಢಾವಸ್ಥೆ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ. 8ನೇ ವಯಸ್ಸಿಗಿಂತ ಮೊದಲೇ ನಿಮ್ಮ ಮಕ್ಕಳು ಪ್ರೌಢಾವಸ್ಥೆಗೆ ಕಾಲಿಟ್ಟಿದ್ದಾರೆ ಎಂಬುದನ್ನು ಕೆಲ ಲಕ್ಷಣಗಳಿಂದ ತಿಳಿದುಕೊಳ್ಳಬಹುದು.
ಆರಂಭಿಕ ಪ್ರೌಢಾವಸ್ಥೆಯ ಲಕ್ಷಣಗಳು :
ಆರಂಭಿಕ ಪ್ರೌಢಾವಸ್ಥೆ (Puberty) ಅಥವಾ ಅಕಾಲಿಕ ಪ್ರೌಢಾವಸ್ಥೆ ಲಕ್ಷಣ ಒಂದೇ ರೀತಿಯಲ್ಲಿ ಇರುತ್ತದೆ. ಆದ್ರೆ ಆರಂಭದ ಸಮಯದಲ್ಲಿ ಮಾತ್ರ ಬದಲಾವಣೆ ಇರುತ್ತದೆ. ಆದ್ರೆ ಹುಡುಗ (Boy) ರು ಹಾಗೂ ಹುಡುಗಿ (Girl) ಯರಲ್ಲಿ ಇದ್ರ ಲಕ್ಷಣ ಭಿನ್ನವಾಗಿರುತ್ತದೆ.
ಹುಡುಗಿಯರಲ್ಲಿ ಕಾಣಿಸಿಕೊಳ್ಳುವ ಆರಂಭಿಕ ಪ್ರೌಢಾವಸ್ಥೆಯ ಲಕ್ಷಣ (Symptom) :
ಸಾಮಾನ್ಯವಾಗಿ ಹುಡುಗಿಯರ ಸ್ತನದ ಗಾತ್ರ ಹೆಚ್ಚಾಗುವುದು ಹಾಗೂ ಸಮಯಕ್ಕೆ ಮೊದಲೇ ಮುಟ್ಟು ಕಾಣಿಸಿಕೊಳ್ಳುವುದನ್ನು ಆರಂಭಿಕ ಪ್ರೌಢಾವಸ್ಥೆ ಎನ್ನಬಹುದು.
ಇದನ್ನೂ ಓದಿ: ನಿಮ್ಮದು ಹೆಲಿಕಾಪ್ಟರ್ ಪೇರೆಂಟಿಂಗಾ? ಚೆಕ್ ಮಾಡಿ!
ಹುಡುಗರಲ್ಲಿ ಕಾಣಿಸಿಕೊಳ್ಳುವ ಪ್ರೌಢಾವಸ್ಥೆಯ ಲಕ್ಷಣ :
ಟೆಸ್ಟಿಸ್, ಪೆನಿಸ್ ಹಾಗೂ ಸ್ಕ್ರೋಟಮ್ ಬೆಳೆಯಲು ಪ್ರಾರಂಭವಾಗುತ್ತದೆ. ಅಲ್ಲದೆ ಹುಡುಗರ ಧ್ವನಿಯಲ್ಲಿ ಬದಲಾವಣೆ ಕಾಣಬಹುದು. ಕೆಲವೊಮ್ಮೆ ಹುಡುಗರ ಧ್ವನಿ ಬದಲಾವಣೆ ತಡವಾಗಿ ಕಾಣಿಸಿಕೊಳ್ಳುವುದಿದೆ.
ಖಾಸಗಿ ಭಾಗದಲ್ಲಿ ಕೂದಲಿನ ತ್ವರಿತ ಬೆಳವಣಿಗೆ, ಮೊಡವೆ, ದೇಹದ ವಾಸನೆ ಹುಡುಗರು ಮತ್ತು ಹುಡುಗಿಯರಲ್ಲಿ ಕಂಡುಬರುವ ಆರಂಭಿಕ ಪ್ರೌಢಾವಸ್ಥೆಯ ಲಕ್ಷಣಗಳಲ್ಲಿ ಒಂದಾಗಿದೆ. ಇದು ಇಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ.
ಅಕಾಲಿ ಪ್ರೌಢಾವಸ್ಥೆಗೆ ಕಾರಣ : ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹೆಚ್ಚುವುದು ಕಷ್ಟವಾಗುತ್ತದೆ. ಅನೇಕ ಬಾರಿ ಕೆಲ ರೋಗಗಳಿಂದಾಗಿ ಅಕಾಲಿಕ ಪ್ರೌಢಾವಸ್ಥೆ ಕಾಣಿಸಿಕೊಳ್ಳುತ್ತದೆ.
ಆರಂಭಿಕ ಪ್ರೌಢಾವಸ್ಥೆಯ ಅಪಾಯದ ಅಂಶಗಳು :
ಲಿಂಗ : ಹುಡುಗರಿಗೆ ಹೋಲಿಸಿದ್ರೆ ಹುಡುಗಿಯರಿಗೆ ಆರಂಭಿಕ ಪ್ರೌಢಾವಸ್ಥೆ ಶೇಕಡಾ 10ರಷ್ಟು ಹೆಚ್ಚಿರುತ್ತದೆ.
ಆನುವಂಶಿಕತೆ : ಕೆಲವೊಮ್ಮೆ ಲೈಂಗಿಕ ಹಾರ್ಮೋನುಗಳ ಬಿಡುಗಡೆಯನ್ನು ಪ್ರಚೋದಿಸುವ ಆನುವಂಶಿಕ ರೂಪಾಂತರಗಳು ಆರಂಭಿಕ ಪ್ರೌಢಾವಸ್ಥೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ಈ ಮಕ್ಕಳ ಹೆತ್ತವರು ಅಥವಾ ಒಡಹುಟ್ಟಿದವರೂ ಸಹ ಈ ರೀತಿಯ ಆನುವಂಶಿಕ ಸಮಸ್ಯೆಯನ್ನು ಹೊಂದಿರುತ್ತಾರೆ.
ಜನಾಂಗೀಯತೆ : ಬಿಳಿಯ ಹುಡುಗಿಯರಿಗಿಂತ ಆಫ್ರಿಕನ್ ಅಮೇರಿಕನ್ ಹುಡುಗಿಯರಲ್ಲಿ ಪ್ರೌಢಾವಸ್ಥೆಯು ಒಂದು ವರ್ಷ ಮುಂಚಿತವಾಗಿ ಪ್ರಾರಂಭವಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಸ್ಥೂಲಕಾಯ : ಹುಡುಗಿಯರಲ್ಲಿ ಆರಂಭಿಕ ಪ್ರೌಢಾವಸ್ಥೆಗೆ ಸ್ಥೂಲಕಾಯತೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಅನೇಕ ಅಧ್ಯಯನಗಳಲ್ಲಿ ಬಹಿರಂಗಪಡಿಸಲಾಗಿದೆ. ಆದರೆ ಹುಡುಗರ ವಿಷಯದಲ್ಲಿ ಹಾಗಲ್ಲ. ಸಂಶೋಧಕರು ಈ ಬಗ್ಗೆ ಸಂಪೂರ್ಣವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಆರಂಭಿಕ ಪ್ರೌಢಾವಸ್ಥೆಗೆ ಚಿಕಿತ್ಸೆ : ನಿಮ್ಮ ಮಕ್ಕಳು ಆರಂಭಿಕ ಪ್ರೌಢಾವಸ್ಥೆಗೆ ಒಳಗಾಗಿದ್ದರೆ ನೀವು ವೈದ್ಯರ ಬಳಿ ಹೋದಾಗ ನಿಮ್ಮ ಬಳಿ ವೈದ್ಯರು ಕೆಲವೊಂದು ವಿಷ್ಯಗಳನ್ನು ಕೇಳ್ತಾರೆ. ಮಕ್ಕಳ ವೈದ್ಯಕೀಯ ವರದಿಯನ್ನು ಕೇಳಬಹುದು. ಮಗುವಿನ ದೇಹವನ್ನು ಪರೀಕ್ಷಿಸಬಹುದು. ಮಕ್ಕಳ ಹಾರ್ಮೋನ್ ಮಟ್ಟವನ್ನು ಪರೀಕ್ಷಿಸಲು ರಕ್ತ ಪರೀಕ್ಷೆಗೆ ಸಲಹೆ ನೀಡಬಹುದು.
ಆರಂಭಿಕ ಪ್ರೌಢಾವಸ್ಥೆಯಲ್ಲಿ ಬರುತ್ತವೆ ಈ ಸಮಸ್ಯೆಗಳು : ಆರಂಭಿಕ ಪ್ರೌಢಾವಸ್ಥೆಯಿಂದ ಮಕ್ಕಳು ಅನೇಕ ಮಾನಸಿಕ ಹಾಗೂ ದೈಹಿಕ ಸಮಸ್ಯೆಯನ್ನು ಎದುರಿಸುತ್ತಾರೆ. ಆರಂಭಿಕ ಪ್ರೌಢಾವಸ್ಥೆ ನಾರ್ಮಲ್ ಪ್ರೌಢಾವಸ್ಥೆಗಿಂತ ಬೇಗ ಶುರುವಾಗುತ್ತದೆ. ಪ್ರೌಢಾವಸ್ಥೆಯ ಕೊನೆಯಲ್ಲಿ, ಮಗುವಿನ ಬೆಳವಣಿಗೆಯೂ ನಿಲ್ಲುತ್ತದೆ. ಇದ್ರಿಂದ ಎತ್ತರ ಬೆಳೆಯಲು ಸಾಧ್ಯವಾಗುವುದಿಲ್ಲ. ಮಕ್ಕಳ ಹೈಟ್ ಕಡಿಮೆಯಾಗುತ್ತದೆ. ಇದಲ್ಲದೆ ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗುತ್ತದೆ. ಅವರು ಹೆಚ್ಚು ಕಿರಿಕಿರಿಗೊಳಗಾಗ್ತಾರೆ. ಲೈಂಗಿಕ ಚಟುವಟಿಕೆಗಳನ್ನು ಮಕ್ಕಳು ಬೇಗ ಶುರು ಮಾಡುವ ಅಪಾಯವಿರುತ್ತದೆ. ಇದಲ್ಲದೆ ಮಕ್ಕಳಲ್ಲಿ ಒತ್ತಡ ಹೆಚ್ಚಾಗುತ್ತದೆ.
ಇದನ್ನೂ ಓದಿ: Child Care : ಮಕ್ಕಳ ಪಾದ ನೋವಿಗೆ ಇಲ್ಲಿದೆ ಮದ್ದು
ಮಕ್ಕಳಲ್ಲಿ ಆರಂಭಿಕ ಪ್ರೌಢಾವಸ್ಥೆಯ ಯಾವುದೇ ಲಕ್ಷಣ ಕಂಡು ಬಂದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಅದು ದೊಡ್ಡ ಖಾಯಿಲೆಯಲ್ಲ. ಮಕ್ಕಳಿಗೆ ನೆರವಾಗುವುದು ಕೂಡ ಮುಖ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.