ಪೋಸ್ಟಿಂಗ್ ಜೀರೋ: ಜೆನ್‌ ಝೀ ಯುವಕ ಯುವತಿಯರ ಅಜ್ಞಾತ ಲೋಕ

Published : Mar 30, 2026, 07:21 PM IST
gen z

ಸಾರಾಂಶ

ಇಂದಿನ ಜೆನ್‌ ಝೀ (gen z) ಯುವಜನತೆ 'ಪೋಸ್ಟಿಂಗ್ ಜೀರೋ' ಎಂಬ ಹೊಸ ಟ್ರೆಂಡ್ ಅಳವಡಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕವಾಗಿ ಎಲ್ಲವನ್ನೂ ಹಂಚಿಕೊಳ್ಳುವ ಒತ್ತಡದಿಂದ ದೂರ ಸರಿದು, ಆನ್‌ಲೈನ್‌ನಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಾ, ನಿಜ ಜೀವನದ ಅನುಭವಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. 

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ. ಆದರೆ ಇದೇ ಸಮಯದಲ್ಲಿ ಕರ್ನಾಟಕದಲ್ಲಿ 16 ವರ್ಷಕ್ಕಿಂತ ಕೆಳಗಿನವರಿಗೆ ಸೋಶಿಯಲ್‌ ಮೀಡಿಯಾ ಬ್ಯಾನ್‌ ಮಾಡಲಾಗಿದೆ. ಫ್ರಾನ್ಸ್‌, ಇಟಲಿ, ಚೀನಾ, ಆಸ್ಟ್ರೇಲಿಯಾ ಮೊದಲಾದ ದೇಶಗಳು ಯುವ ತಲೆಮಾರಿನ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಜೆನ್‌ ಝೀ (Gen Z) ಮಾತ್ರ ತನ್ನದೇ ರೀತಿಯಲ್ಲಿ ಒಂದು ಹೊಸ ಸಂಸ್ಕೃತಿಯನ್ನು ರೂಪಿಸುತ್ತಿದೆ.

ಅದು ‘ಪೋಸ್ಟಿಂಗ್ ಜೀರೋ’ (Posting Zero) ಎಂಬ ಹೊಸ ಟ್ರೆಂಡ್‌. ಮೊದಲಿಗೆ ಇದು ಸಾಮಾನ್ಯ ಇಂಟರ್ನೆಟ್ ಫ್ಯಾಡ್‌ ಎಂದು ಕಂಡರೂ, ಇದರ ಹಿಂದೆ ಒಂದು ಆಳವಾದ ಮನೋಭಾವದ ಬದಲಾವಣೆ ಅಡಗಿದೆ. ಇಂದಿನ ಯುವಜನತೆ “ಎಲ್ಲವನ್ನೂ ಹಂಚಿಕೊಳ್ಳಬೇಕು” ಎಂಬ ಒತ್ತಡದಿಂದ ದೂರ ಸರಿಯುತ್ತಿದೆ. ʼಹೊರಗಿನವರಿಗೆ ಶೋ ಮಾಡದಿರುವುದೇ ಕೂಲ್‌” ಎಂಬ ಹೊಸ ವ್ಯಾಖ್ಯಾನವನ್ನು ರೂಪಿಸುತ್ತಿದೆ.

ಐರ್ಲೆಂಡ್‌ನಲ್ಲಿ ವಾಸವಾಗಿರುವ ಸಂಕೇತ್ ಮಿಸ್ಟ್ರಿ (27) ಈ ಬದಲಾವಣೆಯ ಒಂದು ಉದಾಹರಣೆ. ಹಿಂದೆ ಆತ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯನಾಗಿದ್ದ. ಆದರೆ ಈಗ ಮೂರು ತಿಂಗಳಿಗೆ ಒಮ್ಮೆ ಮಾತ್ರ ಏನಾದರೂ ಪೋಸ್ಟ್ ಮಾಡುತ್ತಾನೆ. ʼಈಗ ನನಗೆ ಪೋಸ್ಟ್ ಮಾಡುವುದು ಬೋರ್ ಆಗಿದೆ. ಸ್ವಲ್ಪ ದೂರ ಉಳಿಯಲು ಇಷ್ಟವಾಗುತ್ತಿದೆʼ ಎನ್ನುತ್ತಾನೆ. ಅವನಲ್ಲಿ ಯಾವುದೇ ಒತ್ತಡವಿಲ್ಲ. ಇದು ನನ್ನ ಅಕೌಂಟ್‌, ನಾನು ಏಕೆ ಒತ್ತಡಕ್ಕೆ ಒಳಗಾಗಬೇಕು? ಯಾರೂ ನನ್ನ ಪೋಸ್ಟ್‌ಗಾಗಿ ಕಾಯುತ್ತಿಲ್ಲವಲ್ಲ ಎಂಬುದು ಅವನ ಸ್ಪಷ್ಟ ಅಭಿಪ್ರಾಯ.

ಈ ದೂರ ಉಳಿಯುವಿಕೆಯೇ ಅವನ ಜೀವನದಲ್ಲಿ ಹೊಸ ಅವಕಾಶಗಳನ್ನು ತೆರೆದಿದೆ. ಪುಸ್ತಕ ಓದುವುದು, ಸಿನಿಮಾಗಳನ್ನು ನೋಡುವುದು- ಇಂತಹ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಸಮಯ ಸಿಗುತ್ತಿದೆ. ಇಂದಿನ ‘ಎಲ್ಲ ಸಮಯವೂ ಕಾಣಿಸಿಕೊಳ್ಳಬೇಕು’ ಎಂಬ ಮನೋಭಾವದ ನಡುವೆಯೇ, ಕೆಲವರಿಗೆ ಆಫ್‌ಲೈನ್ ಬದುಕು ಒಂದು ವಿಶೇಷ ಲಕ್ಸುರಿಯಾಗಿ ಪರಿಣಮಿಸುತ್ತಿದೆ.

ಮನೋವೈದ್ಯರು ಮತ್ತು ಸಂಬಂಧ ತಜ್ಞರು ಹೇಳುವಂತೆ, ಇದು ʼಡಿಜಿಟಲ್ ಡಿಟಾಕ್ಸ್‌ʼ ಅಲ್ಲ. ಇಂದಿನ Gen Z ಸಂಪೂರ್ಣವಾಗಿ ಸಾಮಾಜಿಕ ಜಾಲತಾಣವನ್ನು ತ್ಯಜಿಸುತ್ತಿಲ್ಲ. ಅವರು ಅದನ್ನು ಬಳಸುವ ವಿಧಾನವನ್ನು ಮಾತ್ರ ಬದಲಿಸುತ್ತಿದ್ದಾರೆ. ಹೆಚ್ಚು ಪೋಸ್ಟ್ ಮಾಡುವುದನ್ನು ಬಿಟ್ಟು, ಅವರು ಕಡಿಮೆ ಗೋಚರತೆಯನ್ನು ಆಯ್ಕೆ ಮಾಡುತ್ತಿದ್ದಾರೆ. ಅವರು ಆನ್‌ಲೈನ್‌ನಲ್ಲಿದ್ದಾರೆ. ಆದರೆ ಎಲ್ಲರಿಗೂ ಕಾಣುವಂತೆ ಅಲ್ಲ.

ಇನ್ನೊಂದು ಪ್ರಮುಖ ಬದಲಾವಣೆ ಎಂದರೆ, Gen Z ಈಗ ʼಪರ್ಸನಲ್ ಬ್ರಾಂಡಿಂಗ್‌ʼ ಅನ್ನು ಒಂದು ಕೆಲಸದಂತೆ ನೋಡಲು ಶುರುಮಾಡಿದೆ. ಇದು ದಣಿವನ್ನುಂಟುಮಾಡುವ, ಪ್ರತಿಫಲವಿಲ್ಲದ ಎರಡನೇ ಕೆಲಸದಂತಾಗಿದೆ ಎಂಬ ಅರಿವು ಅವರಿಗೆ ಬಂದಿದೆ. ಹೀಗಾಗಿ ಅವರು ‘ಲೈಕ್ಸ್‌’ ಮತ್ತು ‘ವ್ಯಾಲಿಡೇಶನ್‌’ಗಿಂತ ಸ್ವಾತಂತ್ರ್ಯ ಮತ್ತು ಸ್ವಯಂಸಂತೃಪ್ತಿಗೆ ಹೆಚ್ಚು ಮೌಲ್ಯ ಕೊಡುತ್ತಿದ್ದಾರೆ. ʼಸೂರ್ಯಾಸ್ತವನ್ನು ಪೋಸ್ಟ್ ಮಾಡದಿದ್ದರೆ, ಅದನ್ನು ನಿಜವಾಗಿ ನೋಡಲು ಸಾಧ್ಯವಾಗುತ್ತದೆʼ ಎಂಬ ಅವರ ಮನೋಭಾವವೇ ಈ ಬದಲಾವಣೆಯ ಸಾರಾಂಶ.

ಹೊಸ ಅನುಭವಗಳತ್ತ ತುಡಿತ

ಇದರಿಂದ ಅವರ ಜೀವನವೇ ನಿಷ್ಕ್ರಿಯವಾಗಿದೆ ಎಂದೇನಿಲ್ಲ. ಬದಲಾಗಿ ಅವರು ಹೊಸ ರೀತಿಯ ಅನುಭವಗಳನ್ನು ಹುಡುಕುತ್ತಿದ್ದಾರೆ. ಪಾಟರಿ ವರ್ಕ್‌ಶಾಪ್‌ಗಳು, ಸಿಪ್-ಅಂಡ್-ಪೇಂಟ್ ಕಾರ್ಯಕ್ರಮಗಳು, ಭಜನಾ ಸಂಘಗಳು, ಬೋರ್ಡ್ ಗೇಮ್ ಕ್ಯಾಫೆಗಳು, ಉದ್ಯಾನವನಗಳು, ಗ್ರಂಥಾಲಯಗಳು… ಇತ್ಯಾದಿ. ಇದೆಲ್ಲ ‘ಕಂಟೆಂಟ್‌’ಗಾಗಿ ಅಲ್ಲ, ‘ಅನುಭವ’ಕ್ಕಾಗಿ ಇರುವ ಸ್ಥಳಗಳು.

ಆನ್‌ಲೈನ್‌ನಲ್ಲಿಯೂ ಅವರು ಸಂಪೂರ್ಣವಾಗಿ ಕಾಣೆಯಾಗಿಲ್ಲ. ಸಾರ್ವಜನಿಕ ಪೋಸ್ಟ್‌ಗಳ ಬದಲು ಖಾಸಗಿ ಸಂದೇಶಗಳು, ಚರ್ಚಾ ವೇದಿಕೆಗಳು, ಆಯ್ದ ಚಾಟ್‌ಗಳು- ಇವುಗಳ ಮೂಲಕ ಅವರು ಸಂಪರ್ಕದಲ್ಲಿದ್ದಾರೆ. ʼಆನ್‌ಲೈನ್‌ನಲ್ಲಿ ಕಡಿಮೆ ಇರುವುದರಿಂದ ಜೀವನ ನಿಸ್ಸಾರವಾಗುತ್ತದೆ ಎನ್ನುವುದು ತಪ್ಪು. ಕೇವಲ ಪ್ರದರ್ಶನ ಬೇಡ, ಗಾಢತೆ ಬೇಕುʼ ಎಂಬುದಷ್ಟೇ ಅವರ ನಿಲುವು.

ಇಂದು 24/7 ಎಲ್ಲರೂ ಲಭ್ಯವಿರುವ ಜಗತ್ತಿನಲ್ಲಿ, ಲಭ್ಯವಿಲ್ಲದವನೇ ಹೆಚ್ಚು ಮೌಲ್ಯ ಹೊಂದಿದ್ದಾನೆ ಎಂಬ ಭಾವನೆ ಬೆಳೆಯುತ್ತಿದೆ. “ನನ್ನ ಜೀವನವನ್ನು ಸಾಬೀತುಪಡಿಸಲು ನನಗೆ ಪೋಸ್ಟ್ ಮಾಡುವ ಅಗತ್ಯವಿಲ್ಲ” ಎಂಬ ಸಂದೇಶವೇ ಈ ಹೊಸ ಟ್ರೆಂಡ್‌ನ ಹೃದಯವಾಗಿದೆ. ಒಮ್ಮೆ “ನೋಡಿ, ನನ್ನ ಜೀವನ ಹೇಗಿದೆ” ಎಂಬುದೇ ಸಾಮಾಜಿಕ ಜಾಲತಾಣದ ಮೂಲ ಉದ್ದೇಶವಾಗಿದ್ದರೆ, ಈಗ ಅದು “ನನ್ನ ಜೀವನವನ್ನು ನಾನು ಬದುಕುತ್ತೇನೆ” ಎಂಬುದಾಗಿ ಬದಲಾಗಿದೆ. ಕಡಿಮೆ ಪೋಸ್ಟ್‌ ಮಾಡುವುದು, ಕಡಿಮೆ ಕಾಣಿಸಿಕೊಳ್ಳುವುದು- ಇವುಗಳೇ ಈಗ ಹೆಚ್ಚು ಮೌಲ್ಯ ಹೊಂದಿರುವ ಗುಣಗಳಾಗಿ ಪರಿಣಮಿಸುತ್ತಿವೆ.

ಜೀವನವನ್ನು ಪ್ರದರ್ಶಿಸುವುದಕ್ಕಿಂತ, ಅದನ್ನು ಅನುಭವಿಸುವುದೇ ಮುಖ್ಯ ಎಂಬುದನ್ನು ನಮ್ಮ ನಂತರದ ತಲೆಮಾರೇ ನಮಗೆ ಹೇಳುತ್ತಿದೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈ ಅಭಿಮಾನಿಯಿಂದ ಕೆಕೆಆರ್ ಗೆಳತಿಗೆ ಪ್ರಪೋಸ್ ಮುನ್ನ ಕಳೆದೊಯ್ತು ರಿಂಗ್, ಮುಂದೇನಾಯ್ತು?
ಮೊದಲ ಕ್ರಶ್ ಹುಡುಗಿಗೆ ಈಗ ರಿಯಾಕ್ಟ್ ಮಾಡಿದ ವಿಜಯ್ ದೇವರಕೊಂಡ; 2014 ರಲ್ಲಿ ಏನಾಗಿತ್ತು? ಗುಟ್ಟು ರಟ್ಟಾಯ್ತು!