ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣ ನೀಡಬೇಕು? ಇಲ್ಲಿದೆ ನೋಡಿ ಮಾಹಿತಿ

By Suvarna NewsFirst Published May 23, 2021, 5:50 PM IST
Highlights

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಲೈಂಗಿಕ ಪಾಠ ಪ್ರಾರಂಭಿಸಬೇಕು ಎಂಬ ಗೊಂದಲ ಬಹುತೇಕ ಪಾಲಕರನ್ನು ಕಾಡುತ್ತೆ. ತಜ್ಞರ ಪ್ರಕಾರ ಪುಟ್ಟ ಮಗುವಿರೋವಾಗಲೇ ಅವರ ವಯಸ್ಸಿಗೆ ತಕ್ಕಂತೆ ಲೈಂಗಿಕ ಶಿಕ್ಷಣ ನೀಡಬೇಕು.

ಲೈಂಗಿಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡೋ ವಾತಾವರಣ ಭಾರತದಲ್ಲಿಇನ್ನೂ ಸೃಷ್ಟಿಯಾಗಿಲ್ಲ.ಇದೇ ಕಾರಣಕ್ಕೆ ಪಾಲಕರು ಕೂಡ ಲೈಂಗಿಕತೆ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ.ಆದ್ರೆ ಮಕ್ಕಳಿಗೆ ಸರಿಯಾದ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣ ನೀಡೋದು ಅಗತ್ಯ.ಏಕೆಂದ್ರೆ ನಿಗದಿತ ವಯಸ್ಸಿಗೆ ಬಂದ ಬಳಿಕ ಮಕ್ಕಳು ತಮ್ಮ ದೇಹದಲ್ಲಾಗುತ್ತಿರೋ ಬದಲಾವಣೆಗಳ ಬಗ್ಗೆ ಕುತೂಹಲ ಹೊಂದಿರುತ್ತಾರೆ ಮತ್ತು ಆ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಹೀಗಾಗಿ ಸೆಕ್ಸ್‌ಗೆ ಸಂಬಂಧಿಸಿ ಮಕ್ಕಳಿಗೆ ನಿರ್ದಿಷ್ಟ ವಯಸ್ಸಿನಲ್ಲಿ ನಿಗದಿತ ಮಾಹಿತಿ ನೀಡೋದು ಪಾಲಕರ ಜವಾಬ್ದಾರಿ.

ಪಾಲಕರು ಸರಿಯಾದ ಮಾಹಿತಿ ಒದಗಿಸದಿದ್ರೆ ಮಕ್ಕಳು ಸೆಕ್ಸ್‌ ಕುರಿತ ಕುತೂಹಲ ತಣಿಸಿಕೊಳ್ಳಲು ಇಂಟರ್ನೆಟ್‌ ಸೇರಿದಂತೆ ಬೇರೆ ಮೂಲಗಳಲ್ಲಿ ಹುಡುಕಾಟ ನಡೆಸುತ್ತಾರೆ. ಇವು ಅವರ ಮೇಲೆ ನಕಾರಾತ್ಮಕ ಪ್ರಭಾವ ಬೀರೋ ಸಾಧ್ಯತೆಯೂ ಇರುತ್ತದೆ.ಪ್ರತಿ ಮಗುವೂ ಭಿನ್ನವಾಗಿರೋ ಕಾರಣ ಈ ವಿಷಯದಲ್ಲೂ ಎಲ್ಲ ಮಕ್ಕಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗೋದು ಖಂಡಿತಾ ತಪ್ಪಾಗುತ್ತೆ.ಆದ್ರೂ ಮಕ್ಕಳ ವಯಸ್ಸಿಗನುಗುಣವಾಗಿ ಸೆಕ್ಸ್ ಕುರಿತು ಒಂದಿಷ್ಟು ತಿಳಿವಳಿಕೆ ಮೂಡಿಸುತ್ತ ಹೋಗೋದು ಒಳ್ಳೆಯದು.

ಡೇಟಿಂಗ್‌ ಟಿಪ್ಸ್: ಮೊದಲ ಭೇಟಿ ಮಧುರವಾಗಿಸಲು ಹಿಂಗ್‌ ಮಾಡಿ

ಯಾವಾಗ ಲೈಂಗಿಕ ಪಾಠ ಪ್ರಾರಂಭಿಸಬೇಕು?
ಇದು ಬಹುತೇಕ ಪಾಲಕರನ್ನುಕಾಡೋ ಪ್ರಶ್ನೆ. ತಜ್ಞರ ಪ್ರಕಾರ ಮಕ್ಕಳಿಗೆ ಒಂದು ವರ್ಷವಾದ ಕೂಡಲೇ ಅಥವಾ ಅವರು ತಮ್ಮ ಶರೀರದ ಅಂಗಗಳನ್ನು ಗುರುತಿಸಲು ಪ್ರಾರಂಭಿಸಿದ ತಕ್ಷಣ ಅವರಿಗೆ ಜನನಾಂಗಗಳ ಪರಿಚಯ ಮಾಡಿಸಬೇಕು. 13-24 ತಿಂಗಳ ಮಗುವಿಗೆ ದೇಹದ ವಿವಿಧ ಭಾಗಗಳ ಸರಿಯಾದ ಹೆಸರನ್ನು ಹೇಳಿ ಕೊಡಬೇಕು. ಈ ರೀತಿ ಸರಿಯಾದ ಹೆಸರನ್ನು ಕಲಿಸೋದ್ರಿಂದ ಆರೋಗ್ಯ ಸಮಸ್ಯೆಗಳು, ನೋವು ಅಥವಾ ಲೈಂಗಿಕ ಕಿರುಕುಳಕ್ಕೊಳಗಾದ ಸಂದರ್ಭದಲ್ಲಿ ಮಗುವಿಗೆ ಪಾಲಕರೊಂದಿಗೆ ಸಮರ್ಪಕವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತೆ. 

ಪೂರ್ವ ಪ್ರಾಥಮಿಕ ಹಂತದ ಮಕ್ಕಳು (2-4 ವರ್ಷ)
ಮಗುವಿನ ಅರ್ಥೈಸಿಕೊಳ್ಳೋ ಸಾಮರ್ಥ್ಯ ಹಾಗೂ ಆಸಕ್ತಿಗೆ ಅನುಗುಣವಾಗಿ ಅವರು ಹೇಗೆ ಜನ್ಮ ತಾಳಿದ್ರು ಎಂಬ ಬಗ್ಗೆ ಅವರಿಗೆ ಅರ್ಥವಾಗೋ ಭಾಷೆಯಲ್ಲಿ ತಿಳಿಸಬಹುದು. ಈ ವಯಸ್ಸಿನ ಬಹುತೇಕ ಮಕ್ಕಳಿಗೆ ಗರ್ಭಿಣಿಯರನ್ನು ಕಂಡಾಗ ಅಥವಾ ಚಿಕ್ಕ ಮಗುವನ್ನು ನೋಡಿದಾಗ ಒಂದಿಷ್ಟು ಕುತೂಹಲದ ಜೊತೆಗೆ ಕೆಲವು ಪ್ರಶ್ನೆಗಳು ಹುಟ್ಟೋದು ಸಹಜ. ಅವರ ಇಂಥ ಪ್ರಶ್ನೆಗಳಿಗೆ ಪಾಲಕರು ಅಥವಾ ಮನೆಯ ಹಿರಿಯರು ಹಾರಿಕೆಯ ಉತ್ತರ ನೀಡೋ ಬದಲು ಅವರಿಗೆ ಅರ್ಥವಾಗೋ ಭಾಷೆಯಲ್ಲಿ ವಿವರಿಸಲು ಪ್ರಯತ್ನಿಸಿ. ಗರ್ಭಿಣಿ ಹೊಟ್ಟೆಯಲ್ಲಿ ಪುಟ್ಟ ಮಗುವಿರುತ್ತೆ ಎಂಬುದನ್ನು ಅವರಿಗೆ ತಿಳಿಸೋದ್ರಿಂದ ತಾನು ಕೂಡ ಅಮ್ಮನ ಹೊಟ್ಟೆಯಲ್ಲಿದ್ದೆ ಎಂಬ ಸತ್ಯ ತಿಳಿಯುತ್ತೆ.

ಈ ವಿಷಯ ಬಹುತೇಕ ಮಕ್ಕಳಿಗೆ ಖುಷಿ ನೀಡುತ್ತೆ ಕೂಡ. ಇನ್ನು ಈ ವಯಸ್ಸಿನ ಮಕ್ಕಳಿಗೆ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ನೀಡ್ಬಹುದು. ಅಂದ್ರೆ ಅವರ ಅನುಮತಿಯಿಲ್ಲದೆ ಬೇರೆಯವರು ಅವರ ಖಾಸಗಿ ಅಂಗಗಳನ್ನು ಮುಟ್ಟುವಂತಿಲ್ಲ ಎಂಬ ವಿಷಯವನ್ನು ತಿಳಿಸಬೇಕು. ಗುಡ್ ಹಾಗೂ ಬ್ಯಾಡ್‌ ಟಚ್ ನಡುವಿನ ವ್ಯತ್ಯಾಸ ಮನದಟ್ಟು ಮಾಡಿಸಬೇಕು. ಇದ್ರಿಂದ ಮಕ್ಕಳಿಗೆ ಅವರೊಂದಿಗೆ ಯಾರಾದ್ರೂ ಕೆಟ್ಟದ್ದಾಗಿ ನಡೆದುಕೊಂಡ್ರೆ ಪಾಲಕರಿಗೆ ಮಾಹಿತಿ ನೀಡಲು ಸುಲಭವಾಗುತ್ತೆ. 

ಮನೆಯೊಳಗೇ ಕಪಲ್ ಲೈಫ್ ಎಂಜಾಯ್ ಮಾಡೋದೇಗೆ ?

ಪ್ರಾರ್ಥಮಿಕ ಶಾಲಾ ಹಂತ (5-8 ವರ್ಷ)
ಖಾಸಗಿತನ, ನಗ್ನತೆ, ಇನ್ನೊಬ್ಬರ ಖಾಸಗಿತನಕ್ಕೆ ಹೇಗೆ ಗೌರವ ನೀಡಬೇಕು ಎಂಬ ವಿಷಯಗಳನ್ನು ಈ ವಯಸ್ಸಿನ ಮಕ್ಕಳಿಗೆ ತಿಳಿಸೋದು ಅಗತ್ಯ. ಸ್ನಾನ ಮಾಡೋವಾಗ ಬಾಗಿಲು ಹಾಕಿಕೊಳ್ಳೋದು, ಬೇರೆಯವರ ಮುಂದೆ ಡ್ರೆಸ್‌ ಬದಲಾಯಿಸದಿರೋದು ಸೇರಿದಂತೆ ಇಂಥ ಕೆಲವು ಖಾಸಗಿ ವಿಚಾರಗಳ ಬಗ್ಗೆ ಅವರಿಗೆ ತಿಳಿಸಿ ಕೊಡಬೇಕು. 8 ರಿಂದ 10 ವಯಸ್ಸಿನ ಮಕ್ಕಳಿಗೆ ಅವರ ದೇಹ ಯಾವ ರೀತಿ ಬದಲಾವಣೆ ಹೊಂದುತ್ತೆ ಅನ್ನೋದ್ರಿಂದ ಹಿಡಿದು ಋತುಚಕ್ರದ ಬಗ್ಗೆಯೂ ಮಾಹಿತಿ ನೀಡಬಹುದು.

ಹದಿಹರೆಯಕ್ಕಿಂತ ಮುಂಚಿನ ಹಂತ (9-12 ವರ್ಷ)
ಸುರಕ್ಷಿತ ಲೈಂಗಿಕತೆ, ಗರ್ಭನಿರೋಧಕಗಳ ಬಗ್ಗೆ ಈ ವಯಸ್ಸಿನ ಮಕ್ಕಳಿಗೆ ಮಾಹಿತಿ ನೀಡಬೇಕು. ಗರ್ಭಧಾರಣೆ ಹಾಗೂ ಲೈಂಗಿಕ ಸೋಂಕುಗಳ ಬಗ್ಗೆಯೂ ಪ್ರಾಥಮಿಕ ಮಾಹಿತಿ ಒದಗಿಸಬೇಕು. ಹದಿಹರೆಯದ ವಯಸ್ಸಿನಲ್ಲಿ ದೇಹದ ಜೊತೆ ಮನಸ್ಸಿನಲ್ಲೂ ಒಂದಿಷ್ಟು ಬದಲಾವಣೆಗಳಾಗೋದು ಸಹಜ. ಹಾಗಂತ ವಯೋಸಹಜ ಆಕರ್ಷಣೆಯಿಂದ ತಪ್ಪು ದಾರಿ ಹಿಡಿಯೋದು ಸರಿಯಲ್ಲ ಎಂಬುದನ್ನು ಕೂಡ ಪಾಲಕರು ಮಕ್ಕಳಿಗೆ ಮನದಟ್ಟು ಮಾಡಿಸಬೇಕು. ವಿವಾಹಪೂರ್ವ ಲೈಂಗಿಕತೆಯಿಂದ ಉಂಟಾಗೋ ತೊಂದರೆಗಳು, ಕಾಮತೃಷೆ ತೀರಿಸಿಕೊಳ್ಳಲು ಅಥವಾ ಬ್ಲ್ಯಾಕ್‌ಮೇಲ್‌ ಮಾಡಲು ಕೂಡ ಲೈಂಗಿಕವಾಗಿ ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳುತ್ತಾರೆ ಮತ್ತು ಆ ಬಗ್ಗೆ ಎಚ್ಚರಿಕೆ ವಹಿಸೋದು ಹೇಗೆ ಎಂಬುದನ್ನು ಹದಿಹರೆಯದವರಿಗೆ ತಿಳಿಸಬೇಕು. 

ಬೆಸ್ಟ್ ಫ್ರೆಂಡ್ ಮೇಲೆ ಪ್ರೀತಿ ಹುಟ್ತಿದೆಯಾ?

ಹದಿಹರೆಯದ ವಯಸ್ಸು (13-18)
ಈ ವಯಸ್ಸಿನಲ್ಲಿ ಹುಡುಗ ಹಾಗೂ ಹುಡುಗಿಯ ಶರೀರದಲ್ಲಾಗೋ ಎಲ್ಲ ಬದಲಾವಣೆಗಳ ಬಗ್ಗೆ ಮಾಹಿತಿ ನೀಡೋದು ಅಗತ್ಯ. ಸೆಕ್ಸ್‌ ಎಂದ್ರೇನು? ಗರ್ಭಧಾರಣೆ ಹೇಗಾಗುತ್ತೆ ಎಂಬ ಮಾಹಿತಿಯಿಂದ ಹಿಡಿದು ಹಸ್ತಮೈಥುನ, ಲೈಂಗಿಕ ರೋಗಗಳು, ವಿವಿಧ ಗರ್ಭನಿರೋಧಕಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಆರೋಗ್ಯಕರ ಹಾಗೂ ಅನಾರೋಗ್ಯಕರ ಸಂಬಂಧಗಳ ನಡುವಿನ ವ್ಯತ್ಯಾಸ ತಿಳಿಸಬೇಕು.

click me!