
ಕೆಲವು ಗಂಡಸರು ಎಷ್ಟೇ ವಯಸ್ಸಾದರೂ ಪ್ರತಿಯೊಂದಕ್ಕೂ ತಾಯಿಯ ಮಾತು ಕೇಳುವ ಮುದ್ದಿನ ಮಕ್ಕಳಾಗಿರುತ್ತಾರೆ. ಇವನ ಕುಟುಂಬದ ಸಮಸ್ಯೆ ಅಂದರೆ ಆತನ ತಾಯಿಯೇ ಆ ಕುಟುಂಬದ ಸಿಇಒ. ಅನೇಕ ಭಾರತೀಯ ಮನೆಗಳಲ್ಲಿ ಮದುವೆ ಎಂದರೆ ಇಬ್ಬರು ಪ್ರೌಢರ ನಡುವಿನ ಪಾಲುದಾರಿಕೆ ಅಲ್ಲ. ಅಲ್ಲಿ ತಾಯಿ ನಡೆಸುವ ದರ್ಬಾರ್ ಅಡಿಯಲ್ಲಿ ಈತನ ಹೆಂಡತಿ ಜೂನಿಯರ್ ಕೆಲಸಗಾರ್ತಿ ಆಗಿರ್ತಾಳೆ ಅಷ್ಟೇ. ಆಕೆಗೆ ಬಡ್ತಿ ಸಿಗುವುದು ಅಪರೂಪ. ಅವಳು ಗಂಡನನ್ನು ನಿರೀಕ್ಷಿಸಿ ಮದುವೆಯಾಗಿರುತ್ತಾಳೆ. ಆದರೆ ಅವನು ಗಂಡ ಆಗುವ ಬದಲು ಸದಾ ತಾಯಿಯ ಮಗ ಆಗಿರುತ್ತಾನೆ. ಸಂಸಾರದಲ್ಲಿ ಏನೇ ಆದರೂ ತಾಯಿಗೆ ಡಯಲ್ ಮಾಡಲು ಸಿದ್ಧನಾಗಿರುತ್ತಾನೆ. ಇಂಥ ಸಂಸಾರದಲ್ಲಿ ಬದುಕಲು ಇಂದಿನ ಹೆಣ್ಣುಮಕ್ಕಳು ಬಯಸುವುದಿಲ್ಲ. ಆಕೆಗೆ ಬಹು ಬೇಗನೆ ಜಿಗುಪ್ಸೆ ಬಂದುಬಿಡುತ್ತದೆ. ತನ್ನ ಮೇಲೆ ಗಂಡನ ತಾಯಿ ಅಧಿಕಾರ ಚಲಾಯಿಸಲು ಆಕೆ ಯಾವತ್ತೂ ಬಯಸುವುದಿಲ್ಲ. ಈ ಸಂಸಾರವನ್ನು ಕೆಡಿಸುವ 8 ಸಂಗತಿಗಳು ಇಲ್ಲಿವೆ ನೋಡಿ.
1. ಮಗನ ಮೊದಲ ಕರೆ ತಾಯಿಗೆ
ಹೊಸ ಕೆಲಸ, ಸಣ್ಣ ಅಪಘಾತ, ಸಹೋದರಿಯೊಂದಿಗಿನ ಜಗಳ- ಎಲ್ಲವನ್ನೂ ಪತ್ನಿಗೂ ಮೊದಲೇ ಅವನ ತಾಯಿಗೆ ಅಪ್‌ಡೇಟ್ ಮಾಡುತ್ತಾನೆ. ತಾಯಿ ಚಿಕ್ಕಮ್ಮನಿಗೆ ಹೇಳುತ್ತಾಳೆ. ಚಿಕ್ಕಮ್ಮ ಆಂಟಿಗೆ ಹೇಳುತ್ತಾಳೆ. ನೀವು ಸುದ್ದಿ ತಿಳಿಯುವ ನಾಲ್ಕನೆಯವರಾಗುತ್ತೀರಿ! ಅವನ ಮನಸ್ಸಿನಲ್ಲಿ, ತನ್ನ ತಾಯಿಯೊಂದಿಗೆ ದೊಡ್ಡ ಅಥವಾ ಸಣ್ಣ ಸುದ್ದಿಗಳನ್ನು ಮೊದಲು ಹಂಚಿಕೊಳ್ಳುವುದು ʼಸ್ವಾಭಾವಿಕʼ. ಏಕೆಂದರೆ ತಾಯಿ ಯಾವಾಗಲೂ ಅವನ ಮೊದಲ ಕೇಳುಗಳಾಗದ್ದವಳು. ಮದುವೆಯ ಬಳಿಕ ಆ ಸ್ಥಾನ ಬದಲಾಗಬೇಕು ಎಂದು ಅವನಿಗೆ ತಿಳಿದಿರುವುದಿಲ್ಲ. ಹೆಂಡತಿ ತಾನು ಸಮಾಲೋಚಿಸುವ ಮತ್ತು ನಂಬುವ ಮೊದಲ ವ್ಯಕ್ತಿ ಆಗಬೇಕು ಎಂದು ಆಕೆ ನಿರೀಕ್ಷಿಸುತ್ತಾಳೆ. ಇಲ್ಲದಿದ್ದಾಗ ದಾಂಪತ್ಯ ಅನ್ಯೋನ್ಯತೆಯನ್ನು ಕಳೆದುಕೊಳ್ಳುತ್ತದೆ.
2. ಅಡುಗೆ ಮನೆಯ ಯುದ್ಧಗಳು
ಅಡುಗೆ ಮನೆ ಎಂಬುದು ಭಾವನಾತ್ಮಕ ತಾಕಲಾಟದ ಕ್ಷೇತ್ರ. ಅವನಿಗೆ ಇಷ್ಟವಾಗುವ ಥರದ ದಾಲ್ ಮಾಡುವುದು ಹೇಗೆಂದು ತನಗೆ ಮಾತ್ರ ತಿಳಿದಿದೆ ಎಂಬ ಭಾವನೆ ತಾಯಿಗೆ ಇರುತ್ತೆ. ಇದು ದಾಲ್‌ಗೆ ಮುಗಿಯಲ್ಲ. ಉಪ್ಪು ಎಷ್ಟು "ಸರಿ" ಎಂಬುದರಿಂದ ಹಿಡಿದು ಚಪಾತಿಯನ್ನು ಬೇಯಿಸುವ ಹದದವರೆಗೆ. ಎಲ್ಲವೂ ತಾಯಿಯ ಒಂದು ಅಘೋಷಿತ ಮಾನದಂಡವನ್ನು ಹೊಂದಿರುತ್ತೆ. ಚಹಾವನ್ನು ಕುದಿಸುವ ವಿಧಾನವೂ ಸಹ ಸೂಕ್ಷ್ಮ ಯುದ್ಧಭೂಮಿ ಆಗಬಹುದು. ಕಾಲಾನಂತರದಲ್ಲಿ ಈ ಹೋಲಿಕೆಗಳು ಹೆಂಡತಿಗೆ ಇದು ತನ್ನ ಸ್ವಂತ ಮನೆಯಲ್ಲ, ತನ್ನ ಅತ್ತೆಯ ಅಡುಗೆಮನೆ ಅನಿಸುವಂತೆ ಭಾಸವಾಗುತ್ತದೆ.
3. ಮಕ್ಕಳ ಮೇಲಿನ ಅಧಿಕಾರ
ಮಗನಿಗೆ ಮಕ್ಕಳಾಗಿದ್ದರೂ ಆ ಮಕ್ಕಳ ಲಾಲನೆ ಪಾಲನೆಯಲ್ಲಿ ಅನಗತ್ಯ ಮೂಗು ತೂರಿಸುವ ಅಜ್ಜಿಯಂದಿರಿದ್ದಾರೆ. ಮತ್ತು ಇದನ್ನೇ ಬಯಸುವ ಗಂಡಂದಿರೂ ಇರುತ್ತಾರೆ. ನಿಮಗಿಷ್ಟವಿಲ್ಲದಿದ್ದರೂ ನಿಮ್ಮ ಅತ್ತೆ ನಿಮ್ಮ ಮಗುವಿಗೆ ಯಾವ ತಿಂಡಿ ಇಷ್ಟ, ಯಾವ ಶಾಲೆ ಉತ್ತಮ, ಮಗುವಿಗೆ ಹೇಗೆ ಆಹಾರ ನೀಡಬೇಕು, ನಿಮ್ಮ ಆಧುನಿಕ ಪಾಲನೆಯ ವಿಧಾನ ಸರಿಯಿಲ್ಲ ಎಂಬಿತ್ಯಾದಿ ಅಭಿಪ್ರಾಯಗಳನ್ನು ಹೇರಿದರೆ ಹೇಗಾಗುತ್ತದೆ? ಕೆಲವೊಮ್ಮೆ ಅವರು ನಿಮ್ಮನ್ನು ಸಂಪೂರ್ಣವಾಗಿ ಬೈಪಾಸ್ ಮಾಡಬಹುದು. ನಿಮ್ಮ ಪತಿಗೆ ನೇರವಾಗಿ ಸೂಚಿಸಬಹುದು. ಅವನು ತಾಯಿಯ ಮಾತನ್ನೇ ಅಂತಿಮವೆಂದು ತೆಗೆದುಕೊಂಡು ಬೆಳೆದ ಕಾರಣ, ಚರ್ಚೆಯಿಲ್ಲದೆ ಒಪ್ಪುತ್ತಾನೆ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಾಕೆ ಹೆಂಡತಿ. ಆಕೆಯೇ ಅವರ ಮಾತೆ ಎಂಬುದನ್ನು ಗಂಡು ಒಪ್ಪಬೇಕು. ಇಲ್ಲವಾದರೆ ಅವನ ಬದುಕು ಕಠಿಣ.
4. ಎಮೋಷನಲ್ ಬ್ಲ್ಯಾಕ್‌ಮೇಲ್
ʼನಾನು ನಿನ್ನನ್ನು ಒಂಬತ್ತು ತಿಂಗಳು ಹೊತ್ತು ಹೆತ್ತೆʼ ಅಥವಾ ʼನಾನು ನಿನಗಾಗಿ ನನ್ನ ಇಡೀ ಜೀವನವನ್ನು ತ್ಯಾಗ ಮಾಡಿದೆʼ ಎಂಬ ತಾಯಿಯ ಎಮೋಷನಲ್ ಬ್ಲ್ಯಾಕ್‌ಮೇಲ್‌ಗಳ ಜೊತೆಗೆ ಪತ್ನಿ ಸ್ಪರ್ಧಿಸಲು ಸಾಧ್ಯವಿಲ್ಲ. ಇವು ಕೇವಲ ಹೇಳಿಕೆಗಳಲ್ಲ. ಅವು ಭಾವನಾತ್ಮಕ ಬಾಂಬ್‌ಗಳು. ಇದು ಯಾವಾಗಲೂ ನೇರವಾಗಿರುವುದಿಲ್ಲ. ಕೆಲವೊಮ್ಮೆ ಅದು ಮೌನ, ನಿಟ್ಟುಸಿರು ಇವುಗಳಲ್ಲಿರಬಹುದು. ದಂಪತಿ ವಾರಾಂತ್ಯವನ್ನು ಬೇರೆಡೆ ಕಳೆಯಲು ಬಯಸಿದರೆ, ತಾಯಿ ʼಸರಿ, ನಾನು ಈಗ ಒಂಟಿಯಾಗಿರುವುದಕ್ಕೆ ಒಗ್ಗಿದ್ದೇನೆ" ಎಂದು ಕಹಿಯಾಗಿ ಹೇಳಿ ಅವರ ಪ್ಲಾನ್ ಅನ್ನು ಕೆಡಿಸಬಹುದು. ಪಾಪಪ್ರಜ್ಞೆ ಸಹಿಸಲಾಗದ ಗಂಡ, ಆ ಯೋಜನೆಯಿಂದ ಹಿಂದೆ ಸರಿಯುತ್ತಾನೆ.
5. ಖಾಸಗಿತನಕ್ಕೆ ಧಕ್ಕೆ
ಕೆಲವು ಕುಟುಂಬಗಳಲ್ಲಿ ದಂಪತಿಗಳಿಗೆ ಖಾಸಗಿತನ ಎಂಬುದೇ ಇಲ್ಲ. ತಾಯಂದಿರು ಮಧ್ಯರಾತ್ರಿಯಲ್ಲಿ ಕರೆ ಮಾಡಬಹುದು, ಬಾಗಿಲು ಬಡಿಯದೆ ಒಳಗೆ ಹೋಗಬಹುದು. ಸಂಬಳದ ಚರ್ಚೆಗಳಿಂದ ಹಿಡಿದು ಮಲಗುವ ಕೋಣೆಯ ಪೀಠೋಪಕರಣಗಳ ಆಯ್ಕೆಗಳವರೆಗೆ ಎಲ್ಲದಕ್ಕೂ ಮೂಗು ತೂರಿಸಬಹುದು. ಕೆಲವೊಮ್ಮೆ ಇದು ಹೆಚ್ಚು ಸೂಕ್ಷ್ಮವಾಗಿರುತ್ತದೆ. ಅತ್ತೆ ಈಕೆಯ ಹೊಸ ಆಭರಣವನ್ನು ಗಮನಿಸಬಹುದು. ಅದರ ಬೆಲೆ ಎಷ್ಟು ಎಂದು ಕೇಳಬಹುದು. ನಿಮ್ಮ ಖರ್ಚುಗಳ ಬಗ್ಗೆ ಕಾಮೆಂಟ್ ಮಾಡಬಹುದು. ಅದು ಅವಳ ತಿಳಿದುಕೊಳ್ಳುವ ಹಕ್ಕು ಎಂದು ನೋಡುತ್ತಾಳೆ. ಗಂಡ ಇದರಲ್ಲಿ ಸ್ಪಷ್ಟ ಗಡಿ ಸೃಷ್ಟಿಸುವ ಬದಲು ತಾಯಿಯ ಪರ ಮಾತಾಡುತ್ತಾನೆ.
6. ಜೀವಾವಧಿ ಶಿಕ್ಷೆಯಂತೆ ಭಾಸವಾಗುವ ಸಂಪ್ರದಾಯ
ಕೇವಲ ಹಬ್ಬಗಳಲ್ಲ, ಎಲ್ಲವನ್ನೂ ʼನಮ್ಮ ಮನೆಯಲ್ಲಿ ಅದು ಹಾಗಲ್ಲ, ಹೀಗೆ" ಎಂಬ ಮಾತು ಪ್ರತಿಯೊಂದಕ್ಕೂ ಬರಬಹುದು. ಸೊಸೆಯಾಗಿ ನೀವು ನಿಮ್ಮ ಸ್ವಂತ ಆಚರಣೆಗಳನ್ನು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದನ್ನು ದಂಗೆಯಂತೆ ಪರಿಗಣಿಸಲಾಗುತ್ತದೆ. ನಿಮ್ಮ ವಿವಾಹ ವಾರ್ಷಿಕೋತ್ಸವವನ್ನು ಅತ್ತೆ ಆಯ್ಕೆ ಮಾಡಿದ ಶುಭ ದಿನಾಂಕದ ಸುತ್ತ ಯೋಜಿಸಬಹುದು, ಅಥವಾ ನಿಮ್ಮ ರಜಾದಿನಗಳನ್ನು ಯಾವ ಸಂಬಂಧಿಕರನ್ನು ಭೇಟಿ ಮಾಡಬೇಕು ಎಂಬುದರ ಆಧಾರದ ಮೇಲೆ ನಿರ್ಧರಿಸಬಹುದು. ದಂಪತಿಗಳ ಸ್ವಂತ ಆದ್ಯತೆಗಳನ್ನು ಹಾಗೆ ಸಂಪ್ರದಾಯದ ಹೆಸರಿನಲ್ಲಿ ಅಳಿಸಿಹಾಕಲಾಗುತ್ತದೆ. ಹೆಂಡತಿ ತಾನು ಇದು ಹೊಂದಿಕೊಳ್ಳುವ ಜೀವನವಲ್ಲ ಎಂದು ಅರಿತುಕೊಳ್ಳುತ್ತಾಳೆ.
7. ಇಬ್ಬರನ್ನೂ ಪ್ರೀತಿಸುವುದು
ಕೆಲವು ಪುರುಷರು ಹೆಮ್ಮೆಯಿಂದ, "ನಾನು ನಿಮ್ಮಿಬ್ಬರನ್ನೂ ಸಮಾನವಾಗಿ ಪ್ರೀತಿಸುತ್ತೇನೆ" ಎಂದು ಹೇಳುತ್ತಾರೆ. ಅದು ಸರಿ. ಪ್ರೀತಿಯಲ್ಲಿ ಸಮಾನತೆ ಇರಲಿ. ಆದರೆ ದಾಂಪತ್ಯಕ್ಕೆ ಪ್ರತ್ಯೇಕ ಭಾವನಾತ್ಮಕ ಅಡಿಪಾಯ ಬೇಕು. ಹೆಂಡತಿ ಯಾವಾಗಲೂ "ಹೊಂದಿಕೊಳ್ಳಬೇಕೆಂದು" ನಿರೀಕ್ಷಿಸಲಾಗದು. ಮಗ ಮತ್ತು ತಾಯಿಯ ನಡುವಿನ ಮದುವೆಗೆ ಮುಂಚಿನ ಸಂಬಂಧ ತುಸುವಾದರೂ ಬದಲಾಗಿಯೇ ಆಗುತ್ತದೆ. ಅಲ್ಲಿ ಅಮ್ಮನ ಪಾತ್ರ ಪೋಷಕ ನಟಿ. ಅವಳೇ ನಾಯಕಿಯಾಗಲು ಬರುವುದಿಲ್ಲ.
8. ಆಕೆ ಮದುವೆಯಾಗುವುದು ಪುರುಷನನ್ನು, ಮಗನನ್ನಲ್ಲ
ತಾಯಂದಿರು ಮಗನನ್ನು ಹೆಚ್ಚು ಪ್ರೀತಿಸುವುದರಿಂದ ದಾಂಪತ್ಯ ಬೇರ್ಪಡುವುದಿಲ್ಲ. ಆ ಪ್ರೀತಿಯು ಇವರ ದಾಂಪತ್ಯಕ್ಕೆ ಅಡ್ಡಿಯಾದಾಗ ಅದು ಬೇರ್ಪಡುತ್ತದೆ. ಹೆಂಡತಿಯ ಸ್ಥಾನ ತಾಯಿಯಿಂದ ಕೆಳಗೆ ಅಲ್ಲ. ಕುಟುಂಬದ ವಲಯದ ಹೊರಗೂ ಅಲ್ಲ. ಅದು ಅವಳ ಗಂಡನ ಪಕ್ಕದಲ್ಲಿ. ಸಮಾನ ಗೌರವ ಮತ್ತು ಸಮಾನ ಪ್ರೀತಿಯನ್ನು ಅದು ಬಯಸುತ್ತದೆ. ಆದರೆ ಗಂಡ ತನ್ನ ತಾಯಿಯ ನೆರಳಿನಿಂದ ಹೊರಬರಲು ನಿರಾಕರಿಸಿದರೆ, ದಾಂಪತ್ಯವೂ ಅಲ್ಲಿಗೆ ಶಿಥಿಲವಾಗತೊಡಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.