
ಎಲ್ಲರ ಜೀವನ ಒಂದೇ ರೀತಿ ಇರುವುದಿಲ್ಲ, ಕೆಲವರಿಗೆ ಯೌವ್ವನದಲ್ಲೇ ಮನೆ ಮಕ್ಕಳು ಆಸ್ತಿ, ಹಣ ಅಂತಸ್ತು ಕೂಡಿ ಬಂದರೆ ಇನ್ನೂ ಕೆಲವರು ತಮ್ಮ ಕೊನೆಯುಸಿರಿರುವವರೆಗೂ ದುಡಿದೆ ತಿನ್ನಬೇಕಾದಂತಹ ದುಸ್ಥಿತಿ ಇರುತ್ತದೆ. ಆದರೆ ಪ್ರಾಯ ಮಾಗಿದ ನಂತರವೂ ಕೆಲವರು ದುಡಿಯುವುದು ನೋಡಿದರೆ ಅಯ್ಯೋ ಎನ್ನಿಸುತ್ತದೆ. ಅದೇ ರೀತಿ ಇಲ್ಲೊಬ್ಬರು ಮಹಿಳೆಗೆ ಡೆಲಿವರಿ ಸರ್ವಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧನ ನೋಡಿ ಮನಸ್ಸು ಕರಗಿದೆ. ಇಳಿವಯಸ್ಸಿನಲ್ಲಿ ಅವರು ದುಡಿದು ತಿನ್ನುವ ಬದಲು ಇತರರಂತೆ ಆರಾಮವಾಗಿ ಬದುಕಬೇಕು ಇದಕ್ಕಾಗಿ ತಾನು ಏನಾದರೂ ಸಹಾಯ ಮಾಡಬೇಕು ಎಂದು ಆ ಮಹಿಳೆ ಮುಂದಾಗಿದ್ದು, ದೊಡ್ಡ ಅಭಿಯಾನವನ್ನೇ ನಡೆಸಿದರು. ಪರಿಣಾಮ ಆ ವೃದ್ಧನಿಗಾಗಿ ಆಕೆ 18 ಲಕ್ಷ ರೂಪಾಯಿಯನ್ನು ಸಂಗ್ರಹ ಮಾಡಿದ್ದಾರೆ ಈ ವಿಚಾರವಾಗಿ ಆಕೆ ವೀಡಿಯೋ ಮಾಡಿದ್ದು ಭಾರಿ ವೈರಲ್ ಆಗಿದೆ.
ಹೌದು ಈ ಘಟನೆ ನಡೆದಿರುವುದು ಫ್ಲೋರಿಡಾದ ಐರ್ಲೆಂಡ್‌ನಲ್ಲಿ ಡೇನ್‌ಹೋಲ್ಡ್ ಎಂಬುವವರು ಆನ್ಲೈನ್ ಮೂಲಕ ಆಹಾರ ಆರ್ಡರ್ ಮಾಡಿದ್ದರು. ಅದರಂತೆ ಆರ್ಡರ್ ಹಿಡಿದು ಬಂದ ವೃದ್ಧ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾರೆ. ಬಾಗಿಲು ತೆಗೆದ ಡೇನ್‌ಹೋಲ್ಡ್‌ಗೆ ಹೊರಗಿದ್ದ ಡೆಲಿವರಿ ಏಜೆಂಟ್ ನೋಡಿ ಅಚ್ಚರಿಯ ಜೊತೆ ದುಃಖವೂ ಆಗಿತ್ತು. ಆ ವ್ಯಕ್ತಿ ಬಹಳ ವೃದ್ಧರಾಗಿದ್ದರು. ಮೆಟ್ಟಿಲುಗಳನ್ನು ಏರಿ ಬಂದ ಅವರು ಆಹಾರ ನೀಡಿ ಹೋಗಿದ್ದರು, ಅವರ ಕಾಲುಗಳು ನೋಯುತ್ತಿದ್ದವು ಅವರಿಗೆ ನೇರವಾಗಿ ನಿಲ್ಲುವುದಕ್ಕೂ ಆಗುತ್ತಿರಲಿಲ್ಲ. ದೇಹ ನಡುಗುತ್ತಿತ್ತು. ಬಾಗಿಲನ್ನು ತೆರೆಯುತ್ತಿದ್ದಂತೆ ಡೇನ್‌ಹೋಲ್ಡ್‌ಗೆ ಆಹಾರ ನೀಡಿದ ವೃದ್ಧ ತಮ್ಮ ನೋವನ್ನು ಏನನ್ನೂ ಹೇಳದೇ ಒಂದು ಮಾತು ಆಡದೇ ಹೊರಟು ಹೋಗಿದ್ದರು. ಆದರೆ ಅವರ ಸ್ಥಿತಿ ಡೇನ್‌ಹೋಲ್ಡ್‌ಗೆ ಮಾತ್ರ ಭಾರಿ ಬೇಸರ ಉಂಟು ಮಾಡಿತ್ತು. ಹೀಗಾಗಿ ಆ ವೃದ್ಧನಿಗೆ ಏನಾದರೂ ಸಹಾಯ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಬಂದ ಡೇನ್‌ಹೋಲ್ಡ್ 18 ಲಕ್ಷ ರೂಪಾಯಿಯನ್ನು ಸಂಗ್ರಹಿಸಿದರು. ಅದು ಹೇಗೆ ಅಂತ ನೋಡೋಣ ಬನ್ನಿ.
ಅಂದಹಾಗೆ ಈ ಸ್ವಾಭಿಮಾನಿ ವೃದ್ಧನ ಹೆಸರು ಲ್ಯಾರಿ, ಅವರು ಡೇನ್‌ಹೋಲ್ಡ್‌ಗೆ ಆಹಾರ ಡೆಲಿವರಿ ನೀಡಿ ಹೊರಟು ಹೋಗುತ್ತಿರುವ ದೃಶ್ಯ ಅಲ್ಲಿನ ಕಟ್ಟಡದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಡೇನ್‌ಹೋಲ್ಡ್ ವೃದ್ಧಾಪ್ಯದಲ್ಲೂ ದುಡಿಮೆ ಮಾಡುತ್ತಿರುವ ವೃದ್ಧನ ಬದುಕಿನ ಬಗ್ಗೆ ಅವರ ಸ್ಥಿತಿಯ ಬಗ್ಗೆ ಮಾತನಾಡಲು ಆರಂಭಿಸಿದರು. ಈ ವಯಸ್ಸಿನಲ್ಲಿ ಯಾರೂ ದುಡಿಮೆ ಮಾಡುವಂತಾಗಬಾರದು ಎಂದು ಟ್ಯಾಗ್‌ಲೈನ್ ಜೊತೆ ಗೋಫಂಡ್‌ಮೀ( GoFundMe)ಅಭಿಯಾನವನ್ನು ವೃದ್ಧ ಲ್ಯಾರಿಗಾಗಿ ಆರಂಭಿಸಿದರು.
ಇದರ ಜೊತೆಗೆ ಅವರ ಭಾವುಕ ವೀಡಿಯೋ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್‌ಬುಕ್ ಇನ್ಸ್ಟಾಗ್ರಾಮ್‌ಗಳಲ್ಲಿ ವೈರಲ್ ಆಗಿ ಸಾವಿರಾರು ಜನ ವೀಕ್ಷಿಸಿದರು. ಲ್ಯಾರಿಯವರ ಕಠಿಣ ಶ್ರಮ ಯಾರ ಕಣ್ಣಿಗೂ ಕಾಣದಂತೆ ಆಗಬಾರದು ಎಂದು ಅವರು ಮನವಿ ಮಾಡಿದರು. ಇನ್ನು ಇವರು ಆರಂಭಿಸಿದ 4 ಸಾವಿರ ಡಾಲರ್ ಗುರಿಯನ್ನು ಹೊಂದಿದ್ದ ಈ ಗೋಫಂಡ್‌ಮಿಗೆ ಜನರು ನೀಡಿದ ದೇಣಿಗೆ ಸುಮಾರು 22 ಸಾವಿರ ಡಾಲರ್ ಅಂದರೆ ನಿಗದಿತ ಗುರಿಗಿಂತ ಸುಮಾರು 5 ಪಟ್ಟು ಹೆಚ್ಚು. 1300ಕ್ಕೂ ಹೆಚ್ಚು ಜನರು ಈ ವೃದ್ಧ ಲ್ಯಾರಿ ಅವರ ಕಷ್ಟವನ್ನು ಅರಿತು ಹಣ ದಾನ ಮಾಡಿದ್ದು, 22 ಸಾವಿರ ಡಾಲರ್ ಎಂದರೆ ಸುಮಾರು 19,26,000 ಹಣ ಸಂಗ್ರಹಗೊಂಡಿತ್ತು.
ನಂತರ ಡೇನ್‌ಹೋಲ್ಡ್ ಅವರು ಆ ವೃದ್ಧನನ್ನು ಭೇಟಿ ಮಾಡಿ ಸಹಾಯ ಮಾಡಿದ್ದು, ಆ ಭಾವುಕ ಕ್ಷಣವೂ ಕೂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗ್ತಿದೆ. ಒಟ್ಟಿನಲ್ಲಿ ಡೇನ್‌ಹೋಲ್ಡ್ ಅವರ ಧೃಡನಿರ್ಧಾರವವೊಂದು ವೃದ್ದಾಪ್ಯದಲ್ಲೂ ಕಷ್ಟಪಡುತ್ತಿದ್ದ ಲ್ಯಾರಿ ಅವರ ಮೊಗದಲ್ಲಿ ನಗು ಮೂಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.