ಪುಟ್ಟ ಮಕ್ಕಳು ಸುಳ್ಳು ಹೇಳಿದ್ರೂ ಕೇಳಲು ಹಿತವಾಗಿರುತ್ತೆ. ಇದಕ್ಕೆ ಕಾರಣ ಅವರ ಮುಗ್ಧತೆ. ಮಗು ಸುಳ್ಳು ಹೇಳೋದು ಸಹಜ ಬೆಳವಣಿಗೇನೆ ಆದ್ರೂ ಆ ಬಗ್ಗೆ ಉದಾಸೀನತೆ ಸಲ್ಲ. ಮಗು ಸುಳ್ಳು ಹೇಳಿದ ದಿನದಿಂದಲೇ ಸತ್ಯದ ಪಾಠ ಪ್ರಾರಂಭಿಸಿ.
ಪುಟ್ಟ ಮಕ್ಕಳು ಏನ್ ಮಾಡಿದ್ರೂ ನೋಡೋಕೆ ಚೆಂದ. ಅದ್ರಲ್ಲೂ ಮಾತು ಕಲಿಯುವ ಸಮಯದಲ್ಲಿ ಅವರಾಡುವ ಪ್ರತಿ ಪದ, ವಾಕ್ಯ ಹೆತ್ತವರಿಗೆ ರೋಮಾಂಚನ ಮೂಡಿಸುತ್ತೆ. ಆದ್ರೆ ಮೂರು ವರ್ಷವಾಗುತ್ತಿದ್ದಂತೆ ಮಕ್ಕಳು ನಿಧಾನವಾಗಿ ಚಿಕ್ಕಪುಟ್ಟ ಸುಳ್ಳುಗಳನ್ನು ಹೇಳಲು ಪ್ರಾರಂಭಿಸುತ್ತಾರೆ. ಉದಾಹರಣೆಗೆ ಯಾರೊಂದಿಗಾದ್ರೂ ಫೋನ್‍ನಲ್ಲಿ ಮಾತನಾಡುವಾಗ ಅವರು ಕೇಳಿದ ಪ್ರಶ್ನೆಗೆ ಸುಳ್ಳು ಉತ್ತರಗಳನ್ನು ನೀಡೋದು, ನೀವು ಅಡುಗೆಮನೆಯಲ್ಲಿರುವಾಗ ಬೆಡ್‍ರೂಮ್‍ನಲ್ಲಿ ಏನೋ ಕಿತಾಪತಿ ಮಾಡೋದು. ಆ ಬಗ್ಗೆ ಕೇಳಿದ್ರೆ ನಾನು ಮಾಡಿಲ್ಲ ಅನ್ನೋದು. ಇಂಥ ಮುಗ್ಧತೆಯಿಂದ ಕೂಡಿದ ಸುಳ್ಳುಗಳು ತಮಾಷೆಯಾಗಿ ಕಾಣಿಸುವ ಜೊತೆ ನಗು ತರಿಸುತ್ತವೆ ಕೂಡ. ಅಲ್ಲದೆ, ಇದು ಸಹಜ ಬೆಳವಣಿಗೆ ಕೂಡ. ಇನ್ನೂ ಮಗು ಅಲ್ಲವೆ? ಇರಲಿ ಬಿಡು, ಈಗ ಹೇಳಿದ್ರೆ ಏನೂ ಅರ್ಥವಾಗಲ್ಲ ಎಂದು ಮಗು ಸುಳ್ಳು ಹೇಳಿದಾಗಲೆಲ್ಲ ನಾವು ನಕ್ಕು ಸುಮ್ಮನಾಗುತ್ತೇವೆ. ಆದ್ರೆ ಮಗು ಇದನ್ನೇ ಅಭ್ಯಾಸ ಮಾಡಿಕೊಂಡು ಬೆಳೆದ್ರೆ ನಂತರ ಈ ಚಾಳಿ ಬಿಡಿಸೋದು ಕಷ್ಟದ ಕೆಲಸವೇ ಸರಿ.
ಪ್ರಗ್ನೆನ್ಸಿ; ಹೀಗಿರಲಿ ಪತಿಪತ್ನಿ ನಡುವಿನ ಇಂಟಿಮಸಿ
ಈ ವಯಸ್ಸಿನಲ್ಲಿ ಸುಳ್ಳು ಹೇಳಲು ಪ್ರಾರಂಭಿಸ್ತಾರೆ
ಮಗು ಮೂರು ವರ್ಷಕ್ಕೆ ಕಾಲಿಡುತ್ತಿದ್ದಂತೆ ತನ್ನ ಸುತ್ತಮುತ್ತ ನಡೆಯುವ ಪ್ರತಿ ಸಂಗತಿಗಳ ಮೇಲೂ ಗಮನ ಕೇಂದ್ರೀಕರಿಸಲು ಪ್ರಾರಂಭಿಸುತ್ತದೆ. ಅದ್ರಲ್ಲೂ ಮನೆಯಲ್ಲಿರುವ ಪ್ರತಿ ಸದಸ್ಯರ ಮಾತು, ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಜೊತೆ ಅನುಕರಿಸಲು ಪ್ರಯತ್ನಿಸುತ್ತದೆ. ಅಡುಗೆ ಮನೆಯಲ್ಲಿರುವ ಅಮ್ಮಂಗೆ ಬೆಡ್‍ರೂಮ್‍ನಲ್ಲಿ ತಾನು ಮಾಡೋ ಕಿತಾಪತಿ ತಿಳಿಯೋದಿಲ್ಲ ಎಂಬುದು ಮೂರು ವರ್ಷದ ಮಗುವಿಗೆ ಚೆನ್ನಾಗಿಯೇ ತಿಳಿದಿರುತ್ತೆ. ಇದೇ ಕಾರಣಕ್ಕೆ ಅಮ್ಮನಿಗೆ ಸುಳ್ಳು ಹೇಳೋ ಸಾಹಸ ಮಾಡುತ್ತೆ. 4-6ನೇ ವಯಸ್ಸಿನಲ್ಲಿ ಮಕ್ಕಳಲ್ಲಿ ಸುಳ್ಳು ಹೇಳೋ ಅಭ್ಯಾಸ ಹೆಚ್ಚುತ್ತೆ. ಅಲ್ಲದೆ, ಸುಳ್ಳನ್ನು ಸತ್ಯದಂತೆ ವಿವರಿಸಲು ಅಗತ್ಯವಾದ ಧ್ವನಿ ಹಾಗೂ ಮುಖ ಚಹರೆಗಳನ್ನು ಪ್ರದರ್ಶಿಸಲು ಬರುತ್ತೆ. ಅಲ್ಲದೆ, ಆ ಬಗ್ಗೆ ಪ್ರಶ್ನಿಸಿದ್ರೆ ತಕ್ಕಮಟ್ಟಿನ ವಿವರಣೆ ನೀಡುವ ಸಾಮಥ್ರ್ಯ ಈ ವಯಸ್ಸಿನ ಮಕ್ಕಳಿಗಿರುತ್ತೆ. ವಯಸ್ಸು ಹೆಚ್ಚಿದಂತೆ ಮಕ್ಕಳು ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವ ಕಲೆಯನ್ನು ಚೆನ್ನಾಗಿ ರೂಢಿಸಿಕೊಳ್ಳುತ್ತಾರೆ.
undefined
ಮಕ್ಕಳೇಕೆ ಸುಳ್ಳು ಹೇಳ್ತಾರೆ?
-ಮೂರು ವರ್ಷದ ಮಗುವಿಗೆ ಸುಳ್ಳು ಹೇಳೋದು ತಪ್ಪು ಎಂಬ ಅರಿವು ಖಂಡಿತಾ ಇರೋದಿಲ್ಲ. ಅಪ್ಪ ಅಮ್ಮನಿಗೆ ಇಲ್ಲವೆ ಅಜ್ಜಿ ಅಜ್ಜನಿಗೆ ಯಾವುದೋ ವಿಷಯಕ್ಕೆ ಸಂಬಂಧಿಸಿ ಸುಳ್ಳು ಹೇಳಿರೋದನ್ನು ಈ ಮಗು ಗಮನಿಸಿರುತ್ತೆ. ಅದನ್ನೇ ತಾನು ಅನುಸರಿಸಲು ಪ್ರಯತ್ನಿಸುತ್ತೆ.
-ಸುಳ್ಳು ಹೇಳಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ನೋಡುವ ಕುತೂಹಲವಿರುತ್ತೆ.
-3-4ನೇ ವಯಸ್ಸಿನಲ್ಲಿ ಮಕ್ಕಳಿಗೆ ಕಥೆ ಕಟ್ಟುವ ಅಭ್ಯಾಸವಿರುತ್ತೆ. ಕಥೆಯ ಕುತೂಹಲ ಹೆಚ್ಚಿಸಲು ಸುಳ್ಳುಗಳನ್ನು ಹೇಳ್ತಾರೆ.
-ತಾವು ಮಾಡಿದ ತಪ್ಪನ್ನು ಮುಚ್ಚಿಡಲು ಕೂಡ ಮಕ್ಕಳು ಸುಳ್ಳು ಹೇಳುತ್ತಾರೆ.
-ತಾವು ಟಿವಿಯಲ್ಲಿ ನೋಡಿದ ಅಥವಾ ಅಪ್ಪನೋ, ಅಮ್ಮನೋ ಹೇಳಿದ ಕಥೆಗಳಲ್ಲಿನ ಪಾತ್ರಗಳಲ್ಲಿ ತನ್ನನ್ನು ಕಲ್ಪಿಸಿಕೊಳ್ಳುವ ಅಭ್ಯಾಸ ಪುಟ್ಟ ಮಕ್ಕಳಲ್ಲಿರುತ್ತೆ. ಇದಕ್ಕೋಸ್ಕರ ಸುಳ್ಳು ಕಥೆಗಳನ್ನು ಕಟ್ಟಬಹುದು.
-ಮಕ್ಕಳಿಗೆ ಯಾವುದೋ ಒಂದು ವಸ್ತು ಬೇಕಿರುತ್ತೆ. ಉದಾಹರಣೆಗೆ ಐಸ್‍ಕ್ರೀಂ ಬೇಕಿರುತ್ತೆ. ಅದಕ್ಕಾಗಿ ಅವರು ಸುಳ್ಳು ಹೇಳುತ್ತಾರೆ.
-ದೊಡ್ಡ ಮಕ್ಕಳು ಇನ್ನೊಬ್ಬರ ಭಾವನೆಗಳಿಗೆ ನೋವಾಗಬಾರದು ಎಂಬ ಕಾರಣಕ್ಕೆ ಸುಳ್ಳುಗಳನ್ನು ಹೇಳ್ತಾರೆ. ಇದನ್ನೇ ‘ವೈಟ್ ಲೈ’ ಅನ್ನೋದು.
ಕಹಿ ಅನಿಸುತ್ತಿರುವ ಸಂಬಂಧಕ್ಕೆ ಸಿಹಿ ನೀಡುವ ಅಭ್ಯಾಸಗಳಿವು!
ಸತ್ಯ ನುಡಿಯಲು ಪ್ರೋತ್ಸಾಹಿಸೋದು ಹೇಗೆ?
ಮಗು ಸುಳ್ಳು ಹೇಳುತ್ತಿದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಅವರಿಗೆ ತಿಳಿ ಹೇಳುವ ಕೆಲಸವನ್ನು ಹೆತ್ತವರು ಮಾಡಬೇಕು. ಮಗುವಿಗೆ ಇನ್ನು ಮೂರು ವರ್ಷ ಅದಕ್ಕೇನು ಅರ್ಥವಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಿರಬೇಡಿ. ಈ ವಯಸ್ಸಿನ ಮಕ್ಕಳಿಗೆ ಕಥೆ ಕೇಳುವ ಚಟವಿರುತ್ತೆ. ಕಥೆ ಹೇಳುವಂತೆ ಮನೆ ಹಿರಿಯರನ್ನು ಸದಾ ಪೀಡಿಸುತ್ತಿರುತ್ತಾರೆ. ಹೀಗಾಗಿ ಕಥೆಗಳ ಮೂಲಕವೇ ಸುಳ್ಳು ಹೇಳೋದ್ರಿಂದ ಆಗುವ ಹಾನಿ ಹಾಗೂ ಸತ್ಯದ ಹಿರಿಮೆಯನ್ನು ತಿಳಿಸುವ ಪ್ರಯತ್ನ ಮಾಡಿ. ಉದಾಹರಣೆಗೆ ಪುಣ್ಯಕೋಟಿ ಹಸುವಿನ ಕಥೆ ಮಗುವಿನಲ್ಲಿ ಸತ್ಯ ಹೇಳುವಂತೆ ಪ್ರೇರೇಪಿಸುತ್ತದೆ.
ದೊಡ್ಡವರು ಹೇಳಿದ್ದು ಅರ್ಥವಾಗುವ ವಯಸ್ಸಿನ ಮಕ್ಕಳು ಸುಳ್ಳು ಹೇಳಿದಾಗ ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ತಿಳಿಸಬೇಕು. ಅಲ್ಲದೆ, ಸಂದರ್ಭ ಸಿಕ್ಕಾಗಲೆಲ್ಲ ಸತ್ಯ ನುಡಿಯುವಂತೆ ಪ್ರೋತ್ಸಾಹಿಸಬೇಕು. ಸುಳ್ಳು ಹೇಳಿದ್ರೆ ಅಪ್ಪ-ಅಮ್ಮಂಗೆ ಬೇಸರವಾಗುತ್ತೆ ಎಂದು ಹೇಳಿ. ಮಗುವಿಗೆ ಸುಳ್ಳು ಹೇಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಿ. ಉದಾಹರಣೆಗೆ ಮಗು ದೋಸೆಗೆ ಸಾಸ್ ಹಾಕಿಕೊಳ್ಳುವಾಗ ನೆಲಕ್ಕೆ ಚೆಲ್ಲಿರುತ್ತೆ. ಆಗ ತಾಯಿ ಮಗುವಿಗೆ ಬೈದರೆ ಮುಂದಿನ ಬಾರಿ ಸಾಸ್ ಅಥವಾ ಇನ್ಯಾವುದೇ ವಸ್ತು ಚೆಲ್ಲಿ ಹೋದಾಗ ಅದು ಸುಳ್ಳು ಹೇಳೋದು ಪಕ್ಕಾ. ಹಾಗಾಗಿ ‘ಸಾಸ್ ಕೆಳಗೆ ಬಿದ್ದರೆ ಪರ್ವಾಗಿಲ್ಲ, ಅದನ್ನು ಕ್ಲೀನ್ ಮಾಡಲು ನಾನು ನಿನಗೆ ನೆರವು ನೀಡುತ್ತೇನೆ’ ಎಂದು ಹೇಳಿ. ಮಗು ತಾನು ಮಾಡಿದ ತಪ್ಪನ್ನು ನಿಮ್ಮ ಬಳಿ ಹೇಳಿದಾಗ ರೇಗಬೇಡಿ. ಬದಲಿಗೆ ಸತ್ಯ ಹೇಳಿರೋದಕ್ಕೆ ಪ್ರಶಂಶಿಸಿ. ಮಗುವಿನ ಚಿಕ್ಕಪುಟ್ಟ ವರ್ತನೆಗಳನ್ನು ಗಮನಿಸಿ, ತಿದ್ದೋದ್ರಿಂದ ದೊಡ್ಡವರಾದ ಮೇಲೆ ಅವರು ತಪ್ಪು ದಾರಿಯಲ್ಲಿ ನಡೆಯೋದನ್ನು ತಪ್ಪಿಸಬಹುದು.