
ಹೆಣ್ಮಕ್ಕಳಾಗಲೀ, ಗಂಡು ಮಕ್ಕಳಾಗಲೀ ವಯಸ್ಸು 25 ವರ್ಷ ದಾಟಿದಂತೆ ಕುಟುಂಬ ಮತ್ತು ಸಮಾಜ ಕೇಳುವ ಒಂದು ದೊಡ್ಡ ಪ್ರಶ್ನೆಯೆಂದರೆ "ನೀವ್ ಯಾವಾಗ ಮದುವೆಯಾಗ್ತೀರಿ"?. ಪೋಷಕರಿಂದ ಹಿಡಿದು ಸಂಬಂಧಿಕರವರೆಗೆ ಎಲ್ಲರೂ ಈ ಒಂದು ವಿಷಯದ ಬಗ್ಗೆ ಹೆಚ್ಚು ಚರ್ಚೆಗೆ ನಿಲ್ಲುತ್ತಾರೆ. ವಿಶೇಷವಾಗಿ ಮಗ ಅಥವಾ ಮಗಳು ಎಜುಕೇಶನ್ ಕಂಪ್ಲೀಟ್ ಮಾಡಿ ಉದ್ಯೋಗದಲ್ಲಿದ್ದರಂತೂ ಕಥೆ ಮುಗಿದೇ ಹೋಯ್ತು. ಯಾವುದೇ ಫಂಕ್ಷನ್‌ಗೆ ಹೋದ್ರೂ, ಎಲ್ಲಿ ಹೋದ್ರೂ ಈ ಪ್ರಶ್ನೆಯನ್ನ ಕೇಳಲು ಆರಂಭಿಸುತ್ತಾರೆ. ಅಂದರೆ ಹುಡುಗರು ಮತ್ತು ಹುಡುಗಿಯರು ಈಗ ಮದುವೆಯ ವಯಸ್ಸನ್ನು ತಲುಪಿದ್ದಾರೆ ಎಂದು ಎಲ್ಲೆಡೆ ಹೀಗೆ ಕೇಳ್ತಾರೆ. ಒಂದಲ್ಲ, ಎರಡಲ್ಲ ಆಗಾಗ್ಗೆ ಪ್ರಶ್ನೆಯನ್ನ ಪುನರಾವರ್ತಿಸಲಾಗುತ್ತದೆ, ಜನರ ಕಿರಿಕಿರಿಯಿಂದ ಬೇಸತ್ತು ಇವ್ರು ಉತ್ತರಿಸಲು ಪ್ರಾರಂಭಿಸ್ತಾರೆ. "ಇನ್ನು ಟೈಂ ಇದೆ ಬಿಡಿ ಆಗ್ತೀವಿ". ಅಷ್ಟಕ್ಕೂ ಮದುವೆಗೆ ನಿಜವಾಗಿಯೂ ನಿಗದಿತವಾದ ವಯಸ್ಸು ಎಷ್ಟು?. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿವೆಯೇ? ಈ ಟೈಂನಲ್ಲಿ ಮದುವೆಯಾದ್ರೆ ಏನು ಲಾಭ ಎಂದು ನೋಡುವುದಾದರೆ....
ಮದುವೆ ಎಂದರೆ ಕೇವಲ 'ಸಂಬಂಧ'ವಲ್ಲ!
ಮದುವೆ ಅಲ್ವಾ, ಆದ್ರಾಯ್ತು ಬಿಡು ಅನ್ನೋಕೆ ಈಸಿ. ಆದ್ರೆ ಇದು ಸಾಮಾನ್ಯ ನಿರ್ಧಾರವಲ್ಲ. ಇದು ಎರಡು ಹೃದಯಗಳ ಸಂಗಮ ಮಾತ್ರವಲ್ಲ, ಎರಡು ಕುಟುಂಬಗಳ ಸಂಗಮವೂ ಆಗಿದೆ. ಆದ್ದರಿಂದ 'ಮದುವೆ' ವಿಚಾರವನ್ನು ಯಾರಾದ್ರೂ ಪ್ರಸ್ತಾಪ ಮಾಡಿದ್ರೆ ಯೋಚಿಸದೆ ತೆಗೆದುಕೊಳ್ಳಬಾರ್ದು. ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಿದ್ಧರಾಗಿರುವುದು ಮುಖ್ಯ.
ನಿಜವಾಗಿಯೂ ಪರ್‌ಫೆಕ್ಟ್ ಏಜ್ ಯಾವ್ದು?
ಮದುವೆಗೆ ಯಾವುದೇ ನಿರ್ದಿಷ್ಟ ವಯಸ್ಸು ಇಲ್ಲ ಎಂದು ತಜ್ಞರು ಹೇಳ್ತಾರೆ. ಒಬ್ಬ ವ್ಯಕ್ತಿಯು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಿದ್ಧನಾದ್ರೆ ಅದು ಸರಿಯಾದ ಸಮಯ. ಆತುರ ಅಥವಾ ವಿಳಂಬ...ಎರಡೂ ಭವಿಷ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಸರಿಯಾದ ಸಮಯದಲ್ಲಿ ಮದುವೆಯಾಗುವುದರಿಂದ ಕುಟುಂಬ ಯೋಜನೆ ಸುಲಭವಾಗುತ್ತದೆ.
ಅಧ್ಯಯನಗಳ ಪ್ರಕಾರ…
ಹುಡುಗಿಯರಿಗೆ ಮದುವೆಗೆ ಸೂಕ್ತ ವಯಸ್ಸು 21 ರಿಂದ 30 ವರ್ಷಗಳು ಮತ್ತು ಪುರುಷರಿಗೆ 25 ರಿಂದ 33 ವರ್ಷಗಳು ಇತ್ತು. ಈಗ fuddu_sperm ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿರುವ ಮಾಹಿತಿಯ ಪ್ರಕಾರ, ಯಾರೇ ಆಗಲಿ 28-32ರೊಳಗೆ ಮದುವೆಯಾದ್ರೆ ಒಳ್ಳೇದು ಅಂತ ಹೇಳಲಾಗುತ್ತೆ. ಅದ್ಯಾಕೆ ಅಂದ್ರೆ ಈ ಸಮಯದಲ್ಲಿ, ಒಬ್ಬ ವ್ಯಕ್ತಿಯು ದೈಹಿಕವಾಗಿ ಸದೃಢನಾಗಿರುತ್ತಾನೆ. ಜೊತೆಗೆ ವೃತ್ತಿ ಮತ್ತು ಜೀವನದ ಪ್ರಮುಖ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬಹುದು.
ಸರಿಯಾದ ವಯಸ್ಸಿನಲ್ಲಿ ಮದುವೆ ಯಾಕಾಗ್ಬೇಕು?
ಈ ವಯಸ್ಸಿನಲ್ಲಿ ಫಲವತ್ತತೆ ಅಂದರೆ ಮಕ್ಕಳನ್ನು ಹೆರುವ ಸಾಮರ್ಥ್ಯ ಅತ್ಯುತ್ತಮವಾಗಿರುತ್ತದೆ. ಮದುವೆ ಸರಿಯಾದ ಸಮಯದಲ್ಲಿ ನಡೆದರೆ, ಗರ್ಭಾವಸ್ಥೆಯಲ್ಲಿ ಉಂಟಾಗುವ ತೊಂದರೆಗಳು ಕಡಿಮೆಯಾಗುತ್ತವೆ ಮತ್ತು ಪೋಷಕರಾಗುವ ಪ್ರಯಾಣ ಸುಲಭವಾಗುತ್ತದೆ.
ತಡವಾದರೆ ಆಯ್ಕೆಗಳೇನು?
ಒಂದು ವೇಳೆ ಯಾವುದಾದರೂ ಕಾರಣಕ್ಕಾಗಿ ನೀವು 35 ವರ್ಷದ ನಂತ್ರ ಮದುವೆಯಾಗಬೇಕಾದರೆ, ನಿರಾಶೆಗೊಳ್ಳುವ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ, ಅಂಡಾಣು ಫ್ರೀಜಿಂಗ್ ಮತ್ತು ವೀರ್ಯ ಫ್ರೀಜಿಂಗ್‌ನಂತಹ ಸೌಲಭ್ಯಗಳು ಲಭ್ಯವಿದೆ. ಇದು ಭವಿಷ್ಯದಲ್ಲಿ ಮಕ್ಕಳನ್ನು ಯೋಜಿಸಲು ಸಹಾಯ ಮಾಡುತ್ತವೆ. ಪೋಷಕರಾಗುವ ಕನಸನ್ನು ಐವಿಎಫ್ ಮತ್ತು ಇತರ ತಂತ್ರಗಳ ಸಹಾಯದಿಂದಲೂ ನನಸಾಗಿಸಬಹುದು.
'ಮದುವೆ' ಜೀವನದ ಪ್ರಮುಖ ಘಟ್ಟ
ಸಮಾಜದ ಒತ್ತಡಕ್ಕೆ ಒಳಗಾಗಿ ಮದುವೆಯಾಗ್ಬೇಡಿ ಅಥವಾ ನಿಮ್ಮ ವಯಸ್ಸಿನ ಬಗ್ಗೆ ಭಯಪಡಬೇಡಿ. ನಿಮ್ಮ ಮನಸ್ಸು, ದೇಹ ಮತ್ತು ಸಂದರ್ಭಗಳು ನೀವು ಈಗ ಸಿದ್ಧರಿದ್ದೀರಿ ಎಂದು ಹೇಳಿದಾಗ ಮಾತ್ರ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಿ. ಏಕೆಂದರೆ ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರ ಮಾತ್ರ ಜೀವನವನ್ನು ಸುಂದರಗೊಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.