ಇದೇನಿದು ಲವ್ ಬಾಂಬ್ ದಾಳಿ ಅಥವಾ ʼಲವ್ ಬಾಂಬಿಂಗ್ʼ ಎಂದು ಅಚ್ಚರಿ ಪಡಬಹುದು ನೀವು. ಬಹುಶಃ ಇದನ್ನು ಅನುಭವಿಸಿರಲೂ ಬಹುದು. ಆದರೆ ಅದರ ಬಗ್ಗೆ ನಿಮಗೆ ಅರಿವೇ ಇದ್ದಿರಲಾರದು. ಹಾಗಿದ್ದರೆ ಏನಿದು?
ಲವ್ ಬಾಂಬಿಂಗ್ ಅನ್ನುವುದು ಜೆನ್ ಝೀಗೆ ಸಂಬಂಧಿಸಿದ ಪದ. ಜೆನ್ ಝೀ ಎಂದರೆ 1997ರಿಂದ 2012ರ ನಡುವೆ ಹುಟ್ಟಿದ ಮಕ್ಕಳು. ಅಂದರೆ ಇವರಿಗೆ ಈಗ 24-39 ವರ್ಷ ವಯಸ್ಸು. ಇವರು ಇತ್ತೀಚೆಗೆ ಹೆಚ್ಚಿದ ಡೇಟಿಂಗ್ ಅಪ್ಲಿಕೇಶನ್‌ಗಳ ತೀವ್ರ ಬಳಕೆಯ ಪರಿಣಾಮವಾಗಿ ಪ್ರೀತಿಯ ಸಂಬಂಧಗಳನ್ನು ನೋಡುವ ರೀತಿಯೇ ಬದಲಾಗಿದೆ. ಬ್ರೆಡ್‌ಕ್ರಂಬಿಂಗ್, ಸಿಚುಯೇಶನ್‌ಶಿಪ್, ಘೋಷ್ಟಿಂಗ್, ಮತ್ತು ಆರ್ಬಿಟಿಂಗ್ ಮುಂತಾದ ಪದಗಳು ಹೊಸ ಥರದ ಡೇಟಿಂಗ್ನ ಭಾಗಗಳಾಗಿವೆ. ಇದರಿಂದ, ಈ ತಲೆಮಾರು ಲವ್ ಬಾಂಬಿಂಗ್‌ನ ಟಾಕ್ಸಿಕ್ ಪರಿಣಾಮ ಎದುರಿಸ್ತಾ ಇದೆ ಎಂದು ಹೇಳ್ತಿದಾರೆ. ಹಾಗಾದ್ರೆ ಲವ್ ಬಾಂಬ್ ದಾಳಿ ಎಂದರೇನು?
ಹಾಗೆಂದರೆ ನಿಮ್ಮ ಮೇಲೆ ಅತಿಯಾದ ಪ್ರೀತಿ ತೋರಿಸುವುದು ಮತ್ತು ನಿಮ್ಮಿಂದ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವುದು. ನಿಮ್ಮನ್ನು ಮ್ಯಾನಿಪ್ಯುಲೇಟ್ ಮಾಡಲು ಯಾರಾದರೂ ಅತಿಯಾದ ಪ್ರೀತಿ ಮತ್ತು ಕೇರ್ ತೋರಿಸಿದರೆ ಅದು "ಲವ್ ಬಾಂಬ್ ದಾಳಿ". ನಿಮ್ಮ ಪರಿಚಯ- ಪ್ರಣಯ ಸಂಬಂಧ ಈಗಷ್ಟೇ ಪ್ರಾರಂಭವಾಗುತ್ತಿದೆ ಎಂದಿಟ್ಟುಕೊಳ್ಳಿ. ಆಗ ಅಗಾಧ ಪ್ರಮಾಣದ ಲವ್ ತೋರಿಸುವುದು ತುಸು ಅಸಹಜ. ಇದರ ಬಗ್ಗೆ ಯಾವಾಗಲೂ ಎಚ್ಚರವಿರಬೇಕು.
undefined
ಮೊದಲನೆಯದಾಗಿ, ಅದು ಲವ್ ಸಂಬಂಧದ ಬಗ್ಗೆ ತಪ್ಪು ಕಲ್ಪನೆಯನ್ನು ಬೆಳೆಸುತ್ತದೆ. ಈ ಪ್ರೀತಿ ಸದಾ ಹೀಗೇ ಇರುತ್ತದೆ ಎಂಬ ಭಾವನೆ ಮೂಡುತ್ತದೆ. ಹಾಗಿರುವುದಿಲ್ಲ. ಎರಡನೆಯದಾಗಿ, ಇಂಥ ಅತಿ ಪ್ರೀತಿ ತೋರುವವರು ನಿಮ್ಮನ್ನು ಬಳಸಿಕೊಂಡು ಕೆಲವೇ ದಿನಗಳಲ್ಲಿ ನಿಮಗೆ ಕೈಕೊಡುವ ಸಾಧ್ಯತೆ ಅಧಿಕ. ಆಗ ನಿಮ್ಮಲ್ಲಿ ಆಕ್ರೋಶ, ಗಿಲ್ಟ್, ಸೇಡಿನ ಭಾವನೆಗಳೆಲ್ಲ ಹುಟ್ಟಿಕೊಳ್ಳುತ್ತವೆ. ಕೊನೆಗೆ ದುರ್ಬಲ ಸ್ವಭಾವದವರಲ್ಲಿ ಏನಾಗುತ್ತದೆ ಎಂದರೆ, ಆ ಕಳೆದುಹೋದ ಪ್ರೀತಿಯನ್ನು ಮರಳಿ ಪಡೆಯಲು ಪ್ರೇಮವಂಚಿತರು ಯಾವುದೇ ಹಂತಕ್ಕೆ ಹೋಗುವ ಅಪಾಯ ಮೈಮೇಲೆಳೆದುಕೊಳ್ಳಬಹುದು.
ಈ ಹೆಸರು 1970 ರ ದಶಕದಿಂದಲೂ ಮನೋವಿಜ್ಞಾನದಲ್ಲಿ ಬಳಸಲ್ಪಟ್ಟಿದೆ. ಈಗ ನೀವು ಗಮನಹರಿಸಬೇಕಾದ ಲವ್ ಬಾಂಬ್ ದಾಳಿಯ ಮೂರು ಪ್ರಮುಖ ಹಂತಗಳು ಇಲ್ಲಿವೆ. ಇವುಗಳ ಮೂಲಕ, ನಿಮ್ಮ ಮೇಲೆ ಇದರ ಪ್ರಯೋಗ ಆಗ್ತಾ ಇದೆಯಾ ಅಂತ ತಿಳಿಯಬಹುದು:
ನಿಮ್ಮನ್ನು ಭಯಂಕರವಾಗಿ ಪ್ರೀತಿಸುವ ವ್ಯಕ್ತಿ ನೀವು ಭೂಮಿಯ ಮೇಲಿನ ಅತ್ಯಂತ ಶ್ರೇಷ್ಠ ವ್ಯಕ್ತಿ ಎಂದು ಭಾವಿಸುವಂತೆ ವರ್ತಿಸಿದರೆ, ಸಿಕ್ಕಾಪಟ್ಟೆ ಹೊಗಳಿದರೆ, ನಿಮ್ಮ ಒಳ್ಳೆಯ ಗುಣಗಳನ್ನು ಅತಿಯಾಗಿ ಉತ್ಪ್ರೇಕ್ಷಿಸಿ ಒತ್ತಿಹೇಳಿದರೆ, ಎಲ್ಲವೂ ವೇಗವಾಗಿ ಚಲಿಸುತ್ತಿರುವಂತೆ ಮತ್ತು ತರಾತುರಿಯಲ್ಲಿ ಇದ್ದಂತೆ ಕಂಡರೆ... ಅದು ಲವ್ ಬಾಂಬ್.
ಎರಡನೇ ಹಂತ ಪ್ರೀತಿ- ದ್ವೇಷದ ಹಂತ. ಇಲ್ಲಿ ಪ್ರೀತಿ ಟೊಳ್ಳು ಬಾಂಬ್ ಥರ ಟುಸ್ ಆಗುತ್ತದೆ. ಸಂಗಾತಿ ಅರ್ಧದಲ್ಲಿ ನಿಮ್ಮ ಕೈ ಬಿಡಬಹುದು. ಕೆಲವು ಬಾರಿ ನಿಮ್ಮನ್ನು ನಿರ್ಲಕ್ಷಿಸಬಹುದು. ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಬಹುದು. ಇತರ ಜನರ ಮುಂದೆ ಪ್ರೀತಿಯಿಂದ ಕಂಡಂತೆ ನಟಿಸಬಹುದು, ಆದರೆ ನೀವು ಒಬ್ಬಂಟಿಯಾಗಿ ಸಿಕ್ಕ ತಕ್ಷಣ ಅವರ ನಿಜಮುಖ ತೋರಿಸುತ್ತಾರೆ.
ಪ್ರೀತಿಯ ಬಾಂಬ್ ದಾಳಿಯ ಮೂರನೇ ಹಂತ, ತಿರಸ್ಕಾರದ್ದು. ಈ ಹಂತದಲ್ಲಿ ಆ ವ್ಯಕ್ತಿಯು ತನ್ನ ಕ್ರಿಯೆಗಳಿಗೆ ಯಾವ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳುವುದಿಲ್ಲ. ನೀವು ಅವರ ನಡವಳಿಕೆಯನ್ನು ಪ್ರಶ್ನಿಸಲು ಅಥವಾ ಈ ಪರಿಸ್ಥಿತಿ ನಿಮಗೆ ಟಾಕ್ಸಿಕ್ ಎಂದು ಹೇಳಲು ನಿರ್ಧರಿಸಿದರೆ, ಅವರು ನಿಮ್ಮೊಂದಿಗೆ ಸಂಬಂಧವನ್ನು ಸಂಪೂರ್ಣವಾಗಿ ಕಡಿತಗೊಳಿಸುತ್ತಾರೆ. ಅಲ್ಲಿಗೆ ಲವ್ ಬಾಂಬ್ ಸ್ಫೋಟಿಸುತ್ತದೆ. ನೀವು ಬ್ಲಾಸ್ಟ್ ಆಗುತ್ತೀರಿ.
ಹೀಗಾಗಿ ಲವ್ ಬಾಂಬ್‌ನ ಮೊದಲ ಹಂತದಲ್ಲೇ ಎಚ್ಚೆತ್ತುಕೊಳ್ಳುವುದು ಲೇಸು.