#Feelfree: ತಂದೆಗೆ ಇನ್ನೊಬ್ಬ ಮಹಿಳೆ ಜತೆ ಸಂಬಂಧ, ಏನ್ ಮಾಡ್ಲಿ?

By Suvarna NewsFirst Published Apr 26, 2021, 1:53 PM IST
Highlights

ಹೆತ್ತವರು ತಮ್ಮಸಂಗಾತಿಗಳನ್ನು ಕಳೆದುಕೊಂಡು ಒಬ್ಬಂಟಿಗರಾದಾಗ, ಅವರಿಗೆ ಸಾಂಗತ್ಯದ ಅವಶ್ಯಕತೆ ಬೀಳುತ್ತದೆ. ಆಗ ಮಕ್ಕಳು ಜೊತೆಗೆ ಇಲ್ಲದಿದ್ದರೆ ಸಾಂಗತ್ಯವನ್ನು ಇನ್ನೊಬ್ಬರಲ್ಲಿ ಹುಡುಕಿಕೊಳ್ಳುತ್ತಾರೆ.

ಪ್ರಶ್ನೆ: ನಾನು ವಿವಾಹಿತ. ವಯಸ್ಸು ಮೂವತ್ತು. ನನ್ನ ತಂದೆಗೆ ಅರುವತ್ತು ವರ್ಷ. ನನ್ನ ತಾಯಿ ತೀರಿಕೊಂಡು ಹತ್ತು ವರ್ಷಗಳಾಗಿವೆ. ತಂದೆ ನಮ್ಮಿಂದ ಪ್ರತ್ಯೇಕವಾಗಿ, ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್‌ನಲ್ಲಿ ವಾಸಿಸುತ್ತಾರೆ. ನಾನು ಮತ್ತು ಪತ್ನಿ ಚೆನ್ನೈಯಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದೇವೆ. ಇತ್ತೀಚೆಗೆ ನನ್ನ ತಂದೆಯ ಮನೆಯಲ್ಲಿ ನಾವು ಎರಡು ದಿನ ಇರಬೇಕಾಗಿ ಬಂತು. ಆಗ ಒಂದು ವಿಚಾರ ತಿಳಿದು ಬಂತು. ನಮ್ಮ ತಂದೆ ದಿನಕ್ಕೊಮ್ಮೆ ಅಥವಾ ಎರಡು ದಿನಕ್ಕೊಮ್ಮೆ ಸುಮಾರು ಐವತ್ತು ವಯಸ್ಸಿನ ಮಹಿಳೆಯೊಬ್ಬರನ್ನು ಭೇಟಿಯಾಗುತ್ತಾರೆ. ಈ ಇಬ್ಬರೂ ಹಿಂದೆ ಒಟ್ಟಿಗೇ ಕೆಲಸ ಮಾಡುತ್ತಿದ್ದವರು, ಈಗ ಇಬ್ಬರೂ ನಿವೃತ್ತರಾಗಿದ್ದಾರೆ. ಆ ಮಹಿಳೆಗೆ ಗಂಡನಿಲ್ಲ. ಆದರೆ ಮಕ್ಕಳು ಇದ್ದಾರೆ, ಅವರೂ ತಾಯಿಯ ಜೊತೆಗೆ ಇಲ್ಲ. ಕೆಲವೊಮ್ಮೆ ಆ ಮಹಿಳೆ ನಮ್ಮ ತಂದೆಯ ಫ್ಲ್ಯಾಟ್‌ಗೆ ಬಂದು ಒಂದೆರಡು ದಿನ ಇದ್ದು ಹೋಗುತ್ತಾರೆ; ಅಥವಾ ನಮ್ಮ ತಂದೆಯೇ ಆ ಮಹಿಳೆಯಲ್ಲಿಗೆ ಹೋಗಿ ಇದ್ದು ಬರುತ್ತಾರೆ ಎಂದು ಹತ್ತಿರದವರು ತಿಳಿಸಿದರು. ಇವರಿಬ್ಬರ ಈ ಸಂಬಂಧ ನನಗೆ ಒಂದು ಬಗೆಯ ಮುಜುಗರ ತರಿಸಿತು. ಇದು ಮುಂದೆ ಎಲ್ಲಿಗೆ ಬೆಳೆಯುತ್ತದೋ, ಇದನ್ನು ಹೇಗೆ ಎದುರಿಸುವುದೋ ಎಂದು ಚಿಂತಿತನಾಗಿದ್ದೇನೆ. ಮಾರ್ಗದರ್ಶನ ಮಾಡಿ.



ಉತ್ತರ: ನೀವು ಸಂಭಾವ್ಯ ತೊಂದರೆಯನ್ನು ಊಹಿಸಿಕೊಂಡು ಈಗಲೇ ಆತಂಕ ಪಡುತ್ತಿರುವಂತೆ ಅನ್ನಿಸುತ್ತಿದೆ. ನಿಮ್ಮ ತಂದೆ ಆ ಮಹಿಳೆಯೊಡನೆ ಸಂಪರ್ಕ ಹೊಂದಿರಬಹುದು; ದೈಹಿಕ ಸಂಬಂಧವನ್ನೂ ಹೊಂದಿರಬಹುದು. ಅದೇನೂ ತಪ್ಪಲ್ಲ. ನೀವು ಹೇಗೆ ನಿಮ್ಮ ದೈಹಿಕ- ಲೈಂಗಿಕ ಆವಶ್ಯಕತೆಗಳಿಗೆ ನಿಮ್ಮ ಪತ್ನಿಯನ್ನು ಅವಲಂಬಿಸಿದ್ದೀರೋ ಹಾಗೆಯೇ ಅವರೂ ಇನ್ನೊಬ್ಬಾಕೆಯನ್ನು ಅಪೇಕ್ಷಿಸಿದರೆ ತಪ್ಪೇನು? ತಮ್ಮ ಪತ್ನಿಯನ್ನು ಕಳೆದುಕೊಂಡು ಹತ್ತು ವರ್ಷಗಳ ಕಾಲ ಅವರು ಒಂಟಿತನವನ್ನು ಅನುಭವಿಸಿರಬಹುದು. ಬಹುಶಃ ನೀವು ಅವರ ಜೊತೆಗೆ ಇದ್ದಿದ್ದರೆ ಅವರ ಒಂಟಿತನ ಸ್ವಲ್ಪ ಮಟ್ಟಿಗೆ ನೀಗುತ್ತಿತ್ತೋ ಏನೋ. ಆದರೆ ಅವರು ಒಂಟಿಯಾಗಿ ಬೆಂಗಳೂರಿನಲ್ಲಿದ್ದು, ನೀವು ಕೆಲಸದ ನಿಮಿತ್ತ ಚೆನ್ನೈಯಲ್ಲಿ ಇದ್ದೀರಿ. ನೀವು ನಿಮ್ಮ ಸಮಯವನ್ನು ನಿಮ್ಮ ತಂದೆಗೆ ಕೊಡಲಾರಿರಿ. ಅದು ಸಹಜವೇ ಅನ್ನೋಣ. ಹಾಗಿದ್ದರೆ ನಿಮ್ಮ ತಂದೆಗೆ, ಅವರ ಜೊತೆಗೆ ಇರುವ, ಅವರ ಮಾತುಗಳನ್ನು ಆಲಿಸುವ, ಆರೋಗ್ಯದ ತೊಂದರೆ ಆದಾಗ ನೋಡಿಕೊಳ್ಳುವ, ಒಂದು ಜೀವ ಹತ್ತಿರದಲ್ಲಿ ಬೇಕೆಂದು ಅಪೇಕ್ಷಿಸಿದ್ದರೆ ತಪ್ಪೇ? 



ಆ ವಯಸ್ಸಿನಲ್ಲಿ ಲೈಂಗಿಕ ಕಾಮನೆಗಳೂ ಇರುತ್ತವೆ, ಆದರೆ ಅವೇ ಮುಖ್ಯವಾಗಿರುವುದಿಲ್ಲ. ಅದಕ್ಕಿಂತಲೂ ಒಂಟಿತನ ನೀಗುವ ಸಾಂಗತ್ಯವೇ ಮುಖ್ಯವಾಗಿರುತ್ತದೆ. ನಿಮ್ಮ ತಂದೆ ಅಂಥದೊಂದು ಸಾಂಗತ್ಯವನ್ನು ಅವರಲ್ಲಿ ಕಂಡುಕೊಂಡಿರಬಹುದು. ಯಾವುದೇ ಕಾರಣಕ್ಕೂ ಅವರ ಈ ವರ್ತನೆಗೆ ಅಡ್ಡಿ ಬರಬೇಡಿ, ಭಾವನಾತ್ಮಕ ಬ್ಲ್ಯಾಕ್ಮೇಲ್‌ ಮಾಡಲು ಹೋಗಬೇಡಿ. ಅದು ಅವರು ರೆಬೆಲ್ ಆಗಲೋ, ಖಿನ್ನತೆಗೆ ತುತ್ತಾಗಲೋ ಕಾರಣವಾದೀತು.


ಇನ್ನು ಅವರ ಆಸ್ತಿಗೆ ಸಂಬಂಧಿಸಿ ನಿಮಗೇನಾದರೂ ಆತಂಕ ಇದ್ದರೆ, ಅದನ್ನು ನೀವು ತಂದೆಯ ಜೊತೆಗೇ ಕೂತು ಪರಿಹರಿಸಿಕೊಳ್ಳಬೇಕು. ತಂದೆಯ ಸ್ವಯಾರ್ಜಿತ ಆಸ್ತಿಯ ಬಗ್ಗೆ ತೀರ್ಮಾನ ಮಾಡುವುದು ಅವರದೇ ಅಧಿಕಾರವಾದ್ದರಿಂದ, ಅವರು ಆ ಮಹಿಳೆಯನ್ನು ಮದುವೆಯಾಗಿ, ಆಕೆಗೂ ಆಸ್ತಿಯಲ್ಲಿ ಪಾಲು ಕೊಡಲು ಇಚ್ಛಿಸಿದರೆ ನೀವು ಏನೂ ಮಾಡುವಂತಿಲ್ಲ. ಇಷ್ಟಕ್ಕೂ ನಿಮ್ಮ ತಂದೆ ಆಕೆಯನ್ನು ಮದುವೆಯಾಗಲು ಬಯಸಿದ್ದಾರೋ, ಅಥವಾ ಗೆಳೆತನದ ಮಟ್ಟದಲ್ಲೇ ಅದನ್ನು ಉಳಿಸಿಕೊಳ್ಳಲು ಬಯಸಿದ್ದಾರೋ ಎನ್ನವುದು ಇನ್ನೂ ನಿಮಗೆ ಸ್ಪಷ್ಟವಾಗಿಲ್ಲವಲ್ಲ. ಹಾಗಾಗಿ ಈ ಕುರಿತು ಈಗಲೇ ಏನನ್ನೂ ಊಹಿಸಿ ಗಾಬರಿಗೊಳ್ಳುವುದು ಬೇಡ. 
ನಿಮ್ಮ ತಂದೆ ತಮ್ಮ ಸಂಬಂಧವನ್ನು ವೈವಾಹಿಕ ಸಂಬಂಧವಾಗಿ ಬೆಳೆಸಲು ಇಚ್ಛಿಸಿದ್ದರೆ, ನಿಮಗೊಬ್ಬರು ಮಲತಾಯಿಯನ್ನು ಸ್ವಾಗತಿಸಲು ಮುಕ್ತ ಮನಸ್ಸಿನಿಂದ ಸಿದ್ಧರಾಗಿ. ಇಲ್ಲವೆಂದಾದರೆ, ಅವರನ್ನು ಅವರಷ್ಟಕ್ಕೇ ಬಿಡಿ, ಕೆಣಕಿ ಕೇಳಲು ಹೋಗಬೇಡಿ. ಮಕ್ಕಳಾದ ನಿಮ್ಮಿಂದ ಇಂಥ ವಿಷಯದಲ್ಲಿ ಒಂದು ಮುಕ್ತವಾದ, ಅರ್ಥಮಾಡಿಕೊಂಡ ವರ್ತನೆಯನ್ನು ಹೆತ್ತವರು ಅಪೇಕ್ಷಿಸುತ್ತಾರೆ. 



 

click me!