ಇನ್ನೇನೂ ರಾಕಿ ಹಬ್ಬಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇವೆ. ಈ ಮಧ್ಯೆ ಅಣ್ಣ ತಂಗಿಯ ಪ್ರೀತಿಯನ್ನು ಸಾರಿ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಅಣ್ಣ ತಂಗಿಯ ಅಥವಾ ಅಕ್ಕ ತಮ್ಮನ ಸಂಬಂಧ ಊಹೆಗೆ ನಿಲುಕದ್ದು ಒಡಹುಟ್ಟಿದ ತಂಗಿ ಅಥವಾ ತಮ್ಮ ಕಷ್ಟ ಸುಖಕ್ಕೆ ಜೊತೆಯಾಗುವುದರ ಜೊತೆ ಕ್ರೈಂ ಪಾರ್ಟನರ್‌ಗಳು ಕೂಡ ಆಗುತ್ತಾರೆ. ಅದರಲ್ಲೂ ಪರಸ್ಪರ ಕಾಲೆಳೆದುಕೊಳ್ಳುವುದರಲ್ಲಿ ಅಣ್ಣ ತಂಗಿ ಎತ್ತಿದ ಕೈ. ಅದರಲ್ಲೂ ತಂಗಿಯನ್ನೋ ಅಕ್ಕನನ್ನೋ ಗೋಳು ಹೊಯ್ದುಕೊಳ್ಳುವುದರಲ್ಲಿ ಒಡ ಹುಟ್ಟಿದ ತಮ್ಮನಿಗೆ ಅಥವಾ ಅಣ್ಣನಿಗೆ ಅದೇನೋ ಖುಷಿ.
ಆದರೆ ಎಷ್ಟು ಗೋಳು ಹೊಯ್ದುಕೊಳ್ಳುತ್ತಾರೋ ಅಷ್ಟೇ ಪ್ರೀತಿ ತೋರುವಲ್ಲೂ ಕೂಡ ಸಹೋದರರು ಎತ್ತಿದ ಕೈ ಅದೇ ರೀತಿ ಇಲ್ಲಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವೊಂದರಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದು, ರಸ್ತೆಗಳೆಲ್ಲಾ ತುಂಬಿ ಹರಿಯುತ್ತಿವೆ. ಜೋರಾಗಿ ಸುರಿಯುತ್ತಿರುವ ಮಳೆಯ ಮಧ್ಯೆ ತಂಗಿಗೆ ಶಾಲೆ ಬಿಟ್ಟಿದ್ದು, ಅಣ್ಣ ತಂಗಿಯನ್ನು ಬೆನ್ನಮೇಲೆ ಕೂರಿಸಿಕೊಂಡು ನೀರು ತುಂಬಿದ ರಸ್ತೆಯಲ್ಲಿ ಅನಾಯಾಸವಾಗಿ ರಸ್ತೆ ದಾಟಿಸಿಕೊಂಡು ಕರೆದೊಯ್ಯುತ್ತಾನೆ. ಸಹೋದರ ಹಾಗೂ ಸಹೋದರಿಯ ನಡುವಿನ ಬಂಧ ತುಂಬಾ ಸುಂದರ ಶುದ್ಧವಾದ ಸಂಬಂಧವಾಗಿದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ತಮ್ಮ ಬಾಲ್ಯದ ದಿನಗಳನ್ನು ತಮ್ಮ ಸಹೋದರ ಹಾಗೂ ಸಹೋದರಿಯನ್ನು ನೆನೆದುಕೊಂಡಿದ್ದಾರೆ.
ಕೆಲವೊಮ್ಮೆ ನೋಡುಗರಿಗೆ ಅಣ್ಣ ತಂಗಿಯರ ನಡುವೆ ನಡೆಯುವ ಜಗಳ ಕೆಲವೊಮ್ಮೆ ಮಹಾಯುದ್ಧದಂತೆ ಭಾಸವಾಗುವುದು. ಅದರಲ್ಲೂ ಮನೆಯಲ್ಲಿ ಅಪ್ಪ ಅಮ್ಮನಿಲ್ಲದಾಗ ಏನಾದರೂ ಕಿತಾಪತಿ ಮಾಡಿ ಪರಸ್ಪರ ಒಬ್ಬರ ಮೇಲೆ ಒಬ್ಬರು ಹಾಕುತ್ತಾ ಅಪ್ಪ ಅಮ್ಮನನ್ನೇ ಗೊಂದಲಕ್ಕೀಡು ಮಾಡುವುದರಲ್ಲಿಯೂ ಈ ಅಣ್ಣ ತಂಗಿ ಅಣ್ಣ ತಮ್ಮ ಬಲು ಹುಷಾರು. ತಾವೆಷ್ಟೇ ಕಿತ್ತಾಡಲಿ ಆದರೆ ತಮ್ಮ ಅಣ್ಣನ ಬಗ್ಗೆ ಬೇರೆ ಯಾರಾದರೂ ಒಂದು ಮಾತಾಡಿ ಬಿಡಲಿ ಯಾವ ತಂಗಿಯೂ ಅದನ್ನು ಸಹಿಸಿಕೊಳ್ಳಲಾರಳು. ತಾನು ತನ್ನ ಅಣ್ಣನ ಬಗ್ಗೆ ಏನು ಬೇಕಾದರೂ ಬೈದಾಡಬಹುದು ಆದರೆ ಬೇರೆ ಯಾರೂ ಆತನ ಬಗ್ಗೆ ತುಟಿಪಿಟಿಕ್ ಅನ್ನುವಂತಿಲ್ಲ ಅಷ್ಟರ ಮಟ್ಟಿಗೆ ತಂಗಿ ಅಣ್ಣನನ್ನು ಬಿಟ್ಟು ಕೊಡುವುದಿಲ್ಲ. ಅದರಲ್ಲೂ ತಂಗಿ ಮದುವೆಯಾಗಿ ಬೇರೆ ಮನೆಗೆ ಹೋದರಂತೂ ಮುಗಿದೇ ಹೋಯಿತು.
ಪೆಟ್ರೋಲ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತಿದ್ದ ಅಣ್ಣತಂಗಿಗೆ ಸ್ವಿಗ್ಗಿ ಬಾಯ್ ಸಹಾಯ
ಅಷ್ಟು ದಿನ ಸದಾ ಕಿತ್ತಾಡುತ್ತಿದ್ದ ಅಣ್ಣ ಅಕ್ಷರಶಃ ಹೆಣ್ಣು ಮಗುವಿನಂತೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡುತ್ತಾನೆ. ನಾನು ಮಾತ್ರ ಅಪ್ಪ ಅಮ್ಮನ ಸ್ವಂತ ಮಗ ನಿನ್ನನ್ನು ದತ್ತು ಪಡೆದಿದ್ದು ಎಂದು ಸದಾ ಕಾಲ ತಂಗಿಗೆ ಛೇಡಿಸಿ ಗೋಳು ಹೊಯ್ಯುವ ಅಣ್ಣ, ತಂಗಿ ಮದುವೆಯಾಗಿ ಬೇರೆ ಮನೆಗೆ ಹೊರಟು ನಿಂತಾಗ ಅಕ್ಷರಶಃ ಮಗುವಂತೆ ಬಿಕ್ಕಳಿಸಲು ಶುರು ಮಾಡುತ್ತಾನೆ. ಅಣ್ಣ ತಂಗಿಯನ್ನು ಹೊಂದಿರುವ ಬಹುತೇಕರಿಗೆ ಇದರ ಅನುಭವ ಆಗಿರಬಹುದು. ಒಟ್ಟಿನಲ್ಲಿ ಅಣ್ಣ ತಂಗಿಯ ಸಹೋದರತ್ವದ ಸುಂದರ ಭಾಂದವ್ಯದ ವಿಡಿಯೋವೊಂದು ನೋಡುಗರಿಗೆ ತಮ್ಮ ಬಾಲ್ಯ ಹಾಗೂ ತಮ್ಮ ಒಡಹುಟ್ಟಿದವರ ನೆನಪು ಮಾಡುತ್ತಿರುವುದು ಸುಳ್ಳಲ್ಲ.
Puneeth Rajkumar Fans: ಅಪ್ಪು ಕೋಟ್ಯಾಧಿಪತಿಯಿಂದ ಸ್ಫೂರ್ತಿ ಪಡೆದು ಅಣ್ಣ -ತಂಗಿ ಸಾಧನೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.