
ಒಡಿಶಾ: ತನಗೆ ವಯಸ್ಸಾಯ್ತು ಇನ್ನು ಮೊಮ್ಮಗನನ್ನು ಸರಿಯಾಗಿ ಸಾಕಲು ಸಾಧ್ಯವಾಗದು ಎಂದು ನೊಂದ ಅಜ್ಜಿಯೊಬ್ಬರು ಮೊಮ್ಮಗನನ್ನು ಕೇವಲ 200 ರೂಪಾಯಿಗೆ ಮಾರಿದ ಮನಕಲುಕುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ 65 ವರ್ಷದ ಮಂದ್ ಸೊರೆನ್ ಎಂಬುವವರೇ ಮಗುವನ್ನು ಮಾರಾಟ ಮಾಡಿದ ವೃದ್ದ ಮಹಿಳೆ.
ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದ ಅಜ್ಜಿ
ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದ ಮಂದ್ ಸೊರೆನ್ ಅವರಿಗೆ ಸ್ವಂತದೊಂದು ಮನೆಯೂ ಇರಲಿಲ್ಲ, ಜಮೀನು ಕೂಡ ಇರಲಿಲ್ಲ, ಸರ್ಕಾರದ ಯಾವುದೇ ಧನ ಸಹಾಯವೂ ಅವರಿಗೆ ತಲುಪಿರಲಿಲ್ಲ, ವರ್ಷಗಳ ಹಿಂದಷ್ಟೇ ಅವರ ಪತಿ ತೀರಿಕೊಂಡಿದ್ದರು. ಇತ್ತ ಸೊಸೆ ಕೋವಿಡ್ ಸಮಯದಲ್ಲಿ ತೀರಿಕೊಂಡಿದ್ದರೆ ಮಗ ಮನೆಬಿಟ್ಟು ಹೋಗಿದ್ದ, ಎಲ್ಲರ ಅಗಲಿಕೆಯಿಂದ ಒಂಟಿಯಾಗಿದ್ದ ಮಂದ್ ಸೊರೆನ್ ತಮ್ಮ ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ಸೊಸೆ ಅಗಲಿ ಮಗ ದೂರಾದ ನಂತರ ಮೊಮ್ಮಗನನ್ನು ಸಾಕುವ ಜವಾಬ್ದಾರಿ ಅವರ ಮೇಲೆ ಬಿತ್ತು. ಹೀಗಾಗಿ ಮಂದ್ ಸೊರೆನ್ ತನ್ನ 7 ವರ್ಷದ ಮೊಮ್ಮಗನೊಂದಿಗೆ ರಸಗೋವಿಂದಪುರ ಬ್ಲಾಕ್‌ನ ರಾಯ್‌ಪಾಲ್ ಗ್ರಾಮದಲ್ಲಿ ತನ್ನ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದರು.
200 ರೂಪಾಯಿಗೆ ಮೊಮ್ಮಗನ ಮಾರಾಟ
ಹೆಚ್ಚುತ್ತಿರುವ ವಯಸ್ಸಿನಿಂದಾಗಿ ಮಂದ್ ಸೊರೆನ್‌ಗೆ ಮೊಮ್ಮಗನನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇತ್ತೀಚೆಗೆ, ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮಂದ್ ಸೊರೆನ್, ತನ್ನ ಮೊಮ್ಮಗನಿಗೆ ಉತ್ತಮ ಜೀವನ ಸಿಗಲಿ, ಹೊಟ್ಟೆ ತುಂಬಾ ಊಟ ಸಿಗಲಿ ಮತ್ತು ಉತ್ತಮ ಆರೈಕೆ ಸಿಗಲಿ ಎಂದು 200 ರೂಪಾಯಿಗೆ ಅಪರಿಚಿತ ವ್ಯಕ್ತಿಯೊಬ್ಬರಿಗೆ ಮೊಮ್ಮಗನನ್ನು ಮಾರಾಟ ಮಾಡಿದ್ದಾರೆ. ಈ ವಿಚಾರ ಸ್ಥಳೀಯ ಪಂಚಾಯತ್ ಸಮಿತಿ ಸದಸ್ಯರ ಕಿವಿಗೆ ಬಿದ್ದಿದ್ದು, ವಿಚಾರ ತಿಳಿದ ಅವರು ಈ ವಿಚಾರವನ್ನು ಸ್ಥಳೀಯಾಡಳಿತಕ್ಕೆ ತಲುಪಿಸಿದರು. ಇದರ ನಂತರ ರಸಗೋವಿಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಾರಾಟವಾಗಿದ್ದ ಮಗುವನ್ನು ಹುಡುಕಿ ರಕ್ಷಿಸಿ ಠಾಣೆಗೆ ಕರೆತಂದರು. ಸುದ್ದಿ ತಿಳಿದ ತಕ್ಷಣ ಬಾಲ ಸಂರಕ್ಷಣಾ ಇಲಾಖೆ ಮತ್ತು ರಸಗೋವಿಂದಪುರದ ಸಿಡಿಪಿಒ ಅಧಿಕಾರಿಗಳು ಠಾಣೆಗೆ ಆಗಮಿಸಿ ಅಜ್ಜಿ-ಮೊಮ್ಮಗನನ್ನು ಸರ್ಕಾರಿ ರಕ್ಷಣೆಗೆ ಒಪ್ಪಿಸಿದ್ದಾರೆ.
ಕುಟುಂಬ ನಿರ್ಹವಣೆಗಾಗಿ ಗಂಡನಿಗೆ ತಿಳಿಯದಂತೆ ಮಗು ಮಾರಿದ ತಾಯಿ!
ಒಳ್ಳೆ ಶಿಕ್ಷಣ, ಊಟ ಸಿಗಲೆಂದು ದಂಪತಿಗೆ ನೀಡಿದ್ದೆ
ಆಡಳಿತದ ಮಧ್ಯಪ್ರವೇಶದಿಂದಾಗಿ ಈಗ ಮಗುವನ್ನು ಬರಿಪದದ ಬಾಲ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಈ ಬಗ್ಗೆ ಬಾಲ ಸಂರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ರಾಯ್‌ಪಾಲ್ ಗ್ರಾಮಕ್ಕೆ ಹೋದೆವು, ಅಲ್ಲಿ ಪೊಲೀಸರು ಅಜ್ಜಿ ಮತ್ತು ಮೊಮ್ಮಗನನ್ನು ಸುರಕ್ಷಿತವಾಗಿ ಇರಿಸಿದ್ದಾರೆ ಎಂದು ತಿಳಿಯಿತು. ವೃದ್ಧೆ ಮಾತನಾಡಿ, ಮಗುವನ್ನು ಮಾರಾಟ ಮಾಡಿಲ್ಲ, ತನ್ನ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಓದಲು ಬರೆಯಲು ಸಹಕಾರಿಯಾಗಲಿ ಎಂದು ದಂಪತಿಗೆ ನೀಡಿದ್ದೆ ಎಂದು ಅಜ್ಜಿ ಹೇಳಿದ್ದರು. ತನಿಖೆ ವೇಳೆ ವೃದ್ಧೆ ಮಂದ್ ಸೊರೆನ್ ಭಿಕ್ಷೆ ಬೇಡಿ ತಮ್ಮ ಮತ್ತು ಮೊಮ್ಮಗನ ಹೊಟ್ಟೆ ತುಂಬಿಸಿಕೊಳ್ಳಬೇಕಾದಂತಹ ಅನಿವಾರ್ಯತೆ ಇತ್ತು ಎಂದು ತಿಳಿದುಬಂದಿದೆ. ಮಗುವನ್ನು ಈಗ ಬರಿಪದದಲ್ಲಿರುವ ಬಾಲ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಮತ್ತು ಅವನನ್ನು ಸರಿಯಾಗಿ ನೋಡಿಕೊಳ್ಳಲಾಗುವುದು. ಇದರೊಂದಿಗೆ ಅಜ್ಜಿಗೆ ಪಿಂಚಣಿ ಮತ್ತು ಸರ್ಕಾರಿ ವಸತಿ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಮಾಹಿತಿ ನಿಡಿದರು. ಕೋರಲಾಗುತ್ತಿದೆ.
ಶೋಕಿಗಾಗಿ ಸಾಲ ಮಾಡಿ, ಸಾಲಕ್ಕಾಗಿ 6 ತಿಂಗಳ ಗಂಡು ಮಗುವನ್ನೇ ಮಾರಿದ ಅಪ್ಪ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.