
ಇಂದು ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಸಂಪರ್ಕ ತಂತ್ರಜ್ಞಾನ ಹೊಂದಿದೆ. ವಿಪರ್ಯಾಸ ಎಂದರೆ ಸಂಪರ್ಕ ಸಾಧನಗಳು ಇಷ್ಟೆಲ್ಲ ಇದ್ದರೂ, ಎದುರಿಗೆ ಮನೆಯ ಸದಸ್ಯರೋ, ನೆಂಟರೋ ಸಿಕ್ಕಿದಾಗ ಅವರ ಬಳಿ ಏನು ಮಾತನಾಡುವುದು, ಹೇಗೆ ವಿಷಯ ಆರಂಭಿಸುವುದು ಎನ್ನುವುದು ಮಾತ್ರ ತಿಳಿಯುವುದಿಲ್ಲ.
ಹತ್ತಿರದವರೊಂದಿಗೆ, ನೆಂಟರಿಷ್ಟರು, ಸ್ನೇಹಿತರೊಂದಿಗೆ ಡೈನಿಂಗ್ ಟೇಬಲ್ ಮುಂದೆ ಕುಳಿತಾಗ ಅಥವಾ ಬೇಕಾಬಿಟ್ಟಿ ನೆಲದ ಮೇಲೆ ಕುಳಿತಾಗ ಮನಸ್ಸಿಗೆ ಬಂದದ್ದೆಲ್ಲವನ್ನೂ ಹರಟುತ್ತಾ, ಹೊಟ್ಟೆ ತುಂಬಾ ನಗುತ್ತಾ ಕಳೆಯುವ ಸಮಯವಿದೆಯಲ್ಲ.... ಅದರಷ್ಟು ಖುಷಿ ಕೊಡುವ ಮತ್ತೊಂದು ಸಂವಹನ ಕ್ರಿಯೆ ಇರಲಿಕ್ಕಿಲ್ಲ. ಇಲ್ಲಿ ಮಾತಿಗೆ ಸಂಪೂರ್ಣ ಸ್ವಾತಂತ್ರ್ಯ. ಯಾವುದನ್ನೂ ಅಳೆದು ತೂಗುವ ಅಗತ್ಯವಿಲ್ಲ. ಏಕೆಂದರೆ ಎದುರಿಗಿರುವವರು ಆಪ್ತರೇ ಎಲ್ಲ. ಹಾಗಿದ್ದೂ ಕೂಡಾ ಅಪರೂಪಕ್ಕೆ ಹೀಗೆ ಎಲ್ಲ ಒಟ್ಟಾದಾಗ ಏನು ಮಾತನಾಡುವುದೆಂದೇ ತಿಳಿಯದೆ ತಡವರಿಸುವವರು ಹಲವರು. ಇದೇನು ರಾಕೆಟ್ ಸೈನ್ಸ್ ಅಲ್ಲ. ಸ್ವಲ್ಪ ಗಮನ ಹರಿಸಿದರೆ ಕಲ್ಲನ್ನು ಬೇಕಿದ್ದರೂ ಮಾತನಾಡಿಸುವ ಕಲೆ ಸಿದ್ಧಿಸುತ್ತದೆ.
ತೆಳ್ಳಗಿರುವ ಹುಡುಗಿಯ ಕಷ್ಟಸುಖಗಳು; ಬಿ ಹ್ಯಾಪಿ ವಿತ್ ವಾಟ್ ಯು ಹ್ಯಾವ್
ಕಾರ್ಯಕ್ರಮಗಳಲ್ಲಿ, ಮನೆಯಲ್ಲಿ ನೆಂಟರಿಷ್ಟರು ನೆರೆದಾಗ ಮಾತನ್ನು ಆರಂಭಿಸಲು ಈ ಮಾತುಗಳನ್ನು ಪಾಕೆಟ್‌ನಲ್ಲಿಟ್ಟುಕೊಳ್ಳಿ.
- ಇತ್ತೀಚೆಗೆ ಬದುಕಲ್ಲಿ ಏನಾಗ್ತಿದೆ? ಹೇಗಿದೆ ಜೀವನ?
ಈ ಪ್ರಶ್ನೆಯನ್ನು ಯಾರಿಗೆ ಬೇಕಾದರೂ ಕೇಳಬಹುದು. ಎಲ್ಲರಿಗೂ ಹೇಳಲು ಏನಾದರೂ ಇರುತ್ತದೆ. ಅವರು ಹಾಗೆ ಹೇಳುವ ವಿಷಯವನ್ನು ಗಮನವಿಟ್ಟು ಕೇಳಿದರೆ, ಆ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳುತ್ತಾ, ಪ್ರತಿಕ್ರಿಯೆ ನೀಡುತ್ತಾ ಮಾತು ಬೆಳೆಸುವುದು ಸುಲಭವಾಗುತ್ತದೆ. ಆರೋಗ್ಯದ ಬಗ್ಗೆ ವಿಚಾರಿಸುವುದು, ಮನೆಯ ಇತರ ಸದಸ್ಯರ ಬಗ್ಗೆ ವಿಚಾರಿಸುವುದರಿಂದ ನಿಮ್ಮ ಕಾಳಜಿ ವ್ಯಕ್ತವಾಗುತ್ತದೆ.
- ನಿಮ್ಮ ಹವ್ಯಾಸಗಳು ಹಾಗೂ ಆಸಕ್ತಿಗಳೇನು? ಫ್ರೀ ಟೈಂ ಹೇಗೆ ಕಳೆಯುತ್ತೀರಿ?
ತಂದೆತಾಯಿ ಕೆಲಸಕ್ಕೆ ಹೋಗುತ್ತಿರುತ್ತಾರೆ, ಮಕ್ಕಳು ಶಾಲೆ, ಅಜ್ಜಅಜ್ಜಿ ನಿವೃತ್ತರು... ಹೀಗೆ ಕುಟುಂಬದಲ್ಲಿ ಎಲ್ಲರೂ ಏನೋ ಮಾಡುತ್ತಿರಬಹುದು. ಆದರೆ, ಪ್ರತಿಯೊಬ್ಬರ ಆಸಕ್ತಿ ಹಾಗೂ ಪಾಸ್ ಟೈಂಗಳು ಬೇರೆ ಬೇರೆ ಇರುತ್ತವೆ. ಈ ಪ್ರಶ್ನೆ ಕೇಳುವ ಮೂಲಕ ಅವರ ವೈಶಿಷ್ಟ್ಯತೆಯತ್ತ ಗಮನಹರಿಸುತ್ತಿದ್ದೀರಿ ಎಂಬ ಭಾವ ಮೂಡುತ್ತದೆ. ಕೆಲವರು ಓದು, ಕೆಲವರು ಕ್ರೀಡೆ, ಮತ್ತೆ ಕೆಲವರಿಗೆ ಕ್ರಾಫ್ಟ್ಸ್ ಇತ್ಯಾದಿಗಳ ಕಡೆ ಆಸಕ್ತಿ ಇರುತ್ತದೆ. ಅವುಗಳ ಬಗ್ಗೆ ಬಿಡಿಸಿ ಕೇಳಿ.
- ನೆನಪನ್ನು ಕೆದಕಿ
ನೆನಪಿದ್ಯಾ ನಾವು ಚಿಕ್ಕೋರಿದ್ದಾಗ ನೀವು ಹೀಗಂತಿದ್ರಿ, ಹೀಗೆ ಮಾಡ್ತಿದ್ವಿ, ಅಲ್ಲೆಲ್ಲೋ ಅತ್ತೆ ಮನೆಗೆ ಹೋದಾಗ ಹೀಗಾಗಿತ್ತಲ್ಲ... ಎಂದು ಎದುರಿರುವ ನೆನಪನ್ನು ಕೆದಕುತ್ತಾ, ನಿಮ್ಮ ನೆನಪುಗಳನ್ನೂ ಆಸ್ವಾದಿಸುತ್ತಾ ಮಾತನಾಡುವುದಿದೆಯಲ್ಲಾ... ಅದು ಇಬ್ಬರ ನಡುವೆ ಈಚಿನ ವರ್ಷಗಳಲ್ಲಿ ಹೆಚ್ಚು ಸಿಗದೆ ಹುಟ್ಟಿಕೊಂಡ ಮುಜುಗರಗಳನ್ನೆಲ್ಲ ತೊಡೆದು ಹಾಕುತ್ತದೆ. ಅದರಲ್ಲೂ ಬಾಲ್ಯದ ನೆನಪು ಎಲ್ಲರಿಗೂ ಬಹಳ ಇಷ್ಟವೇ. ಇಂಥ ಕೆದಕುವಿಕೆ ಮತ್ತೆ ಮಾತಿಗೆ ಕೊನೆಯೇ ಇರದಂತೆ ಎಳೆಯುತ್ತಾ ಸಾಗುತ್ತದೆ.
- ಹೋದವರ, ಬಂದವರ ಬಗ್ಗೆ ಕೇಳಿ
ಕುಟುಂಬದಲ್ಲಿ ಈಚೆಗೆ ಯಾರಾದರೂ ಹತ್ತಿರದವರು ತೀರಿ ಹೋಗಿರಬಹುದು, ಮತ್ಯಾರೋ ವಿದೇಶಕ್ಕೆ ಹೋಗಿರಬಹುದು, ಹೊಸ ಸೊಸೆಯೊಬ್ಬಳ ಆಗಮನವಾಗಿರಬಹುದು ಇಲ್ಲವೇ ಮಗು ಹುಟ್ಟಿರಬಹುದು. ಇಂಥದ್ದರ ಕುರಿತು ಮಾತು ಎತ್ತುವುದು- ಇದು ಎಲ್ಲರಿಗೂ ಸಂಭ್ರಮಿಸಿದ ವಿಷಯ, ನಾವೆಲ್ಲ ಒಂದೇ ಕುಟುಂಬ ಎನ್ನುವಂಥ ಭಾವ ನೀಡುತ್ತದೆ. ದುಃಖದ ವಿಷಯಕ್ಕೆ ವಿಷಾದ ವ್ಯಕ್ತಪಡಿಸುತ್ತಲೂ, ಸಂತೋಷದ ವಿಷಯಕ್ಕೆ ನಿಮಗಾದ ವೈಯಕ್ತಿಕ ಸಂತಸವನ್ನು ತಿಳಿಸುತ್ತಲೂ ಮಾತು ಆರಂಭಿಸುವುದು ಉತ್ತಮ.
- ಭವಿಷ್ಯದ ಬಗ್ಗೆ, ಕನಸುಗಳ ಬಗ್ಗೆ ಪ್ರಶ್ನಿಸಿ
ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಕೇಳುವುದು, ದೊಡ್ಡವರಲ್ಲಿ- ಹೀಗೇನೋ ಮಾಡಬೇಕೆಂದುಕೊಂಡಿದ್ದಿರಲ್ಲ ಅದೇನಾಯಿತು, ಎಲ್ಲಿಯವರೆಗೆ ಬಂತು ಇತ್ಯಾದಿಗಳನ್ನು ಪ್ರಶ್ನಿಸುವುದು ಕೂಡಾ ಮಾತನ್ನು ಆರಂಭಿಸಲು ಸೂಕ್ತವೇ.
ಸಾಂಗತ್ಯದಲ್ಲಿ ಈ 9 ತಪ್ಪುಗಳು ಮಾಡಬೇಡಿ; ಪ್ರೀತಿಯನ್ನು ಪ್ರೂವ್ ಮಾಡೋದು ತಪ್ಪಲ್ವಾ?
- ಮೂವೀಸ್, ಅಡುಗೆ, ಪ್ರವಾಸ...
ಮಾತು ಆರಂಭಿಸಲು ವಿಷಯಗಳಿಗೆ ಕೊರತೆಯೇ ಇಲ್ಲ. ಇತ್ತೀಚೆಗೆ ಬಂದ ಚಿತ್ರವೊಂದರ ಬಗ್ಗೆ ಮಾತನ್ನೆತ್ತಿದರೆ, ಅದನ್ನು ನೋಡಿದವರೆಲ್ಲರೂ ನಿಮ್ಮೊಂದಿಗೆ ಆ ಮಾತಿನಲ್ಲಿ ಸೇರಿಕೊಳ್ಳುತ್ತಾರೆ. ಅದರ ಕತೆ, ಅಂಥದೇ ಬೇರೆ ಕತೆಗಳು, ಇತರೆ ಮೂವಿಗಳು...ಹೀಗೆ ಮಾತು ಮುಂದುವರಿಯುತ್ತದೆ. ಇನ್ನು ಅಂದಿನ ಅಡುಗೆ ಯಾರದ್ದು, ಅದರ ರುಚಿ, ಹೇಗೆ ಮಾಡಿದರೆಂದು ವಿಚಾರಿಸುವುದು, ಯಾರ್ಯಾರಿಗೆ ಯಾವುದು ಫೇವರೇಟ್ ಕೇಳುವುದು ಕೂಡಾ ಮಾತನ್ನು ಬೆಳೆಸುತ್ತದೆ. ಸುತ್ತ ಕುಳಿತವರಲ್ಲಿ ಯಾರಾದರೂ ಇತ್ತೀಚೆಗೆ ಪ್ರವಾಸ ಹೋಗಿದ್ದರೆ ಅದರ ಬಗ್ಗೆ ಕೇಳುವುದು, ಓದಿದ ಪುಸ್ತಕದ ಬಗ್ಗೆ ಕೇಳುವುದು, ಕ್ರೀಡೆ, ಆರೋಗ್ಯ, ಫಿಟ್ನೆಸ್ ಬಗ್ಗೆ ಮಾತನಾಡುವುದು... ಹೀಗೆ ಸ್ವಲ್ಪ ಕೆದಕಿದರೆ ಎಷ್ಟು ಬೇಕಾದರೂ ವಿಷಯಗಳು ಮಾತಿಗೆ ಬಂದು ಕೂರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.