
ಮಕ್ಕಳಿರಲವ್ವ ಮನೆ ತುಂಬಾ ಎಂಬ ಮಾತು ಕಿವಿಗಷ್ಟೇ ಅಲ್ಲ,ಮನಸ್ಸಿಗೂ ಮುದ ನೀಡುತ್ತೆಆದ್ರೆ ಮಕ್ಕಳನ್ನುಸಾಕೋದು ಬಾಯಿಯಲ್ಲಿ ಹೇಳಿದಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ.ನಾವು ನಮ್ಮ ಮಕ್ಕಳನ್ನುಅದೆಷ್ಟೇ ಪ್ರೀತಿಸಿದ್ರೂ ಕೆಲವೊಮ್ಮೆಅವರ ತುಂಟಾಟ,ಗಲಾಟೆ,ಅಳು ನಮ್ಮತಾಳ್ಮೆ ಪರೀಕ್ಷಿಸುತ್ತೆ.ಮಕ್ಕಳ ಪಾಲನೆಗೆ ತುಂಬಾಸಹನೆ ಬೇಕು.ಆದ್ರೆ ಇಂದಿನ ಗಡಿಬಿಡಿ ಜೀವನಶೈಲಿಯಲ್ಲಿ ತಾಳ್ಮೆ, ಸಹನೆ ಅನ್ನೋ ಗುಣಗಳು ತುಂಬಾನೇ ಕಡಿಮೆ.ಇದೇ ಕಾರಣಕ್ಕೆ ಇಂದು ಮಕ್ಕಳ ಪಾಲನೆ ಕೂಡ ಹೆತ್ತವರಿಗೆ ಒತ್ತಡದ ಕಾರ್ಯವೇ.ಅದ್ರಲ್ಲೂ ಉದ್ಯೋಗಸ್ಥ ಮಹಿಳೆಯರಂತೂ ಮಕ್ಕಳ ವಿಷಯದಲ್ಲಿ ಸಾಕಷ್ಟು ಒತ್ತಡ ಅನುಭವಿಸುತ್ತಾರೆ.ಎಷ್ಟೋ ಬಾರಿ ಮಕ್ಕಳ ವಿಷಯವಾಗಿ ಹೆತ್ತವರು ಅನುಭವಿಸೋ ಒತ್ತಡಕ್ಕೆ ಅವರ ಪರಿಸರದ ಜೊತೆ ಆಲೋಚನೆ ಶೈಲಿಯೂ ಕಾರಣವಾಗಿರುತ್ತೆ.ಹೀಗಿರೋವಾಗ ಮಕ್ಕಳ ಪೋಷಣೆಗೆ ಸಂಬಂಧಿಸಿ ಉದ್ಭವಿಸೋ ಒತ್ತಡಗಳನ್ನು ನಿಭಾಯಿಸೋದು ಹೇಗೆ ಅಂತೀರಾ?
ಸದಾ ಸುಖಿಯಾಗಿರೋಕೆ ಐದೇ ಸೂತ್ರ! ಏನವು..? ಇಲ್ಲಿ ಓದಿ
ಪರ್ಫೆಕ್ಟ್ ಪೇರೆಂಟ್ ಆಗೋ ಪ್ರಯತ್ನ ಬಿಡಿ
ಹೆತ್ತವರಿಗೆ ತಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಬಯಕೆಯಿರೋದು ಸಹಜ. ಆದ್ರೆ ಮಗುವಿಗೆ ಸಂಬಂಧಿಸಿದ ಪ್ರತಿ ಚಿಕ್ಕಪುಟ್ಟ ವಿಷಯಗಳ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳೋದು ಖಂಡಿತಾ ಒಳ್ಳೆಯದ್ದಲ್ಲ.ಇದ್ರಿಂದ ನಿಮ್ಮ ಮೇಲಿನ ಒತ್ತಡ ಇನ್ನಷ್ಟು ಹೆಚ್ಚುತ್ತೆ. ಮಗು ಸರಿಯಾಗಿ ಊಟ ಮಾಡಿಲ್ಲ,ನಿದ್ರೆ ಮಾಡಿಲ್ಲ,ತೂಕ ಹೆಚ್ಚಾಗಿಲ್ಲ ಎಂಬ ವಿಷಯಗಳು ಪಾಲಕರ ನೆಮ್ಮದಿ ಕೆಡಿಸುತ್ತವೆ. ಪ್ರತಿದಿನ ಮಗು ಇಷ್ಟೇ ತಿನ್ನಬೇಕು,ಇಷ್ಟೇ ಹೊತ್ತು ಮಲಗಬೇಕು ಎಂದು ಹೆತ್ತವರೇ ಮಾನದಂಡ ನಿಗದಿಪಡಿಸಿಕೊಂಡ್ರೆ ನೆಮ್ಮದಿ ಹರಣವಾಗೋದು ಪಕ್ಕಾ. ಮಕ್ಕಳು ಪ್ರತಿದಿನ ಒಂದೇ ತರಹ ಇರೊಲ್ಲ. ಒಂದು ದಿನ ಸ್ವಲ್ಪ ಜಾಸ್ತಿ ತಿಂದ್ರೆ, ಇನ್ನೊಂದು ದಿನ ಸ್ವಲ್ಪ ಕಡಿಮೆ ಊಟ ಮಾಡ್ತಾರೆ. ಇದ್ರಿಂದ ಯಾವುದೇ ತೊಂದರೆಯಂತೂ ಆಗೋದಿಲ್ಲ. ಹೀಗಾಗಿ ಮಗುವಿನ ಆಹಾರ, ನಿದ್ರೆಗೆ ಸಂಬಂಧಿಸಿದ ನಿಮ್ಮ ನಿರೀಕ್ಷೆ ಈಡೇರದಿದ್ರೆ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ. ರಿಲ್ಯಾಕ್ಸ್ ಆಗಿರಿ, ಎಲ್ಲ ಸಮಯದಲ್ಲೂ ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ.
ಅತಿಯಾದ ನಿರೀಕ್ಷೆ ಸಲ್ಲ
ಹೆತ್ತವರಾಗಿ ನಾವು ನಮ್ಮ ಕರ್ತವ್ಯದಲ್ಲಿ ಪರಿಪೂರ್ಣತೆ ಸಾಧಿಸಬೇಕೆಂಬ ಬಯಕೆ ಹಾಗೂ ನಿರೀಕ್ಷೆಯನ್ನು ಹೊತ್ತುಕೊಂಡಿರುತ್ತೇವೆ.ಅದೇರೀತಿ ಮಕ್ಕಳ ಬೆಳವಣಿಗೆ, ವರ್ತನೆಗಳಿಗೆ ಸಂಬಂಧಿಸಿ ಕೂಡ ನಾವು ತುಂಬಾ ನಿರೀಕ್ಷೆಗಳನ್ನು ಹೊಂದಿರುತ್ತೇವೆ. ಮಗು ಬೇಗ ಮಾತು ಕಲಿಯಬೇಕು, ಶಿಸ್ತಿನಿಂದ ವರ್ತಿಸಬೇಕು, ಅಪ್ಪ-ಅಮ್ಮ ಹೇಳಿದಂತೆ ಕೇಳಬೇಕು ಮುಂತಾದ ನಿರೀಕ್ಷೆಗಳು ಆಧುನಿಕ ಪಾಲಕರಲ್ಲಿ ತುಸು ಹೆಚ್ಚೇ ಇದೆ. ಇದೇ ಕಾರಣಕ್ಕೆ ಮಗುವಿನ ಪ್ರತಿ ಚಲನವಲನ, ವರ್ತನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ಆದ್ರೆ ಈ ರೀತಿ ಮಾಡಲು ಮಗು ನಮ್ಮ ಕೈಯಲ್ಲಿರೋ ಗೊಂಬೆಯಲ್ಲಎಂಬ ಅರಿವು ಪ್ರತಿಯೊಬ್ಬ ಪಾಲಕರಿಗೂ ಇರಬೇಕು. ಮಗುವಿಗೂ ಅದರದ್ದೇ ಆದ ಸ್ವಾತಂತ್ರ್ಯ, ಭಾವನೆಗಳಿವೆ. ನಾವದನ್ನು ಗೌರವಿಸಬೇಕು. ಮಗು ಬಿದ್ದರೆ ಬೀಳಲಿ ಬಿಡಿ, ಮತ್ತೆ ಏಳೋದು ಹೇಗೆ ಎಂಬುದು ತಿಳಿಯುತ್ತದೆ. ಬೀಳುತ್ತದೆ ಎಂಬ ಕಾರಣಕ್ಕೆ ಆಟವಾಡಲು ಬಿಡದಿರೋದು ಯಾವ ನ್ಯಾಯ? ಮಕ್ಕಳನ್ನು ಮಕ್ಕಳಾಗಿರಲು ಬಿಡಿ. ಅವರು ಮನಸ್ಸಿಗೆ ತೋಚಿದಂತೆ ಮಾತನಾಡಲಿ, ಎಲ್ಲರೊಂದಿಗೂ ಬೆರೆಯಲಿ.
ದಾಂಪತ್ಯದ ನೆಮ್ಮದಿ ಕೆಡಿಸೋ ಮಾತುಗಳು ಯಾವುವು ಗೊತ್ತಾ?
ಮಕ್ಕಳ ಮೇಲೆ ಶಿಸ್ತಿನ ಹೇರಿಕೆ ಬೇಡ
ಸಂಬಂಧಿಕರ ಮನೆಗೆ ಹೋಗಿರುತ್ತೇವೆ. ಅಲ್ಲಿ ಮಗು ಯಾವುದೋ ತಿನಿಸನ್ನು ನೋಡಿ ಬೇಕು ಎಂದು ರಚ್ಚೆ ಹಿಡಿದು ಅಳುತ್ತೆ. ಇಂಥ ಸಮಯದಲ್ಲಿ ಇಂದಿನ ಬಹುತೇಕ ಪಾಲಕರು ಮಗುವಿಗೆ ಗದರಿ ಸುಮ್ಮನಿರಿಸಲು ಪ್ರಯತ್ನಿಸುತ್ತಾರೆ. ಕೆಲವರಂತೂ ಏನೋ ಮರ್ಯಾದೆಯೇ ಹೋಯ್ತು ಎನ್ನುವಂತೆ ವರ್ತಿಸುತ್ತಾರೆ. ಇದಕ್ಕೆ ಕಾರಣ ಬೇರೆಯವರು ಏನು ಭಾವಿಸುತ್ತಾರೆ ಎಂಬುದೇ ಆಗಿರುತ್ತೆ.ಸಮಾಜ, ಸುತ್ತಲಿನವರು ತಪ್ಪು ತಿಳಿಯಬಹುದು ಎಂಬ ಕಾರಣಕ್ಕೆ ಬಹುತೇಕ ಸಂದರ್ಭಗಳಲ್ಲಿ ಮಕ್ಕಳ ವರ್ತನೆಗಳ ಮೇಲೆ ಕಡಿವಾಣ ಹಾಕಲು ನಾವು ಪ್ರಯತ್ನಿಸುತ್ತೇವೆ. ನಾವು ಹೇಳಿದಂತೆ ಅಥವಾ ನಿರೀಕ್ಷಿಸಿದಂತೆ ಮಗು ವರ್ತಿಸದಿದ್ದಾಗ ಸಿಟ್ಟಾಗುತ್ತೇವೆ. ಇದ್ರಿಂದ ಅನಗತ್ಯ ಒತ್ತಡ ಸೃಷ್ಟಿಯಾಗೋದಷ್ಟೇ ಅಲ್ಲ, ನಾವು ಅವರಿಂದ ಏನು ಬಯಸುತ್ತಿದ್ದೇವೆ ಎಂಬ ಬಗ್ಗೆ ಮಕ್ಕಳಿಗೆ ಗೊಂದಲ ಮೂಡುತ್ತದೆ ಕೂಡ.
ಸಂಗಾತಿ ನೆರವು ಪಡೆಯಿರಿ
ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಮಕ್ಕಳ ಪಾಲನೆಯ ಸಂಪೂರ್ಣ ಹೊರೆಯನ್ನು ತಾಯಿ ಹೆಗಲಿಗೆ ಹೊರಿಸಲಾಗುತ್ತದೆ. ಹಿಂದೆಲ್ಲ ಅವಿಭಕ್ತ ಕುಟುಂಬ ವ್ಯವಸ್ಥೆ ಹಾಗೂ ತಾಯಿ ಉದ್ಯೋಗಸ್ಥೆಯಲ್ಲದ ಕಾರಣಕ್ಕೆ ಮಕ್ಕಳ ಪಾಲನೆ ಆಕೆಗೆ ಅಷ್ಟೊಂದು ಹೊರೆಯೆನಿಸುತ್ತಿರಲಿಲ್ಲ. ಆದ್ರೆ ಇಂದಿನ ಪರಿಸ್ಥಿತಿ ಭಿನ್ನವಾಗಿದೆ. ತಾಯಿ ಮನೆ ಹಾಗೂ ಆಫೀಸ್ ಎರಡೂ ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ಹೀಗಾಗಿ ಮಕ್ಕಳ ಪಾಲನೆ ವಿಷಯದಲ್ಲಿ ಆಕೆ ಪತಿಯ ನೆರವು ಪಡೆಯೋದು ಅನಿವಾರ್ಯ. ಒಬ್ಬರೇ ಮಕ್ಕಳ ಜವಾಬ್ದಾರಿ ನಿಭಾಯಿಸಲು ಮುಂದಾದ್ರೆ ಒತ್ತಡ ಅನುಭವಿಸಬೇಕಾಗುತ್ತದೆ.
ರೊಮ್ಯಾನ್ಸ್ ಹೆಚ್ಚಿಸಲು ರೊಮ್ಯಾಂಟಿಕ್ ಸೂತ್ರಗಳು..!
ಬೆಂಬಲಕ್ಕೊಂದು ಬಳಗವಿರಲಿ
ಮಕ್ಕಳ ಪಾಲನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಅವರು ಕೂಡ ಮಕ್ಕಳ ಪಾಲನೆಗೆ ಸಂಬಂಧಿಸಿ ನಿಮ್ಮದೇ ಸಮಸ್ಯೆ ಎದುರಿಸಿರಬಹುದು, ಅವರಿಂದ ಒಂದಷ್ಟು ಸಲಹೆ, ನೆರವು ಸಿಗಬಹುದು.
ನಿಮಗಾಗಿ ಒಂದಿಷ್ಟು ಸಮಯ ಮೀಸಲಿಡಿ
ಮಕ್ಕಳ ಪಾಲನೆ ನಿಮಗದೆಷ್ಟೇ ಖುಷಿ ನೀಡುತ್ತಿದ್ದರೂ ದಿನದಲ್ಲಿ ನಿಮಗೋಸ್ಕರ ಒಂದಿಷ್ಟು ಸಮಯ ಮೀಸಲಿಡಲು ಮರೆಯಬೇಡಿ. ಟಿವಿಯಲ್ಲಿ ನಿಮಗಿಷ್ಟವಾದ ಕಾರ್ಯಕ್ರಮ ನೋಡಿ, ಪುಸ್ತಕ ಓದಿ, ವಾಕಿಂಗ್‌ಗೆ ಹೋಗಿ….ಹೀಗೆ ನಿಮ್ಮ ಮನಸ್ಸಿಗೆ ಖುಷಿ ನೀಡೋ ಯಾವುದಾದ್ರೂ ಹವ್ಯಾಸದಲ್ಲಿ ತೊಡಗಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.