
ತಾಯಿಗೆ ಮಕ್ಕಳಿಗಿಂತ ಮಿಗಿಲಾದದ್ದು ಮತ್ತೇನು ಇಲ್ಲ. ಮಕ್ಕಳು ಸ್ವಲ್ಪ ಸಮಯ ದೂರವಾದ್ರೂ ಏನೋ ಆತಂಕ ಮನೆ ಮಾಡಿರುತ್ತದೆ. ತಾಯಿಯಾದವಳು ಚಡಪಡಿಸ್ತಾಳೆ. ತಾಯಿಗೆ ಮಗಳ ಮೇಲೆ ಒಂದು ಕೈ ವಿಶೇಷ ಕಾಳಜಿ ಇರೋದು ಸುಳ್ಳಲ್ಲ. ಆಕೆಯನ್ನು ಸೆರೆಗಿನಲ್ಲಿ ಕಟ್ಟಿಕೊಂಡು ಸಾಕುವವರಿದ್ದಾರೆ. ಮಗಳು ಬೆಳೆದು ದೊಡ್ಡವಳಾದ್ಮೇಲೆ ಆಕೆಯನ್ನು ಬೇರೆಯವರ ಮನೆಗೆ ಕಳುಹಿಸುವುದು ಸುಲಭದ ಮಾತಲ್ಲ. ಮದುವೆಯಾಗು ಅಂತಾ ಮಗಳನ್ನು ಬೆಂಬಿಡದೆ ಹಿಂಸಿಸುವ ತಾಯಂದಿರಿಗೆ ಮಗಳು ಬೇರೆ ಮನೆ ಸೇರ್ತಾಳಲ್ಲ ಎನ್ನುವ ಆತಂಕ, ಭಯ, ಬೇಸರ ಹೆಚ್ಚಿರುತ್ತದೆ. ಮಗಳಿಗೆ ತಾನೆಷ್ಟು ಬೈದ್ರೂ ಚಿಂತೆಯಿಲ್ಲ, ಬೇರೆಯವರು ಒಂದೂ ಮಾತನಾಡಬಾರದು ಎಂಬ ನಿಲುವು ತಾಯಂದಿರದ್ದು. ಮಗಳು ಮದುವೆಯಾಗಿ ಗಂಡನ ಮನೆಗೆ ಹೋದ್ಮೇಲೆ ಆಕೆಯನ್ನು ಮತ್ತಷ್ಟು ಮಿಸ್ ಮಾಡಿಕೊಳ್ಳುವ ಅಮ್ಮಂದಿರು ಅತೀ ಪ್ರೀತಿಯಲ್ಲಿ ಕೆಲ ತಪ್ಪು ಮಾಡ್ತಾರೆ. ಕೇಳೋಕೆ, ಹೇಳೋಕೆ ಇದು ಗಂಭೀರ ಎನ್ನಿಸದೇ ಇದ್ರೂ ತಾಯಿ ಮಾಡುವ ಕೆಲ ಕೆಲಸ, ಮಗಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ.
ಗಂಡನ ಮನೆಯಲ್ಲಿ ಮಗಳು ಸುಖವಾಗಿರಬೇಕು, ಅಲ್ಲಿನ ಪರಿಸರ (Environment) ಕ್ಕೆ ಹೊಂದಿಕೊಳ್ಳಬೇಕು, ಆಕೆಯ ಭವಿಷ್ಯ ಸುಂದರವಾಗಿರಬೇಕೆಂದ್ರೆ ತಾಯಿಯಾದವಳು ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಇಂಥ ಕೆಲಸ ಮಾಡ್ಬಾರದು.
ಸಂಗಾತಿ ಹೀಗ್ ಮಾಡಿದಾಗ ಸುಮ್ಮನಿದ್ರೆ ಜೀವನ ಹಾಳಾಗೋದು ಗ್ಯಾರಂಟಿ
ಮಗಳ ಮದುವೆ (Marriage) ಯಾದ್ಮೇಲೆ ತಾಯಿ ಈ ಕೆಲಸ ಮಾಡ್ಬಾರದು :
ಪದೇ ಪದೇ ಫೋನ್ (Phone) ಮಾಡ್ಬೇಡಿ : ಮಗಳು ಗಂಡನ ಮನೆಗೆ ಹೋದ್ಮೇಲೆ ಮನೆ ಖಾಲಿ ಎನ್ನಿಸೋದು ಸಹಜ. ಅಲ್ಲಿ ಏನು ಮಾಡ್ತಿದ್ದಾಳೆ ಎಂಬ ಭಯ, ಕುತೂಹಲ ಕೂಡ ಇರುತ್ತೆ. ಹಾಗಂತ ಆಗಾಗ ಫೋನ್ ಮಾಡ್ತಿದ್ದರೆ ಆಕೆ ಡಿಸ್ಟರ್ಬ್ ಆಗ್ತಾಳೆ. ಗಂಡನ ಮನೆ ಸದಸ್ಯರ ಜೊತೆ ಆಕೆ ಬೆರೆಯುವ ಅವಶ್ಯಕತೆ ಇರುತ್ತದೆ. ಹೆಚ್ಚು ಸಮಯ ಅವರ ಜೊತೆ ಕಳೆಯುವ ಬದಲು ಫೋನ್ ನಲ್ಲಿದ್ದರೆ ಮುಂದೆ ಆಕೆಯೇ ತೊಂದರೆ ಅನುಭವಿಸಬೇಕಾಗುತ್ತದೆ. ಅಮ್ಮನಾದವಳು ತನ್ನ ಭಾವನೆಯನ್ನು ಹತ್ತಿಕ್ಕಿ ಸುಮ್ಮನಿರುವುದು ಬಹಳ ಯೋಗ್ಯ ಕೆಲಸ.
ಗಂಡನ ಮನೆಯಲ್ಲಿ ಕೆಲಸ ಮಾಡ್ಬೇಡ : ಮದುವೆಯಾದ್ಮೇಲೆ ಗಂಡನ ಮನೆಯೇ ಮಗಳ ಮನೆ. ಅಲ್ಲಿನ ಕೆಲಸ ಕಲಿತು, ಅದನ್ನು ಮಾಡೋದು ಆಕೆ ಕರ್ತವ್ಯ. ಕೆಲಸ ಮಾಡ್ಬೇಡ ಎಂದು ಆಕೆ ತಲೆ ತುಂಬುವ ಕೆಲಸವನ್ನು ತಾಯಿ ಮಾಡಬಾರದು. ಮಗಳಿಗೆ ಕೆಲಸ ಹೇಗೆ ಮಾಡೋದು, ಹೇಗೆ ಹೊಂದಿಕೊಂಡು ಹೋಗಬೇಕು ಎಂಬ ಬಗ್ಗೆ ತಿಳಿ ಹೇಳ್ಬೇಕು.
Personality Tips: ನೀವು ಇಂಟ್ಯೂಷನ್ ಹೊಂದಿದ್ದೀರಾ? ನಿಮಗೂ ಹೀಗೆಲ್ಲ ಆಗುತ್ತಾ?
ಬೇರೆ ಮನೆ ಮಾಡಿ : ಮದುವೆಯಾದ್ಮೇಲೂ ಮಗಳು ಸಂತೋಷವಾಗಿರಬೇಕು, ಆರಾಮವಾಗಿರಬೇಕು ಎಂದು ತಾಯಿ ಬಯಸೋದು ಸಹಜ. ಹಾಗಂತ ನೀವಿಬ್ಬರು ಬೇರೆ ವಾಸ ಮಾಡಿ ಎನ್ನುವ ಮೂಲಕ ಅಳಿಯನ ಸಂಸಾರ ಒಡೆಯೋದು ಸೂಕ್ತವಲ್ಲ. ಅನೇಕ ತಾಯಂದಿರು, ಮಗಳಿಗೆ ಇದೇ ಮಾತನ್ನು ಹೇಳ್ತಾರೆ. ಮನೆ ಕೆಲಸ, ಅತ್ತೆ, ಮಾವನ ಸೇವೆ ಮಾಡಿದ್ದು ಸಾಕು, ನಿನ್ನ ಗಂಡನ ಹತ್ತಿರ ಬೇರೆ ಮನೆ ಮಾಡೋಕೆ ಹೇಳು ಅಂತಾ ಮಗಳ ತಲೆ ತುಂಬುತ್ತಾರೆ. ಇದ್ರಿಂದ ಮಗಳು ಸುಖವಾಗಿರ್ತಾಳೆ ಎಂದು ನೀವು ಬಯಸಿದ್ರೆ ತಪ್ಪು.
ಆಗಾಗ ತವರಿಗೆ ಕರೆಯಬೇಡಿ : ಮಗಳನ್ನು ನೋಡದೆ ಬೇಸರ ಬರೋದು ಸಹಜವಾದ್ರೂ ಮಗಳನ್ನು ಆಗಾಗ ತವರಿಕೆ ಕರೆಯಬೇಡಿ. ಇದು ಮಗಳ ಹಾಗೂ ಆಕೆ ಹೊಸ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಒಂದೆರಡು ವರ್ಷ ಮಗಳಿಗೆ ಹೊಂದಿಕೊಳ್ಳಲು ಸಮಯ ಬೇಕು. ಹಾಗಾಗಿ ಅಲ್ಲಿಯವರೆಗೆ ಆಕೆಯನ್ನು ತವರಿಗೆ ಹೆಚ್ಚಾಗಿ ಕರೆಯಬೇಡಿ.
ಅಳಿಯನ ಕೆಲಸದಲ್ಲಿ ಮಧ್ಯ ಪ್ರವೇಶ : ಅಳಿಯ ಹಾಗೂ ಮಗಳ ಮಧ್ಯೆ ಎಂದೂ ಹೋಗ್ಬಾರದು. ಮಗಳ ಪರ ಮಾತನಾಡ್ತಾ, ಅಳಿಯನ ಪಾಲಕರ ಬಗ್ಗೆ ಕೆಟ್ಟ ಮಾತುಗಳನ್ನಾಡ್ತಾ ಹೋದ್ರೆ ಮಗಳ ಬಾಳು ಹಾಳಾಗುತ್ತದೆ. ಹಾಗೆಯೇ ಅಳಿಯ ಏನು ಕೆಲಸ ಮಾಡ್ತಿದ್ದಾನೆ, ಎಷ್ಟು ಸಂಬಳ ತರ್ತಾನೆ, ಮನೆಗೆ ಬರುವ ಸಮಯ ಯಾವುದು ಎಲ್ಲವನ್ನೂ ಕೇಳಿ ಹಿಂಸೆ ನೀಡೋದು ಸೂಕ್ತವಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.