
ಮಕ್ಕಳಾದ್ಮೇಲೆ ಜೀವನದ ಗತಿ ಸಂಪೂರ್ಣ ಬದಲಾಗುತ್ತೆ. ಪೋಷಕರಾಗೋದು ಅಂದ್ರೆ ಬರೀ ಮಗುವಿಗೆ ಜನ್ಮ ನೀಡೋದಲ್ಲ. ಮಗುವಿನ ಬೆಳವಣಿಗೆ, ಆರೋಗ್ಯ, ಉತ್ತಮ ಭವಿಷ್ಯ ಸೇರಿದಂತೆ ದೊಡ್ಡ ಜವಾಬ್ದಾರಿ ಪಾಲಕರ ಮೇಲಿರುತ್ತೆ. ಮಕ್ಕಳನ್ನು ಬೆಳೆಸುವ ಹಾದಿಯಲ್ಲಿ ಪೋಷಕರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಅದರಲ್ಲೂ ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟಾಗ ಅವರ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ಮಕ್ಕಳಿಗೆ ಪೋಷಕರ ಪ್ರೀತಿ, ಕಾಳಜಿ ಮತ್ತು ಮಾರ್ಗದರ್ಶನ ಬಹಳ ಮುಖ್ಯ.
ಸಾಮಾನ್ಯವಾಗಿ ಮಗುವಿನ ಜನನದ ಸಮಯದಲ್ಲಿ ತಾಯಿಗೆ ಮಾತೃತ್ವ ರಜೆ ನೀಡಲಾಗುತ್ತದೆ. ಆದರೆ ಈಗ ಇದಕ್ಕಿಂತ ಭಿನ್ನವಾದ ಮತ್ತೊಂದು ಹೊಸ ಟ್ರೆಂಡ್ ಚಾಲ್ತಿಗೆ ಬರುತ್ತಿದೆ. ಅದುವೇ ಟೀನ್-ಟರ್ನಿಟಿ ಲೀವ್!
ಇತ್ತೀಚಿನ ದಿನಗಳಲ್ಲಿ ಟೀನ್-ಟರ್ನಿಟಿ ಲೀವ್ ಎಂಬ ಪದ ಹೆಚ್ಚು ಚರ್ಚೆಯಾಗುತ್ತಿದೆ. ಅಂದರೆ, ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟಾಗ ಅವರ ಜೊತೆ ಹೆಚ್ಚಿನ ಸಮಯ ಕಳೆಯಲು ಪೋಷಕರು ತಮ್ಮ ಕೆಲಸದಿಂದ ರಜೆ ಪಡೆಯುವುದು ಅಥವಾ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದೇ ಟೀನ್-ಟರ್ನಿಟಿ ಲೀವ್.
ಸಾಮಾನ್ಯವಾಗಿ ಮಕ್ಕಳಿಗೆ 12 ವರ್ಷವಾಗ್ತಿದ್ದಂತೆ ಅವರ ಸ್ವಭಾವದಲ್ಲಿ, ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. 12 ರಿಂದ 16 ವರ್ಷದ ಮಕ್ಕಳನ್ನು ಅತ್ಯಂತ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಬೇಕು ಅಂತ ತಜ್ಞರು ಸಲಹೆ ನೀಡ್ತಾರೆ. ಈಗಿನ ಪಾಲಕರು ಅದಕ್ಕೆ ಆದ್ಯತೆ ನೀಡ್ತಿದ್ದಾರೆ. ಮಕ್ಕಳ ಉತ್ತಮ ಭವಿಷ್ಯ, ಮಾನಸಿಕ ಆರೋಗ್ಯ ಮತ್ತು ಓದಿನ ಒತ್ತಡವನ್ನು ನಿಭಾಯಿಸಲು ಅವರಿಗೆ ನೆರವಾಗಲು ಪಾಲಕರು ಟೀನ್ ಟರ್ನಿಟಿ ಲೀವ್ ಪಡೆಯುತ್ತಿದ್ದಾರೆ.
ಮಾತೃತ್ವ ರಜೆಯಂತೆ ಟೀನ್-ಟರ್ನಿಟಿ ಲೀವ್ ಯಾವುದೇ ಸರ್ಕಾರಿ ರಜೆಯಲ್ಲ. ಕಂಪನಿಗಳು ಕಡ್ಡಾಯವಾಗಿ ನೀಡುವ ಸೌಲಭ್ಯವೂ ಅಲ್ಲ. ಇದು ಪೋಷಕರು ತಮ್ಮ ಮಕ್ಕಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸ್ವಯಂಪ್ರೇರಣೆಯಿಂದ ತೆಗೆದುಕೊಳ್ಳುವ ನಿರ್ಧಾರವಾಗಿದೆ. ಮಕ್ಕಳಿಗೆ ಹೆಚ್ಚು ಸಮಯ ನೀಡಲು ಕೆಲಸದ ಅವಧಿಯನ್ನು ಬದಲಾಯಿಸಿಕೊಳ್ಳುವುದು, ರಜೆ ಪಡೆಯುವುದು ಅಥವಾ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಇದರ ಭಾಗವಾಗಿದೆ.
ಹದಿಹರೆಯದ ಮಕ್ಕಳಿಗೆ ಪೋಷಕರ ಬೆಂಬಲ
• ಹದಿಹರೆಯದಲ್ಲಿ ಮಕ್ಕಳು ಸಾಕಷ್ಟು ಭಾವನಾತ್ಮಕ ಬದಲಾವಣೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಅವರ ಮಾತುಗಳನ್ನು ತಾಳ್ಮೆಯಿಂದ ಕೇಳುವ, ಅವರಿಗೆ ಧೈರ್ಯ ತುಂಬುವ ಪೋಷಕರ ಅಗತ್ಯವಿರುತ್ತದೆ.
• ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಸಾಮಾಜಿಕ ಜಾಲತಾಣಗಳ ಒಳ್ಳೆಯದು ಮತ್ತು ಕೆಟ್ಟದ್ದನ್ನು ತಿಳಿಸಿಕೊಡುವುದರ ಜೊತೆಗೆ ಪೋಷಕರ ನಿಗಾ ಕೂಡ ಅಗತ್ಯ.
• ಮಕ್ಕಳು ಯಾವುದೇ ಸಮಸ್ಯೆಯಲ್ಲಿದ್ದರೂ ತಮ್ಮ ಪೋಷಕರ ಬಳಿ ಮುಕ್ತವಾಗಿ ಮಾತನಾಡಬಹುದು ಎಂಬ ಭರವಸೆ ಇರಬೇಕು. ಪೋಷಕರ ಸಾನ್ನಿಧ್ಯ ಅವರಿಗೆ ಆತ್ಮವಿಶ್ವಾಸ ಮತ್ತು ಭದ್ರತೆಯ ಭಾವನೆ ನೀಡುತ್ತದೆ.
• ಹದಿಹರೆಯಕ್ಕೆ ಬಂದಂತೆ ಮಕ್ಕಳು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲು ಹಿಂಜರಿಯಬಹುದು. ಕೆಲವೊಮ್ಮೆ ಪೋಷಕರು ಮತ್ತು ಮಕ್ಕಳ ನಡುವೆ ಅಂತರವೂ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಸಂಬಂಧವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ.
• ಇಂದಿನ ಮಕ್ಕಳ ಮೇಲೆ ಶಾಲೆಯ ಓದು, ಸ್ಪರ್ಧೆ ಮತ್ತು ಪರೀಕ್ಷೆಗಳ ಒತ್ತಡ ಹೆಚ್ಚಾಗಿದೆ. ಅದರಲ್ಲೂ ಹತ್ತನೇ ಹಾಗೂ ಹನ್ನೆರಡನೇ ತರಗತಿಯ ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ಮಕ್ಕಳಿಗೆ ಹೆಚ್ಚಿನ ಮಾರ್ಗದರ್ಶನ ಮತ್ತು ಮಾನಸಿಕ ಬೆಂಬಲ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಪೋಷಕರ ಸಮಯ ಮತ್ತು ಸಹಕಾರ ಬಹಳ ಮುಖ್ಯ.
ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವುದು ಎಂದರೆ ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಮಾತ್ರವಲ್ಲ. ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು, ಸಮಸ್ಯೆಗಳನ್ನು ಆಲಿಸುವುದು ಮತ್ತು ಅಗತ್ಯವಿದ್ದಾಗ ಅವರ ಜೊತೆ ನಿಲ್ಲುವುದೂ ಅಷ್ಟೇ ಮುಖ್ಯ. ಟೀನ್-ಟರ್ನಿಟಿ ಲೀವ್ ಎಂಬುದು ರಜೆಗಿಂತಲೂ ಹೆಚ್ಚಾಗಿ ಮಕ್ಕಳಿಗೆ ಸಮಯ ನೀಡುವ ಪೋಷಕರ ಹೊಸ ಆಲೋಚನೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.