ಅನಿರುದ್ಧ್-ಕಾವ್ಯಾ ಮಾರನ್ ರಿಸೆಪ್ಶನ್‌ನಲ್ಲಿ ಮಿಂಚಿದ ವಿಶ್ವದ ಮಾರಕ ಪ್ಲೇಯರ್‌ ಪತ್ನಿ, ಮೊದಲ ಭೇಟಿಯಲ್ಲೇ ಉಂಗುರ ತೊಡಿಸಿದ್ದ ಕ್ರಿಕೆಟಿಗ!

Published : Nov 23, 2026, 12:25 PM IST
Madhi Malar

ಸಾರಾಂಶ

ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ವಿವಾಹ ಆರತಕ್ಷತೆಯಲ್ಲಿ ಮುತ್ತಯ್ಯ ಮುರಳೀಧರನ್ ಪತ್ನಿ ಮಧಿಮಲರ್ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ 2004ರಲ್ಲಿ ಆರಂಭವಾದ ಇವರಿಬ್ಬರ ಅನಿರೀಕ್ಷಿತ ಪ್ರೇಮಕಥೆ ಹಾಗೂ ಸರಳ ವಿವಾಹದ ವಿವರಗಳು ಮತ್ತೆ ವೈರಲ್ ಆಗುತ್ತಿವೆ.

ಬೆಂಗಳೂರು (ನ.23): ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಒಡತಿ ಮತ್ತು ದಯಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ವಿಶ್ವದ ಮಾರಕ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಪತ್ನಿ ಮಧಿಮಲರ್ ರಾಮಮೂರ್ತಿ ಎಲ್ಲರ ಗಮನ ಸೆಳೆದಿದ್ದಾರೆ: ಚಿನ್ನದ ಬಣ್ಣದ ಸೀರೆ ಹಾಗೂ ಆಕರ್ಷಕ ಆಭರಣಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಧಿಮಲರ್ ಅವರ ಸೊಗಸಾದ ಫ್ಯಾಶನ್ ಸೆನ್ಸ್‌ಗೆ ಕ್ರಿಕೆಟ್ ಹಾಗೂ ಸಿನಿಮಾ ಜಗತ್ತು ಫಿದಾ ಆಗಿದೆ!

ನವದಂಪತಿಗಳಾದ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರೊಂದಿಗೆ ಮಧಿಮಲರ್ ಅವರು ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ 800 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 534 ವಿಕೆಟ್‌ಗಳನ್ನು ಪಡೆದು ವಿಶ್ವದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಹೊಂದಿರುವ, 'ದೂಸ್ರಾ' ಎಸೆತದ ಹರಿಕಾರ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿರುವ ಮುತ್ತಯ್ಯ ಮುರಳೀಧರನ್ ಅವರ ಪತ್ನಿಯ ಹಿನ್ನೆಲೆ ಮತ್ತು ಇವರಿಬ್ಬರ ಸಿನಿಮೀಯ ಪ್ರೇಮಕಥೆ ಕೂಡ ಅಷ್ಟೇ ಆಸಕ್ತಿದಾಯಕವಾಗಿದೆ.

ತಮಿಳು ನಟ ಚಂದ್ರಶೇಖರ್ ಮೂಲಕ ಶುರುವಾದ 2004ರ ಲವ್ ಸ್ಟೋರಿ

ಮುತ್ತಯ್ಯ ಮುರಳೀಧರನ್ ಮತ್ತು ಮಧಿಮಲರ್ ಅವರ ಪ್ರೇಮಕಥೆ 2004ರಲ್ಲಿ ಅನಿರೀಕ್ಷಿತವಾಗಿ ಆರಂಭವಾಯಿತು. 2004ರಲ್ಲಿ ಖ್ಯಾತ ತಮಿಳು ನಟ ವಾಗೈ ಚಂದ್ರಶೇಖರ್ ಅವರು ಚೆನ್ನೈನ ಸನ್ ಟೆಲಿವಿಷನ್ ಸ್ಟುಡಿಯೋಗೆ ಭೇಟಿ ನೀಡಿದ್ದಾಗ, ಸಂದರ್ಶನಕ್ಕಾಗಿ ಬಂದಿದ್ದ ಮುರಳೀಧರನ್ ಅವರನ್ನು ಭೇಟಿಯಾದರು. ನಟನನ್ನು ತಕ್ಷಣವೇ ಗುರುತಿಸಿದ ಮುರಳಿ, ತಮ್ಮ ತಾಯಿ ಚಂದ್ರಶೇಖರ್ ಅವರ ಸಿನಿಮಾಗಳ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡರು.

ಕೆಲವು ಸಮಯದ ನಂತರ ಚಂದ್ರಶೇಖರ್ ಅವರು ಮುರಳೀಧರನ್ ಅವರ ತಾಯಿಯನ್ನು ಭೇಟಿಯಾದಾಗ, ಅವರು ತಮ್ಮ ಮಗನಿಗೆ ವಧುವನ್ನು ಹುಡುಕುತ್ತಿರುವುದಾಗಿ ತಿಳಿಸಿದರು. ಆಗ 24 ವರ್ಷದ ಮಧಿಮಲರ್ ಅವರನ್ನು ಬಾಲ್ಯದಿಂದಲೂ ಬಲ್ಲವರಾಗಿದ್ದ ಮತ್ತು ಅವರ ತಂದೆ ಡಾ. ಎಸ್. ರಾಮಮೂರ್ತಿ ಅವರ ಆಪ್ತ ಮಿತ್ರರಾಗಿದ್ದ ಚಂದ್ರಶೇಖರ್ ತಕ್ಷಣವೇ ಮಧಿಮಲರ್ ಹೆಸರನ್ನು ಸೂಚಿಸಿದರು.

'ಮದುವೆಯೇ ಬೇಡ' ಎಂದಿದ್ದ ಮುರಳಿ ಮೊದಲ ಭೇಟಿಯಲ್ಲೇ ಕ್ಲೀನ್ ಬೌಲ್ಡ್!

ಚಂದ್ರಶೇಖರ್ ಅವರ ಸಲಹೆಯ ಮೇರೆಗೆ ಮುರಳೀಧರನ್ ಅವರ ತಾಯಿ ಶ್ರೀಲಂಕಾದಿಂದ ಮಧಿಮಲರ್ ಕುಟುಂಬಕ್ಕೆ ಮದುವೆ ಪ್ರಸ್ತಾಪ ಕಳುಹಿಸಿದರು. ಆದರೆ, ಆ ಸಮಯದಲ್ಲಿ ತಮ್ಮ ಆಟ ಮತ್ತು ವೃತ್ತಿಜೀವನದತ್ತ ಸಂಪೂರ್ಣ ಗಮನ ಹರಿಸಲು ಬಯಸಿದ್ದ ಮುರಳೀಧರನ್ ವಧುವನ್ನು ನೋಡಲು ನಿರಾಕರಿಸಿದ್ದರು. ಆದರೆ, ತಾಯಿ ಮತ್ತು ನಟ ಚಂದ್ರಶೇಖರ್ ಅವರ ಮನವೊಲಿಕೆಯ ನಂತರ ಒಪ್ಪಿಕೊಂಡ ಮುರಳಿ, ನವೆಂಬರ್ 2004ರಲ್ಲಿ ಮಧಿಮಲರ್ ಅವರನ್ನು ಭೇಟಿಯಾಗಲು ಚೆನ್ನೈಗೆ ಬಂದಿದ್ದಲ್ಲದೆ, ಮೊದಲ ಭೇಟಿಯಲ್ಲೇ ಮಧಿಮಲರ್ ಅವರ ಸರಳತೆ ಮತ್ತು ಸೌಂದರ್ಯಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು. ಇನ್ನೊಂದೆಡೆ ಮುರಳಿಯ ಸರಳತೆ ಮಧಿಮಲರ್ ಮನಗೆದ್ದಿತು. ಇಬ್ಬರೂ ಸುಮಾರು 60 ನಿಮಿಷಗಳ ಕಾಲ ತಮ್ಮ ಕ್ರಿಕೆಟ್ ಜೀವನ ಮತ್ತು ಹವ್ಯಾಸಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಒಂದೇ ಗಂಟೆಯ ಸಂಭಾಷಣೆಯ ಅಂತ್ಯದಲ್ಲಿ ತಾವಿಬ್ಬರೂ ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ ಎಂದು ನಿರ್ಧರಿಸಿದ ಮುರಳೀಧರನ್, ತಕ್ಷಣವೇ ಮಧಿಮಲರ್ ಅವರಿಗೆ ನಿಶ್ಚಿತಾರ್ಥದ ಉಂಗುರವನ್ನು ತೊಡಿಸಿದ್ದರು.

ಇದಾದ ಬಳಿಕ 2005ರ ಮಾರ್ಚ್ 21ರಂದು ಚೆನ್ನೈನಲ್ಲಿ ಸಾಂಪ್ರದಾಯಿಕ ತಮಿಳು ಪದ್ಧತಿಯಂತೆ ಇವರಿಬ್ಬರ ವಿವಾಹ ನೆರವೇರಿತು. ಮದುವೆಯಲ್ಲಿ ಮಧಿಮಲರ್ ಕೆಂಪು ಬಣ್ಣದ ಕಾಂಚೀಪುರಂ ರೇಷ್ಮೆ ಸೀರೆಯಲ್ಲಿ ಮಿಂಚಿದರೆ, ಮುರಳೀಧರನ್ ರೇಷ್ಮೆ ಪಂಚೆ ಮತ್ತು ಶರ್ಟ್‌ನಲ್ಲಿ ಕಂಗೊಳಿಸಿದ್ದರು. ತಮಿಳುನಾಡಿನ ರಾಜಕಾರಣಿಗಳು ಹಾಗೂ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗರಾದ ಸನತ್ ಜಯಸೂರ್ಯ ಮತ್ತು ಚಮಿಂಡಾ ವಾಸ್ ಈ ವಿವಾಹಕ್ಕೆ ಸಾಕ್ಷಿಯಾಗಿದ್ದರು. ಇಂತಹ ವ್ಯಕ್ತಿಯನ್ನು ಪತಿಯಾಗಿ ಪಡೆದಿರುವುದಕ್ಕೆ ನನಗೆ ಅತೀವ ಸಂತೋಷವಿದೆ ಎಂದು ಮಧಿಮಲರ್ ತಮ್ಮ ಖುಷಿ ಹಂಚಿಕೊಂಡಿದ್ದರು. 2006ರಲ್ಲಿ ಹಿರಿಯ ಮಗ ನರೇನ್ ಮತ್ತು ನಂತರ ಮಗಳು ಕ್ರಿಶಾ ಜನನದೊಂದಿಗೆ ಈ ದಂಪತಿಯ ಸುಂದರ ಕುಟುಂಬ ಪರಿಪೂರ್ಣಗೊಂಡಿತು. ಎರಡು ದಶಕಗಳಿಂದ ಒಟ್ಟಿಗೆ ಸಾಗುತ್ತಿರುವ ಈ ಜೋಡಿ, ಕ್ರಿಕೆಟ್ ಲೋಕದ ಗದ್ದಲದ ನಡುವೆಯೂ ಅತ್ಯಂತ ಸರಳ ಮತ್ತು ಮಾದರಿ ದಾಂಪತ್ಯ ಜೀವನ ನಡೆಸುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆತನನ್ನೇ ಮದ್ವೆಯಾಗೋದು ಅಂತ ಫಿಕ್ಸ್​ ಆಗಿತ್ತು, ಆದ್ರೆ ಆಗಿದ್ದೇ ಬೇರೆ- ಶಿಶಿರ್​ ಶಾಸ್ತ್ರಿ ಎದುರೇ ಐಶ್ವರ್ಯ ನೋವಿನ​ ನೆನಪು
9 ಲಕ್ಷದ ಔರಾ ಅಲ್ಲಪ್ಪಾ, 13 ಲಕ್ಷದ ಬ್ರೆಜಾ ಕಾರು, ಮಂಟಪದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ ಪೊಲೀಸ್ ವರ