
ಗುವಾಹಟಿ: 'ತಲಾಖ್-ಎ-ಹಸನ್' (Talaq-e-Hasan) ಎಂಬುದು ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಮಾನ್ಯವಾದ ವಿಚ್ಛೇದನ ಪದ್ಧತಿಯಾಗಿದ್ದು, ಇದನ್ನು ಭಾರತದಲ್ಲಿ ನಿಷೇಧಿಸಿಲ್ಲ ಎಂದು ಗುವಾಹಟಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಸ್ಸಾಂನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್ ದೇವ್ ಚೌಧುರಿ ಅವರಿದ್ದ ಏಕಸದಸ್ಯ ಪೀಠವು ಈ ಸ್ಪಷ್ಟನೆ ನೀಡಿದೆ.
ಅಲ್ಲದೆ, ಇಂತಹ ವಿಚ್ಛೇದನಗಳನ್ನು ಇತ್ತೀಚೆಗೆ ಜಾರಿಗೆ ತರಲಾದ 'ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಡ್ಡಾಯ ನೋಂದಣಿ ಕಾಯ್ದೆ-2024' ರ ಅಡಿಯಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಿಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಅರ್ಜಿದಾರರು 2016ರಲ್ಲಿ ವಿವಾಹವಾಗಿದ್ದರು. ಆದರೆ ದಂಪತಿ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಕಾರಣ 2018ರಲ್ಲಿ ಪತ್ನಿ ಮನೆಬಿಟ್ಟು ತೆರಳಿದ್ದರು. ತದನಂತರ ನಡೆದ ರಾಜಿ ಸಂಧಾನದ ಪ್ರಯತ್ನಗಳೂ ವಿಫಲವಾದಾಗ, ಅರ್ಜಿದಾರರು ಸಾಂಪ್ರದಾಯಿಕ ನಿಯಮಾವಳಿಯಂತೆ ಮೂರು ಪ್ರತ್ಯೇಕ ತಿಂಗಳುಗಳಲ್ಲಿ (ಮಾರ್ಚ್ 22, ಏಪ್ರಿಲ್ 26 ಮತ್ತು ಮೇ 27) ತಮ್ಮ ಪತ್ನಿಗೆ 'ತಲಾಖ್' ಉಚ್ಚರಿಸಿದ್ದರು.
ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ನೋಂದಾಯಿಸಲು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಭಾರತದಲ್ಲಿ 'ತಲಾಖ್-ಎ-ಹಸನ್' ಗೆ ಯಾವುದೇ ಕಾನೂನು ತಡೆಯಿಲ್ಲ ಮತ್ತು ತಾವು ಧಾರ್ಮಿಕ ನಿಯಮಾವಳಿಗಳನ್ನು ಪೂರ್ಣಗೊಳಿಸಿರುವುದರಿಂದ ವಿಚ್ಛೇದನವನ್ನು ನೋಂದಾಯಿಸಬೇಕು ಎಂದು ಅರ್ಜಿದಾರರು ವಾದಿಸಿದ್ದರು.
ತಲಾಖ್-ಎ-ಹಸನ್ ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ವಿಚ್ಛೇದನ ನೀಡುವ ಸಾಂಪ್ರದಾಯಿಕ ವಿಧಾನವಾಗಿದೆ. ಈ ಪದ್ಧತಿಯಲ್ಲಿ ಪತಿಯು ಸತತ ಮೂರು ತಿಂಗಳುಗಳ ಕಾಲ, ಪ್ರತಿ ತಿಂಗಳಿಗೆ ಒಂದರಂತೆ 'ತಲಾಖ್' ಪದವನ್ನು ಉಚ್ಚರಿಸಬೇಕಾಗುತ್ತದೆ.
ಈ ಉಚ್ಚಾರಣೆಗಳ ನಡುವಿನ ಕಾಲಾವಕಾಶವು ದಂಪತಿಗೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಮತ್ತು ಸಮನ್ವಯ ಸಾಧಿಸಲು ಸಾಕಷ್ಟು ಅವಕಾಶ ನೀಡುತ್ತದೆ. ಹೀಗಾಗಿ, 2017 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಅಸಂವಿಧಾನಿಕ ಎಂದು ರದ್ದುಗೊಳಿಸಲಾದ 'ತಲಾಖ್-ಎ-ಬಿದ್ದತ್' (ತತ್ಕ್ಷಣದ ತ್ರಿವಳಿ ತಲಾಖ್) ಗೂ ಮತ್ತು 'ತಲಾಖ್-ಎ-ಹಸನ್'ಗೂ ವ್ಯತ್ಯಾಸವಿದೆ.
ರಾಜ್ಯ ಸರ್ಕಾರವು ಈ ಹಿಂದೆ ಅಸ್ತಿತ್ವದಲ್ಲಿದ್ದ 1935ರ ಕಾನೂನು ರದ್ದಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಈ ಕೆಳಗಿನ ನಿರ್ದೇಶನಗಳನ್ನು ನೀಡಿತು.
1935ರ ಹಳೆಯ ಕಾನೂನು ರದ್ದಾಗಿರುವುದರಿಂದ, ಹಳೆಯ ಪ್ರಾಧಿಕಾರದ ಬಳಿ ನೋಂದಣಿಗೆ ಆದೇಶಿಸಲು ಸಾಧ್ಯವಿಲ್ಲ. ಆದರೆ ಅರ್ಜಿದಾರರು ತಮ್ಮ 'ತಲಾಖ್‌ನಾಮಾ'ವನ್ನು 'ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆ-2024'ರ ಸೆಕ್ಷನ್ 12 ರ ಹೊಸ ಕಾಯ್ದೆಯಡಿ ಬರ್ಪೇಟಾ ನೋಂದಣಾಧಿಕಾರಿ (Registrar) ಮುಂದೆ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.
ನೋಂದಣಾಧಿಕಾರಿಗಳು ಅರ್ಜಿದಾರರ ಗುರುತನ್ನು ಪರಿಶೀಲಿಸಿದ ನಂತರವೇ ವಿಚ್ಛೇದನ ನೋಂದಣಿ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಒಂದು ವೇಳೆ ರಿಜಿಸ್ಟ್ರಾರ್ ನೋಂದಣಿಯನ್ನು ನಿರಾಕರಿಸಿದರೆ, ಅರ್ಜಿದಾರರಿಗೆ ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕಿರುತ್ತದೆ.
ವಿಚಾರಣೆಗೆ ನೋಟಿಸ್ ಕಳುಹಿಸಿದರೂ ಅರ್ಜಿದಾರರ ಪತ್ನಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಗೈರು ಹಾಜರಿಯಿಂದ ಅವರ ಕಾನೂನುಬದ್ಧ ಹಕ್ಕುಗಳು ಕಸಿದುಕೊಂಡಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಪತ್ನಿಯು ಬಯಸಿದರೆ 'ತಲಾಖ್-ಎ-ಹಸನ್' ವಿಚ್ಛೇದನವನ್ನು ಸೂಕ್ತ ನ್ಯಾಯಾಂಗ ವೇದಿಕೆಯಲ್ಲಿ ಪ್ರಶ್ನಿಸಲು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.