
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ: ಕೆಲವೊಂದು ಸಮಯದಲ್ಲಿ ಮನುಷ್ಯರು ಸತ್ತರು ತಿರುಗಿ ನೋಡುವವರು ಇರೋದಿಲ್ಲ. ಶವಗಳಿಗೆ ವಿಧಿಪೂರ್ವಕ ಹಾಗಿರಲಿ, ಸರಿಯಾಗಿ ಮಣ್ಣು ಮಾಡೋರು ಇರಲ್ಲ. ಅದೆಷ್ಟೋ ಅನಾಥ ಶವಗಳನ್ನು ಪೊಲೀಸರೆ ಮಣ್ಣು ಮಾಡಿ ಬಿಡ್ತಾರೆ. ಇಂಥದ್ರಲ್ಲಿ ವಿಜಯಪುರ ಜಿಲ್ಲೆಯ ಅದೊಂದು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸತ್ತ ಮಂಗವೊಂದಕ್ಕೆ ಗ್ರಾಮಸ್ಥರೆಲ್ಲ ಸೇರಿ ಅಂತ್ಯಕ್ರಿಯೆ ನಡೆಸಿದ್ದಾರೆ. ಇದು ಎಂಥವರಲ್ಲೂ ಅಚ್ಚರಿ ಮೂಡಿಸುತ್ತೆ. ಗ್ರಾಮೀಣ ಭಾಗದಲ್ಲಿ ಮಾನವೀಯತೆ ಮರೆಯಾಗಿಲ್ಲ ಅನ್ನೋದಕ್ಕೆ ಈ ಘಟನೆಯೆ ಉದಾಹರಣೆಯಾಗಿದೆ..
ಶಾರ್ಟ್ ಸರ್ಕ್ಯೂಟ್‌ನಿಂದ ಸಾವನ್ನಪ್ಪಿದ ಮಂಗ
ಕರೆಂಟ್ ತಗುಲಿ ಸಾವನ್ನಪ್ಪಿದ ಮಂಗಕ್ಕೆ (Monkey) ಅಚ್ಚರಿಯ ರೀತಿಯಲ್ಲಿ ಗ್ರಾಮಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ನಿನ್ನೆ ಶುಕ್ರವಾರ ರಾತ್ರಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ಮಂಗವೊಂದು ವಿದ್ಯುತ್ ಟಿಸಿ ಏರಲು ಹೋಗಿ ಶಾರ್ಟ್ ಸರ್ಕ್ಯೂಟ್ ನಿಂದ ತೀವ್ರವಾಗಿ ಗಾಯ (Injury)ಗೊಂಡಿತ್ತು. ಜನರು ಕರೆಂಟ್ ಶಾಕ್ ತಗುಲಿದ್ದ ಮಂಗವನ್ನ ಉಳಿಸೋದಕ್ಕೆ ಎಷ್ಟೇ ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಆದ್ರೆ ಮಂಗ ಸತ್ತ ಬಳಿಕ ಕಣಕಾಲ ಗ್ರಾಮಸ್ಥರೆಲ್ಲ (Villagers) ಸೇರಿ ಮಾಡಿದ ಅದೊಂದು ಕಾರ್ಯ ಎಂಥವರನ್ನು ಅಚ್ಚರಿಗೊಳಿಸುವಂತಿದೆ.
ಗಾಯಗೊಂಡು ಖುದ್ದು ಆಸ್ಪತ್ರೆಗೆ ಬಂದ ಕೋತಿ, ಹಠ ಹಿಡಿದು ಚಿಕಿತ್ಸೆ ಪಡೆದೇ ಹೋಯ್ತು!
ಮಂಗನ ಸಾವಿಗೆ ಮರುಗಿದ ಜನ
ಶಾರ್ಟ್ ಸರ್ಕ್ಯೂನಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಮಂಗವನ್ನ ಉಳಿಸೋದಕ್ಕೆ ಗ್ರಾಮಸ್ಥರೆಲ್ಲ ಸೇರಿ ನಾನಾರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಆದ್ರೆ ಕೋತಿಯನ್ನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಶನಿವಾರದ ಹಿಂದಿನ ರಾತ್ರಿ ಈ ಘಟನೆ ನಡೆದಿದ್ದರಿಂದ ಕಣಕಾಲ ಗ್ರಾಮಸ್ಥರು ಮಂಗನ ಸಾವಿಗೆ (Death) ಮಮ್ಮಲು ಮರುಗಿದ್ದಾರೆ. ಗ್ರಾಮದಲ್ಲಿ ಗಣ್ಯರೊಬ್ಬರು ತೀರಿಹೋದ ರೀತಿಯಲ್ಲಿ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಇಡೀ ಗ್ರಾಮಸ್ಥರೆಲ್ಲ ಸೇರಿ ಅದೊಂದು ನಿರ್ಧಾರವನ್ನ (Decision) ತೆಗೆದುಕೊಂಡಿದ್ದಾರೆ. ಶನಿವಾರದ ಹಿಂದಿನ ದಿನ ಸಾವನ್ನಪ್ಪಿದ ಮಂಗದ ಅಂತ್ಯಕ್ರಿಯೆಯನ್ನ ಅದ್ದೂರಿಯಾಗಿ ನಡೆಸಲು ಮುಂದಾಗಿದ್ದಾರೆ.
ಮಂಗನ ಮೃತದೇಹದ ಎದುರು ಗ್ರಾಮಸ್ಥರ ಜಾಗರಣೆ
ಹಳ್ಳಿಗಳಲ್ಲಿ ಈಗಲೂ ಯಾರೇ ಗ್ರಾಮದ ಹಿರಿಯರು, ಸ್ವಾಮೀಜಿಗಳು ಸಾವನ್ನಪ್ಪಿದರೂ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿ ಗ್ರಾಮದ ಆಯಕಟ್ಟಿನ ಸ್ಥಳದಲ್ಲಿಟ್ಟು ಜಾಗರಣೆ ಮಾಡುವುದುಂಟು. ಕಣಕಾಲ ಗ್ರಾಮದಲ್ಲಿ ಸಾವನ್ನಪ್ಪಿದ ಮಂಗನ ಮೃತದೇಹವನ್ನ ಮೊದಲಿಗೆ ಗ್ರಾಮಸ್ಥರೆಲ್ಲ ಸೇರಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಕೇಸರಿ ಧ್ವಜ, ಡಿಜೆ ಅಳವಡಿಸಿ ಆಂಜನೇಯನ ಹಾಡುಗಳನ್ನ ಹಾಕಿ ಊರಲ್ಲಿ ಭರ್ಜರಿ ಮೆರವಣಿಗೆ ಮಾಡಿದ್ದಾರೆ. ಬಳಿಕ ಪಾರ್ಥಿವ ಶರೀರವನ್ನ ಗ್ರಾಮದ ನಡುವೆ ಇಟ್ಟು ರಾತ್ರಿ ಎಲ್ಲ ಜನರು ಜಾಗರಣೆ ಮಾಡಿದ್ದಾರೆ. ಜಾಗರಣೆಗಾಗಿ ಭಜನೆ, ಸಂಗೀತ,. ಭಕ್ತಿ ಗೀತೆಗಳನ್ನ ಹಾಡಿ ಮಂಗನ ಸಾವಿಗೆ ಕಂಬಣಿ ಮಿಡಿದಿದ್ದಾರೆ. ರಾತ್ರಿ ಎಲ್ಲ ಎಚ್ಚರಿದ್ದ ಗ್ರಾಮದ ಹಿರಿಯರು, ಮಹಿಳೆಯರು, ಮಕ್ಕಳು ಜಾಗರಣೆ ಮಾಡಿದ್ದು ವಿಶೇಷವಾಗಿತ್ತು.
ನಾಯಿ ಮರಿ ಕಿಡ್ನಾಪ್ ಮಾಡಿದ ಕೋತಿ, 3 ದಿನದ ಸತತ ಕಾರ್ಯಾಚರಣೆ ಬಳಿಕ ರಕ್ಷಣೆ!
ವಿಧಿಪೂರ್ವಕವಾಗಿ ಕೋತಿಯ ಅಂತ್ಯಕ್ರಿಯೆ
ಇಂದು ಗ್ರಾಮಸ್ಥರು ಮೃತಪಟ್ಟ ಕೋತಿಯ ಮೃತದೇಹವನ್ನ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಶನಿವಾರ ಆಂಜನೇಯ ಸ್ವಾಮೀ ವಾರವಾದ ಕಾರಣ ಗ್ರಾಮದ ಸಾವಿರಾರು ಜನರು ಮಂಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮಾರುತಿಯ ಕೃಪೆಗೆ ಪಾತ್ರರಾದರು.. ರಾಜಶೇಖರ ಹುಲ್ಲೂರ, ಕಾಶಿನಾಥ ಸಜ್ಜನ, ಬಸಲಿಂಗ ಕುಂಬಾರ ಪವನ ಹುಲ್ಲೂರಗ್ತಾಮದ ದುಂಡಯ್ಯ ಹಿರೇಮಠ ಶಂಕರಗೌಡ ಪಾಟೀಲ, ಈರಣ್ಣ ಕುಂಬಾರ ,ಚಂದಪ್ಪ ಮಜ್ಜಿಗೆ, ಚಂದು ಹುಲ್ಲೂರ ,ಸಾಬು ಹಿರೆಕುರಬರ ,ಜುಮ್ಮಣ್ಣ ದಳವಾಯಿ ಸೇರಿ ಅನೇಕರು ಮಂಗನ ಅಂತ್ಯಕ್ರಿಯೆಯನ್ನ ಅದ್ದೂರಿಯಾಗಿ ನಡೆಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.