
ಬಹುಶಃ ನಮ್ಮನ್ನು ಮನುಷ್ಯರು ಅತೀ ಬೇಗನೇ ಮರೆಯಬಹುದು. ಆದರೆ ಶ್ವಾನಗಳು ಹಾಗಲ್ಲ, ಹೊಡೆದರು ಬಡಿದರು ಅವರು ನೀವು ಕೊಟ್ಟ ಒಂದು ತುತ್ತನ್ನು ಎಂದಿಗೂ ಮರೆಯುವುದಿಲ್ಲ, ಎಷ್ಟೋ ವರ್ಷಗಳ ನಂತರವೂ ಅವು ನಿಮ್ಮನ್ನು ನೆನಪು ಇಷ್ಟುಕೊಳ್ಳುತ್ತವೆ. ಮನುಷ್ಯನ ಬೆಸ್ಟ್ ಫ್ರೆಂಡ್ ಎನಿಸಿದ ಈ ಶ್ವಾನಗಳು ನಿಯತ್ತಿಗೆ ಇನ್ನೊಂದು ಹೆಸರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಅದೇ ಇಲ್ಲೊಂದು ಕಡೆ 5 ವರ್ಷಗಳ ನಂತರ ಒಬ್ಬರು ಯುವಕ ಹಾಗೂ ಅವರು ನೋಡಿಕೊಳ್ಳುತ್ತಿದ್ದ ಬೀದಿ ನಾಯೊಂದರ ಸಮಾಗಮವಾಗಿದ್ದು, 5 ವರ್ಷಗಳ ನಂತರವೂ ಆ ನಾಯಿ ಆ ಯುವಕನ ಗುರುತು ಹಿಡಿದಿದೆ.
ಇನ್ಸ್ಟಾಗ್ರಾಮ್‌ನಲ್ಲಿ ಚಿರಾಗ್ ಹೆಚ್‌ವಿ ಹವೇಲಿಯಾ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಲಿಲ್ಲಿ ಹೆಸರಿನ ಇಂಡಿ ತಳಿಯ ಶ್ವಾನವನ್ನು 5 ವರ್ಷಗಳ ನಂತರ ಭೇಟಿ ಮಾಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಬಹುಶಃ ಮನುಷ್ಯರು ನಿಮ್ಮನ್ನು ಮರೆಯಬಹುದು. ಆದರ ನಾಯಿಗಳು ಮರೆಯುವುದಿಲ್ಲ ಎಂದು ಅವರು ವೀಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಚಿರಾಗ್ ಅವರು ಬೀದಿಗಳಲ್ಲಿ ನಡೆಯುತ್ತಾ ಶ್ವಾನ ಲಿಲ್ಲಿ ಬಳಿ ಸಾಗಿ ಲಿಲ್ಲಿ ಎಂದು ಕರೆಯುತ್ತಾರೆ. ಅದು ತನ್ನನ್ನು ಮರೆತಿರಬಹುದು ಎಂದು ಭಾವಿಸುತ್ತಾ ಅವರು ಲಿಲ್ಲಿ ಎಂದು ಕರೆದರೆ ಅದು ಕೆಲ ಕ್ಷಣ ಯಾರಪ್ಪ ಇವನು ನನ್ ಹೆಸರು ಕರಿತಿರೋನು ಎಂದು ಅನುಮಾನದಲ್ಲೇ ನೋಡುತ್ತದೆ. ಇದಾಗಿ ಕೆಲ ಕ್ಷಣದಲ್ಲಿ ಅದಕ್ಕೆ ಚಿರಾಗ್ ಅವರ ಪರಿಚಯವಾಗಿದ್ದು, ಕೂಡಲೇ ಅವರ ಮೇಲೆ ಹಾರಿ ತನ್ನ ಬಾಲವನ್ನು ಅಲ್ಲಾಡಿಸುತ್ತಾ ತನ್ನ ಪ್ರೀತಿಯನ್ನು ತೋರಿಸಿದೆ. ಹಲವು ವರ್ಷಗಳ ಹಿಂದೆ ನಮ್ಮ ಸ್ನೇಹ ಆರಂಭವಾಗಿತ್ತು, ನಾನು ನಡೆಸುತ್ತಿದ್ದ ಆಹಾರದ ಗಾಡಿಯೊಂದರ ಬಳಿ ಕೇವಲ ಜನಿಸಿ ದಿನವಷ್ಟೇ ಆಗಿದ್ದ ಶ್ವಾನದ ಮರಿಯೊಂದು ಸಿಕ್ಕಿತ್ತು. ಅದಕ್ಕೆ ನಾನು ಕಾಳಜಿ ವಹಿಸಿದ್ದೆ. ಆದರೆ ಅಂಗಡಿಯನ್ನು ಮುಚ್ಚುವ ವೇಳೆ ನನಗೆ ಅದನ್ನು ಒಟ್ಟಿಗೆ ಕರೆದೊಯ್ಯಲು ಆಗಲಿಲ್ಲ, ಇದು ನನಗೆ ಬಹಳ ಬೇಸರವನ್ನುಂಟು ಮಾಡಿತ್ತು. ಆದರೆ ಆಕೆ ಬೀದಿಯ ರಾಣಿ ಎಂಬುದು ನನಗೆ ಗೊತ್ತಿತ್ತು. ನನ್ನ ಬಳಿಕ ಆಕೆಯನ್ನು ಅಲ್ಲಿನ ಸಮುದಾಯದ ಜನ ಚೆನ್ನಾಗಿಯೇ ನೋಡಿಕೊಂಡಿದ್ದರು.
ಕೆಲಸದ ಒತ್ತಡ ಹಾಗೂ ಅನಾರೋಗ್ಯದಿಂದ ಲಿಲ್ಲಿಯನ್ನು ಮತ್ತೆ ಭೇಟಿಯಾಗಲು ಸಾಧ್ಯವಾಗಲೇ ಇಲ್ಲ, ಅಲ್ಲಿನ ಸ್ನೇಹಿತರು ನೆರೆಹೊರೆಯವರು ಕಳುಹಿಸುವ ಫೋಟೋಗಳಿಂದ ಮಾತ್ರ ನಾನು ಆಕೆಯನ್ನು ನೋಡುವಂತಾಗಿತ್ತು. ಇಂದು ನಾನು ಬಹಳ ವರ್ಷಗಳ ನಂತರ ಆಕೆ ಇದ್ದ ಸ್ಥಳಕ್ಕೆ ಹೋದೆ. ಸ್ವಲ್ಪ ದೂರದಿಂದ ಆಕೆಯನ್ನು ನೋಡಿ ಆಕೆಯ ಬಳಿ ಹೋದೆ ಆಮೇಲೇನಾಯ್ತು ಎಂಬುದನ್ನು ವೀಡಿಯೋ ತೋರಿಸುತ್ತದೆ ಎಂದು ಅವರು ಬರೆದಿದ್ದಾರೆ. ವೀಡಿಯೋದಲ್ಲಿ ಆ ಶ್ವಾನ ಅವರು ಲಿಲ್ಲಿ ಎಂದು ಕರೆಯುತ್ತಿದ್ದಂತೆ ಓಡೋಡಿ ಬಂದು ಬಾಲ ಅಲ್ಲಾಡಿಸುತ್ತಾ ಅವರ ಮೇಲೆ ಪ್ರೀತಿಯಿಂದ ಹಾರಿ ಮುದ್ದಾಡಿದೆ.
ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. 4 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋ ವೀಕ್ಷಿಸಿದ್ದಾರೆ. ಶ್ವಾನಗಳು ದೇವರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ನಿಮ್ಮನ್ನು ಗುರುತಿಸಿದ್ದಾಳೆ ಹಾಗೂ ಆಕೆ ನಿಮ್ಮನ್ನು ಮಿಸ್ ಮಾಡಿಕೊಂಡಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನನಗೆ ಈ ನಾಯಿ ಗೊತ್ತು. ನಾನು ಪ್ರತಿದಿನ ನನ್ನ ಕೋಚಿಂಗ್‌ನಿಂದ ಮನೆಗೆ ಹಿಂತಿರುಗಿದಾಗ ಅದನ್ನು ನೋಡುತ್ತೇನೆ. ಅಲ್ಲಿ ಅವಳನ್ನು ನೋಡಿಕೊಳ್ಳಲು ಒಬ್ಬ ಕಾವಲುಗಾರ ಇದ್ದಾನೆ ಚಿಂತಿಸಬೇಡಿ, ಅವಳು ಸುರಕ್ಷಿತಳಾಗಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆಗೆ ತುಂಬಾ ಹೇಳುವುದಕ್ಕೆ ಇದೆ ಅವಳು ಮನುಷ್ಯರಂತೆ ನಿಮ್ಮನ್ನು ಮರೆತಿಲ್ಲ, ಒಮ್ಮೆ ಅವರು ನಿಮ್ಮನ್ನು ಪ್ರೀತಿಸುವುದಕ್ಕೆ ಶುರು ಮಾಡಿದರೆ ಅದು ಕೊನೆವರೆಗೂ ಇರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.