ಅಪ್ಪನ 2600 ಕೋಟಿ ಆಸ್ತಿಯ ಏಕೈಕ ಹಕ್ಕುದಾರೆ ಕಾವ್ಯಾ ಮಾರನ್ ಗಿದೆ ಕನ್ನಡದ ನಂಟು, ಆಕೆ ಪ್ರಭಾವಿ ತಾಯಿ ಕರ್ನಾಟಕದವರು!

Published : Nov 02, 2026, 03:44 PM IST
kavya maran

ಸಾರಾಂಶ

ಸನ್ ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರ ತಾಯಿ ಕಾವೇರಿ ಮೂಲತಃ ಕರ್ನಾಟಕದ ಕೊಡಗಿನವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕಾವ್ಯಾ ಅವರು ಶೀಘ್ರದಲ್ಲೇ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ವಿವಾಹವಾಗಲಿದ್ದಾರೆ. ಉದ್ಯಮ ಮತ್ತು ರಾಜಕೀಯ ಹಿನ್ನೆಲೆಯುಳ್ಳ ಇವರು ಸನ್ ಗ್ರೂಪ್‌ನ ಏಕೈಕ ವಾರಸುದಾರಿಯಾಗಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಯಶಸ್ವಿ ಸಿಇಒ ಕಾವ್ಯಾ ಮಾರನ್ ಅವರ ಹೆಸರು ಕೇಳಿದ ತಕ್ಷಣ ಐಪಿಎಲ್ ಮೈದಾನದಲ್ಲಿ ಉತ್ಸಾಹದಿಂದ ಹುರಿದುಂಬಿಸುವ ಅವರ ಮುದ್ದಾದ ವಿಡಿಯೋಗಳು ಕಾಣಿಸುತ್ತವೆ. ಕೇವಲ ಬಿಸಿನೆಸ್ ಸಾಮ್ರಾಜ್ಯದ ವಾರಸುದಾರಿಯಾಗಿಷ್ಟೇ ಅಲ್ಲದೆ, ತಮ್ಮದೇ ಆದ ನಾಯಕತ್ವದ ಗುಣಗಳಿಂದ ಕಾವ್ಯಾ ಪ್ರಸಿದ್ಧರಾಗಿದ್ದಾರೆ. ಪ್ರಸಿದ್ಧ ಸನ್ ನೆಟ್‌ವರ್ಕ್ ಕುಟುಂಬದ ಹಿನ್ನೆಲೆ ಹೊಂದಿರುವ ಕಾವ್ಯಾ ಮಾರನ್ ಅವರ ರಕ್ತದಲ್ಲಿ ಕರ್ನಾಟಕದ, ಅದೂ ವಿಶೇಷವಾಗಿ ಕೊಡಗಿನ (ಕೂರ್ಗ್) ನಂಟಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಕೊಡಗಿನ ಹೆಮ್ಮೆಯ ಮಗಳು , ಕಾವ್ಯಾ ಮಾರನ್ ತಾಯಿ

ಕಾವ್ಯಾ ಮಾರನ್ ಅವರ ತಾಯಿ ಕಾವೇರಿ ಕಲಾನಿಧಿ ಮಾರನ್ ಅವರು ಮೂಲತಃ ಕರ್ನಾಟಕದ ಕೊಡಗು ಜಿಲ್ಲೆಯವರು. ಕೊಡಗಿನ ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮದ ಜಮ್ಮಡ ಕುಟುಂಬಕ್ಕೆ ಸೇರಿದ ಕಾವೇರಿ, ಜಮ್ಮಡ ಎ.ಬೆಳ್ಳಿಯಪ್ಪ (ಬೊಳ್ಳಿ) ಮತ್ತು ನೀನಾ ದಂಪತಿಯ ಪುತ್ರಿ. ಕಾವೇರಿ ಅವರ ಕುಟುಂಬಕ್ಕೆ ಕೊಡಗಿನಲ್ಲಿ ಉತ್ತಮ ರಾಜಕೀಯ ಮತ್ತು ಉದ್ಯಮ ಹಿನ್ನೆಲೆ ಇದೆ. ಕಾವೇರಿ ಅವರ ತಂದೆ ಕೊಡಗಿನ ಬೆಳ್ಳಿಯಪ್ಪ ಮದ್ರಾಸ್‌ನ ವೆಪೇರಿಯ ಕಿಂಗ್ ಹಾಸ್ಟೆಲ್‌ನ ನಿವಾಸಿಯಾಗಿದ್ದವರು. ಅವರ ಸಹೋದರ (ಕಾವೇರಿ ಅವರ ಚಿಕ್ಕಪ್ಪ) ಗಯಾ ಕರುಂಬಯ್ಯ (ಗಯಾ ಅಣ್ಣಯ್ಯ) ಅವರು ಅಂದಿನ ಕಾಲದಲ್ಲಿ ಕೊಡಗಿನ ಪ್ರಸಿದ್ಧ ರಾಜಕಾರಣಿಯಾಗಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಹಾಗೂ ಹಾಕಿ ಅಂಪೈರ್ ಆಗಿ ಮನೆಮಾತಾಗಿದ್ದವರು. ಈ ಮೂಲಕ ಕಾವ್ಯಾ ಮಾರನ್ ಅವರಲ್ಲಿ ಕನ್ನಡ ನೆಲದ ರಕ್ತ ಹರಿಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಕಾವ್ಯಾ ಮಾರನ್ ಮದುವೆ ಸಂಭ್ರಮ

ವೈಯಕ್ತಿಕ ಜೀವನವನ್ನು ಸದಾ ಖಾಸಗಿಯಾಗಿರಿಸಿಕೊಳ್ಳುವ ಕಾವ್ಯಾ ಮಾರನ್, ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಪ್ರಸಿದ್ಧ ತಮಿಳು ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ಕಾವ್ಯಾ ಮದುವೆ ನಿಶ್ಚಯವಾಗಿದೆ. ಅಕ್ಟೋಬರ್ 2026ರ ಹೊತ್ತಿಗೆ ಅವು ಮದುವೆ ವಿಚಾರ ಮುನ್ನಲೆಗೆ ಬಂದಿತ್ತು. ಮದುವೆಯ ತಯಾರಿಗಳು ಭರದಿಂದ ಸಾಗಿದ್ದು, 2026ರ ನವೆಂಬರ್ 21 ರಂದು ಚೆನ್ನೈನಲ್ಲಿ ಅದ್ದೂರಿ ವಿವಾಹ ಆರತಕ್ಷತೆ ನಿಗದಿಯಾಗಿದೆ. ಈ ಶುಭ ಕಾರ್ಯಕ್ಕಾಗಿ ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ ದಂಪತಿಯು ತಮ್ಮ ಉದ್ಯಮ ಕ್ಷೇತ್ರದ, ರಾಜಕೀಯ ಕ್ಷೇತ್ರದ ಆಪ್ತ ಗಣ್ಯರನ್ನು ಆಹ್ವಾನಿಸಲು ಪ್ರಾರಂಭಿಸಿದ್ದಾರೆ. ಈಗಾಗಲೇ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಕಾವ್ಯಾ ಮಾರನ್ ಲೈಫ್ ಪ್ರಯಾಣ

1992 ರ ಆಗಸ್ಟ್ 6 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಕಾವ್ಯಾ, ಚೆನ್ನೈನ ಪ್ರಸಿದ್ಧ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಮುಗಿಸಿದರು. ನಂತರ ಯುಕೆಯ ಪ್ರತಿಷ್ಠಿತ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಸ್ನಾತಕೋತ್ತರ ಪದವಿ ಪಡೆದರು. ತಮ್ಮ ಅಪ್ಪ ಅಮ್ಮನಿಗೆ ಏಕೈಕ ಸಂತಾನವಾಗಿದ್ದು, ಇಡೀ ಆಸ್ತಿಯ ವಾರಸುದಾರೆಯಾಗಿದ್ದಾರೆ.

2018 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಯ ಸಿಇಒ ಆಗಿ ಬಾಧ್ಯತೆ ವಹಿಸಿಕೊಂಡ ಕಾವ್ಯಾ, ತಂಡವನ್ನು ಐಪಿಎಲ್‌ನಲ್ಲಿ ಬಲವಾದ ಶಕ್ತಿಯನ್ನಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ರಿಕೆಟ್ ಹೊರತುಪಡಿಸಿ, ಅವರು ಸನ್ ನೆಟ್‌ವರ್ಕ್‌ನ ಸನ್ ಮ್ಯೂಸಿಕ್ ಹಾಗೂ ಎಫ್‌ಎಂ ಚಾನೆಲ್‌ಗಳ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿದ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲೂ ಕಾವ್ಯಾ ಸಕ್ರಿಯವಾಗಿ ಭಾಗವಹಿಸಿ ತಮ್ಮ ಬಹುಮುಖ ಅರ್ಹತೆಯನ್ನು ಸಾಬೀತುಪಡಿಸಿದ್ದಾರೆ.

ಮಾರನ್ ಕುಟುಂಬದ ಬಿಸಿನೆಸ್ ಹಾಗೂ ರಾಜಕೀಯ ಹಿನ್ನೆಲೆ

ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್ ಅವರು ₹26,000 ಕೋಟಿಗೂ ಅಧಿಕ ನಿವ್ವಳ ಮೌಲ್ಯ ಹೊಂದಿರುವ ಸನ್ ಗ್ರೂಪ್ ಸಂಸ್ಥಾಪಕರು. ತಾಯಿ ಕಾವೇರಿ ಮಾರನ್ ಅವರು ಸನ್ ಟಿವಿ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದು, ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ವರ್ಷಕ್ಕೆ ಸುಮಾರು ₹87 ಕೋಟಿ ಸಂಭಾವನೆಯನ್ನು ತಮ್ಮದೇ ಕಂಪೆನಿಯಿಂದ ಪಡೆಯುತ್ತಾರೆ.

ಮದ್ರಾಸ್ ವಿಶ್ವವಿದ್ಯಾಲಯದಿಂದ ಕಲಾ ಪದವಿ ಪಡೆದ ಕಾವೇರಿ ಮಾರನ್ 1991 ರಲ್ಲಿ ಅಮೆರಿಕದಿಂದ ಎಂಬಿಎ ಮುಗಿಸಿ ಬಂದ ಬಳಿಕ ಕಲಾನಿಧಿ ಅವರನ್ನು ವಿವಾಹವಾದರು. ಇವರಿಬ್ಬರದು ಲವ್ ಮ್ಯಾರೇಜ್. ಮದುವೆಯಾದ ಸ್ವಲ್ಪ ಸಮಯದ ನಂತರ, ದಂಪತಿಗಳು ಸನ್ ಟಿವಿ ನೆಟ್‌ವರ್ಕ್‌ಗೆ ಅಡಿಪಾಯ ಹಾಕಿದರು , ಇದು 1993 ರಲ್ಲಿ ಅಧಿಕೃತವಾಗಿ ಪ್ರಾರಂಭವಾಯಿತು. 1993 ರಲ್ಲಿ ಸನ್ ಟಿವಿ ಸಂಸ್ಥೆಯ ಆರಂಭಿಕ ದಿನಗಳಿಂದಲೂ ಗಂಡನಿಗೆ ಹೆಗಲಿಗೆ ಹೆಗಲು ಕೊಟ್ಟು ಸಂಸ್ಥೆಯನ್ನು ಕಟ್ಟಿದರು. ಇಂದು ತಮಿಳು, ತೆಲುಗು, ಕನ್ನಡ, ಮಲಯಾಳಂ, ಬಂಗಾಳಿ, ಮರಾಠಿ ಸೇರಿದಂತೆ 30ಕ್ಕೂ ಹೆಚ್ಚು ಚಾನೆಲ್‌ಗಳ ಬೃಹತ್ ನೆಟ್‌ವರ್ಕ್ ಆಗಿ ಹಾಗೂ 2024 ರಲ್ಲಿ 'ಸನ್ ನಿಯೋ' ಮೂಲಕ ಹಿಂದಿ ಮಾರುಕಟ್ಟೆಗೂ ಸನ್ ಗ್ರೂಪ್ ವಿಸ್ತರಿಸಿದೆ.

ರಾಜಕೀಯವಾಗಿಯೂ ಮಾರನ್ ಕುಟುಂಬ ಪ್ರಭಾವಶಾಲಿಯಾಗಿದೆ. ಕಾವ್ಯಾ ಅವರ ಅಜ್ಜ ಮುರಸೋಲಿ ಮಾರನ್ ಅವರು ಮಾಜಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದರು, ಚಿಕ್ಕಪ್ಪ ದಯಾನಿಧಿ ಮಾರನ್ ಕೂಡ ಮಾಜಿ ಕೇಂದ್ರ ಸಚಿವರು. ಅಲ್ಲದೆ, ಕಾವ್ಯಾ ಮಾರನ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಎಂ ಕರುಣಾನಿಧಿ ಅವರ ಅಕ್ಕ ಷಣ್ಮುಗಸುಂದರಿ ಮರಿಮಗಳು ಕಾವ್ಯಾ ಮಾರನ್. ಅಂದರೆ ಮುರಸೋಳಿ ಮಾರನ್ ತಾಯಿ ಷಣ್ಮುಗಸುಂದರಿ ಆಗಿದ್ದಾರೆ. ಉದ್ಯಮ, ರಾಜಕೀಯ ಮತ್ತು ಕ್ರೀಡಾ ಜಗತ್ತಿನ ಪ್ರಭಾವಿ ಹಿನ್ನೆಲೆ ಹೊಂದಿರುವ ಕಾವ್ಯಾ ಮಾರನ್, ಸನ್ ಗ್ರೂಪ್‌ನ ಮುಂದಿನ ವಾರಸುದಾರಿಯಾಗಿದ್ದು, ಇದೀಗ ತಮ್ಮ ಮದುವೆಯ ಸಂಭ್ರಮದಲ್ಲಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಪ್ಪನಾಗುವ ಸಂಭ್ರಮದಲ್ಲಿ Bigg Boss ವಿನ್ನರ್​ ಶಶಿ: ಸೀಮಂತದ ​ವಿಡಿಯೋ ಶೇರ್​ ಮಾಡಿಕೊಂಡ ನಟ
ಟೀಂ ಇಂಡಿಯಾ ಕ್ರಿಕೆಟಿಗನ ಖಾಸಗಿ ಸ್ನ್ಯಾಪ್‌ಚಾಟ್‌ ಲೀಕ್‌: ಅರ್ಧ ಬೆತ್ತ*ಲೆಯ ಸೆಲ್ಫಿ ಕೂಡಾ ಲೀಕ್..! ಗರ್ಲ್‌ ಫ್ರೆಂಡ್ ಬಗ್ಗೆ ಅನುಕಂಪ