
ತನ್ನ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ಏನೂ ಕೊರತೆ ಆಗದಂತೆ ಸಾಕುವ ಅದೆಷ್ಟೋ ಅಮ್ಮಂದಿರಿದ್ದಾರೆ. ಎಷ್ಟೇ ಕಷ್ಟವಾದರೂ, ಮಕ್ಕಳು ಚೆನ್ನಾಗಿರಲಿ ಎನ್ನುವ ಕಾರಣಕ್ಕೆ ತನ್ನೆಲ್ಲಾ ನೋವನ್ನು ನುಂಗಿಕೊಂಡು ಮಕ್ಕಳಿಗೆ ತನ್ನ ಕೈಯಲ್ಲಾದಷ್ಟು ಉತ್ತಮ ಸೌಲಭ್ಯ ದೊರಕಿಸಿಕೊಡುವವಳು ಅಮ್ಮ. ಆದರೆ ಇಂದು ಅದೆಷ್ಟೋ ಮಕ್ಕಳು ದೊಡ್ಡವರಾಗಿ ಉತ್ತಮ ಉದ್ಯೋಗ ಸಿಕ್ಕಿಬಿಟ್ಟರೆ, ಅಪ್ಪ-ಅಮ್ಮಂದಿರನ್ನು ಕಡೆಗಣಿಸುತ್ತಾರೆ, ಅವರನ್ನು ಹೊರೆ ಎಂದುಕೊಳ್ಳುತ್ತಾರೆ, ತಮ್ಮ ಕಚೇರಿಯ ಅಥವಾ ಸ್ನೇಹಿತರ ಎದುರು ಈ ಬಡ ಅಪ್ಪ-ಅಮ್ಮನನ್ನು ಪರಿಚಯಿಸಲೂ ಹೇಸುವವರು ಇದ್ದಾರೆ. ಅಂಥ ಮಕ್ಕಳು ಇರುವ ನಡುವೆಯೇ, ತನ್ನನ್ನು ಸಾಕುವುದಕ್ಕಾಗಿ ಅಮ್ಮ ಹತ್ತಾರು ವರ್ಷ ಕೆಲಸದವಳಾಗಿ ದುಡಿದಿರುವ ಮನೆಯನ್ನೇ ಆಕೆಗೆ ಉಡುಗೊರೆಯಾಗಿ ನೀಡಿದರೆ ಹೇಗಿರುತ್ತೆ?
ಅಂಥದ್ದೇ ಒಂದು ಮನಕಲುಕುವ ವಿಡಿಯೋ ಈಗ ಇಂಟರ್ನೆಟ್ನಲ್ಲಿ ಎಲ್ಲರ ಹೃದಯ ಗೆದ್ದಿದೆ. ಇಲ್ಲಿ ಒಬ್ಬ ಮಗ, ತನ್ನ ತಾಯಿಗೆ, ಆಕೆ ಸುಮಾರು 10 ವರ್ಷಗಳ ಕಾಲ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮನೆಯನ್ನೇ ಗಿಫ್ಟ್ ಕೊಟ್ಟಿದ್ದಾನೆ. ಪ್ರತಿದಿನ, ತನ್ನ ಕುಟುಂಬಕ್ಕಾಗಿ, ಜೀವನೋಪಾಯಕ್ಕಾಗಿ, ಮಕ್ಕಳನ್ನು ಸಾಕಲು ಆ ಮಹಿಳೆ ಅದೇ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ, ಮುಂದೊಂದು ದಿನ ತಾನು ಅದೇ ಮನೆಯ ಮಾಲೀಕಳಾಗುತ್ತಾಳೆ ಎನ್ನುವ ಕನಸು ಕೂಡ ಅವಳಿಗೆ ಇರಲಿಕ್ಕಿಲ್ಲ. ಅಂಥ ದೊಡ್ಡ ಮನೆಯ ಕನಸು ಕಾಣುವುದಾದರೂ ಹೇಗೆ ಈ ಬಡ ಜೀವ? ಆದರೆ ಆಕೆಯ ಕನಸಿಗೂ ಮೀರಿದ ನನಸು ಮಾಡಿದ್ದಾನೆ ಮಗ.
ಸರ್ಪ್ರೈಸ್ ನೀಡಲು ಮಗ, ಅಮ್ಮನನ್ನು ಆ ಮನೆಗೆ ಕರೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಆಗ ಅಮ್ಮ, ಈ ಮನೆಗೆ ಏಕೆ ಕರೆದುಕೊಂಡು ಬಂದೆ. ಇಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದಾಗ, ಮಗ, ಇದಕ್ಕೆ ಇನ್ನು ನೀನೇ ಮಾಲೀಕಳು ಎಂದಾಗ, ಅಮ್ಮನಿಗೆ ತುಸು ಕೋಪವೂ ಬರುತ್ತದೆ. ಇದೆಂಥ ಜೋಕ್ ಮಾಡುತ್ತಿರುವಿ ಎಂದು ಪ್ರಶ್ನಿಸಿದ್ದಾರೆ, ಜೊತೆಗೆ ಅಲ್ಲಿರುವ ಕ್ಯಾಮೆರಾ ಕಡೆ ತೋರಿಸಿ, ಏನು ಇದೆಲ್ಲಾ ಹುಚ್ಚುತನ ಎಂದು ಪ್ರಶ್ನಿಸಿದ್ದಾಳೆ. ಆಗ ಮಗ, ಇಲ್ಲಮ್ಮ, ನಾನು ಸುಳ್ಳು ಹೇಳುತ್ತಿಲ್ಲ. ನಿಜಕ್ಕೂ ಇದು ನಿನ್ನದೇ ಮನೆ. ನೀನೇ ಇದರ ಒಡತಿ ಎಂದು ಮನೆಯ ಕೀಲಿಯನ್ನು ಆಕೆಯ ಕೈಗೆ ಇತ್ತಾಗ, ಅಮ್ಮ ಕಕ್ಕಾಬಿಕ್ಕಿಯಾಗಿದ್ದಾಳೆ. ಕೊನೆಗೆ ತಾನು ಕಾಣುತ್ತಿರುವುದನ್ನು ಕನಸಲ್ಲ, ನನಸು ಎಂದು ತಿಳಿದು ಕಣ್ಣೀರು ಹರಿದು ಭಾವುಕಳಾಗಿ ಮಗನನ್ನು ತಬ್ಬಿಕೊಂಡಿದ್ದಾಳೆ.
ವರ್ಷಗಳ ಕಠಿಣ ಪರಿಶ್ರಮ, ತ್ಯಾಗ ಮತ್ತು ಮೌನ ಹೋರಾಟಗಳಿಗೆ ಸಾಕ್ಷಿಯಾದ ಅದೇ ಮನೆ ಈಗ ಅವಳು ಅಂತಿಮವಾಗಿ ತನ್ನದೇ ಎಂದು ಕರೆಯಬಹುದಾದ ಸ್ಥಳವಾಗಿದೆ. ಅವಳ ಅಮೂಲ್ಯ ಪ್ರತಿಕ್ರಿಯೆ ಆನ್‌ಲೈನ್‌ನಲ್ಲಿ ಸಾವಿರಾರು ಜನರನ್ನು ಮುಟ್ಟಿದೆ, ಅನೇಕರು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದೆಂದು ಕರೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.