
ವಯಸ್ಸು ನಲವತ್ತಾಯಿತು ಅಂದ್ರೆ ಮನಸ್ಸು ಹೊಸತನ್ನು ಬಯಸುತ್ತೆ. ಎಲ್ಲ ಇಂಪಾರ್ಟೆಂಟ್ ಹೊಣೆಗಳಿಂದ ಮುಕ್ತಳಾದ ಹೆಣ್ಣಿಗೆ ಇಷ್ಟು ದಿನಗಳಿಂದ ಸ್ವಲ್ಪ ಹೆಚ್ಚಿಗೆ ಟೈಮ್ ಸಿಗುತ್ತೆ. ಆದರೂ, ಅವಳಿಗೆ ಅದೇ ವಯಸ್ಸಲ್ಲಿ ಪ್ರೀ ಮೆನೋಪಾಸ್, ಮೆನೋಪಾಸ್ ಕಾಡುವುದರಿಂದಲೋ ಏನೋ, ಸದಾ ಏನೋ ಮಿಸ್ಸಿಂಗ್ ಅಂತ ಫೀಲ್ ಆಗಲು ಶುರುವಾಗುತ್ತೆ. ಯಾವುತ್ತು ಪ್ರೀತಿಯ ಮಾತನಾಡದ, ಎಲ್ಲವೂ ನಿನ್ನ ಹೊಣೆ ಅಂತ ಹೆಂಡತಿಯ ಮೇಲೆಯೇ ಜವಾಬ್ದಾರಿ ಹೊರೆಸಿ, ತಾನು ತಣ್ಣಗೆ ಕೂರುವ ಗಂಡನ ಸ್ವಭಾವದಿಂದ ಆಗಲೇ ಹೆಣ್ಣು ಹೆಣಗಾಡಿರುತ್ತಾಳೆ.
ಅದೇ ಟೈಮಲ್ಲಿ ನೋಡಿ ಹೀಗಾಗೋದು? ಅರೇ, ಅವನ್ಯಾರೋ ಬೇರೆಯವನ ಕಣ್ಣೋಟದಲ್ಲಿ ವಿಶೇಷ ಸೆಳೆತ ಶುರುವಾಗುತ್ತೆ. ಆಕೆಯನ್ನೇ ನೋಡಿದ್ದಾ? ಕಾಫಿಗೆ ಕರೆದಿದ್ದಾ? ಶುರುವಾಗುತ್ತೆ ಸಣ್ಣ ಹರಟೆ, ಆಗಾಗ ಮೆಸೇಜ್. ಗುಡ್ ಮಾರ್ನಿಂಗ್ನಿಂದ ಗುಡ್ನೈಟ್. ಸದಾ ಅವನದ್ದೇ ಧ್ಯಾನ. ಆಮೇಲೆ, ಮತ್ತಷ್ಟು ಮುಂದಕ್ಕೆ. ತಿಂಡಿ, ಊಟ ಆಯ್ತಾ? ಅಷ್ಟು ಚಿಟ್‌ಚಾಟ್ ಆಗುವಷ್ಟರಲ್ಲಾಗಲೇ ಅಂತರಂಗಕ್ಕೆ ಧಾಂಗುಡಿ ಇಟ್ಟಾಗಿರುತ್ತೆ.
ಮನೆಯ ಸಮಸ್ತ ಜವಾಬ್ದಾರಿಗಳು, ಮಕ್ಕಳ ಆರೈಕೆ, ಕಿರಿಕಿರಿ ಮಾಡುವ ಗಂಡ, ತಪ್ಪದ, ಕೇಳಿ ಕೇಳಿ ಬೇಜಾರಾದ ಅತ್ತೆ, ಮಾವ, ಸಂಬಂಧಿಕರ ಕೊಂಕುಗಳು. ಎಲ್ಲವೂ ತೆರೆದ ಪುಸ್ತಕ. ಮನದೊಳಗೆ ಕಟ್ಟಿದ್ದ ಕಟ್ಟೆ ಒಡೆಯಲು ಮೂರನೆಯವನೊಂದು ನೆಪ. ಅದಕ್ಕೊಂದು ಪ್ರೀತಿ ಎಂಬ ಹೆಸರು. ಸಮಾಧಾನಕ್ಕೊಂದು ತೋಳು, ಕಣ್ಣೀರಿಗೊಂದು ಹೆಗಲು ಬೇಕೆನೆಸಲು ಶುರುವಾಗಿರುತ್ತೆ. ಹೆಣ್ಣಿಗೆ ಮಾತ್ರವಾ? ಹುಂ, ಅವನದ್ದೂ ಅದೇ ಗೋಳು, ಥೇಟ್ ಅಂಥದ್ದೇ ಉಸಿರುಗಟ್ಟಿಸುವ ಸ್ಥಿತಿ. ಹೆಂಡತಿ ಈಗ ನಿರೀಕ್ಷೆಗಳ ಮೂಟೆ, ದೂರುಗಳಿರೋ ಫೈಲ್ನಂತೆ. ಪ್ರೀತಿ-ಪ್ರೇಮ-ಪ್ರಣಯ ಮುಗಿದಾಗಿದೆ. ಹಾಸಿಗೆಯಲ್ಲಿ ಕಂದಕವೇ ಸೃಷ್ಟಿಯಾಗಿದೆ. ಅವಳೂ ಬೋರ್, ಅವಳ ಮಾತಂತೂ ಕೇಳಿಸಿಕೊಳ್ಳಲು ಅಸಹನೀಯ. ಅವನ ಕಣ್ಣಿಗೆ ಈ ಮೂರನೇಯವಳಿನ್ನೂ ಹರೆಯದ ಹುಡುಗಿ. ಕಾಲೇಜಿನಲ್ಲಿ ಕಳ್ಕೊಂಡ ಮೊದಲ ಲವ್ ಇವಳೇ ಅನ್ನಿಸುವಷ್ಟು ಹೃದಯದಲ್ಲಿ ಚಿಟ್ಟೆ ಓಡಾಡಲು ಶುರುವಾಗಿರುತ್ತೆ.
ಅಲ್ಲಿಯೇ ಆ ಸಂಬಂಧ ಮತ್ತೊಂದು ಸ್ಟೆಪ್ ಮುಂದೆ ಹೋಗಿರುತ್ತೆ. ನಿನ್ನ ಮಡಿಲು ನೀಡು ಅಂತಾನೆ. ಯು ಆರ್ ಮೈ ಆತ್ಮಸಖಿ ಅಂತ ಹೇಳುವುದು ಮರೆಯೋಲ್ಲ. ಇವಳು ಮಂಜಿನಂತೆ ಕರಗಿಯೇ ಬಿಡುತ್ತಾಳೆ. ಆ ಅನೈತಿಕ ಸಂಬಂಧವೇ Destiny ಅಂತಾನೆ. ನಿಜವೋ ಸುಳ್ಳೋ ಅರಿಯದೇ ಅಮಾಯಕಿ ಈ ಹೆಣ್ಣು ನಂಬಿಯೇ ಬಿಡುತ್ತಾಳೆ. ಅಲ್ಲಿಗೆ ಗಟ್ಟಿ ಬೇರೇ ಇಲ್ಲದ ಬಾಂಧವ್ಯವೊಂದು ಟಿಸಿಲೊಡೆದು ನಿಲ್ಲುತ್ತದೆ. ಈ ಸಂಬಂಧಕ್ಕೆಷ್ಟು ಆಯಸ್ಸು? ಇಬ್ಬರಿಗೂ ಖಂಡಿತಾ ಗೊತ್ತಿರುವುದಿಲ್ಲ. ಎಲ್ಲವೂ ಗುಟ್ಟು ಗುಟ್ಟಾಗಿಯೇ ನಡೆಯೋದು. ಕದ್ದು ಮುಚ್ಚಿ ಮಾಡಿದ ಸಂಬಂಧದಲ್ಲೊಂದು ವರ್ಣಿಸಲಾಗದ ಸುಖ ಕಂಡುಕೊಳ್ಳುತ್ತವೆ ಮಧ್ಯ ವಯಸ್ಸು ದಾಟಿದ ಎರಡು ಜೀವಗಳು. ಕದ್ದು ಮುಚ್ಚಿ ಮುಂದುವರೆಯುತ್ತೆ ಆಟ. ರಾತ್ರಿಯೂ ಕಣ್ತಪ್ಪಿಸಿ ಆಗಾಗ ನಡೆದಿರುತ್ತೆ ಪ್ರೇಮದಾಟ. ಇಬ್ಬರಿಗೂ ಗೊತ್ತಾಗದೇ ಆರು ತಿಂಗಳಾಗಿರುತ್ತೆ. ಆಗ ಶುರುವಾಗುತ್ತೆ ನೋಡಿ ಅವನ ಹೊಸ ಆಟ. ಮನೆಯಲ್ಲಿ ಈಗೀಗ ಮೊಬೈಲ್ ಹಿಡಿದರೆ ಕಿರಿಕಿರಿ ಮಾರಾಯ್ತಿ. ಸಾರಿ ಮೆಸೇಜ್ ಕಷ್ಟ ಎಂಬ ಸಂದೇಶಗಳು ಶುರುವಾಗಿರುತ್ತೆ. ಇವಳಿಗೆ ಅರ್ಥವಾಗುವಷ್ಟರಲ್ಲಿ ಸಂಜೆಯೊಳಗೆ ಎಲ್ಲವೂ ಮುಗಿದಿರುತ್ತೆ. ರಾತ್ರಿ ಮೊಬೈಲ್, ಮೆಸೇಜ್, ಮಾತು- ಕತೆ ಸಡನ್ ಆಗಿ ಬಂದ್ ಆಗುತ್ತೆ. ಅವನಾಗಲೇ ಎದೆ ಮೇಲೆ ಮಲಗಿದ ಮಡದಿಯ ತಲೆ ನೇವರಿಸುತ್ತಾ, ಮಕ್ಕಳ ಫೀಜು, ಅಪ್ಪನ ಕಾಯಿಲೆ, ಬರ್ತ್ಡೆ ಗಿಫ್ಟ್ ಬಗ್ಗೆ ಆಸೆ ಹುಟ್ಟಿಸುತ್ತಿದ್ದರೆ, ಇವಳಿಗಿಲ್ಲಿ ಒಂಟಿತನದ ಬೇಗುದಿ. ವಂಚನೆಗೊಳಗಾದ ಅಪರಾಧಿ ಭಾವ.
ಆಗಲೇ ಸಣ್ಣಗೆ ಶುರುವಾಗುತ್ತೆ ಅಸಹನೆ, ಕಿರಿಕಿರಿ. ನನ್ನನ್ನು ಅವಾಯ್ಡ್ ಮಾಡ್ತಿದ್ದೀಯಾ ಎಂಬುವುದು ಮೊದಲ ಮಾತು. ಅದಕ್ಕೆ ಅವನ ಸಿಟ್ಟು, ಸಿಡುಕು ಇವಳಿಗೆ ಎಲ್ಲವೂ ಹೊಸದು. ಮೂರು ದಿನ ಮಾತಿಲ್ಲ. ಗಂಡನೊಟ್ಟಿಗೆ ವ್ಯವಹಾರ ಹೇಗೆ ನಡೆಯುತ್ತೋ, ಇದೀಗ ಅದರ ಪುನಾರವರ್ತನೆ ಇವನೊಟ್ಟಿಗೆ. ಹಾಗಾದರೆ ಈಗೆ ಪಡೆದಿದ್ದು ಏನು? ನಾಲ್ಕನೇ ಅವನು ಮರಳುತ್ತಾನೆ. ಮೌನ ಸಾಕು. ನೀನೇ ಸರ್ವಸ್ವ. ಮನೆಯಲ್ಲಿದ್ದರೂ ಮನಸ್ಸು ನಿನ್ನೊಂದಿಗೆ ಅನ್ನುತ್ತಾನೆ. ಮತ್ತದೇ ಹೊಸ ನಾಟಕ ಅವನಿಂದ. ಇವಳು ಮತ್ತೆ ನಂಬುತ್ತಾಳೆ. ಆ ಮುನಿಸು, ಮತ್ತೆ ಒಂದಾಗೋದು ಕಾಮನ್ ಆಗುತ್ತೆ. ಇವಳ ಸಿಟ್ಟು ಒಂಥರಾ ಅವನ ಅಹಂಗೆ ಪೆಟ್ಟು ಕೊಟ್ಟಿರುತ್ತೆ?
ಇವಳ ಕರುಳು ಕರಗುವಂತೆ ಅವನಿಗೆ ಮಾತನಾಡೋದು ಗೊತ್ತು. ವಂಚಿಸೋದು ಗಂಡಿನ ಹುಟ್ಟು ಗುಣವಲ್ಲವೇ? ಇವಳೂ ಪದೆ ಪದೇ ನಂಬುತ್ತಾಳೆ, ಮೋಸ ಹೋದರೂ. ಆದರೆ, ಎಷ್ಟು ದಿನ ಇಂಥ ನಾಟಕಗಳು ನಡೆಯಲು ಸಾಧ್ಯ ಹೇಳಿ? ಬೇರೆ ಬೇರೆ ಒತ್ತಡಗಳಿಗೆ ಹುಟ್ಟಿದ ಪ್ರೀತಿಗೆ ಎಷ್ಟಿರಬಹುದು ಆಯಸ್ಸು? ಬೇಡದ ಬಸುರನ್ನು ತೆಗೆಸಿಲು ಸಾಧ್ಯವಾದರೆ ತೆಗಿಸಲೇ ಬೇಕು. ಎಷ್ಟು ದಿನ ಅಂತ ಹೊತ್ತು ಕೊಳ್ಳುವುದು? ಬಲಿಯುವ ಮುನ್ನ, ಕಣ್ಣು, ಕಿವಿ, ಕೈಕಾಲು ಬೆಳೆಯುವ ಮುನ್ನವೇ ಈ ರೀತಿ ಹುಟ್ಟಿಕೊಂಡ ಪ್ರೇಮಕ್ಕೆ ಅಬಾರ್ಷನ್ ಆಗಲೇಬೇಕು. ಅದೊಂದು ಟೈಂಪಾಸ್ ಅಷ್ಟೇ.
ಇಬ್ಬರಿಗೂ ಅದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ದಿನ ಹಿಡಿಯೋಲ್ಲ. ನನಗಾಗಿ, ನನ್ನನ್ನು ಪ್ರೀತಿಸುವ ಜೀವವೊಂದಿದೆ ಎಂಬ ಭಾವವೇ ಗಂಡಿಗೆ ಸುಖ ಕೊಡುತ್ತೆ. ಮೆಸೇಜ್ಗಳ ಆರ್ದ್ರತೆಗೆ ಕರಗಿ, ನನಗಾಗಿ ಯಾರೋ ಮಿಡಿಯುತ್ತಿದ್ದಾರೆ, ಸ್ಪಂದಿಸುತ್ತಿದ್ದಾರೆ ಎಂದು ಕೊಳ್ಳುತ್ತೆ ಮಧ್ಯ ವಯಸ್ಕ ಮಗು. ಅದೇ ಗುಣ ಮಧ್ಯ ವಯಸ್ಕ ಗಂಡಲ್ಲೂ ಮುಂದುವರಿಯುತ್ತೆ. ಒಂಥರ ಇಬ್ಬರಿಗೂ ಇಡೀ ಜಗತ್ತೇ ಕಲರ್‌ಫುಲ್ ಎಂದೆನಿಸುವ ವಯಸ್ಸದು. ವಾಸ್ತವವೇ ಬೇರೆ ಇರುತ್ತೆ ಬಿಡಿ. ಬದುಕು, ಮನೆ, ಹೆಂಡ್ತಿ, ಮಕ್ಕಳು ನೆನಪು ಸೆಳೆದೇ ಸೆಳೆಯುತ್ತದೆ. ಗಿಲ್ಟಿ ಫೀಲಿಂಗ್. ಛೇ, ಇವಳಿಗಾಗಿ ಪ್ರೀತಿಸುವ ಕುಟುಂಬವನ್ನೇ ಮರೆತನಲ್ಲ ಅನ್ನೋ ಗಿಲ್ಟ್. ಆ ಮೂರನೇಯವಳು ಸಾಕಾಗಿರುತ್ತೆ ಅಷ್ಟೊತ್ತಿಗೆ. ಅವಳದ್ದೂ ಅದೇ ನಿರ್ಧಾರ. ಅಲ್ಲಿಗೆ ಮಧ್ಯವಯಸ್ಕ ಪ್ರೇಮಕ್ಕೆ ಸಮಾಧಿ ಕಟ್ಟಾಗಿರುತ್ತೆ.
ಪ್ರೇಮವೇನೂ ದೊಡ್ಡ ವ್ಯವಹಾರವಲ್ಲ. ಪ್ರೇಮ. ಪ್ರೇಮಿಯಾಗುವುದು ಕಷ್ಟ. ನಿಷ್ಕಾಮ ಪ್ರೇಮವೆಂದ್ರೆ ಒಬ್ಬರನ್ನು ಪ್ರೀತಿಸುತ್ತಾ ನಾವು ಶುದ್ಧವಾಗ್ತೀವಿ. ನಿರಹಂಕಾರಿಗಳಾಗುತ್ತೇವೆ. ಒಳಗಿನಿಂದ ಪರಿಶುದ್ಧವಾಗಿಸುವ ಪ್ರಕ್ರಿಯೆ Unconditional Love.ಅಪಾತ್ರರೇ ಇದನ್ನು ಕಂಡು ಕೊಳ್ಳಲು ನೆರವಾಗುತ್ತಾರೆ. ಎಲ್ಲವೂ ಚೆನ್ನಾಗಿದ್ದರೆ ನಿಷ್ಕಾಮ ಪ್ರೇಮಕ್ಕೆಲ್ಲಿ ಪರೀಕ್ಷೆ? ಆಗಲೇ ಪರಿಶುದ್ಧರಾಗೋದು.
ಸ್ವಾರ್ಥ -ನಿರ್ಲಕ್ಷ್ಯಗಳನ್ನು ಅನುಭವಿಸುವುದು ಆಸಾಧ್ಯ. ಅದು ಕೈ ಸುಡುವ ಕೆಂಡ. ಮುಟ್ಟಿದಾಗ ಸುಟ್ಟಿದ್ದು ಸೀದು ಹೋಗಬೇಕು. ಸೀದು ಬೂದಿಯಾಗಬೇಕು. ಎಲ್ಲಿಯೂ ಹತ್ತಿರದಲ್ಲಿ ಸಿಗದ ಪ್ರೇಮ, ಪ್ರೀತಿಗಾಗಿ ಇನ್ನೆಲ್ಲೋ ಅರಸಲು ಹೋದರೆ ಸಿಗೋದು ಅಸಾಧ್ಯ. ಜೊತೆಯಲ್ಲಿದ್ದೇ ಅದನ್ನು ಕಂಡು ಕೊಳ್ಳಬೇಕು. ಗಂಧದ ಕೊರಡು ತೇಯ್ದು ಪರಿಮಳ ಕೊಡುವಂತೆ. ನಮ್ಮ ಭಾವನೆಗೆ ಇನ್ನೊಬ್ಬರು ಸ್ಪಂದಿಸುತ್ತಿಲ್ಲ ಎಂದರೆ ಅದು ಆ ವ್ಯಕ್ತಿಯ ದೋಷ. ನಮ್ಮ ಭಾವನೆಯದ್ದಲ್ಲ ಎನ್ನೋದು ನೆನಪಿರಲಿ. ಪ್ರೇಮ ತುಂಬಾ ಆನೆಸ್ಟ್. ಅದಕ್ಕೆ ವಿವಾಹೇತರ ಸಂಬಂಧಕ್ಕೆ ಆಯಸ್ಸೂ ಕಡಿಮೆ. ಹೆಜ್ಜೆ ಇಡುವಾಗ ಹುಷಾರಾಗಿರಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.