Chanakya Niti: ನಿಮ್ಮನ್ನು ನಿಮಗೇ ಅರಿಯದಂತೆ ನಿಯಂತ್ರಿಸುವ 7 ಅದೃಶ್ಯ ವಿಧಾನಗಳು ಇಲ್ಲಿವೆ!

Published : Jan 22, 2026, 04:50 PM IST
chanakya niti

ಸಾರಾಂಶ

ಆಚಾರ್ಯ ಚಾಣಕ್ಯನ ನೀತಿಯ (Chanakya niti) ಪ್ರಕಾರ, ನಮ್ಮನ್ನು ನಿಯಂತ್ರಿಸುವವರು ಶತ್ರುಗಳಲ್ಲ, ನಮ್ಮ ದುರ್ಬಲತೆಯನ್ನು ಬಲ್ಲವರೇ ಆಗಿರುತ್ತಾರೆ. ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿ, ನಮ್ಮ ಆಯ್ಕೆಗಳನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂಬುದು ಇಲ್ಲಿದೆ.

ನಮ್ಮನ್ನು ಯಾರಾದರೂ ನಿಯಂತ್ರಿಸುತ್ತಿದ್ದಾರೆ ಎಂದರೆ ಅದು ನೇರವಾಗಿ ಕಾಣಿಸುವುದಿಲ್ಲ. ಅದು ಸಲಹೆಯಂತೆ ಕಾಣುತ್ತದೆ, ಕಾಳಜಿಯಂತೆ ಕೇಳಿಸುತ್ತದೆ. “ನಿನ್ನ ಒಳ್ಳೆಯದಕ್ಕಾಗಿ” ಎಂದು ಹೇಳಲಾಗುತ್ತದೆ. ಅವರ ಪ್ರಭಾವ ನಮ್ಮ ಯೋಚನೆಗಳೊಳಗೆ ಸೇರಿಹೋಗಿರುತ್ತದೆ. ಅಚಾರ್ಯ ಚಾಣಕ್ಯನು ಶತಮಾನಗಳ ಹಿಂದೆಯೇ ಹೇಳಿದ್ದಾನೆ- ಅಪಾಯಕಾರಿ ನಿಯಂತ್ರಣ ಶತ್ರುಗಳಿಂದಲ್ಲ, ನಮ್ಮ ದುರ್ಬಲತೆಯನ್ನು ಚೆನ್ನಾಗಿ ಅರಿತವರಿಂದ ಉಂಟಾಗುತ್ತದೆ. ಮನುಷ್ಯನು ಶಕ್ತಿಯನ್ನು ಕಳೆದುಕೊಳ್ಳುವುದು ದುರ್ಬಲ ಆಗಿರುವುದರಿಂದಲ್ಲ. ತನ್ನ ಆಯ್ಕೆಯ ಬದಲು ಮತ್ತೊಬ್ಬರ ಪ್ರಭಾವಕ್ಕೆ ಒಳಗಾದಾಗ. ಹಾಗಾದರೆ, ನಾವು ಇನ್ನೊಬ್ಬರ ಅನಗತ್ಯ ನಿಯಂತ್ರಣಕ್ಕೆ ತುತ್ತಾಗಿದ್ದೇವೆ ಅಂತ ಯಾವಾಗ ಅರ್ಥ ಮಾಡಿಕೊಳ್ಳಬೇಕು? ಈ ಕೆಳಗಿನ 7 ಪ್ರಸಂಗಗಳಲ್ಲಿ.

1. ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ಕಾಳಜಿ

ಮೊದಲು ಅದು ಅವರ ಅತಿಯಾದ ಕಾಳಜಿಯಂತೆ ಕಾಣುತ್ತದೆ. ನಿಮ್ಮ ತೀರ್ಮಾನಗಳನ್ನು ಮರುಮರು ಪ್ರಶ್ನಿಸುತ್ತಾರೆ, ನೀವು ಪ್ರಯತ್ನಿಸುವ ಮೊದಲೇ ಮಧ್ಯೆ ಬರುತಾರೆ. ಆರಂಭದಲ್ಲಿ ಅದು ಬೆಂಬಲದಂತೆ ತೋರುತ್ತದೆ. ಆದರೆ ನಿಧಾನವಾಗಿ ನೀವು ಹಿಂಜರಿಯಲು ಆರಂಭಿಸುತ್ತೀರಿ. ನಿಮ್ಮ ತೀರ್ಮಾನಗಳ ಮೇಲೆ ನಿಮಗೇ ಅನುಮಾನ ಬರುತ್ತದೆ. ನಿಜವಾದ ಕಾಳಜಿ ನಿಮ್ಮನ್ನು ಬಲಿಷ್ಠರನ್ನಾಗಿಸುತ್ತದೆ. ಆದರೆ ಕಾಳಜಿಯ ಹೆಸರಿನಲ್ಲಿರುವ ನಿಯಂತ್ರಣ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎನ್ನುತ್ತಾರೆ ಚಾಣಕ್ಯ.

2. ನಿಮ್ಮ ವಿರೋಧದ ಬಾಯಿ ಮುಚ್ಚಿಸುವ ಮೆಚ್ಚುಗೆ

ಪ್ರಶಂಸೆ ಕೇಳಲು ಚೆನ್ನಾಗಿರುತ್ತದೆ. ಅದಕ್ಕೇ ಅದು ಕೆಲಸ ಮಾಡುತ್ತದೆ. ನೀವು ಒಪ್ಪಿದರೆ ನೀವು “ಚಾಣಾಕ್ಷ”. ಅವರು ಪ್ರಶ್ನಿಸಿದರೆ ನೀವು “ಕಷ್ಟದ ವ್ಯಕ್ತಿ”. ನಿಧಾನವಾಗಿ ಸತ್ಯ ಹೇಳುವುದಕ್ಕಿಂತ ಮೌನವಾಗಿರುವುದೇ ಸುಲಭವೆನಿಸುತ್ತದೆ. ಚಾಣಕ್ಯನ ಪ್ರಕಾರ, ಮೆಚ್ಚುಗೆಯ ಮೂಲಕ ನಿಮ್ಮ ಅಹಂ ಭಾವವನ್ನು ಗೆಲ್ಲಲಾಗುತ್ತದೆ. ಅದೇ ದುರ್ಬಲತೆ ಮೂಡಿಸುತ್ತದೆ. ಪ್ರಶಂಸೆಗೆ ಅಂಟಿಕೊಂಡ ಆತ್ಮಮೌಲ್ಯ ನಿಮ್ಮ ಸ್ವಾತಂತ್ರ್ಯವನ್ನು ಮೌನವಾಗಿ ಕಸಿದುಕೊಳ್ಳುತ್ತದೆ.

3. ಮಾತಿನ ಬದಲು ಗಿಲ್ಟಿ ಭಾವನೆ ತಂದಾಗ

ಯಾಕೆ ಅಂತ ಹೇಳುವ ಬದಲು, ಪ್ರಶ್ನಿಸಿದರೆ ನಿಮ್ಮನ್ನೇ ತಪ್ಪುಗಾರನನ್ನಾಗಿ ಮಾಡುತ್ತಾರೆ. “ನಾವು ನಿನಗಾಗಿ ಇಷ್ಟೆಲ್ಲಾ ಮಾಡಿದ್ದೇವೆ” ಎನ್ನುವ ಮಾತುಗಳು ಬರುತ್ತವೆ. ವಿಚಾರ ಏನು ಸರಿ ಅನ್ನೋದಕ್ಕಿಂತ, ನೀವು ಎಷ್ಟು ತಪ್ಪು ಅನ್ನೋದಾಗಿ ತಿರುಗುತ್ತದೆ. ಚಾಣಕ್ಯ ಹೇಳುತ್ತಾನೆ: ತಪ್ಪಿತಸ್ಥ ಭಾವನೆ ಬಂದಾಗ ಯೋಚನೆ ನಿಂತುಹೋಗುತ್ತದೆ.

4. ಸಂಪ್ರದಾಯದ ಹೆಸರಿನಲ್ಲಿ ನಿಮ್ಮನ್ನು ಮೌನಗೊಳಿಸಿದಾಗ

ಪ್ರಶ್ನಿಸಿದರೆ ಉತ್ತರ ಇಲ್ಲ. “ಇದೇ ನಮ್ಮ ಸಂಪ್ರದಾಯ”, “ಇದು ಹೀಗೆ ಆಗಬೇಕು” ಎಂದು ಹೇಳಿ ಮಾತು ಮುಗಿಸುತ್ತಾರೆ. ನೀವು ಪ್ರಶ್ನೆ ಕೇಳಿದ್ದನ್ನೇ ತಪ್ಪು ಮಾಡಿದಂತೆ ಭಾವಿಸಲಾಗುತ್ತದೆ. ಚಾಣಕ್ಯನ ಪ್ರಕಾರ, ಸಂಪ್ರದಾಯ ಯೋಚನೆಗೆ ದಾರಿ ತೋರಬೇಕು, ಯೋಚನೆಯನ್ನು ನಿಲ್ಲಿಸಬಾರದು.

5. ಸಂಪೂರ್ಣ ಮಾಹಿತಿ ನಿಮಗೆ ಕೊಡದಿದ್ದಾಗ

ನೇರ ಸುಳ್ಳು ಹೇಳುವುದಿಲ್ಲ. ಆದರೆ ಬೇಕಾದಷ್ಟು ಮಾಹಿತಿಯನ್ನಷ್ಟೇ ಕೊಡುತ್ತಾರೆ. ನೀವು ಆಯ್ಕೆ ಮಾಡಿದಂತೆ ಭಾಸವಾಗುತ್ತದೆ, ಆದರೆ ಆಯ್ಕೆಯ ಗಡಿ ಅವರು ಹಾಕಿರುತ್ತಾರೆ. ಚಾಣಕ್ಯ ಹೇಳಿದಂತೆ, ಮಾಹಿತಿ ಯಾರ ಕೈಯಲ್ಲಿದೆಯೋ, ಆಯ್ಕೆಯೂ ಅವರ ಕೈಯಲ್ಲಿರುತ್ತದೆ.

6. ದುರ್ಬಲತೆಯ ಮುಖವಾಡದಿಂದ ಜವಾಬ್ದಾರಿ ತಪ್ಪಿಸಿದಾಗ

ನೀವು ಪ್ರಶ್ನಿಸಿದರೆ ಅವರು ನೋವಿನ ಪಾತ್ರ ವಹಿಸುತ್ತಾರೆ. ಅತ್ತುಕೊಳ್ಳುತ್ತಾರೆ, ಭಾವನಾತ್ಮಕರಾಗುತ್ತಾರೆ. ವಿಷಯ ಅವರ ತಪ್ಪಿನಿಂದ ನಿಮ್ಮ ಮಾತಿನ ಶೈಲಿಗೆ ತಿರುಗುತ್ತದೆ. ಕೊನೆಗೆ ನೀವು ಕ್ಷಮೆ ಕೇಳುವ ಸ್ಥಿತಿಗೆ ಬರುತ್ತೀರಿ. ಚಾಣಕ್ಯ ಎಚ್ಚರಿಸಿದ್ದಂತೆ, ದುರ್ಬಲತೆ ಕೆಲವೊಮ್ಮೆ ದೊಡ್ಡ ತಂತ್ರವಾಗಿರುತ್ತದೆ.

7. ಅವರ ಯೋಚನೆಗಳು ನಿಮ್ಮದೇ ಅನ್ನಿಸುವಾಗ

ಮರುಮರು ಒಂದೇ ಸಂಶಯ, ಒಂದೇ ಭಯ ಹೇಳುತ್ತಿರುತ್ತಾರೆ. ನಿಧಾನವಾಗಿ ಅದು ನಿಮ್ಮದೇ ಯೋಚನೆಯಂತೆ ಅನಿಸುತ್ತದೆ. ನೀವು ಆಯ್ಕೆ ಮಾಡದೇ ಇದ್ದ ಯೋಚನೆಯನ್ನು ನಿಮ್ಮದೇ ಎಂದು ರಕ್ಷಿಸಲು ಆರಂಭಿಸುತ್ತೀರಿ. ಚಾಣಕ್ಯನ ಮಾತು ಸ್ಪಷ್ಟ: ಮನಸ್ಸನ್ನು ಒತ್ತಡದಿಂದಲ್ಲ, ಪುನರಾವೃತ್ತಿಯಿಂದ ವಶ ಮಾಡುತ್ತಾರೆ. ಯೋಚನೆ ನಿಮ್ಮದೇ ಅನ್ನಿಸಿದ ಕ್ಷಣದಿಂದಲೇ ನಿಯಂತ್ರಣ ಪೂರ್ಣವಾಗುತ್ತದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಾವಿಗೆ ಭಾವನೆಗಳಿದ್ಯಾ? ಬಾವಿಗೆಸೆದ ಮಗುವ ಹೊಟ್ಟೆಗೆ ಸುತ್ಕೊಂಡು ಕಾಪಾಡಿತ್ತು ನಾಗರಹಾವು!
'ಸ್ಕ್ರೀನ್‌ ಮೇಲೆ ಮುಗುಳ್ನಗುವ ಈ ನಟಿ ನಿಜ ಜೀವನದಲ್ಲಿ ಇರೋದೇ ಬೇರೆ ತರ'.. ಕಿಯಾರಾ ಅಡ್ವಾಣಿಗೆ ಬೇಕಿತ್ತಾ ಇದು?