
ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕ್ಯಾಬ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಕ್ಯಾಬ್ ಚಾಲಕ ಸಹಜ ಹೆರಿಗೆಯಾಗುವುದಕ್ಕೆ ಸಹಾಯ ಮಾಡಿದ್ದು, ಕ್ಯಾಬ್ ಚಾಲಕನ ಮಾನವೀಯ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಮಹಿಳೆಯೊಬ್ಬರು ಈ ವಿಚಾರವನ್ನು ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ಹಂಚಿಕೊಂಡಿದ್ದು, ಕ್ಯಾಬ್ ಚಾಲಕನ ಸಮಯಪ್ರಜ್ಞೆಗೆ ಧನ್ಯವಾದ ಹೇಳಿದ್ದಾರೆ.
ರಾಪಿಡೋ ಕ್ಯಾಬ್ ಡ್ರೈವರ್ ವಿಕಾಸ್ ಎಂಬುವವರೇ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಹಾಯ ಮಾಡಿದವರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ತೀವ್ರವಾಗಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಕಾರಿನಲ್ಲೇ ಹೆರಿಗೆಯಾಗಲು ಸಹಾಯ ಮಾಡಿದ ಅವರು ಬಳಿಕ ಮಗು ಹಾಗೂ ತಾಯಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಗುರುಗ್ರಾಮ್‌ನಲ್ಲಿ ಈ ಘಟನೆ ನಡೆದಿದೆ. ರೋಹನ್ ಮೆಹ್ರಾ ಎಂಬ ರೆಡಿಟ್ ಬಳಕೆದರರು ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಚಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರೋಹನ್ ಮೆಹ್ರಾ ಅವರು ತಮ್ಮ ಮನೆಯ ಅಡುಗೆಯಾಳುವಿನ ಪತ್ನಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ರಾಪಿಡೋವನ್ನು ಬುಕ್ ಮಾಡಿದ್ದರು. ಆದರೆ ಪ್ರಯಾಣದ ಮಧ್ಯೆಯೇ ಮಹಿಳೆಗೆ ತಡೆದುಕೊಳ್ಳಲಾಗದಷ್ಟು ಹೆರಿಗೆ ನೋವು ಶುರುವಾಗಿದ್ದು, ಕ್ಯಾಬ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವೇಳೆ ಕ್ಯಾಬ್ ಚಾಲಕ ವಿಕಾಸ್ ಅವರು ಹೆರಿಗೆಗೆ ಸಹಾಯ ಮಾಡಿದ್ದಲ್ಲೇ ತಾಯಿ ಹಾಗೂ ಮಗುವನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲದೇ ತಾವು ತಮ್ಮ ಕರ್ತವ್ಯದ ಹೊರತಾಗಿ ಮಾನವೀಯ ನೆಲೆಯಲ್ಲಿ ಇಷ್ಟು ಸಹಾಯ ಮಾಡಿದ್ದಲ್ಲದೇ ಇದಕ್ಕೆ ಹೆಚ್ಚೇನು ಚಾರ್ಜ್ ಮಾಡದೇ ಆಪ್‌ನಲ್ಲಿ ಇದ್ದಷ್ಟೇ ಹಣವನ್ನು ಪಡೆದಿದ್ದಾರೆ.
ಅವರ ಮಾನವೀಯತೆಗೆ ಒಂದು ಗೌರವವಾಗಿ, ನಾವು ಚಾಲಕನಿಗೆ ಏನಾದರೂ ಸಹಾಯ ಮಾಡಲು ಬಯಸಿದೆವು. ಆದರೆ ಪ್ರಯಾಣ ಮುಗಿದ ನಂತರ ನಾವು ಅವರಿಗೆ ಮೊದಲು ಕರೆ ಮಾಡದ ಕಾರಣ ಅವರ ದೂರವಾಣಿ ಸಂಖ್ಯೆಯನ್ನು ನಮಗೆ ಕಂಡುಹಿಡಿಯಲಾಗಲಿಲ್ಲ ಎಂದು ಮೆಹ್ರಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಅಲ್ಲದೇ ರಾಪಿಡೊ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಅವರು ಈ ಚಾಲಕನನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಕೇಳಿದ ಅವರು ಇದರಿಂದ ಆ ಕ್ಯಾಬ್ ಚಾಲಕನಿಗೆ ನಾವು ಧನ್ಯವಾದ ಹೇಳಬಹುದಿತ್ತು ಎಂದು ಬರೆದುಕೊಂಡಿದ್ದಾರೆ. ಆ ಚಾಲಕನನ್ನು ತಲುಪಲು ನಮಗೆ ಸಹಾಯ ಮಾಡಲು ನಾನು ರಾಪಿಡೊ ಮತ್ತು ಪವನ್ ಗುಂಟುಪಲ್ಲಿ ಅವರನ್ನು ವಿನಂತಿಸುತ್ತೇನೆ. ಅವರ ಹೆಸರು ವಿಕಾಸ್ ಮತ್ತು ನಾನು ಕೆಳಗೆ ರೈಡ್ ವಿವರಗಳನ್ನು ಸಹ ಒದಗಿಸಿದ್ದೇನೆ ಎಂದು ಅವರು ತಮ್ಮ ಅಡುಗೆಯವರ ರಾಪಿಡೊ ರೈಡ್‌ನ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದು, ಚಾಲಕನನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದಾರೆ.
ಇವರ ಪೋಸ್ಟ್‌ಗೆ ರೆಡಿಟ್‌ನಲ್ಲಿ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದ್ದು, ಈ ವಿಚಾರವನ್ನು ಟ್ವಿಟ್ಟರ್ ಹಾಗೂ ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ರಾಪಿಡೋ ಕೆಲವು ಪ್ರಕರಣಗಳಲ್ಲಿ ತನ್ನ ಚಾಲಕರನ್ನು ಗುರುತಿಸಿ ಬಹುಮಾನ ನೀಡಿದೆ, ವಿಕಾಸ್‌ನಂತಹವರು ನಮಗೆ ಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.