
ಬೆಂಗಳೂರು: ಜೀ ಕನ್ನಡದ ರಾಣಿ ಸೀರಿಯಲ್ ಎಲ್ಲರ ಮನಸ್ಸನ್ನು ಗೆದ್ದಿದೆ. ಅಮ್ಮ-ಮಗಳ ಬಾಂಧವ್ಯದ ಸ್ಟೋರಿ ಇದು. ತಾಯಿ (ಕಾವೇರಿ) ಮತ್ತು ಮಗಳ (ರಾಣಿ) ನಡುವಿನ ಅಪಾರ ಪ್ರೀತಿ, ಬಾಂಧವ್ಯ ಹಾಗೂ ಸವಾಲುಗಳ ಸುತ್ತ ಸಾಗುವ ಸುಂದರ ಕಥೆಯಾಗಿದೆ. ಮಾಡದ ತಪ್ಪಿಗೆ ಜೈಲು ಸೇರಿ ಜೈಲಿನಲ್ಲಿಯೇ ಮಗುವನ್ನು ಹೆತ್ತು, ಜೈಲಿನ ನಿಯಮದ ಪ್ರಕಾರ ಆರು ವರ್ಷ ಆದ ಮೇಲೆ ಮಗಳನ್ನು ಜೈಲಿನಿಂದ ಹೊರಗಡೆ ಬಿಡಬೇಕಾದ ಪ್ರಸಂಗ... ಅಮ್ಮ-ಮಗಳ ಕಣ್ಣೀರಿನ ಸ್ಟೋರಿ ಹೊತ್ತು, ಎಲ್ಲರನ್ನೂ ಭಾವುಕ ಆಗಿಸಿದ್ದ ಸೀರಿಯಲ್ ರಾಣಿ ಇದೀಗ ಮತ್ತೊಂದು ರೂಪ ಪಡೆದುಕೊಂಡಿದೆ. ಇದೀಗ ಅಪ್ಪ-ಅಮ್ಮನನ್ನು ಒಂದು ಮಾಡಲು ರಾಣಿ ಹರಸಾಹಸ ಪಡುತ್ತಿದ್ದಾರೆ.
ರಾಣಿ ಪಾತ್ರದಲ್ಲಿ ಪುಟಾಣಿ ಧನ್ವಿ ಮನೋಜ್ಞ ಅಭಿನಯ ನೀಡುತ್ತಿದ್ದಾಳೆ. ತನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾಳೆ ಬಾಲಕಿ ಧನ್ವಿ. ಈಕೆಯ ಅಮ್ಮನ ಪಾತ್ರದಲ್ಲಿ, ಅರ್ಥಾತ್ ಸೀರಿಯಲ್ ನಾಯಕಿಯಾಗಿ ಮಿಂಚುತ್ತಿರುವ ನಟಿ ಐಶ್ವರ್ಯ ಎಚ್. ಜೈಲಿನಲ್ಲಿ ಇರುವಾಗ ಮಗುವನ್ನು ಪಡೆದು, ನಂತರ ಆ ಮಗಳನ್ನು ತನ್ನಿಂದ ದೂರ ಮಾಡುವ ಆ ಸನ್ನಿವೇಶಕ್ಕೆ ವೀಕ್ಷಕರನ್ನು ಕಣ್ಣೀರಿನಲ್ಲಿ ತೇಲಿಸುವ ನಟನೆ ಮಾಡಿದ್ದಾರೆ ನಟಿ ಐಶ್ವರ್ಯ. ತಪ್ಪೇ ಮಾಡದೇ ಶಿಕ್ಷೆ ಅನುಭವಿಸುತ್ತಿರುವ ಕಾವೇರಿಯ ಪಾತ್ರ, ಎಲ್ಲರನ್ನೂ ಭಾವುಕ ಆಗಿಸಿದೆ.
ಇಂತಿಪ್ಪ ನಟಿ ಐಶ್ವರ್ಯ ರಿಯಲ್ ಲೈಫ್‌ನಲ್ಲಿ ಇನ್ನೂ ಅವಿವಾಹಿತೆ. ಕಲಾವಿದರಿಗೆ ಅಭಿಮಾನಿಗಳು ಎಷ್ಟು ಪ್ರಮಾಣದಲ್ಲಿ ಇರುತ್ತಾರೆಯೋ, ಕಲಾವಿದರ ಎಂದಾಕ್ಷಣ, ಮದುವೆಯ ವಿಷಯದಲ್ಲಿ ಹಲವರು ಹಿಂದೇಟು ಹಾಕುವುದು ಇಂದಿಗೂ ಇದೆ. ಕಲಾವಿದರನ್ನು ಟಿವಿಯಲ್ಲೋ, ಸಿನಿಮಾದಲ್ಲೋ ನೋಡಿದಾಗ ನನಗೂ ಇಂಥಹೆಂಡ್ತಿ ಸಿಗಬೇಕು ಎಂದುಕೊಳ್ಳುವವರು ರಿಯಲ್ ಲೈಫ್ಗೆ ಬಂದಾಗ, ನಟಿಯಾದವಳು ನನಗೆ ಬೇಡಪ್ಪಾ ಎನ್ನುವುದು ಉಂಟು. ಇದನ್ನೇ ಈಗ ಹೇಳಿದ್ದಾರೆ ನಟಿ ಐಶ್ವರ್ಯ. ತಾವು ನಟಿಯಾಗಿರುವ ಕಾರಣದಿಂದ ಕೆಲವು ಮದುವೆ ಪ್ರಪೋಸಲ್ಸ್ ಬಿದ್ದುಹೋಗಿವೆ. ನಟಿ ಎಂದರೆ ಏನೋ ಒಂದು ರೀತಿಯಲ್ಲಿ ನೋಡುವ ವಾತಾವರಣ ಇಂದಿಗೂ ಇದೆ ಎಂದಿದ್ದಾರೆ ಐಶ್ವರ್ಯ.
ಹಿಂದೆಲ್ಲಾ ಕಲಾವಿದರಿಗೆ ದೊಡ್ಡ ಗೌರವ ಇತ್ತು. ಆದರೆ ಇಂದು ಕಲಾವಿದರು ಅತ್ಯಂತ ಸುಲಭದಲ್ಲಿ ಸಿಗುತ್ತಾರೆ. ಅದರಲ್ಲಿಯೂ ಸೋಷಿಯಲ್ ಮೀಡಿಯಾದಲ್ಲಿ ಬಂದಿರೋದನ್ನೆಲ್ಲಾ ನಿಜ ಎಂದು ನಂಬುವ ವರ್ಗವೂ ಇದೆ, ಸೋಷಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ್ದನ್ನು ಹಾಕಿ ಮಜಾ ನೋಡುವವರೂ ಇದ್ದಾರೆ. ಇವೆರಡವುಗಳಿಂದಾಗಿ ಕೆಲವೊಂದು ವೈಯಕ್ತಿಕ ಜೀವನಕ್ಕೂ ಪೆಟ್ಟು ಬೀಳುತ್ತದೆ, ಮದುವೆ ಆಗುವುದೂ ಕಷ್ಟ ಎನ್ನುವ ಸನ್ನಿವೇಶ ಎದುರಾಗುತ್ತದೆ ಎಂದು ನಟಿ ಐಶ್ವರ್ಯ sumantvkannada ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾನು ಆರ್ಟಿಸ್ಟ್ ಎನ್ನುವ ಕಾರಣಕ್ಕೆ ತಮಗೆ ಪ್ರಪೋಸಲ್ ರಿಜೆಕ್ಟ್ ಆಗಿರುವ ಕುರಿತು ಅವರು ಮನಬಿಚ್ಚಿ ಮಾತನಾಡಿದ್ದಾರೆ.
ಈ ಹಿಂದೆ ನಟಿ, ಸಂದರ್ಶನವೊಂದರಲ್ಲಿ ಅವರು ತಮಾಷೆ ಮಾಡುತ್ತಾ, ನನಗಿನ್ನೂ ರಿಯಲ್ ಲೈಫ್‌ನಲ್ಲಿ ಮದ್ವೆನೇ ಆಗಿಲ್ಲ. ಆದ್ರೆ ಸೀರಿಯಲ್ನಲ್ಲಿ ಆರು ವರ್ಷದ ಮಗಳ ಅಮ್ಮನೂ ಆಗಿಬಿಟ್ಟೆ. ಅದೂ ನನ್ನ ಬಾಲ್ಯದ ಫ್ರೆಂಡ್ ಆರವ್ ಸೂರ್ಯ (ಸೀರಿಯಲ್ ನಾಯಕ)ನಿಂದ ಎಂದು ತಮಾಷೆ ಮಾಡಿದ್ದಾರೆ. ಅಂದಹಾಗೆ ಆರವ್ ಮತ್ತು ಐಶ್ವರ್ಯ ಬಾಲ್ಯದ ಸ್ನೇಹಿತರಂತೆ. ಆದರೆ ಈ ಸೀರಿಯಲ್ ಒಪ್ಪಿಕೊಂಡಾಗ ಅದರಲ್ಲಿ ತಾವಿಬ್ಬರೂ ಪತಿ-ಪತ್ನಿ ಎನ್ನುವುದು ಗೊತ್ತೇ ಇರಲಿಲ್ಲ, ಸೆಟ್ಗೆ ಬಂದಾಗ ನೋಡಿ ಆಶ್ಚರ್ಯ ಆಗೋಯ್ತು ಎಂದಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.