ಅಜ್ಜ-ಅಜ್ಜಿ ಸಾಂಗತ್ಯ ನೀಡಿದರೆ, ಮಕ್ಕಳಿಗದೇ ಬೆಸ್ಟ್ ಗಿಫ್ಟ್!

By Suvarna News  |  First Published Mar 31, 2020, 5:06 PM IST

ಅಜ್ಜ-ಅಜ್ಜಿಯರಿಗೆ ಮೊಮ್ಮಕ್ಕಳು ಸರಿದಾರಿಗೆ ಹೋಗಬೇಕೆಂದಿದ್ದರೂ ಅವರು ಮಕ್ಕಳ ಕಣ್ಣಿನಲ್ಲಿ ಪೋಷಕರಂತೆ ವಿಲನ್ ಆಗುವುದಿಲ್ಲ. ಅವರು ಮಕ್ಕಳನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಾರೆ. ಹಾಗಾಗಿಯೇ ಪೋಷಕರ ವಿರುದ್ಧ ಮುನಿಸಿಕೊಂಡ ಮಕ್ಕಳು ಅಜ್ಜ-ಅಜ್ಜಿಯ ಬಳಿ ಓಡುವುದು. ಹೀಗೆ ಓಡಿದ ಮಕ್ಕಳು ತಮ್ಮ ಭಾವನೆಗಳು, ನೆಗೆಟಿವ್ ಎಮೋಶನ್ಸ್‌ನ್ನು ಹೊರ ಹಾಕಲು ಅವಕಾಶ ಸಿಗುತ್ತದೆ. 


ವಿಭಕ್ತ ಕುಟುಂಬಗಳು ಹೆಚ್ಚುತ್ತಿರೋ ಇಂದಿನ ದಿನಗಳಲ್ಲಿ ಮಕ್ಕಳಿಗೆ ಅಜ್ಜ ಅಜ್ಜಿಯ ಸಾಂಗತ್ಯ ಸಿಗುವುದು ಅಪರೂಪವೇ ಸರಿ. ಅದರಲ್ಲೂ ಅತ್ತೆಸೊಸೆಗೆ ಅಷ್ಟಕ್ಕಷ್ಟೇ ಇದ್ದರಂತೂ ಸೊಸೆಯು ತನ್ನ ಮಗುಗೆ ಅಜ್ಜಅಜ್ಜಿ ಹೆಚ್ಚು ಸಿಗದಂತೆ ನೋಡಿಕೊಳ್ಳುತ್ತಾಳೆ. ಅಜ್ಜಅಜ್ಜಿ ಅವಿದ್ಯಾವಂತರು, ತನಗೆ ಕಿರಿಕಿರಿ ಮಾಡಿದ್ದಾರೆ, ಮೂಢನಂಬಿಕೆ ಹೆಚ್ಚು, ಮುದ್ದು ಮಾಡಿ ಹಾಳು ಮಾಡುತ್ತಾರೆ, ಮಗುವಿಗೆ ಇಂಗ್ಲಿಷ್  ಕಲಿಸಲ್ಲ ಇತ್ಯಾದಿ ಕಾರಣಗಳಿಗಾಗಿ ಅವರಿಂದ ದೂರವಿಟ್ಟು ಮಕ್ಕಳನ್ನು ಬೆಳೆಸುವವರು ಹೆಚ್ಚು. ಆದರೆ, ಮಕ್ಕಳಿಗೆ ಅಜ್ಜಅಜ್ಜಿಯ ಸಾಂಗತ್ಯಕ್ಕಿಂತ ಉತ್ತಮ ಉಡುಗೊರೆ ಇನ್ನೊಂದಿಲ್ಲ ಎನ್ನುತ್ತದೆ ವಿಜ್ಞಾನ. 

ಹೌದು. ಇದು ವೈಜ್ಞಾನಿಕವಾಗಿ ಸಾಬೀತಾಗಿದೆಯಾದರೂ, ಬಾಲ್ಯದ ನೆನಪನ್ನು ಮರುಕಳಿಸಿಕೊಂಡರೆ ನಮಗೆ ಇದನ್ನು ಒಪ್ಪಿಕೊಳ್ಳಲು ಯಾವ ಅಧ್ಯಯನದ ಅಗತ್ಯವೂ ಇಲ್ಲ. ನಾವೆಲ್ಲರೂ ಬೇಸಿಗೆ ರಜೆಗಳನ್ನು ಅಜ್ಜಅಜ್ಜಿಯ ಮನೆಯಲ್ಲಿ ಕಳೆಯುತ್ತಿದ್ದ ಆ ದಿನಗಳು ಜೀವನದ ಅತ್ಯಂತ ಸುಂದರ ದಿನಗಳಲ್ಲವೇ? ಅಜ್ಜಅಜ್ಜಿ ಮೊಮ್ಮಕ್ಕಳ ಪಾಲಿಗೆ ದೊಡ್ಡ ಆಸ್ತಿಯಿದ್ದಂತೆ. ಅವರ ಸಾಂಗತ್ಯ ಮಕ್ಕಳಿಗೆ ಹಲವಷ್ಟನ್ನು ನೀಡುತ್ತದೆ. 

Tap to resize

Latest Videos

ಮನೆಯಲ್ಲೇ ಕುಳಿತು ಖಿನ್ನತೆ ಬೇಕಿದೆ ಎಚ್ಚರ, ತಜ್ಞರ ಸಲಹೆ...

ಅಧ್ಯಯನ ಏನು ಹೇಳುತ್ತೆ?
ಅಧ್ಯಯನಗಳ ಪ್ರಕಾರ, ಅಜ್ಜಅಜ್ಜಿಯೊಂದಿಗೆ ಮಕ್ಕಳ ಬೆಳವಣಿಗೆ ನಡೆಯುವುದು ಅವರ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ತರುತ್ತದೆ. ಅಷ್ಟೇ ಅಲ್ಲ, ಹಿರಿಯರನ್ನು ಗೌರವಿಸುವುದನ್ನು ಮಕ್ಕಳು ಕಲಿಯುತ್ತಾರೆ. ಜೊತೆಗೆ ತಂದೆತಾಯಿಗೂ ರಾತ್ರಿ ಒಳ್ಳೆಯ ನಿದ್ರೆ ಮಾಡಲು ಒಂದು ಅವಕಾಶ ಒದಗುತ್ತದೆ. ಆದರೆ, ಈ ಲಾಭಗಳಿಂದಾಗಿ ಅಜ್ಜಅಜ್ಜಿಯ ಸಾಂಗತ್ಯ ಮಕ್ಕಳಿಗೆ ಉಡುಗೊರೆ ಎಂದಿದ್ದಲ್ಲ. ಅದಕ್ಕೆ ಬೇರೆಯದೇ ಕಾರಣವಿದೆ. 

ಭಾವನೆಗಳನ್ನು ಹೊರ ಹಾಕಲು ಅವಕಾಶ
ಮಕ್ಕಳಿಗೆ ತಪ್ಪು ಸರಿ ಕಲಿಸುವುದು, ಅವರು ಸರಿಯಾದ ಹಾದಿಯಲ್ಲೇ ಹೋಗುವಂತೆ ಮಾಡುವುದು ಪೋಷಕರ ಜವಾಬ್ದಾರಿ. ಯಾವಾಗ ಮಕ್ಕಳು ಪೋಷಕರ ನಿರೀಕ್ಷೆಗಳನ್ನು ಪೂರೈಸುವುದಿಲ್ಲವೋ, ಆಗ ಅವರನ್ನು ಸರಿದಾರಿಗೆ ತರಲು ಪೋಷಕರು ಸ್ವಲ್ಪ ಕೆಟ್ಟವರಾಗಬೇಕಾಗುತ್ತದೆ. ಇದರಿಂದ ಕೆಲವೊಮ್ಮೆ ಮಕ್ಕಳು ಪೋಷಕರ ಮೇಲೆ ವಿಪರೀತ ಮುನಿಸಿಕೊಂಡು, ಅವರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳವುದನ್ನು ಬಿಡುತ್ತಾರೆ. ಅಜ್ಜಅಜ್ಜಿಯರಿಗೆ ಕೂಡಾ ಮೊಮ್ಮಕ್ಕಳು ಸರಿದಾರಿಗೆ ಹೋಗಬೇಕೆಂದಿದ್ದರೂ ಅವರು ಮಕ್ಕಳ ಕಣ್ಣಿನಲ್ಲಿ ವಿಲನ್ ಆಗುವುದಿಲ್ಲ. ಅವರು ಮಕ್ಕಳನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಾರೆ. ಹಾಗಾಗಿಯೇ ಪೋಷಕರ ವಿರುದ್ಧ ಮುನಿಸಿಕೊಂಡ ಮಕ್ಕಳು ಅಜ್ಜಅಜ್ಜಿಯ ಬಳಿ ಓಡುವುದು. ಹೀಗೆ ಓಡಿದ ಮಕ್ಕಳು ತಮ್ಮ ಭಾವನೆಗಳು, ನೆಗೆಟಿವ್ ಎಮೋಶನ್ಸ್‌ನ್ನು ಹೊರ ಹಾಕಲು ಅವಕಾಶ ಸಿಗುತ್ತದೆ. ಅವರು ತಮ್ಮ ದೂರನ್ನು ಅಜ್ಜಅಜ್ಜಿಯ ಬಳಿ ಹೇಳಿಕೊಂಡು ಸಮಾಧಾನ ಹೊಂದುತ್ತಾರೆ. ಇದರಿಂದ ಮಗುವಿನ ಮನಸ್ಸು ಹಗುರಾಗುತ್ತದೆ. ಹಗುರಾದಾಗ ಅವರನ್ನು ಸರಿದಾರಿಗೆ ತರುವುದು ಸುಲಭ. ಈ ಸಮಯದಲ್ಲಿ ಅಜ್ಜಅಜ್ಜಿಯ ಮಾತುಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತವೆ. 

ಮಗುವನ್ನು ಖುಷಿಪಡಿಸಲು ಅವರಿಗೆ ಗೊತ್ತು
ಪೋಷಕರು ಮಕ್ಕಳನ್ನು ಎಷ್ಟೇ ಹೊಗಳಿ ಅವರಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸಿದರೂ ಅದು ಬುದ್ಧಿವಾದದಂತೆ, ಲೆಕ್ಚರ್‌ನಂತೆ ಕೇಳಿಸುತ್ತದೆ. ಆದರೆ, ಅಜ್ಜಅಜ್ಜಿ ಅದೇ ಮಾತುಗಳನ್ನು ಹೇಳಿದಾಗ ಮಕ್ಕಳು ಕೇಳುತ್ತಾರೆ. ಬಹುಷಃ ಅವರು ಮಕ್ಕಳಿಗೆಂದೂ ಬಯ್ಯದ ಕಾರಣಕ್ಕೆ, ಅವರ ಮೃದುವಾದ ಧ್ವನಿಗೆ, ಇಷ್ಟು ವರ್ಷಗಳ ಅನುಭವದ ಕಾರಣಕ್ಕೆ- ಅವರ ಮಾತುಗಳು ಮಕ್ಕಳಿಗೆ ಸಮಾಧಾನ ಕೊಡುತ್ತದೆ. 

ದೇಶದ ಮೊದಲ ಕೊರೋನಾ ಟೆಸ್ಟಿಂಗ್ ಕಿಟ್ ಸಿದ್ಧಪಡಿಸಿದ ಗರ್ಭವತಿ!...
 

ಮಿಸ್ಸಿಂಗ್ ಲಿಂಕ್
ಸಿಂಗಲ್ ಪೇರೆಂಟ್ ಹೊಂದಿರುವ ಮಕ್ಕಳಿಗೆ ಅಜ್ಜಅಜ್ಜಿಯ ಆರೈಕೆ ಆ ಕೊರತೆಯನ್ನು ನೀಗುತ್ತದೆ. ತಂದೆಯೊಂದಿಗೆ ಬೆಳೆಯದ ಮಗುವು ಅಜ್ಜನಲ್ಲಿ ಮೇಲ್ ರೋಲ್ ಮಾಡೆಲ್ ಕಾಣುತ್ತದೆ. ಅಂತೆಯೇ ತಾಯಿ ಇಲ್ಲದ ಮಗುವಿಗೆ ಅಜ್ಜಿಯ ಆರೈಕೆ, ಮಮತೆ ಸಮಾಧಾನ ನೀಡುತ್ತದೆ. ಅಷ್ಟೇ ಅಲ್ಲ, ಪೋಷಕರೊಂದಿಗೆ ಹೇಳಲು ಹೆದರುವ ವಿಷಯಗಳನ್ನು ಮಕ್ಕಳು ಹಿರಿಯರೊಂದಿಗೆ ಸುಲಭವಾಗಿ ಹೇಳಿಕೊಳ್ಳಬಲ್ಲರು. 
ಇಷ್ಟೇ ಅಲ್ಲ, ಅಜ್ಜಅಜ್ಜಿಯ ಸಾಂಗತ್ಯ ಮಕ್ಕಳಿಗೆ ಅಂದಿನ ಕಾಲದ ಚಿತ್ರಣವನ್ನು ಚೆನ್ನಾಗಿ ನೀಡುತ್ತದೆ. ಶಾಲೆಯಲ್ಲಿ ಇತಿಹಾಸವನ್ನು ಓದಿ ಕಲಿಯುವುದಕ್ಕಿಂತಾ, ತಮ್ಮ ಪ್ರೀತಿಪಾತ್ರರು ಅದನ್ನು ಕೇಳಿದ, ನೋಡಿದ ರೀತಿ ವಿವರಿಸಿ ಹೇಳಿದಾಗ ಅದು ಮಕ್ಕಳ ಮನಸ್ಸಲ್ಲಿ ಹೆಚ್ಚು ಅಚ್ಚಾಗಿ ಕುಳಿತುಕೊಳ್ಳುತ್ತದೆ. ಅವರ ಅನುಭವಗಳ ಪಾಠ ಮಕ್ಕಳು ಪ್ರಪಂಚ ಎದುರಿಸಬೇಕಾಗಿ ಬಂದಾಗ ಕೆಲಸಕ್ಕೆ ಬರುತ್ತವೆ. 

ಸಂಪರ್ಕ ಸಾಧಿಸಿ
ಎಲ್ಲ ಪೋಷಕರಿಗೂ ಇಚ್ಛೆಯಿದ್ದರೂ ಅಜ್ಜಅಜ್ಜಿಯೊಂದಿಗೆ ಮೊಮ್ಮಕ್ಕಳನ್ನು ಬೆಳೆಸುವ ಅವಕಾಶ ಸಿಗದಿರಬಹುದು. ಅವರು ಬೇರೆ ಊರಿನಲ್ಲಿರಬಹುದು. ಅಂಥ ಸಂದರ್ಭವಿದ್ದರೆ ವಾರಕ್ಕೆರಡು ಬಾರಿ ವಿಡಿಯೋ ಕಾಲ್ ಮಾಡಿಕೊಂಡು ಮಕ್ಕಳು ತಮಗಿಷ್ಟ ಬಂದಿದ್ದೆಲ್ಲ ಮಾತಾಡಲು ಅವಕಾಶ ನೀಡಿ. ಅಜ್ಜಅಜ್ಜಿಗೆ ಪತ್ರ ಬರೆಯಲು ಅಭ್ಯಾಸ ಮಾಡಿಸಿ. ರಜೆಯಲ್ಲಿ ಊರಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ಹೆಚ್ಚಿನ ಸಮಯ ಕಳೆಯುವಂತೆ ನೋಡಿಕೊಳ್ಳಿ. ಖಂಡಿತವಾಗಿ ಈ ಬಗ್ಗೆ ಯಾರೂ ಎಂದೂ ಪಶ್ಚಾತ್ತಾಪ ಪಡುವ ಸನ್ನಿವೇಶ ಬರುವುದಿಲ್ಲ. 

click me!