
ಬೆಲ್ಜಿಯಂನಲ್ಲೊಂದು ವಿಚಿತ್ರ, ಆದರೆ ಅಷ್ಟೇ ಮನಸ್ಸು ಆರ್ದ್ರಗೊಳಿಸುವ ಘಟನೆ. ಅಲ್ಲಿನ ಲುಬೆಕ್ ಎಂಬಲ್ಲಿ ವಾಸಿಸುವ 90 ವರ್ಷದ ವೃದ್ಧೆ ಸುಸಾನ್ನೆ ಹೊಯ್ಲಾರ್ಟ್ಸ್ ಎಂಬಾಕೆಗೆ ಎರಡು ವಾರ ಹಿಂದೆ ನ್ಯುಮೋನಿಯಾ ಬಂತು. ಕೂಡಲೇ ಆಕೆಯನ್ನು ಮಗಳು ಜುಡಿತ್ ಆಸ್ಪತ್ರೆಗೆ ಕರೆದೊಯ್ದಳು. ವೈದ್ಯರು ಆಕೆಯಲ್ಲಿ ಕೋವಿಡ್ ಲಕ್ಷಣಗಳನ್ನು ಕಂಡು, ಆಕೆಯನ್ನು ಮಗಳಿಂದ ಪ್ರತ್ಯೇಕಿಸಿದರು. ಟೆಸ್ಟ್‌ನ ವೇಳೆ ಆಕೆಗೆ ಕೊರೊನಾ ಅಟ್ಯಾಕ್ ಆಗಿರುವುದು ಖಚಿತವಾಯಿತು.
ಇಲ್ಲಿಂದ ನಂತರ ಆಕೆಯ ರೋಗಲಕ್ಷಣಗಳು ಉಲ್ಬಣವಾಗುತ್ತಾ ಹೋದವು. ಒಂದು ಹಂತದಲ್ಲಿ ಆಕೆಯ ಉಸಿರಾಟ ತೀರಾ ಕಷ್ಟವಾಗಿ ವೈದ್ಯರು ವೆಂಟಿಲೇಟರ್ ಅಳವಡಿಸಲು ಮುಂದಾದರು. ಆಗ ಆಕೆ ಹೇಳಿದ್ದೇನು ಗೊತ್ತೆ? 'ನನಗೆ ವೆಂಟಿಲೇಟರ್ ಹಾಕಬೇಡಿ. ನನ್ನ ಬದಲು ಇನ್ಯಾರಾದರೂ ಅತಿ ಅಗತ್ಯ ಇರುವ, ಯಂಗ್ ವ್ಯಕ್ತಿಗೆ ಅದನ್ನು ಬಳಸಿಕೊಳ್ಳಿ. ಯಾಕೆಂದರೆ ನಾನು ಈಗಾಗಲೇ ಸಾಕಷ್ಟು ಬ್ಯೂಟಿಫುಲ್ ಜೀವನ ನೋಡಿದ್ದೀನಿ..'
ಅಷ್ಟೆ. ಆಕೆ ವೆಂಟಿಲೇಟರ್ ಹಾಕಿಸಿಕೊಳ್ಳಲೇ ಇಲ್ಲ. ಸಾಯುವ ಕೆಲವು ಸಮಯ ಮುನ್ನ, ತನ್ನನ್ನು ಮುಟ್ಟಿ ಅಪ್ಪಿ ಮಾತಾಡಿಸಲು ಸಾಧ್ಯವಾಗದ ಮಗಳು ಜುಡಿತ್‌ಗೆ ಆಕೆ ಕಳುಹಿಸಿದ ಮೆಸೇಜ್ ಇದು: 'ನೀನು ಅಳಬಾರದು. ಯಾಕಂದ್ರೆ ನಿನ್ನಿಂದ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡಿದ್ದೀಯ ನೀನು.'
ದೇಶದ ಮೊದಲ ಕೊರೋನಾ ಟೆಸ್ಟಿಂಗ್ ಕಿಟ್ ಸಿದ್ಧಪಡಿಸಿದ ಗರ್ಭವತಿ!
90ರ ಅಜ್ಜಿಯ ಕೊನೆಯ ದಿನಗಳ ಈ ಕತೆ ಈಗ ಬೆಲ್ಜಿಯಂನಲ್ಲಿ ಮಾತ್ರವಲ್ಲ, ಜಗತ್ತಿನ ಇತರ ಕಡೆಯೂ ವೈರಲ್ ಆಗ್ತಿದೆ. ಸೋಶಿಯಲ್ ತಾಣಗಳಲ್ಲಿ ಟ್ರೆಂಡ್ ಆಗ್ತಿದೆ. ತುಂಬಾ ಮಂದಿ ಆಕೆಯ ಸ್ವಾರ್ಥವಿಲ್ಲದ ಗುಣವನ್ನು ಹೊಗಳಿದ್ದಾರೆ. 90ರ ಹರೆಯದಲ್ಲೂ ಮುದ್ದಾಗಿ ಕಾಣಿಸುವ ಈ ಅಜ್ಜಿಯ ಬದುಕು ಇನ್ನೆಷ್ಟು ಸುಂದರವಾಗಿದ್ದಿರಬಹುದು ಎಂದು ಆಡಿಕೊಂಡಿದ್ದಾರೆ.
ಈಗ ಅಜ್ಜಿಯ ಜಾಗದಲ್ಲಿ ನಮ್ಮನ್ನು ಊಹಿಸಿಕೊಳ್ಳಿ. ತೊಂಬತ್ತಲ್ಲ ನೂರಿಪ್ಪತ್ತು ವರ್ಷ ಬದುಕಿದರೂ ಇಂಥದೊಂದು ಮಾತು ನಮ್ಮ ಬಾಯಿಯಿಂದ ಬಂದೀತಾ? ನಾನು ಮೊದಲು ಬದುಕಿಕೊಳ್ಳುತ್ತೇನೆ, ನಂತರ ಉಳಿದವರ ಮಾತು ಅಂತಲೇ ನಮ್ಮಲ್ಲಿ ಹೆಚ್ಚಿನವರು ಯೋಚಿಸುವುದು. ಪ್ರವಾಹ ಕುತ್ತಿಗೆಯವರೆಗೆ ಬಂದಾಗ ಮರಿಯನ್ನು ಕೆಳಗೆ ತಳ್ಳಿ ಅದರ ಮೇಲೆ ನಿಂತ ಮಗನ ಕತೆ ನಿಮಗೆ ಗೊತ್ತಿದ್ದದ್ದೇ ಅಲ್ಲವೇ. ಹಾಗೇ ನಾವು ಕೂಡ. ಅಂಥ ಹೊತ್ತಿನಲ್ಲೂ, ನಾನು ಬದುಕಿದ್ದು ಸಾಕಷ್ಟು ಆಯಿತು, ಇನ್ನೇನೂ ಆಸೆಯಿಲ್ಲ, ನನಗೆ ಕೊಡಬೇಕಾದ್ದನ್ನು ಯುವಕರಿಗೆ ಕೊಡಿ ಎಂಬ ಅಜ್ಜಿ ನಮಗೆ ಮಾದರಿ ಆಗುವುದಿಲ್ಲವೇ.
ಮನೆಯಲ್ಲೇ ಕುಳಿತು ಖಿನ್ನತೆ ಬೇಕಿದೆ ಎಚ್ಚರ, ತಜ್ಞರ ಸಲಹೆ
ಬೆಲ್ಜಿಯಂ ಕೂಡ ಇಟಲಿಯಂತೆ ವೃದ್ಧರ ಸಂಖ್ಯೆ ಹೆಚ್ಚಿರುವ ದೇಶ. ಅಲ್ಲಿನ ಜನಸಂಖ್ಯೆ 1.3 ಕೋಟಿ ಮಾತ್ರ. ಅಲ್ಲಿ ಈಗಾಗಲೇ 12,000 ಕೊರೊನಾ ಕೇಸುಗಳು ಪತ್ತೆಯಾಗಿವೆ. 513 ಮಂದಿ ಸತ್ತಿದ್ದಾರೆ. ಅಲ್ಲೂ ಇಟಲಿಯಂತೆ ವೆಂಟಿಲೇಟರ್‌ಗಳ ಕೊರತೆ. ಇದು ಗೊತ್ತಿದ್ದುದರಿಂದಲೇ ಸುಸಾನ್ನೆ ಹಾಗೆ ಮಾಡಿದ್ದಾಗಿರಬಹುದು. ಏನಿದ್ದರೂ ಆಕೆಯ ತ್ಯಾಗ ವ್ಯರ್ಥವಾಗಲಾರದು. ಆಕೆ ತಾನು ಇನ್ನೊಂದು ಜೀವವನ್ನು ಉಳಿಸಿದ ತೃಪ್ತಿಯಿಂದಲೇ ಪ್ರಾಣ ಬಿಟ್ಟಿರಬಹುದು.
ಇಟಲಿಯಲ್ಲಿ ಕೆಲವು ವೃದ್ಧರು ಇಂಥ ಸಂದರ್ಭದಲ್ಲಿ ಮನೆ ಬಿಟ್ಟು ಹೊರಡಲು ನಿರಾಕರಿಸಿದ್ದೂ ಇದೆ. ಆಸ್ಪತ್ರೆಗೆ ಹೋದರೂ ಸಾಯುವುದು ಖಚಿತ, ಇಲ್ಲೇ ಇದ್ದರೂ ಸಾವು ಖಚಿತ. ಇಲ್ಲೇ ಸಾಯುತ್ತೇನೆ ಎಂಬುದು ಅವರ ನಿರ್ಧಾರ. ಇವರಿಂದ ಇತರರಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.