
ಬೆಂಗಳೂರು: ಪ್ರೇಮದ ಊರಲಿ (Premada Oorali Movie) ಹವಾ ಸೃಷ್ಟಿಸುತ್ತಿರುವುದು ಗೊತ್ತೇ ಇದೆ. ಅತ್ಯಂತ ಕಡಿಮೆ ಬಜೆಟ್‌ನ ಚಿತ್ರವೊಂದು ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಹೇಗೆ ಜನರ ಮನಸ್ಸನ್ನು ಕದಿಯಬಹುದು, ಹೇಗೆ ನವೀರಾದ ಕಥೆಯೊಂದು, ರಕ್ತಪಾತ, ಲಾಂಗು, ಮಚ್ಚು ಇಲ್ಲದೇ ಥಿಯೇಟರ್ನಲ್ಲಿ ಅಬ್ಬರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಪ್ರೇಮದ ಊರಲಿ. ಈಗಿನ ಯುವ ಪೀಳಿಗೆ ಬಯಸೋದು ಅಶ್ಲೀಲತೆ, ಲಾಂಗು, ಮಚ್ಚು, ಹೀರೋ ಕೈಯಲ್ಲಿ ರಕ್ತಪಾತ, ನಿಮಿಷಕ್ಕೊಂದು ಕೊಲೆ... ಎನ್ನುತ್ತಲೇ ಅದೇ ರೀತಿ ನಾಯಕನ ಕೈಯಲ್ಲಿ ಕೊಲೆ ಮಾಡಿಸುವುದು ಕೆಲ ವರ್ಷಗಳ ಟ್ರೆಂಡ್ ಆಗಿದೆ. ಆದರೆ, ಅಂಥ ಕೆಲವು ಸಿನಿಮಾಗಳು ತೋಪೆದ್ದು ಹೋಗಿದ್ದು, ಯಾವ ರೀತಿಯ ಸಿನಿಮಾಗಳನ್ನು ಜನರು ಇಷ್ಟಪಡುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ ಪ್ರೇಮದ ಊರಲಿನಂಥ ಕಡಿಮೆ ಬಜೆಟ್ ಚಿತ್ರಗಳು.
ಇದೀಗ ಈ ಸಿನಿಮಾ 50 ದಿನಗಳನ್ನು ಪೂರೈಸಿದೆ. ಆದರೂ ಜನರು ಸಿನಿಮಾ ನೋಡಲು ಲಗ್ಗೆ ಇಡುತ್ತಿದ್ದಾರೆ. ಆ ಪರಿಯಲ್ಲಿ ಈ ಸಿನಿಮಾ ಮನಸ್ಸು ಗೆದ್ದಿದೆ. ಈ ಸಿನಿಮಾ ಗೆಲುವಿಗೆ ಹಲವು ಕಾರಣ ಇರಬಹುದು. ಆದರೆ ಅದರಲ್ಲಿ ಒಂದು ರೈತರಿಗೆ ಯಾರೂ ಹೆಣ್ಣು ಕೊಡುವುದಿಲ್ಲ ಎಂದು ದೊಡ್ಡ ನೋವು ರೈತ ಕುಟುಂಬಕ್ಕಿದೆ. ಅದ್ಯಾವ ಪರಿಯಲ್ಲಿ ಎಂದರೆ, ಕೃಷಿಕರು ಅದೆಷ್ಟೇ ದೊಡ್ಡ ಶ್ರೀಮಂತರಾಗಿದ್ದರೂ, ಎಷ್ಟೇ ಎಕರೆ ಜಮೀನು ಇದ್ದರೂ ಹಲವು ಹೆಣ್ಣುಮಕ್ಕಳು ಒಲ್ಲೆ ಎನ್ನುವುದು ಇದೆ. ಇದೇ ಕಾರಣಕ್ಕೆ ಇಲ್ಲಿ ತೋರಿಸಿರುವ ರೈತನಮದುವೆ, ಫಾರಿನ್ ಹುಡುಗಿ ಕಾನ್ಸೆಪ್ಟ್ ಕೂಡ ಬಹುತೇಕರಿಗೆ ಇಷ್ಟವಾಗಿದೆ.
ಹೀಗಿರುವಾಗ ಆ್ಯಂಕರ್ ಅನುಶ್ರೀ ಅವರು 50 ದಿನಗಳ ಸಂಭ್ರಮವನ್ನು ಆಚರಿಸಿದ್ದಾರೆ. ಅದರಲ್ಲಿ ಜನರು ಪ್ರೇಮದ ಊರಲಿ ನಟ-ನಟಿಯರಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಆ್ಯಂಕರ್ ಅನುಶ್ರೀ ಎಂದ ಮೇಲೆ ಅಲ್ಲಿ ಹಾಸ್ಯದ ಹೊನಲು ಇದ್ದೇ ಇರುತ್ತದೆ. ಈ ಕಾರ್ಯಕ್ರಮದಲ್ಲಿಯೂ ನಕ್ಕು ನಗಿಸುವ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಓರ್ವ ಯುವತಿ, ನಟ ಶ್ರೀರಾಮ್ ಅವರಿಗೆ ಪ್ರೇಮದ ಊರಲಿಯನ್ನು ಮೂರೇ ಶಬ್ದಗಳಲ್ಲಿ ಹೇಳಿ ಎಂದಾಗ, ಅವರು I Love You ಎಂದರು. ಇದನ್ನು ಕೇಳಿ ಯುವತಿ ನಾಚಿ ನೀರಾಗಿ ಹೋದರು. ಕೊನೆಗೆ ವಸಂತಾ ಪಾತ್ರಧಾರಿ ನಟಿ ರಮಿಕಾ ಶಿವು ಅವರನ್ನು ಉದ್ದೇಶಿಸಿ ಅನುಶ್ರೀ ಅವರು, ನಿಮ್ಮ ಹುಡುಗ ರೈತ ಆಗಿದ್ರೆ ಓಕೆನಾ ಎಂದು ಕೇಳಿದಾಗ ನಟಿ ಕೂಡಲೇ ಓಕೆ ಎಂದರು. ಮಾತಂದ್ರೆ ಇದಪ್ಪಾ ಎಂದರು ಆ್ಯಂಕರ್ ಅನುಶ್ರೀ.
ಇನ್ನು ನಟಿ ರಮಿಕಾ ಶಿವು ಅವರಿಗೆ ಇದು ಮೊದಲ ಸಿನಿಮಾ. ಕನ್ನಡ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಮಿಕಾ ಶಿವು, ಇದೀಗ ಹಿರಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಪಾರು’ ಹಾಗೂ ‘ನೀನಾದೆ ನಾ’ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದ ರಮಿಕಾ, ಇದೀಗ ಸಿನಿಮಾಗಳಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯ ಜೊತೆಗೆ ರಮಿಕಾ ಶಿವು ಅವರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಅವರ ಮುಂದಿನ ಸಿನಿ ಪಯಣದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಈಗಾಗಲೇ ಕಿರುತೆರೆಯಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದ ನಟಿ, ಹಿರಿತೆರೆಯಲ್ಲೂ ಭದ್ರವಾಗಿ ನೆಲೆಯೂರುವ ಸೂಚನೆ ನೀಡಿದ್ದಾರೆ. ಮೊದಲ ಸಿನಿಮಾದಲ್ಲೇ ಸಿಕ್ಕ ಯಶಸ್ಸು ಮತ್ತು ಪ್ರೇಕ್ಷಕರ ಪ್ರೀತಿಯಿಂದ ರಮಿಕಾ ಶಿವು ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕೇವಲ ಸಿನಿಮಾಗಳ ಸಂಖ್ಯೆಯತ್ತ ಗಮನ ಹರಿಸುವ ಬದಲು, ಕಥೆ ಮತ್ತು ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿರ್ಧಾರದಲ್ಲಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.