ಕೊನೆಗೂ ಈಡೇರಲಿಲ್ಲ ನಟ ಪವನ್​ ಕಲ್ಯಾಣ್​ ಆಸೆ: ನಗು ಉಳಿಸಿ, ಹೃದಯ ಛಿದ್ರ ಮಾಡಿ ಮರೆಯಾದ ಪುಟ್ಟ ಅಭಿಮಾನಿ

Published : Jul 08, 2026, 08:07 PM IST
Pawan Kalyan

ಸಾರಾಂಶ

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಅಭಿಮಾನಿ ನಿರಂಜನ್‌ನ ಕೊನೆಯಾಸೆಯಂತೆ ನಟ ಪವನ್ ಕಲ್ಯಾಣ್ ಆತನನ್ನು ಭೇಟಿಯಾಗಿದ್ದರು. ಆದರೆ ಭೇಟಿಯಾದ 20 ದಿನಗಳಲ್ಲೇ ಬಾಲಕ ನಿಧನನಾಗಿದ್ದು, ಜೊತೆಯಾಗಿ ಸಿನಿಮಾ ನೋಡುವ ಆಸೆ ಈಡೇರಿಲ್ಲ. ಈ ದುರಂತ ಘಟನೆಯಿಂದ ಪವನ್ ಕಲ್ಯಾಣ್ ಕಂಬನಿ ಮಿಡಿದಿದ್ದಾರೆ.

ಕೇವಲ 20 ದಿನಗಳ ಹಿಂದಷ್ಟೇ. ಆ 17 ವರ್ಷದ ಬಾಲಕನ ಕಣ್ಣಲ್ಲಿ ಅದೇನೋ ಸಾರ್ಥಕ ಮನೋಭಾವ. ಜೀವನದ ಸಂಪೂರ್ಣ ಆಸೆ ಈಡೇರಿದ ಅನುಭೂತಿ. ಹೌದು ಅಂದು ಆ ಬಾಲಕ ತನ್ನ ನೆಚ್ಚಿನ ಅರಾಧ್ಯದೈವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರನ್ನು ಕಣ್ತುಂಬಿಸಿದ್ದ. ನಟ ಪವನ್​ ಕಲ್ಯಾಣ್​ ಎಂದರೆ ಜೀವ ಬಿಡುತ್ತಿದ್ದ ಆ ಪುಟ್ಟ ಹೃದಯಕ್ಕೆ ಅಂದು ಆಗಿದ್ದ ಸಂತೋಷ ಅದೆಷ್ಟೋ. ಸಾಯುವ ಮೊದಲು ನಟನನ್ನು ನೋಡಬೇಕು ಎನ್ನುವುದೇ ಆತನ ಆಸೆಯಾಗಿತ್ತು. ಈ ಬಗ್ಗೆ ತಿಳಿಯುತ್ತಲೇ ಪವನ್​ ಕಲ್ಯಾಣ್ ಅವರು ಆ ಬಾಲಕನ ಮನೆಗೆ ಭೇಟಿ ನೀಡಿ ಮಾತನಾಡಿದ್ದರು. ಅಷ್ಟೇ ಅಲ್ಲದೇ, ಆ ಕುಟುಂಬಕ್ಕೆ ಅಗತ್ಯವಿರುವ ಆರ್ಥಿಕ ನೆರವು, ಚಿಕಿತ್ಸೆ ಬೇಕಾಗಿರುವ ನೆರವು ಕೂಡ ನೀಡಿದ್ದರು. ಇದೇ ಸಂದರ್ಭದಲ್ಲಿ ತನ್ನ ಪುಟಾಣಿ ಅಭಿಮಾನಿಗೆ ಮಾತುಕೊಟ್ಟಿದ್ದ ನಟ ಪವನ್ ಕಲ್ಯಾಣ್, ನಾವಿಬ್ಬರು ಸೇರಿ ತಮ್ಮ ಮುಂದಿನ ಒಜಿ-2 ಸಿನಿಮಾ ನೋಡೋಣಾ, ನಿನ್ನನ್ನು ನನ್ನ ಸ್ಪೆಷಲ್ ಗೆಸ್ಟ್ ಆಗಿ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದರು.

ಆದರೆ, ಪವನ್​ ಕಲ್ಯಾಣ್ ಅವರ ಆಸೆ ಈಡೇರಿಲಿಲ್ಲ. ಆ ಪುಟ್ಟ ಬಾಲಕ ಇಂದು ಇಹಲೋಕ ತ್ಯಜಿಸಿದ್ದಾರೆ. 17ರ ಹರೆಯದ ಈತನ ಹೆಸರು ನಿರಂಜನ್​. ರಾಮು ಮತ್ತು ಮಾನಸ ದಂಪತಿ ಮನಗಾಗಿದ್ದ ನಿರಂಜನ್​ಗೆ ಕೆಲ ಸಮಯದಿಂದ ‘ಡಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿ’ ಎಂಬ ಅನುವಂಶಿಕ ಕಾಯಿಲೆ ಸುತ್ತಿಕೊಂಡಿತ್ತು. ಇದರಿಂದಾಗಿ ಕ್ರಮೇಣ ಮಾಂಸಖಂಡಗಳ ಬೆಳವಣಿಗೆ ನಿಂತು ಹೋಗಿತ್ತು, ದೈಹಿಕ ಬೆಳವಣಿಗೆ ಆಗಿರಲಿಲ್ಲ. ಇದಕ್ಕೆ ಸದ್ಯ ಯಾವುದೇ ಚಿಕಿತ್ಸೆ ಇಲ್ಲ ಎನ್ನಲಾಗಿದೆ. ಆದ್ದರಿಂದ ಸಾವು-ಬದುಕಿನ ನಡುವೆ ನಿರಂಜನ್​ ಹೋರಾಡುತ್ತಿದ್ದ. ಕಿಡ್ನಿಗಳು ಕೂಡ ಹಾನಿಯಾಗಿತ್ತು. ಚಿಕಿತ್ಸೆಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ದರು. ಆದರೂ ಇದ್ದ ಹಣವೆಲ್ಲಾ ಖರ್ಚಾದರೂ ಚಿಕಿತ್ಸೆ ಸಿಗಲಿಲ್ಲ. ಆತನ ಆಸೆಯಂತೆ ಪವನ್​ ಕಲ್ಯಾಣ್​ ಅವರಿಗೆ ವಿಡಿಯೋ ತೋರಿಸಿದಾಗ, ಅವರು ಮನೆಗೆ ಭೇಟಿ ಕೊಟ್ಟಿದ್ದರು.

ಪವನ್​ ಕಲ್ಯಾಣ್​ ಕಂಬನಿ

ತಮ್ಮ ಪುಟ್ಟ ಅಭಿಮಾನಿಯ ನಿಧನದಿಂದ ನಟ ಕಣ್ಣೀರಾಗಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಪವನ್ ಕಲ್ಯಾಣ್, ನಿರಂಜನ್ ಸಾವಿನ ಸುದ್ದಿ ತಮ್ಮ ಹೃದಯವನ್ನು ಆಳವಾಗಿ ಮುಟ್ಟಿದೆ ಎಂದಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಹನುಮಕೊಂಡದಲ್ಲಿರುವ ನಿರಂಜನ್ ಅವರ ಮನೆಗೆ ಹೋದ ಆ ಕ್ಷಣಗಳು ಇನ್ನೂ ನನ್ನ ಮನಸ್ಸಿನಲ್ಲಿ ಎದ್ದು ಕಾಣುತ್ತಿವೆ. ಗಂಭೀರ ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವಾಗ ನನಗಾಗಿ ಕಾಯುತ್ತಿದ್ದ ಆ ಪುಟ್ಟ ಹುಡುಗ, ನನ್ನನ್ನು ಆತ ನೋಡಿದಾಗ ಆತನ ಮುಖದಲ್ಲಿ ಮೂಡಿದ ಆ ನಗು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವೆಲ್ಲವೂ ಈಗ ಕೇವಲ ನೆನಪಾಗಿ ಉಳಿದುಬಿಟ್ಟಿವೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಹೃದಯದಲ್ಲಿ ಶಾಶ್ವತ

ಆತನ ದೇಹವು ರೋಗದ ವಿರುದ್ಧ ಹೋರಾಡುತ್ತಿದ್ದರೂ.. ಮನಸ್ಸು ಧೈರ್ಯದಿಂದ ತುಂಬಿತ್ತು. ಇಷ್ಟೆಲ್ಲಾ ನೋವನ್ನು ಅನುಭವಿಸಿದರೂ ಆತ ಜೀವನದಲ್ಲಿ ತೋರಿಸಿದ ಭರವಸೆ ಮತ್ತು ಆತ್ಮವಿಶ್ವಾಸ ಬಹಳ ಅಮೂಲ್ಯವಾದುದು. ಅಂತಹ ಧೈರ್ಯಶಾಲಿ ವ್ಯಕ್ತಿ ಇಷ್ಟು ಬೇಗ ನಮ್ಮನ್ನು ಅಗಲಿದ್ದು ತುಂಬಾ ದುಃಖಕರ. ಆ ಪುಟ್ಟ ಅಭಿಮಾನಿಯ ನಗು ಮತ್ತು ಹಂಚಿಕೊಂಡ ಪ್ರೀತಿ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಕಂಬನಿ ಮಿಡಿದಿದ್ದಾರೆ ಪವನ್​ಕಲ್ಯಾಣ್​

ಪವನ್ ಕಲ್ಯಾಣ್ ನಿರಂಜನ್ ಅವರನ್ನು ಭೇಟಿಯಾದಾಗ, ಅವರನ್ನು ಪ್ರೀತಿಯಿಂದ ಅಪ್ಪಿಕೊಂಡು ಪ್ರೋತ್ಸಾಹಿಸಿದರು. ಸೆಲ್ಫಿ ತೆಗೆದುಕೊಂಡರು. ತಿರುಮಲ ಶ್ರೀವಾರಿ ಪ್ರಸಾದವನ್ನು ನೀಡಿದರು. ನಿರಂಜನ್, 'ನಾನು ನಾಯಿಮರಿ ಸಾಕಲು ಬಯಸುತ್ತೇನೆ' ಎಂದು ಹೇಳಿದ್ದ. ಆಗ ಪವನ್​ ಅವರು ನಾನು ಅದನ್ನು ಖರೀದಿಸಿ ನಿನಗೆ ಕಳುಹಿಸುತ್ತೇನೆ ಎಂದು ಕೂಡ ಹೇಳಿದ್ದರು. ಆದರೆ ಈಗ ಎಲ್ಲವೂ ನೆನಪು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Chanakya Niti: ಇದು ಮದುವೆಯಾದ ಗಂಡಸರಿಗೆ ಮಾತ್ರ… ಪತ್ನಿ ಜೊತೆ ಇದೆಲ್ಲಾ ಹೇಳ್ತೀರಾ?
Srinagara Kitty Birthday: ನಟ ಶ್ರೀನಗರ ಕಿಟ್ಟಿಗೆ ಹುಟ್ಟುಹಬ್ಬದ ದಿನ; ಪತ್ನಿ-ಮಗಳೊಂದಿಗೆ ಮನೆಯಲ್ಲೇ ಸರಳ ಸಂಭ್ರಮ!