
ಇಂದು ಭೀಮನ ಅಮವಾಸ್ಯೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ಆಟಿ ಅಮವಾಸ್ಯೆ ಎಂದು ಕರೆಯುತ್ತಾರೆ. ಇದು ಆಷಾಡ ತಿಂಗಳಾಗಿರುವ ಹಿನ್ನೆಲೆಯಲ್ಲಿ 'ಆಟಿ' ಎಂದು ಕರೆಯುತ್ತಾರೆ. ಮಲೆನಾಡು ಭಾಗಗಳಲ್ಲಿ ಭೀಮನ ಅಮವಾಸ್ಯೆಯನ್ನು ಕೊಡೆ ಅಮವಾಸ್ಯೆ ಎಂದು ಕರೆಯುತ್ತಾರೆ. ಹೊಸದಾಗಿ ಮದುವೆಯಾದ ಮದುಮಕ್ಕಳನ್ನು ಹೆಣ್ಣಿನ ತವರಿನವರು ಕರೆದು, ಅಳಿಯನಿಗೆ ಕೊಡೆ ನೀಡುವ ಪದ್ಧತಿ ಇದೆ. ಒಂದೇ ಕೊಡೆಯಲ್ಲಿ ಇಬ್ಬರೂ ಹೋಗಿ ಎಂದು ಹೇಳುವ ಮೂಲಕ, ಒಟ್ಟಿಗೇ ಚೆನ್ನಾಗಿ ಹೊಂದಿಕೊಂಡು ಸಂಸಾರ ಮಾಡಿ ಎನ್ನುವುದು ಇದರ ಅರ್ಥ. ಹಲವಾರು ಭಾಗಗಳಲ್ಲಿ ಪತಿಗೆ ಪತ್ನಿಯರು ಪಾದಪೂಜೆ ಮಾಡುವ ವಾಡಿಕೆ ಇದೆ. ಅದರಂತೆಯೇ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಪತ್ನಿ ಜ್ಯೋತಿ ಅವರು ಪತಿಗೆ ಪಾದಪೂಜೆ ಮಾಡಿದ್ದು, ಅದರ ವಿಡಿಯೋ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಸ್ಟೂಲ್ ಮೇಲೆ ಪ್ರೇಮ್ ಕುಳಿತಿದ್ದು, ಜ್ಯೋತಿ ಅವರು ತಟ್ಟೆಯಲ್ಲಿ ಪ್ರೇಮ್ ಪಾದಗಳನ್ನ ತೊಳೆದು ಪೂಜೆ ಮಾಡುವುದನ್ನು ನೋಡಬಹುದು. 'ಭೀಮನ ಅಮಾವಾಸ್ಯೆ ಪೂಜೆ, ನನ್ ಮನೆ ಮಹಾಲಕ್ಷ್ಮಿಯಿಂದ.. ನಮ್ಮ್ ಮೇಲೆ ನಿಮ್ಮ್ ಆಶೀರ್ವಾದವಿರಲಿ' ಎಂದು ಪ್ರೇಮ್ ಬರೆದುಕೊಂಡಿದ್ದಾರೆ. ಇನ್ನು ಪ್ರೇಮ್ ತಮ್ಮ ಪತ್ನಿಯ ತ್ಯಾಗವನ್ನು ಹಲವಾರು ಬಾರಿ ನೆನೆದಿರುವುದು ಇದೆ. ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ಪ್ರೇಮ್ ಅವರ ಪತ್ನಿ ಜ್ಯೋತಿ ಕೂಡ ಹಾಜರಿದ್ದು, ಈ ಸಂದರ್ಭದಲ್ಲಿ ಪತ್ನಿಯ ತ್ಯಾಗವನ್ನು ಅವರು ನೆನಪಿಸಿಕೊಂಡಿದ್ದರು.
ಪ್ರೇಮ್ ಮತ್ತು ಜ್ಯೋತಿ 3 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲದೇ ಮನೆಯಲ್ಲಿ ವಿರೋಧವಿದ್ದ ಕಾರಣ ಓಡಿ ಹೋಗಿ ವಿವಾಹವಾಗಿದ್ದರು. ಇದನ್ನು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಹೇಳಿಕೊಂಡಿದ್ದರು. ಕಳೆದ ವರ್ಷ ಮೇ ತಿಂಗಳಿನಲ್ಲಿ ತಮ್ಮ ಪ್ರೀತಿಗೆ 25 ವರ್ಷ ತುಂಬಿದೆ ಎಂದು ನೆನೆಪಿಸಿಕೊಂಡಿದ್ದರು ಪ್ರೇಮ್. ಪತ್ನಿ ಜ್ಯೋತಿ ಜೊತೆ ಅವರು ಈ ಖುಷಿಯನ್ನು ಸಂಭ್ರಮಿಸಲು ಬಾಲಿಗೆ ಹೋಗಿದ್ದರು. ಪತ್ನಿಯೊಂದಿಗೆ ನೀರಿನಾಳಕ್ಕೆ ಇಳಿದು, ಕೈ ಕೈ ಹಿಡಿದು ಜ್ಯೋತಿಗೆ ಪ್ರಪೋಸ್ ಮಾಡಿ ಸಿಹಿಮುತ್ತನಿಟ್ಟಿದ್ದರು ಪ್ರೇಮ್. ಫೋಟೋಗಳ ಜತೆಗೆ ಕಿರು ವಿಡಿಯೋ ತುಣುಕನ್ನು ಶೇರ್ ಮಾಡಿರುವ ಪ್ರೇಮ್, ಭೂಮಿಯಿಂದ ಶುರುವಾದ ನಮ್ಮ ಪ್ರೀತಿ, ಆಕಾಶದಲ್ಲಿ ಹಾರಾಡಿ ಸಮುದ್ರದ ಆಳದಲ್ಲೂ ಅರಳುತ್ತಿದೆ ಎಂದು ಬರೆದುಕೊಂಡಿದ್ದರು.
ಅಂದಹಾಗೆ, ಪ್ರೇಮ್ ಅವರು ಶಿಕ್ಷಣದ ನಂತರ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಸ್ ಲಿಮಿಟೆಡ್ ನಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಬಾಲ್ಯದಿಂದಲೂ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿತ್ತು ಎಂದು ಹೇಳಿಕೊಂಡಿರುವ ಪ್ರೇಮ್ ಅವರು, ವಾರಕ್ಕೆ ಕನಿಷ್ಠ ಮೂರು ನಾಲ್ಕು ಚಿತ್ರಗಳನ್ನು ನೋಡುತ್ತಿರುವುದಾಗಿ ಹೇಳುತ್ತಾರೆ. ಸಿನಿಮಾದ ಕುರಿತು ಸಾಕಷ್ಟು ಪುಸ್ತಕಗಳನ್ನೂ ಓದುತ್ತಿದ್ದರಂತೆ. ನಂತರ ಕಿರುತೆರೆಯಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಗೆಳೆಯರೊಬ್ಬರ ಸಲಹೆ ಮೇರೆಗೆ ಟಿ.ಎನ್.ಸೀತಾರಾಮ್ ರ ಮನ್ವಂತರ ಧಾರಾವಾಹಿಯಲ್ಲಿ ಸಹ ಕಲಾವಿದನಾಗಿ ನಟಿಸಿದರು. ಅದಾದ ಬಳಿಕ ಅರ್ಧ ಸತ್ಯ ಎಂಬ ಸೀರಿಯಲ್ ಒಂದು ಎಪಿಸೋಡ್ನಲ್ಲಿ ಕಾಣಿಸಿಕೊಂಡರು. 2004 ರಲ್ಲಿ ತೆರೆಕಂಡ `ಪ್ರಾಣ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿರಂಗ ಪ್ರವೇಶಿಸಿದರು. ಇದೀಗ ಪ್ರೇಮ್ ಅವರು ಕನ್ನಡ ಚಿತ್ರರಂಗದ ರೊಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ವೃತ್ತಿ ಜೀವನದ 25ನೇ ಸಿನಿಮಾ ಆಗಿ ಪ್ರೇಮಂ ಪೂಜ್ಯಂ ಬಿಡುಗಡೆ ಆಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.