ಸೊಸೆ ಸಾವಿನ ಸುದ್ದಿ ಕೇಳಿ ಶಾಕ್‌, ಹೃದಯಾಘಾತದಿಂದ ಅತ್ತೆ ಸಾವು

By Vinutha Perla  |  First Published Nov 24, 2023, 1:31 PM IST

ಅತ್ತೆ-ಸೊಸೆ ಅಂದ್ರೆ ಸಾಕು ಜಗಳ, ಕಿತ್ತಾಟ ಕಾಮನ್‌ ಎಲ್ರೂ ಮಾತನಾಡಿಕೊಳ್ತಾರೆ. ಇಬ್ಬರ ನಡುವಿನ ಸಂಬಂಧ ಎಣ್ಣೆ-ಸೀಗೇಕಾಯಿ ಥರ, ಆಗಿಬರಲ್ಲ ಅಂತಾನೆ ಮಾತನಾಡಿಕೊಳ್ತಾರೆ. ಆದ್ರೆ ಇದಕ್ಕೆಲ್ಲಾ ಅಪವಾದ ಎಂಬಂತೆ ಮಂಡ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. 


ಮಂಡ್ಯ: ಅತ್ತೆ-ಸೊಸೆ ಅಂದ್ರೆ ಸಾಕು ಆಗಿ ಬರಲ್ಲ. ಹಾವು ಮುಂಗುಸಿ ಥರ ಕಿತ್ತಾಡುತ್ತಾರೆ ಅಂತ ಸಾಮಾನ್ಯವಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಾರೆ.  ಸೊಸೆ ಮಾಡಿದ ಕೆಲಸ ಅತ್ತೆಗೆ, ಅತ್ತೆ ಮಾಡಿದ ಕೆಲಸ ಸೊಸೆಗೆ ಇಷ್ಟವಾಗುವುದಿಲ್ಲ. ಇನ್ನು ಗಂಡ, ಮಕ್ಕಳ ವಿಚಾರವಾಗಿ ಆಗಾಗ ಜಗಳವಾಗುತ್ತಲೇ ಇರುತ್ತದೆ. ಅತ್ತೆಯ ಕಾಟ ತಡೆದುಕೊಳ್ಳಲಾಗದೆ ಮನೆ ಬಿಟ್ಟು ಬಂದವರು, ಆತ್ಮಹತ್ಯೆ ಮಾಡಿಕೊಂಡವರು ಅದೆಷ್ಟೋ ಮಂದಿಯಿದ್ದಾರೆ. ಹಾಗೆಯೇ ಸೊಸೆಯ ಕಾಟ ಸಹಿಸಲಾಗದೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಅತ್ತೆಯಂದಿರೂ ಇದ್ದಾರೆ. ಹೀಗಿರುವಾಗ ಮಂಡ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆಗೆ ಹೃದಯಾಘಾತವಾಗಿದೆ.

ಅತ್ತೆ-ಸೊಸೆ ಇಬ್ಬರು ಅಮ್ಮ-ಮಗಳ ರೀತಿ ಇರುವುದು ತುಂಬಾ ವಿರಳ. ಆದರೆ ಮಂಡ್ಯದ ಈ ಅತ್ತೆ ಸೊಸೆ, ಅಮ್ಮ-ಮಗಳಂಥಾ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದರು. ಅನ್ಯೋನ್ಯವಾಗಿ ಜೀವನ ಸಾಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದ ಅತ್ತೆ-ಸೊಸೆ ಇಬ್ಬರು ಇದೀಗ ಸಾವಿನಲ್ಲೂ ಒಂದಾಗಿದ್ದಾರೆ. ಮಂಡ್ಯದ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

Latest Videos

undefined

ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ವ್ಯಕ್ತಿ ಹಾರ್ಟ್‌ಅಟ್ಯಾಕ್‌ನಿಂದ ಸಾವು, ಹೃದಯ ವಿದ್ರಾವಕ ಕ್ಷಣ ಸಿಸಿಟಿವಿಯಲ್ಲಿ ಸೆರೆ

ಅನಾರೋಗ್ಯದಿಂದ ಬಳಲುತ್ತಿದ್ದ ಸೊಸೆ ಸುಶೀಲಾ (42), ಮೃತಪಟ್ಟ ಸುದ್ದಿ ಕೇಳಿ ಅತ್ತೆ ಹುಚ್ಚಮ್ಮ(75) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹುಚ್ಚಮ್ಮಗೆ ಐವರು ಗಂಡು ಮಕ್ಕಳು. ಎರಡನೇ ಮಗನ ಹೆಂಡತಿಯಾಗಿದ್ದ ಸುಶೀಲಾಗೆ ಇಬ್ಬರು ಮಕ್ಕಳಿದ್ದಾರೆ. ಹುಚ್ಚಮ್ಮ ಮತ್ತು ಸುಶೀಲಾ ಅತ್ತೆ-ಸೊಸೆಯಂತೆ ಇರದೆ ತಾಯಿ‌-ಮಗಳಂತೆ ಇದ್ದರು.

ಆದರೆ, ನಿನ್ನೆ (ನ.23) ಸಂಜೆ ಸುಶೀಲಾ ಅವರು ದಿಢೀರ್ ಸಾವಿಗೀಡಾದ ಸುದ್ದಿ ಕೇಳಿದ ಹುಚ್ಚಮ್ಮ ಸಹ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅತ್ತೆ-ಸೊಸೆ ಸಾವಿನಿಂದ ಇಡೀ ಕುಟುಂಬ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇಂದೇ ಇಬ್ಬರ ಅಂತ್ಯಕ್ರಿಯೆ ಒಂದೇ ಕಡೆ ನಡೆಯಲಿದೆ.

40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತ ಆಗೋದಕ್ಕೆ ಇದುವೇ ಕಾರಣ!

click me!