ಹಣಕಾಸಿನ ವಿಷ್ಯಕ್ಕೆ ಮನೆಯಲ್ಲಿ ಗಲಾಟೆ ಸಾಮಾನ್ಯ. ನನ್ನ ಹಣ, ನಿನ್ನ ಹಣ ಎಂಬ ಜಗಳ ನಡೆಯುತ್ತಿರುತ್ತದೆ. ಅದು ಅತಿರೇಕಕ್ಕೆ ಹೋದ್ರೆ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಯಾವುದೇ ಭಿನ್ನಾಭಿಪ್ರಾಯ ಆಗ್ಬಾರದು ಅಂದ್ರೆ ಇಬ್ಬರು ಬುದ್ಧಿವಂತಿಕೆಯ ಹೆಜ್ಜೆ ಇಡ್ಬೇಕು.
ಈಗಿನ ದಿನಮಾನದಲ್ಲಿ ಪತಿ – ಪತ್ನಿ ಇಬ್ಬರೂ ದುಡಿಯುವುದು ಅನಿವಾರ್ಯವಾಗಿದೆ. ಆರ್ಥಿಕ ಬಲವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ದುಡಿಮೆ ಕಾರಣಕ್ಕೆ ದಂಪತಿ, ಕುಟುಂಬದ ಇತರ ಸದಸ್ಯರಿಂದ ದೂರವಾಗ್ತಾರೆ. ದಂಪತಿ ಹಗಲಿನಿಂದ ರಾತ್ರಿಯವರೆಗೆ ಒಂದೇ ಸಮನೆ ದುಡಿದ್ರೆ ಸಾಲದು, ಅದನ್ನು ಹೇಗೆ ಖರ್ಚು ಮಾಡ್ಬೇಕು ಎಂಬುದು ತಿಳಿದಿರಬೇಕು. ದಾಂಪತ್ಯದಲ್ಲಿ ಬಿರುಕು ಮೂಡಲು ಈ ಆರ್ಥಿಕ ಪರಿಸ್ಥಿತಿ ಕೂಡ ಒಂದು ಮುಖ್ಯ ಕಾರಣವಾಗುತ್ತದೆ.
ನಮ್ಮ ಸಮಾಜದಲ್ಲಿ ಪುರುಷ (Male) ನಾದವನು ಹೊರಗೆ ದುಡಿಯಬೇಕು, ಮನೆ ಕೆಲಸ ಮಾಡಬಾರದು ಎಂಬ ಒಂದು ಅಲಿಖಿತ ನಿಯಮವಿದೆ. ಇದರಂತೆ ಅನೇಕ ಪುರುಷರು ನಡೆದುಕೊಳ್ತಾರೆ. ಮನೆ ಕೆಲಸ (Work) ಮಾಡಲು ಬರೋದಿಲ್ಲ. ಅದನ್ನು ಕಲಿಯುವ ಆಸಕ್ತಿಯೂ ಇರೋದಿಲ್ಲ. ಎಲ್ಲ ಜವಾಬ್ದಾರಿ ಹೊತ್ತ ಮಹಿಳೆಗೆ ಸಂಬಂಧ ಸಾಕೆನ್ನಿಸಲು ಶುರುವಾಗುತ್ತದೆ. ಇದು ದಾಂಪತ್ಯ ಬಿರುಕಿಗೆ ಒಂದು ಕಾರಣವಾದ್ರೆ, ಮತ್ತೊಂದು ಹಣ (Money). ಸಾಮಾನ್ಯವಾಗಿ ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ದುಡಿದು, ಇನ್ನೊಬ್ಬರು ವಿಪರೀತ ಖರ್ಚು ಶುರು ಮಾಡಿದಾಗ ಅಲ್ಲಿ ಗಲಾಟೆ ಶುರುವಾಗುತ್ತದೆ. ಪತಿ – ಪತ್ನಿ ಇಬ್ಬರು ದುಡಿಯುತ್ತಿರಲಿ ಇಲ್ಲ ಒಬ್ಬರೇ ದುಡಿಯುತ್ತಿರಲಿ, ಹಣದ ನಿರ್ವಹಣೆ ಗೊತ್ತಿರಬೇಕು. ಆಗ ಇಬ್ಬರು ಸುಖ ಜೀವನ ಹಾಗೂ ಸುರಕ್ಷಿತ ಭವಿಷ್ಯಕ್ಕೆ ಅಡಿಪಾಯ ಹಾಕ್ಬಹುದು. ನಾವಿಂದು ದಂಪತಿ ಮಧ್ಯೆ ಆರ್ಥಿಕ ನಿರ್ವಹಣೆ ಹೇಗಿರಬೇಕು ಎಂಬುದನ್ನು ಹೇಳ್ತೇವೆ.
ದಂಪತಿಯಲ್ಲಿ ಹೀಗಿರಲಿ ಹಣಕಾಸಿನ ನಿರ್ವಹಣೆ :
ನನ್ನದಲ್ಲ ನಮ್ಮದು : ಮದುವೆಯಾದ್ಮೇಲೆ ನಾನು ಎಂಬುದು ಇರುವುದಿಲ್ಲ. ಮನಸ್ಸನ್ನೇ ಹಂಚಿಕೊಂಡ್ಮೇಲೆ ಹಣವನ್ನು ಕೂಡ ಹಂಚಿಕೊಳ್ಳಬೇಕಾಗುತ್ತದೆ. ಇಲ್ಲಿ ನನ್ನ ಹಣ, ನನ್ನ ದುಡಿಮೆ, ನಿನ್ನ ಹಣ ಎಂಬುದನ್ನು ಬಿಟ್ಟು ನಮ್ಮ ಹಣ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಆಗ ಖರ್ಚು ನಿಧಾನವಾಗಿ ಕಡಿಮೆಯಾಗ್ತಾ ಬರುತ್ತದೆ.
ಅಗತ್ಯದ ಹಣ ತೆಗೆದಿಡಿ : ಪ್ರತಿಯೊಬ್ಬರಿಗೂ ಖರ್ಚಿರುತ್ತದೆ. ಹಾಗಾಗಿ ಪ್ರತಿ ತಿಂಗಳು ಎಷ್ಟು ಹಣ ಖರ್ಚಿಗೆ (Exprenses) ಬೇಕು ಎಂಬುದನ್ನು ಪ್ರತ್ಯೇಕವಾಗಿ ಇಬ್ಬರೂ ತೆಗೆದಿಡಿ. ಇಬ್ಬರು ದುಡಿಯುತ್ತಿದ್ದರೆ ಸಂಬಳದಲ್ಲಿ (Salary) ಸ್ವಲ್ಪ ಪ್ರಮಾಣವನ್ನು ಇಟ್ಕೊಳ್ಳಬಹುದು. ಒಬ್ಬರೇ ದುಡಿಯುತ್ತಿದ್ದರೆ ಇನ್ನೊಬ್ಬರ ಖರ್ಚಿಗೆ ಎಷ್ಟು ಹಣ ಬೇಕು ಎಂಬುದನ್ನು ಮೊದಲೇ ನೀಡಿದ್ರೆ ಒಳ್ಳೆಯದು.
ಮದುವೆ ಆಯಿತಾ? ಕೂಡಲೇ ಈ ಕೆಲಸ ಮಾಡಿ!
ತುರ್ತು ನಿಧಿ (Emergency Fund) : ಇಬ್ಬರು ಒಂದು ಜಾಯಿಂಟ್ ಖಾತೆಯನ್ನು ತೆರೆದ್ರೆ ಒಳ್ಳೆಯದು. ಪ್ರತಿ ತಿಂಗಳು ಇಬ್ಬರೂ ಒಂದಿಷ್ಟು ಹಣವನ್ನು ಆ ಖಾತೆಗೆ ಹಾಕ್ಬೇಕು. ಇದ್ರಿಂದ ನಿರ್ದಿಷ್ಟ ಹಣ ತುರ್ತು ಖಾತೆಯಲ್ಲಿ ಸುರಕ್ಷಿತವಾಗಿರುತ್ತದೆ. ಅಗತ್ಯವೆನ್ನಿಸಿದಾಗ ಇದನ್ನು ಬಳಸಬಹುದು.
ಮನೆಗೆ ತರುವ ವಸ್ತು ಬಗ್ಗೆ ಚರ್ಚೆ : ಮನೆಗೆ ನಿಮ್ಮಿಷ್ಟದ ವಸ್ತು ಖರೀದಿಸಿ ತರುವ ಬದಲು ಇಬ್ಬರ ಇಷ್ಟಕ್ಕೆ ಮಹತ್ವ ನೀಡುವುದು ಒಳ್ಳೆಯದು. ಹಾಗಾಗಿ ಮನೆಗೆ ಯಾವುದೇ ವಸ್ತು ತರುವುದಾದ್ರೂ ಪರಸ್ಪರ ಚರ್ಚಿಸಿ. ಆಗ ಸಂಗಾತಿ ಆಸೆ ಬಗ್ಗೆ ನಿಮ್ಮ ಜ್ಞಾನ ಹೆಚ್ಚಾಗುತ್ತದೆ.
ಹೂಡಿಕೆ (Investment) ಬಗ್ಗೆ ತಿಳಿದಿರಲಿ : ಪತಿ ಅಥವಾ ಪತ್ನಿ ಯಾರೇ ಹೂಡಿಕೆ ಮಾಡ್ತಿರಲಿ ಅದ್ರ ಬಗ್ಗೆ ಇನ್ನೊಬ್ಬರಿಗೆ ತಿಳಿಸುವ ಅಗತ್ಯವಿದೆ. ಹಾಗಾಗಿ ಡೈರಿ ಅಥವಾ ಯಾವುದೇ ಪೇಪರ್ ನಲ್ಲಿ ನಿಮ್ಮ ಹೂಡಿಕೆ ಬಗ್ಗೆ ಬರೆದಿಡುವುದು ಒಳ್ಳೆಯದು. ಅವಘಡ ಸಂಭವಿಸಿದಾಗ ಉಳಿತಾಯದ ಬಗ್ಗೆ ಇನ್ನೊಬ್ಬರಿಗೆ ಸುಲಭವಾಗಿ ತಿಳಿಯುತ್ತದೆ.
ಇದೆಂಥಾ ಸಂಪ್ರದಾಯ … Virginity testಲ್ಲಿ ಫೇಲ್ ಆದ್ರೆ ವಧುವಿಗೆ ಅಗ್ನಿ ಪರೀಕ್ಷೆ!
ಚಿಕ್ಕ ವಿಷ್ಯಕ್ಕೂ ಮಹತ್ವ : ಕೆಲವೊಮ್ಮೆ ಇದು ಚಿಕ್ಕದು ಎಂಬ ಕಾರಣಕ್ಕೆ ನಾವು ನಿರ್ಲಕ್ಷ್ಯ ಮಾಡಿರ್ತೇವೆ. ಆದ್ರೆ ಇದೇ ಮುಂದೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಹಣಕಾಸಿನ ವಿಷ್ಯದಲ್ಲಿ ಮುಚ್ಚು ಮರೆಯಿಲ್ಲದೆ ಸಂಗಾತಿ ಮುಂದೆ ಹೇಳಿಕೊಳ್ಳೋದು ಒಳ್ಳೆಯದು.