ಎಲ್ಲೊ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ..., ಮಧುರ ನೆನಪು!

By Suvarna News  |  First Published Apr 20, 2022, 2:44 PM IST

* ಮಳೆಯೆಂಬ ಮಧುರ ನೆನಪು

* ಮಳೆ ಆರ್ಭಟಕ್ಕೆ ಮನದ ಮೂಲೆಯಲ್ಲಿ ಬಚ್ಚಿಟ್ಟ ನೆನಪುಗಳು

* ಎಲ್ಲೊ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ


ಜ್ಯೋತಿ.ಜಿ, ಹೊರನಾಡು

ಇನ್ನೂ ಅಲ್ಲೇ ಕೂತ್ಕೊಂಡು ಏನ್ ಮಾಡ್ತಾಇದೀಯ ಮಳೆ ಬರೋತರ ಇದೆ ಹೊರಗಡೆ ಹರಡಿರೊ ಬಟ್ಟೆನೆಲ್ಲಾ ಒಳಗಡೆ ತಂದಿಡು ಅಂದಿದ್ದು ಕೇಳಿಸ್ಲಿಲ್ವ ನಿಂಗೆ. ಅಮ್ಮ ಒಳಗಿನಿಂದಲೇ ಕೂಗು ಹಾಕುತ್ತ ಇದ್ದಳು. ನಾನೋ ಅದಕ್ಕು ನನಗು ಸಂಬಂಧವೆ ಇಲ್ಲವೆಂಬಂತೆ ತೋಟದಲ್ಲಿದ್ದ ಬೆಣಚು ಕಲ್ಲೊಂದರ ಮೇಲೆ ತಂಪುಗಾಳಿಗೆ ಮುಖ ವೊಡ್ಡಿ ಕಪ್ಪಾಗಿದ್ದ ಮೋಡವನ್ನೇ ದಿಟ್ಟಿಸುತ್ತ ಕುಳಿತೆ. ಹೀಗೆ ದಿಟ್ಟಿಸುತ್ತಿದ್ದವಳ ಮುಖದ ಮೇಲೆ ಮಳೆ ಹನಿಗಳು ಬೇಳುತ್ತಿರುವಂತೆ ಭಾಸವಾಯ್ತು. ಮನದಲ್ಲೇನೋ ಸಂತೋಷ ಒಳಗಿದ್ದ ಅಮ್ಮನಿಗೆ ಚಿಕ್ಕ ಮಗುವಿನಂತೆ ಕೂಗಿ ಹೇಳಿದೆ ಅಮ್ಮ ನೋಡು ಮಳೆ ಬರ‍್ತಾಇದೆ.

Tap to resize

Latest Videos

ನಾ ಹೇಳಿದ್ದು ಬಹುಶ ಒಳಗಿದ್ದ ಅಜ್ಜಿ ಕಿವಿಗೂ ಬಿದ್ದಿರಬೇಕು.ಅಲ್ಲೇ ಗೊಣಗುತಿದ್ದಳು. ಈಗಿನ ಕಾಲದ ಹೆಣ್ಮಕ್ಳಿಗೆ ಯಾವ್ದಕೆಲ್ಲ ಖುಷಿಪಡ್ಬೇಕು ಅನ್ನೋದೆ ಇಲ್ಲ ಮಳೆ ಬಂದ್ರು ವಿಚಿತ್ರವಾಗಿ ನೋಡುತ್ತಾ ಕೂತು ಬಿಡ್ತಾರೆ. ಏನ್ ಮಕ್ಳೊ ಏನೋ ಎನ್ನುತ್ತಿದ್ದಳು. ನನಗಂತು ಇದ್ಯಾವುದರ ಪರಿವೆ ಇಲ್ಲವೆಂಬಂತೆ ಮಳೆಯಲ್ಲಿ ನೆನೆಯತೊಡಗಿದೆ ಪುಟ್ಟ ಮಗುವಿನಂತೆ.ಅಮ್ಮನ ಕೂಗು ಅಜ್ಜಿಯ ಬೈಗುಳಗಳ್ಯಾವು ನನ್ನ ಕಿವಿಯನ್ನು ತಲುಪಲೇ ಇಲ್ಲ. ಹೀಗೆ ನೆನೆಯುತ್ತಿದ್ದವಳಿಗೆ ಬಾಲ್ಯದನೆನಪುಗಳು ಒಂದೊಂದಾಗಿ ಮನದ ಪರದೆಯಮೇಲೆ ಮೂಡತೊಡಗಿದವು.

ಬಾಲ್ಯದ ದಿನಗಳಲ್ಲಿ ಸ್ಕೂಲ್ ಮುಗಿಸಿ ಮನೆಗೆ ಬರುವಾಗ ಮಳೆ ಬಂದರೆ ಛತ್ರಿ ಇದ್ದರು ಕೂಡ ನೆನೆದು ಆಟವಾಡಿಕೊಂಡು ಬರುತ್ತಿದ್ದದ್ದು. ಬಿಳಿ ಬಣ್ಣದ ಯುನಿಫಾಂ ಕೆಂಪಾಗುವವರೆಗು ಕೆಸರಲ್ಲೇ ಆಟವಾಡುತ್ತಿದ್ದದ್ದು.ಮನೆ ತಪುವಷ್ಟರಲ್ಲಿ ಬ್ಯಾಗ್ ನಲ್ಲಿದ್ದ ಪುಸ್ತಕಗಳೆಲ್ಲ ಒದ್ದೆಯಾಗಿರುತ್ತಿದ್ದವು,ಅವುಗಳನೆಲ್ಲ ಒಲೆಯ ಬುಡದಲ್ಲಿಟ್ಟು ಒಣಗಿಸುತ್ತಿದ್ದದ್ದು. ಇವುಗಳೊಂದಿಗೆ ಮಳೆಗಾಲದ ಸಂಜೆಯಲ್ಲಿ ಅಮ್ಮ ಮಾಡಿಕೊಡುತ್ತಿದ್ದ ಬಿಸಿಬಿಸಿಯಾದ ತಿಂಡಿಗಳು ಅಬ್ಬ ಒಂದಾ ಎರೆಡಾ ಎಷ್ಟೊಂದು ನೆನಪುಗಳು ಎಂದುಕೊಂಡೆ.

ಬಾಲ್ಯದ ಜೀವನ ಎಷ್ಟೊಂದು ಸುಂದರವಾಗಿತ್ತು ಎಂದು ಯೋಚಿಸುತ್ತಾ ಕುಳಿತಿದ್ದವಳಿಗೆ ಇವಗ್ ಎದ್ದು ಬರ‍್ತೀಯೋ ಇಲ್ವೋ ನಾಳೆ ದಿನ ಶೀತ,ಜ್ವರ ಅಂದ್ರೆ ನಾನ್ ಕೇಳಲ್ಲ. ಅನ್ನೋ ಅಮ್ಮನ ಗದರು ಧ್ವನಿ ಯೋಚನಾಲಹರಿಯಲ್ಲದ್ದವಳನ್ನು ಬಡಿದೆಬ್ಬಿಸಿತು.ಮಳೆಯನ್ನು ಬಿಟ್ಟು ಬರಲು ಮನಸ್ಸಾಗಲಿಲ್ಲವಾದರು, ಇನ್ನು ಇಲ್ಲೆ ಕುಳಿತಿದ್ದರೆ ಬೈಗುಳಗಳ ಸುರಿಮಳೆಯನ್ನೆ ಕೇಳಬೇಕಾಯಿತು ಎಂದುಕೊಂಡವಳೆ ನೆನಪುಗಳನ್ನು ಮೆಲುಕು ಹಾಕಿದ ಮಳೆರಾಯನಿಗೊಂದು ಥ್ಯಾಂಕ್ಸ್ ಹೇಳಿ ಸರಸರನೆ ಮನೆಯತ್ತ ಹೆಜ್ಜೆ ಹಾಕಿದೆ. ಒಳನಡೆದವಳಿಗೆ ಅಮ್ಮನ ಮುಖದಲ್ಲಿನ ಗಾಬರಿಕಂಡು ಅಯ್ಯೋ ಎನಿಸಿತು. ಅಮ್ಮಾ ಯಾಕಿಷ್ಟು ಗಾಬರಿಯಾಗಿದ್ದೀಯಾ ನೋಡು ನನಗೇನು ಆಗಿಲ್ಲ ಎಂದು ಅಮ್ಮನಿಗೊಂದಿಷ್ಟು ಸಮಾಧಾನ ಹೇಳಿ ಒಳಹೋಗುತ್ತಿದ್ದ ವೇಳೆ ಅಡುಗೆಮನೆಯಲ್ಲಿ ಅಮ್ಮ ಮಾಡಿಟ್ಟಿದ್ದ ಬಿಸಿಬಿಸಿ ಬಜ್ಜಿಯ ಪರಿಮಳ ಗಮ್ ಎಂದು ಮೂಗಿಗೆ ಬಡಿದಿತ್ತು.

ಒಳಹೋದವಳೇ ಒಂದು ಲೋಟ ಕಾಫಿ ಜೊತೆಗೆ ಬಜ್ಜಿಯನ್ನು ಹಿಡಿದು  ಹಾಡೊಂದನ್ನು ಗುನುಗುತ್ತಾ,ಕಿಟಕಿಯ ಬಳಿ ಬಂದು ಕುಳಿತೆ. ಅದಾಗಲೇ ಮಳೆರಾಯನ ತನ್ನ ಆರ್ಭಟ ಮುಗಿಸಿ ತಣ್ಣಗಾಗಿದ್ದ. ತಂಪಾದ ಬೀಸುತ್ತಿದ್ದ ಗಾಳಿಗೆ ಮರದ ಎಲೆಗಳಲ್ಲಿದ್ದ ಮಳೆ ಹನಿಗಳು ಪಟ ಪಟನೆ ಭೂಮಿಯನ್ನು ಸ್ಪರ್ಶಿಸುತ್ತಿದ್ದವು.ಮನಸು ಹಗುರಾಗಿತ್ತು.ಮರದಿಂದ ಬೀಳುತ್ತಿದ್ದ ಮಳೆಯ ಹನಿಯನ್ನೆ ನೋಡುತ್ತ ಬಜ್ಜಿಯ ಸ್ವಾದವನ್ನು ಆಸ್ವಾದಿಸತೊಡಗಿದೆ. ಕಿವಿಯಲ್ಲಿ ಹಾಡೊಂದು ಗುನುಗುನಿಸತೊಡಗಿತು... ಎಲ್ಲೊ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ.

click me!