ಸರ್ಕಾರಿ ಕೆಲಸದಲ್ಲಿರುವ ವಧು ಬೇಕು: ಹುಡುಗಿಗಾಗಿ ಪೋಸ್ಟರ್ ಹಿಡಿದು ನಿಂತ ಯುವಕ

Published : Jan 27, 2023, 06:03 PM ISTUpdated : Jan 27, 2023, 06:09 PM IST
ಸರ್ಕಾರಿ ಕೆಲಸದಲ್ಲಿರುವ ವಧು ಬೇಕು: ಹುಡುಗಿಗಾಗಿ ಪೋಸ್ಟರ್ ಹಿಡಿದು ನಿಂತ ಯುವಕ

ಸಾರಾಂಶ

ಮಧ್ಯಪ್ರದೇಶದ (Madhya Pradesh) ಯುವಕನೋರ್ವ ಮದುವೆಯಾಗುವ ಹುಡುಗಿಗಾಗಿ ವಿಭಿನ್ನವಾದ ಜಾಹೀರಾತು ನೀಡಿದ್ದಾನೆ.

ಭೋಪಾಲ್‌:  ತಾವು ವಿವಾಹವಾಗುವ ಬಾಳ ಸಂಗಾತಿಯಲ್ಲಿ ಹುಡುಗ ಹುಡುಗಿಯರ ನಿರೀಕ್ಷೆಗಳು ಹೆಚ್ಚಾಗಿವೆ. ಹುಡುಗ ಸ್ಮಾರ್ಟ್ ಆಗಿರಬೇಕು. ಎಲ್ಲರಿಗೂ ಚೆಂದ ಕಾಣಬೇಕು, ಜೊತೆಯಲ್ಲಿ ಸಾಗುತ್ತಿದ್ದರೆ ಮೇಡ್ ಫಾರ್ ಇಚ್ ಅದರ್ ಅಂತ ಅಪರಿಚಿತರು ಗುನುಗಬೇಕು. ಸರ್ಕಾರಿ ನೌಕರನಾಗಿರಬೇಕು. ಹೇಳಿದ ಮಾತು ಕೇಳಬೇಕು. ಹಾಗಿರಬೇಕು ಹೀಗಿರಬೇಕು ಎಂಬ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಗೆಯೇ ಹುಡುಗರ ಪಟ್ಟಿಯೂ ಈಗ ಕಡಿಮೆ ಏನಿಲ್ಲ.  ಬೆಳ್ಳಗಿರಬೇಕು ತೆಳ್ಳಗಿರಬೇಕು, ಅಪ್ಪ ಅಮ್ಮನ ಚೆಂದ ನೋಡ್ಕೊಬೇಕು. ಓದಿರಬೇಕು, ಇಂಗ್ಲೀಷ್ ಚಂದ ಮಾತಾಡ್ಬೇಕು. ಸ್ನೇಹಿತರು ನೋಡಿ ಹೊಟ್ಟೆ ಉರ್ಕೊಳ್ಳಬೇಕು ಹೀಗೆ ಮದುವೆಯಾಗುವ ಹುಡುಗಿಯರ ಬಗ್ಗೆ ಹುಡುಗರ ನಿರೀಕ್ಷೆಯೂ ಒಂದೆರಡಲ್ಲ. ಹೀಗಿರುವಾಗ ಮಧ್ಯಪ್ರದೇಶದ (Madhya Pradesh) ಯುವಕನೋರ್ವ ಮದುವೆಯಾಗುವ ಹುಡುಗಿಗಾಗಿ ವಿಭಿನ್ನವಾದ ಜಾಹೀರಾತು ನೀಡಿದ್ದಾನೆ.

ತಾನು ಮದುವೆಯಾಗುವ ಹುಡುಗಿಯಲ್ಲಿ ಈ ರೀತಿಯ ಅರ್ಹತೆಗಳನ್ನು ನಿರೀಕ್ಷಿಸುತ್ತಿರುವುದಾಗಿ ಕೆಲವೊಂದು ಅರ್ಹತೆಗಳನ್ನು ದೊಡ್ಡದಾದ ಪ್ಲೇಕಾರ್ಡ್‌ನಲ್ಲಿ ಬರೆದ ಆತ ಅದನ್ನು ಹಿಡಿದುಕೊಂಡು  ಬೀದಿಯಲ್ಲಿ ನಿಂತಿದ್ದಾನೆ.  ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು,  ಈತ ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾನೆ. 

ಹಳೇ ಬಾಯ್‌ಫ್ರೆಂಡ್‌ಗಳನ್ನೆಲ್ಲಾ ಮದ್ವೆಗೆ ಕರೆದು ಅವಮಾನಿಸಿದ ವಧು... ವಿಡಿಯೋ ವೈರಲ್

ಜನಜಂಗುಳಿಯಿಂದ ತುಂಬಿರುವ ಮಾರುಕಟ್ಟೆಯಲ್ಲಿ ನಿಂತ ಯುವಕ ಹಳದಿ ಬಣ್ಣದ ಪೋಸ್ಟರ್‌ನ್ನು ಹಿಡಿದಿದ್ದು, ಈ ಪೋಸ್ಟರ್‌ನಲ್ಲಿ  ಹಿಂದಿ ಭಾಷೆಯಲ್ಲಿ ಹೀಗೆ  ಬರೆದಿದೆ.  ನನಗೆ ವಿವಾಹವಾಗಲು ಸರ್ಕಾರಿ ಉದ್ಯೋಗದಲ್ಲಿರುವ ವಧು ಬೇಕು.  ನಾನು ವಧು ದಕ್ಷಿಣೆಯನ್ನು (Dowry) ನೀಡುತ್ತೇನೆ ಎಂದು ಬರೆದಿದೆ. ಹೆಣ್ಣಿನ ಕುಟುಂಬದವರು ತಮ್ಮ ಮಗಳನ್ನು ವಿವಾಹ ಮಾಡಿಕೊಡುವ ವೇಳೆ ನೀಡಬಹುದಾದ ಹಣ ಆಸ್ತಿ ಎಲ್ಲವೂ ವರದಕ್ಷಿಣೆಯಲ್ಲಿ ಬರುವುದು. ಆದರೆ ವಧು ದಕ್ಷಿಣೆ ಸಾಮಾನ್ಯವಾಗಿ ಎಲ್ಲೂ ಚಾಲ್ತಿಯಲ್ಲಿ ಇಲ್ಲ. ಆದರೆ ಇಲ್ಲಿ ಈತ ವಧುದಕ್ಷಿಣೆ ನೀಡುವುದಾಗಿ ಹೇಳಿದ್ದಾನೆ. 

ಈ ವಿಡಿಯೋದಲ್ಲಿ ಮಾರುಕಟ್ಟೆಗೆ (Market) ಬಂದ ಅನೇಕರು ಪೋಸ್ಟರ್ ಹಿಡಿದು ನಿಂತ ಈತನನ್ನು ದುರುಗುಟ್ಟಿ ನೋಡುತ್ತಿರುವುದು ಕಾಣಿಸುತ್ತಿದೆ.  ಮತ್ತೆ ಕೆಲವರು ನಗುತ್ತಿರುವುದು ಕೂಡ ಕಾಣಿಸುತ್ತಿದೆ.  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ.  ಕೆಲವರು ಸಮಾನತೆಯ ಕಾರಣಕ್ಕೆ ಆತ ವಧು ದಕ್ಷಿಣೆ ನೀಡುವುದಾಗಿ ಹೇಳಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.   ಸಾಮಾನ್ಯವಾಗಿ ಹೆಣ್ಣು ಹೆತ್ತ ಪೋಷಕರು ತಮ್ಮ ಮಗಳನ್ನು ಮದುವೆಯಾಗುವ ಹುಡುಗ ಸರ್ಕಾರಿ ಕೆಲಸದಲ್ಲಿರಬೇಕು ಎಂದು ಆಸೆ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲಿ ಹುಡುಗನೋರ್ವ ವಧು ಸರ್ಕಾರಿ ಕೆಲಸದಲ್ಲಿರಬೇಕು ಎಂದು ಹೇಳಿರುವುದು ಇದೇ ಮೊದಲು ಇದೇ ಕಾರಣಕ್ಕೆ ಈ ವಿಡಿಯೋ ಅನೇಕರ ಮೊಗದಲ್ಲಿ ನಗು ಮೂಡಿಸುತ್ತಿದೆ. 

Matrimonial Ad: ವರ ಬೇಕಾಗಿದ್ದಾನೆ, ಸಾಫ್ಟ್‌ವೇರ್‌ ಇಂಜಿನಿಯರ್ಸ್‌ ದಯವಿಟ್ಟು ಕಾಲ್ ಮಾಡ್ಬೇಡಿ !

 

ಅದೇನೆ ಇರಲಿ  ಮದುವೆ ಎಂಬುದು ಭಾರತೀಯ ಸಮಾಜದ (Indian Society) ಅವಿಭಾಜ್ಯ ಭಾಗ.  ಪ್ರಾಯಕ್ಕೆ ಬಂದವರೆಲ್ಲಾ ಮದ್ವೆ ಆಗಲೇ ಬೇಕು ಎಂಬುದು ಒಂದು ಅಲಿಖಿತ ನಿಯಮ.  ಇಷ್ಟ ಪಟ್ಟು ಪ್ರೀತಿ ಮಾಡಿ ಮದುವೆಯಾಗುವವರದ್ದು ಒಂದು ಬೇರೆಯದೇ ಲೋಕ.  ಆದರೆ ಪೋಷಕರು ನೋಡಿ ಮಾಡುವ ಮದ್ವೆಗೆ ನೂರೆಂಟು ವಿಘ್ನ. ನಿಮ್ಮ ಪೋಷಕರು ನಿಮ್ಮ ಮದ್ವೆ ಬಗ್ಗೆ ಕೇಳದಿದ್ದರೂ ಸಮಾಜದಲ್ಲಿರುವ ನಿಮ್ಮ ಸಮಕಾಲೀನರು ಅಕ್ಕ ಪಕ್ಕದ ಮನೆಯವರು, ದೂರದ ಸಮೀಪದ ನೆಂಟರು, ನಿಮ್ಮ ಗೆಳೆಯರು ನಿಮ್ಮನ್ನು ಮದುವೆ ಯಾವಾಗ ಎಂದು ಕೇಳುತ್ತ ಮಾನಸಿಕ ಕಿರುಕುಳ ನೀಡುತ್ತಾರೆ. ಬಹುತೇಕರು ಹೀಗೆ ಪ್ರಶ್ನಿಸುವವರ ಬಾಯಿ ಮುಚ್ಚಿಸುವುದಕ್ಕೋಸ್ಕರ ಒತ್ತಡಕ್ಕೆ ಸಿಲುಕಿ ಮದ್ವೆಯಾಗುತ್ತಾರೆ.  ನಮ್ಮ ಸುತ್ತಲೂ ಅಕ್ಕ ಪಕ್ಕ ಸಾವಿರಾರು ಹುಡುಗರು ಹುಡುಗಿಯರು ಇದ್ದರೂ ಮದ್ವೆಯಾಗಲು ಹೊರಟಾಗ ಒಬ್ಬರು ಇಲ್ಲ ಎಂಬುದು ಅರೆಂಜ್ಡ್‌ ಮ್ಯಾರೇಜ್ ಆಗಲು ಹೊರಟ ಅನೇಕರ ಗೋಳು.  ಇದು ಕೇವಲ ಯುವಕ ಯುವತಿಯರ ಸಮಸ್ಯೆಯಲ್ಲ. ಮನೆಯಲ್ಲಿ ವಿವಾಹದ ವಯಸ್ಸಿನ ಮಕ್ಕಳಿದ್ದರೆ,  ಮನೆಯವರಿಗೂ ಈ ಹಿತೈಷಿಗಳೆನಿಸಿದವರ ಪ್ರಶ್ನೆಗೆ ಉತ್ತರಿಸಲಾಗದೇ ಸಂಕಷ್ಟ ಪಡುತ್ತಾರೆ.  ಹೀಗೆ ಕಿರುಕುಳ ಅನುಭವಿಸುತ್ತಿರುವವರು  ನೀವೊಬ್ಬರೇ ಅಲ್ಲ. ಹೀಗಾಗಿ ಕಿರುಕುಳ  ಅನಿಸುತ್ತಿದೆ ಎಂದು ಒತ್ತಡಕ್ಕೆ ಸಿಲುಕಿ ವಿವಾಹವಾಗಬೇಡಿ, ನಿಮಗೆ ಮದುವೆಯಾಗಬೇಕು, ಮದುವೆ ಸಂಸಾರದ ಜವಾಬ್ದಾರಿ ಹೊರಲು ಸಿದ್ಧ ಎನಿಸಿದಾಗ ಮಾತ್ರ ವಿವಾಹವಾಗಿ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌